Covid 19 Crisis Bengaluru: ಸರ್ಕಾರಿ ಆಸ್ಪತ್ರೆ ಖಾಲಿ ಇದ್ರೂ ಖಾಸಗಿ ಚಿಕಿತ್ಸೆ!

Published : Jan 25, 2022, 08:28 AM IST
Covid 19 Crisis Bengaluru: ಸರ್ಕಾರಿ ಆಸ್ಪತ್ರೆ ಖಾಲಿ ಇದ್ರೂ ಖಾಸಗಿ ಚಿಕಿತ್ಸೆ!

ಸಾರಾಂಶ

*ಕೋವಿಡ್‌ ರೋಗಿಗಳ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗಳಿಗೆ ವ್ಯರ್ಥವಾಗಿ ಹಣ ತೆರುತ್ತಿರುವ ಸರ್ಕಾರ *ಸರ್ಕಾರಿ ಆಸ್ಪತ್ರೆಗಳಲ್ಲಿ ಐಸಿಯು, ವೆಂಟೆಲೇಟರ್‌ ಸೇರಿ ಸಾವಿರಕ್ಕೂ ಹೆಚ್ಚು ಹಾಸಿಗೆಗಳು ಖಾಲಿ *ಆದರೂ 191 ಸೋಂಕಿತರಿಗೆ ನಗರದ ಖಾಸಗಿ ಆಸ್ಪತ್ರೆಗಳಲ್ಲಿ ಸರ್ಕಾರವೇ ಶುಲ್ಕ ನೀಡಿ ಚಿಕಿತ್ಸೆ

ಬೆಂಗಳೂರು(ಜ. 25): ಕೊರೋನಾ ಸೋಂಕಿತರ ಚಿಕಿತ್ಸೆಗೆ (Covid 19) ರಾಜಧಾನಿಯ ಸರ್ಕಾರಿ ಆಸ್ಪತ್ರೆಗಳಲ್ಲಿ ಒಂದು ಸಾವಿರಕ್ಕೂ ಅಧಿಕ ಹಾಸಿಗೆಗಳು ಖಾಲಿ ಇದ್ದರೂ, 191 ಸೋಂಕಿತರಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಸ್ವತಃ ಸರ್ಕಾರವೇ ಶುಲ್ಕ ಪಾವತಿಸಿ ಚಿಕಿತ್ಸೆ ಕೊಡಿಸುತ್ತಿದೆ! ಕೊರೋನಾ ಸೋಂಕಿನ ಸಂದರ್ಭದಲ್ಲಿ(ಈ ಹಿಂದಿನ ಎರಡು ಅಲೆಗಳಲ್ಲಿ) ಒಮ್ಮೆಗೆ ಆಸ್ಪತ್ರೆ ದಾಖಲಾತಿಗಳು ಹೆಚ್ಚಳವಾಗಿ ಹಾಸಿಗೆಗಳ ಅಭಾವ ಸೃಷ್ಟಿಯಾಗಬಹುದು ಎಂದು ಮುಂಜಾಗ್ರತಾ ಕ್ರಮವಾಗಿ ಖಾಸಗಿ ಆಸ್ಪತ್ರೆಗಳಲ್ಲಿಯೂ ಸರ್ಕಾರಿ ಕೋಟಾದಡಿ(ಚಿಕಿತ್ಸೆ ವೆಚ್ಚ ಪಾವತಿಸಿ) ಸೋಂಕಿತರ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿತ್ತು. 

ಈ ಹಿಂದೆ ಸರ್ಕಾರಿ ಆಸ್ಪತೆಗಳಲ್ಲಿ ಹಾಸಿಗೆಗಳು ಭರ್ತಿಯಾದ ಬಳಿಕವಷ್ಟೇ ಖಾಸಗಿ ಆಸ್ಪತ್ರೆಗಳ ಹಾಸಿಗೆಗಳನ್ನು ಸೋಂಕಿತರಿಗೆ ನೀಡಲಾಗುತ್ತಿತ್ತು. ಆದರೆ, ಈ ಬಾರಿ ಸೋಂಕಿನ ತೀವ್ರತೆ ಕಡಿಮೆ ಇದ್ದು, ಆಸ್ಪತ್ರೆ ದಾಖಲಾತಿ ಸಾಕಷ್ಟುಕಡಿಮೆ ಇದೆ. ಅಲ್ಲದೆ, ಸರ್ಕಾರಿ ಆಸ್ಪತ್ರೆಗಳಲ್ಲಿಯೇ ಸಾಕಷ್ಟುಹಾಸಿಗೆಗಳು ಖಾಲಿ ಇವೆ. ಆದರೂ, ರಾಜ್ಯ ಸರ್ಕಾರವು ಖಾಸಗಿ ಆಸ್ಪತ್ರೆಯಲ್ಲಿ ಸರ್ಕಾರಿ ಕೋಟಾ ಹಾಸಿಗೆಗಳನ್ನು ನೀಡಲಾರಂಭಿಸಿದೆ.

ಇದನ್ನೂ ಓದಿ: Corona Cases 3ನೇ ಅಲೆಯಲ್ಲೇ ಗರಿಷ್ಠ: ಕರ್ನಾಟಕದಲ್ಲಿ 32 ಸಾವು, ಶೇ.33 ಪಾಸಿಟಿವಿಟಿ!

ಇನ್ನು ಸರ್ಕಾರದಿಂದಲೇ ಅವಕಾಶ ನೀಡಿರುವ ಕಾರಣ ಸೋಂಕಿತರು ಖಾಸಗಿ ಆಸ್ಪತ್ರೆಗಳ ಸರ್ಕಾರಿ ಕೋಟಾ ಹಾಸಿಗೆಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಸೋಮವಾರದ ಅಂತ್ಯಕ್ಕೆ 191 ಸೋಂಕಿತರು ಸರ್ಕಾರಿ ಕೋಟಾದಡಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇವರ ಲಕ್ಷಾಂತರ ರುಪಾಯಿ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸುತ್ತಿದೆ.

ಸರ್ಕಾರ ಪಾವತಿಸುತ್ತಿರುವ ಶುಲ್ಕ: ಸರ್ಕಾರಿ ಕೋಟಾದಡಿ ಖಾಸಗಿ ಆಸ್ಪತ್ರೆಗೆ ದಾಖಲಾಗುವ ಸೋಂಕಿತರೊಬ್ಬರಿಗೆ ಪ್ರತಿ ದಿನ ಚಿಕಿತ್ಸೆಗೆ ಸಾಮಾನ್ಯ ಹಾಸಿಗೆಗೆ ಐದು ಸಾವಿರ ರು., ಆಕ್ಸಿಜನ್‌ ಹಾಸಿಗೆಗೆ ಏಳು ಸಾವಿರ ರು., ಐಸಿಯು ಹಾಸಿಗೆಗೆ ಎಂಟು ಸಾವಿರ ರು., ವೆಂಟಿಲೇಟರ್‌ ಸಹಿತಿ ಐಸಿಯುಗೆ 10 ಸಾವಿರ ರು., ಶುಲ್ಕ ನಿಗಡಿ ಪಡಿಸಲಾಗಿದೆ. ಸದ್ಯ 54 ಸೋಂಕಿತರು ಸಾಮಾನ್ಯ ಹಾಸಿಗೆ, 58 ಆಕ್ಸಿಜನ್‌ ಹಾಸಿಗೆ, 46 ಐಸಿಯು ಹಾಸಿಗೆ, 33 ವೆಂಟಿಲೇಟರ್‌ ಸಹಿತಿ ಐಸಿಯು ಹಾಸಿಗೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕನಿಷ್ಠ 7ರಿಂದ 10 ದಿನ ಚಿಕಿತ್ಸೆ ಮುಂದುವರೆಯಲಿದೆ.

ಇದನ್ನೂ ಓದಿ: Karnataka Corona case ಕೊರೋನಾ ಪರೀಕ್ಷೆಯಲ್ಲಿ ಮೊದಲ ಸ್ಥಾನದಲ್ಲಿ ಕರ್ನಾಟಕ, 6 ಕೋಟಿ ಮಂದಿಗೆ ಟೆಸ್ಟ್!

ಕಳೆದ 2 ಅಲೆಗಳ 140 ಕೋಟಿ ರು. ಬಾಕಿ: ‘ಮೊದಲ ಮತ್ತು ಎರಡನೇ ಅಲೆಯಲ್ಲಿ ಸರ್ಕಾರಿ ಕೋಟಾದಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡಿದ ಸಾವಿರಾರು ಖಾಸಗಿ ಆಸ್ಪತ್ರೆಗಳಿಗೆ ಸರ್ಕಾರದಿಂದ ಈವರೆಗೂ ಚಿಕಿತ್ಸಾ ವೆಚ್ಚ ಪಾವತಿಯಾಗಿಲ್ಲ. ಖಾಸಗಿ ಆಸ್ಪತ್ರೆ ಮತ್ತು ನರ್ಸಿಂಗ್‌ ಹೋಂಗಳ ಅಸೋಸಿಯೇಷನ್‌ (ಫನಾ) ನೀಡುವ ಮಾಹಿತಿಯಂತೆ, ಸೋಂಕಿತರ ಚಿಕಿತ್ಸಾ ವೆಚ್ಚ ಪಾವತಿಸುವ ಸರ್ಕಾರದ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ ಇಂದಿಗೂ 140 ಕೋಟಿ ರು. ಬಾಕಿ ಉಳಿಸಿಕೊಂಡಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಪರಿಸ್ಥಿತಿ ಭಿನ್ನವಾಗಿದ್ದು, ಕೊರೊನಾ ವಾರ್ಡ್‌ಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ದುಪ್ಪಟ್ಟು ಸಂಬಳ ನೀಡಬೇಕು. ಚಿಕಿತ್ಸೆಗೆ ಅತ್ಯಗತ್ಯವಾದ ವೈದ್ಯಕೀಯ ಸಲಕರಣೆಗಳ ಖರೀದಿಗೆ ಲಕ್ಷಾಂತರ ರು. ನೀಡಬೇಕು. ಆದರೆ, ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ಗೆ ಸಾಕಷ್ಟುಮನವಿ ಮಾಡಿದ್ದೇವೆ. ಮುಂದಿನ ವಾರ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಬಾಕಿ ಶುಲ್ಕ ಪಾವತಿಗೆ ಮನವಿ ಮಾಡಲಾಗುವುದು ಎಂದು ಫನಾ ಅಧ್ಯಕ್ಷ ಡಾ.ಪ್ರಸನ್ನ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಕೋವಿಡ್‌ ಬೆಡ್‌: 

ಸರ್ಕಾರಿ ವಲಯಲ್ಲಿ ಮೀಸಲಿಟ್ಟಹಾಸಿಗೆ - 1,580

ಭರ್ತಿಯಾಗಿರುವ ಹಾಸಿಗೆಗಳು 422

ಖಾಲಿ ಇರುವ ಹಾಸಿಗೆಗಳು - 1,158

ಖಾಸಗಿ ವಲಯಲ್ಲಿ ಭರ್ತಿ - 191

ಸರ್ಕಾರಿ ಆಸ್ಪತ್ರೆಯಲ್ಲಿ ಲಭ್ಯವಿರುವ ಹಾಸಿಗೆಗಳು

ಸಾಮಾನ್ಯ - 655

ಎಚ್‌ಡಿಯು - 398

ಐಸಿಯು - 70

ವೆಂಟಿಲೇಟರ್‌ ಐಸಿಯು - 123

-ಜಯಪ್ರಕಾಶ್‌ ಬಿರಾದಾರ್‌,  ಕನ್ನಡಪ್ರಭ ವಾರ್ತೆ

PREV
Read more Articles on
click me!

Recommended Stories

ಅಧಿವೇಶನದ ಮೊದಲ ದಿನವೇ ಕೇಬಲ್‌ ಆಪರೇಟರ್‌ಗಳಿಗೆ ಸಿಹಿಸುದ್ದಿ ನೀಡಿದ ಇಂಧನ ಸಚಿವ ಕೆಜೆ ಜಾರ್ಜ್‌!
ಕೊಪ್ಪಳ: ಹಸೆಮಣೆ ಏರಬೇಕಿದ್ದ ಜೋಡಿ ಮಸಣಕ್ಕೆ - ಪ್ರಿ-ವೆಡ್ಡಿಂಗ್ ಶೂಟಿಂಗ್ ಮುಗಿಸಿ ವಾಪಸಾಗುವಾಗ ಭೀಕರ ದುರಂತ!