
ಬೆಂಗಳೂರು (ಏ.28): ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಅಪ್ರಾಪ್ತ ವಯಸ್ಕರ ವಾಹನ ಚಾಲನೆ ಹಾಗೂ ಅಪಾಯಕಾರಿ ರೈಡಿಂಗ್‌ಗೆ ಬ್ರೇಕ್ ಹಾಕಲು ಪೊಲೀಸರು ಕಠಿಣ ಕ್ರಮ ಕೈಗೊಳ್ಳುತ್ತಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ, ಪಾದರಾಯನಪುರದಲ್ಲಿ ಮಕ್ಕಳು ಸ್ಕೂಟರ್ ಚಲಾಯಿಸುತ್ತಿದ್ದ ದೃಶ್ಯವನ್ನು ಸಾರ್ವಜನಿಕರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಬೆನ್ನಲ್ಲೇ ಬೆಂಗಳೂರು ಸಂಚಾರಿ ಪೊಲೀಸರು ಎಫ್‌ಐಆರ್ (FIR) ದಾಖಲಿಸಿದ್ದಾರೆ.
ಏಪ್ರಿಲ್ 26, 2026ರ ಶನಿವಾರ ಬೆಳಿಗ್ಗೆ ಸುಮಾರು 10:45ಕ್ಕೆ ಪಾದರಾಯನಪುರ ಮುಖ್ಯರಸ್ತೆಯ ಗೌರಿಪಾಳ್ಯ ಸಮೀಪದ ಹೊಸ ಮೇಲ್ಸೇತುವೆ ಬಳಿ ಈ ಘಟನೆ ನಡೆದಿದೆ. ಕೆಎ 05 ಜೆಜೆಡ್ 9065 (KA05JZ9065) ಸಂಖ್ಯೆಯ ಸ್ಕೂಟರ್‌ನಲ್ಲಿ ಅಪ್ರಾಪ್ತ ಮಕ್ಕಳು ಕಾನೂನುಬಾಹಿರವಾಗಿ ಚಲಾಯಿಸುತ್ತಿದ್ದರು. ಇದನ್ನು ಗಮನಿಸಿದ ಶ್ರೇಯಸ್ ಎಂಬ ಜಾಗೃತ ನಾಗರಿಕರು ತಕ್ಷಣವೇ ಫೋಟೋ ತೆಗೆದು ಬೆಂಗಳೂರು ನಗರ ಪೊಲೀಸ್ ಮತ್ತು ಸಂಚಾರಿ ಪೊಲೀಸರನ್ನು ಟ್ಯಾಗ್ ಮಾಡಿ ಟ್ವೀಟ್ ಮಾಡಿದ್ದರು.
ಶ್ರೇಯಸ್ ಅವರ ಟ್ವೀಟ್‌ಗೆ ತಕ್ಷಣವೇ ಸ್ಪಂದಿಸಿದ ಬೆಂಗಳೂರು ಸಂಚಾರಿ ಪೊಲೀಸರು, ಈ ಕುರಿತು ಮಾಗಡಿ ರಸ್ತೆ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಅಪ್ರಾಪ್ತರಿಗೆ ವಾಹನ ನೀಡಿದ ವಾಹನ ಮಾಲೀಕರು ಅಥವಾ ಪೋಷಕರ ವಿರುದ್ಧ ಕಾನೂನು ಕ್ರಮ ಜರುಗಿಸಲು ಪೊಲೀಸರು ಮುಂದಾಗಿದ್ದಾರೆ.
ಪೊಲೀಸರ ಈ ತ್ವರಿತ ಕ್ರಮಕ್ಕೆ ಶ್ರೇಯಸ್ ಅಭಿನಂದನೆ ಸಲ್ಲಿಸಿದ್ದಾರೆ. 'ತಕ್ಷಣವೇ ಸ್ಪಂದಿಸಿದ ಬೆಂಗಳೂರು ಸಂಚಾರಿ ಪೊಲೀಸರಿಗೆ ಧನ್ಯವಾದಗಳು. ಅಪ್ರಾಪ್ತರಿಗೆ ವಾಹನ ನೀಡುವ ಪೋಷಕರ ವಿರುದ್ಧ ಕಠಿಣ ಕ್ರಮವಾಗಲಿ' ಎಂದು ಅವರು ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಮುರಳಿ ಎಂಬುವವರು, 'ಇದು ಉತ್ತಮ ಹೆಜ್ಜೆ. ಇಂತಹ ಅಕ್ರಮಗಳನ್ನು ಕಂಡಾಗ ಫೋಟೋ ತೆಗೆದು ಪೊಲೀಸರಿಗೆ ತಿಳಿಸುವುದು ನಮ್ಮೆಲ್ಲರ ಜವಾಬ್ದಾರಿ' ಎಂದು ಶ್ಲಾಘಿಸಿದ್ದಾರೆ.
ಅಪ್ರಾಪ್ತ ವಯಸ್ಕರು ವಾಹನ ಚಾಲನೆ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದೆ. ಇಂತಹ ಪ್ರಕರಣಗಳಲ್ಲಿ ವಾಹನ ಮಾಲೀಕರು ಅಥವಾ ಪೋಷಕರಿಗೆ ದಂಡ ಮಾತ್ರವಲ್ಲದೆ ಜೈಲು ಶಿಕ್ಷೆ ವಿಧಿಸುವ ಅವಕಾಶವೂ ಇದೆ. ಅಲ್ಲದೆ, ಅಪ್ರಾಪ್ತರು ಚಲಾಯಿಸಿದ ವಾಹನದ ನೋಂದಣಿಯನ್ನು ರದ್ದುಗೊಳಿಸುವ ಅಧಿಕಾರವೂ ಪೊಲೀಸರಿಗಿದೆ. ನಿಮ್ಮ ಮಕ್ಕಳ ಪ್ರಾಣ ಹಾಗೂ ನಿಮ್ಮ ಕಾನೂನು ಸುರಕ್ಷತೆಯ ದೃಷ್ಟಿಯಿಂದ ಮಕ್ಕಳ ಕೈಗೆ ವಾಹನ ನೀಡಬೇಡಿ ಎಂದು ಪೊಲೀಸರು ಮನವಿ ಮಾಡಿದ್ದಾರೆ.