
ಬೆಂಗಳೂರು (ಸೆ.09): ಸಿಲಿಕಾನ್ ಸಿಟಿ ಬೆಂಗಳೂರಿನ ಹಳದಿ ಮೆಟ್ರೋ ರೈಲು ಮಾರ್ಗದಲ್ಲಿನ ಜನರಿಗೆ ಗುಡ್‌ನ್ಯೂಸ್ ಬಂದಿದೆ. ಈವರೆಗೆ ಕೇವಲ 3 ಮೆಟ್ರೋ ರೈಲುಗಳು 25 ನಿಮಿಷಗಳಿಗೊಮ್ಮೆ ರೈಲು ಸೇವೆ ನೀಡುತ್ತಿದ್ದವು. ಇದೀಗ ಹೊಸದಾಗಿ ಇನ್ನೊಂದು ರೈಲು ಸೇರ್ಪಡೆ ಮಾಡಲಾಗಿದ್ದು, ರೈಲು ಕಾರ್ಯಾಚರಣೆ ಅವಧಿಯನ್ನು 19 ನಿಮಿಷಗಳಿಗೆ ಇಳಿಕೆ ಮಾಡಲಾಗಿದೆ.
ಈ ಬಗ್ಗೆ ಅಧಿಕೃತ ಪ್ರಕಟಣೆಯನ್ನು ಹೊರಡಿಸಿರುವ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್) ಸಂಸ್ಥೆಯು, ನಮ್ಮ ಮೆಟ್ರೋದ ಹಳದಿ ಮಾರ್ಗದಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಮಹತ್ವದ ಬದಲಾವಣೆಗಳನ್ನು ಪ್ರಕಟಿಸಿದೆ. ಹೊಸದಾಗಿ ಸೇರ್ಪಡೆಯಾಗಿರುವ 4ನೇ ರೈಲು ಸೆಟ್‌ನೊಂದಿಗೆ, ಹಳದಿ ಮಾರ್ಗದ ರೈಲುಗಳ ವೇಳಾಪಟ್ಟಿಯನ್ನು ಪರಿಷ್ಕರಿಸಲಾಗಿದೆ. ಈ ಬದಲಾವಣೆಗಳು ಸೆಪ್ಟೆಂಬರ್ 10, 2025 ರಿಂದ ಜಾರಿಗೆ ಬರಲಿವೆ.
ರೈಲುಗಳ ವೇಳಾಪಟ್ಟಿಯಲ್ಲಿನ ಪ್ರಮುಖ ಬದಲಾವಣೆಗಳು:
ರೈಲುಗಳ ಆವರ್ತನ: ಇದುವರೆಗೆ 25 ನಿಮಿಷಗಳ ಮಧ್ಯಂತರದಲ್ಲಿ ಸಂಚರಿಸುತ್ತಿದ್ದ ರೈಲುಗಳು, ಇನ್ನು ಮುಂದೆ ಕೇವಲ 19 ನಿಮಿಷಗಳ ಅಂತರದಲ್ಲಿ ಲಭ್ಯವಿರುತ್ತವೆ. ಇದರಿಂದ ಪ್ರಯಾಣಿಕರ ಕಾಯುವ ಸಮಯ ಗಣನೀಯವಾಗಿ ಕಡಿಮೆಯಾಗಲಿದೆ.
ಬೆಂಗಳೂರು ಮೆಟ್ರೋ ನಿಲ್ದಾಣಕ್ಕೆ 'ಸೆಂಟ್ ಮೇರಿ' ಹೆಸರು ನಾಮಕರಣ; ಸಿಎಂ ಸಿದ್ದರಾಮಯ್ಯ!
ಕೊನೆಯ ರೈಲು ಸಮಯ: ಕೊನೆಯ ರೈಲುಗಳ ಸಮಯದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಆರ್.ವಿ.ರಸ್ತೆಯಿಂದ ಕೊನೆಯ ರೈಲು ರಾತ್ರಿ 11:55ಕ್ಕೆ ಹೊರಡಲಿದೆ, ಮತ್ತು ಬೊಮ್ಮಸಂದ್ರದಿಂದ ಕೊನೆಯ ರೈಲು ರಾತ್ರಿ 10:42ಕ್ಕೆ ಹೊರಡಲಿದೆ.
ಈ ಹೊಸ ಸೇವೆಗಳಿಂದ ಹಳದಿ ಮಾರ್ಗದ ಪ್ರಯಾಣಿಕರಿಗೆ ಮತ್ತಷ್ಟು ವೇಗದ ಮತ್ತು ಸುಗಮ ಸಂಚಾರ ಅನುಭವ ಲಭ್ಯವಾಗಲಿದೆ. ಹೆಚ್ಚುವರಿ ರೈಲು ಸೇವೆಗಳ ಮೂಲಕ ಪ್ರಯಾಣಿಕರ ದಟ್ಟಣೆಯನ್ನು ನಿಭಾಯಿಸಲು ಮತ್ತು ಉತ್ತಮ ಸೇವೆಯನ್ನು ಒದಗಿಸಲು ಬಿಎಂಆರ್‌ಸಿಎಲ್ ಈ ಕ್ರಮ ಕೈಗೊಂಡಿದೆ. ಪ್ರಯಾಣಿಕರು ಈ ಬದಲಾವಣೆಗಳನ್ನು ಗಮನಿಸಿ ಮೆಟ್ರೋ ಸೇವೆಯ ಲಾಭ ಪಡೆಯಬೇಕೆಂದು ನಿಗಮ ವಿನಂತಿಸಿದೆ.