ಪುತ್ರನಿಗೆ ಸರ್ಜರಿ ಹಿನ್ನೆಲೆ ಜಾಮೀನುಕೋರಿ ವಿನಯ್‌ ಹೈಕೋರ್ಟ್‌ಗೆ, ಬೇಲ್‌ ಕೊಟ್ಟರೆ ಸಾಕ್ಷಿಗಳ ಮೇಲೆ ಪ್ರಭಾವ ಎಂದ ಸಿಬಿಐ

Kannadaprabha News, Ravi Janekal |   | Kannada Prabha
Published : Sep 09, 2025, 05:09 PM IST
Vinay kulkarni

ಸಾರಾಂಶ

ಯೋಗೇಶ್ ಗೌಡ ಕೊಲೆ ಪ್ರಕರಣದ ಆರೋಪಿ, ಶಾಸಕ ವಿನಯ್ ಕುಲಕರ್ಣಿ ಮಧ್ಯಂತರ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ಮಗನ ಶಸ್ತ್ರಚಿಕಿತ್ಸೆಗೆಂದು ಮೂರು ದಿನಗಳ ಜಾಮೀನು ಕೋರಿದ್ದು, ಸಿಬಿಐ ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಆಕ್ಷೇಪ ವ್ಯಕ್ತಪಡಿಸಿದೆ. ಮಂಗಳವಾರಕ್ಕೆ ವಿಚಾರಣೆ ಮುಂದೂಡಲಾಗಿದೆ.

ಬೆಂಗಳೂರು (ಸೆ.9): ಧಾರವಾಡದ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಯೋಗೇಶ್‌ ಗೌಡ ಕೊಲೆ ಪ್ರಕರಣದ ಆರೋಪಿ ಶಾಸಕ ವಿನಯ್‌ ಕುಲಕರ್ಣಿ ಮಧ್ಯಂತರ ಜಾಮೀನು ಕೋರಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. 

ನ್ಯಾಯಾಂಗ ಬಂಧನದಲ್ಲಿರುವ ವಿನಯ್‌ ಕುಲಕರ್ಣಿ ಅವರು ತಮ್ಮ ಮಗನ ಶಸ್ತ್ರಚಿಕಿತ್ಸೆ ಅಗತ್ಯವಿರುವ ಹಿನ್ನೆಲೆಯಲ್ಲಿ ಮೂರು ದಿನಗಳ ಕಾಲ ಮಧ್ಯಂತರ ಜಾಮೀನು ನೀಡುವಂತೆ ವಕೀಲರ ಮೂಲಕ ಅರ್ಜಿ ಸಲ್ಲಿಸಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಿಬಿಐ ಪರ ವಕೀಲರು, ಆರೋಪಿಗೆ ಮಧ್ಯಂತರ ಜಾಮೀನು ಮಂಜೂರು ಮಾಡಿದರೆ, ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆಯಿದೆ. ಹೀಗಾಗಿ ಜಾಮೀನು ನೀಡದಂತೆ ಮನವಿ ಮಾಡಿದರು. ಬಳಿಕ ನ್ಯಾಯಾಲಯವು ಸಿಬಿಐಗೆ ನೋಟಿಸ್‌ ಜಾರಿಗೊಳಿಸಿ ಮಂಗಳವಾರಕ್ಕೆ ವಿಚಾರಣೆಯನ್ನು ಮುಂದೂಡಿತು.

ಪ್ರಕರಣದ ಹಿನ್ನೆಲೆ:

ಧಾರವಾಡದ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಯೋಗೇಶ್‌ ಗೌಡ ಅವರನ್ನು 2016ರ ಜೂ.15ರಂದು ಭೀಕರವಾಗಿ ಕೊಚ್ಚಿ ಹತ್ಯೆ ಮಾಡಲಾಗಿತ್ತು. ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಲಾಗಿತ್ತು. ಈ ಪ್ರಕರಣದಲ್ಲಿ ಮಾಜಿ ಸಚಿವ ವಿನಯ್‌ ಕುಲಕರ್ಣಿ ಕೈವಾಡದ ಶಂಕೆ ಹಿನ್ನೆಲೆಯಲ್ಲಿ 2020ರ ನ.5ರಂದು ಅವರನ್ನು ಸಿಬಿಐ ಬಂಧಿಸಿತ್ತು. ಬಳಿಕ ವಿನಯ್‌ ಕುಲಕರ್ಣಿ ಅವರು ಸುಪ್ರೀಂ ಕೋರ್ಟ್‌ನಲ್ಲಿ ಜಾಮೀನು ಪಡೆದಿದ್ದರು. 

ಈ ಜಾಮೀನು ರದ್ದು ಕೋರಿ ಸಿಬಿಐ ಸಲ್ಲಿಸಿದ್ದ ಅರ್ಜಿ ವಿಚಾರಣೆ ಮಾಡಿದ ಸುಪ್ರೀಂ ಕೋರ್ಟ್‌ ಕಳೆದ ಜೂನ್‌ 6ರಂದು ಜಾಮೀನು ರದ್ದುಗೊಳಿಸಿ, ಒಂದು ವಾರದೊಳಗೆ ನ್ಯಾಯಾಲಯದ ಎದುರು ಶರಣಾಗುವಂತೆ ಸೂಚಿಸಿತ್ತು. ಅದರಂತೆ ವಿನಯ್ ಕುಲಕರ್ಣಿ ಜೂ.14ರಂದು ನಗರದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಎದುರು ಶರಣಾಗಿದ್ದರು. ಬಳಿಕ ಸಿಬಿಐ ಅಧಿಕಾರಿಗಳು ವಿನಯ್‌ ಕುಲಕರ್ಣಿ ಅವರನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು.

PREV
Read more Articles on
click me!

Recommended Stories

ಬೆಂಗಳೂರಿನ ಬಾಡಿಗೆ ಮನೆಯಲ್ಲಿ ಕೊಳೆತ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆ
ಬೆಂಗಳೂರು ಅಪಾರ್ಟ್‌ಮೆಂಟ್‌ನ 16 ಕುಟುಂಬಗಳಿಗೆ ರೌಡಿಸಂ ದರ್ಶನ; ಮಾಟ-ಮಂತ್ರ ಮಾಡಿಸಿ ಕಿರುಕುಳ!