
ಬೆಂಗಳೂರು (ಡಿ.29): ಮುದ್ದಾಗಿ ಬೆಳೆಸಿದ್ದ ಮಗಳನ್ನ ಮದುವೆ ಮಾಡಿಕೊಡಲು ನಿರಾಕರಿಸಿದ ಕಾರಣಕ್ಕೆ ಮಹಿಳೆಯೊಬ್ಬರ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆಗೆ ಯತ್ನಿಸಿದ್ದ ಆರೋಪಿಯನ್ನು ಬಸವೇಶ್ವರ ನಗರ ಪೊಲೀಸರು ತಮಿಳುನಾಡಿನಲ್ಲಿ ಬಂಧಿಸಿದ್ದಾರೆ. ಬಂಧಿತನನ್ನು ಮುತ್ತು ಅಭಿಮನ್ಯು ಎಂದು ಗುರುತಿಸಲಾಗಿದೆ.
ಬಸವೇಶ್ವರ ನಗರದ ಸಾಣೆಗುರುವನಹಳ್ಳಿಯಲ್ಲಿ ಕಳೆದ ಮಂಗಳವಾರ ಮಧ್ಯರಾತ್ರಿ ಈ ಘೋರ ಕೃತ್ಯ ನಡೆದಿತ್ತು. ಗೀತಾ ಎಂಬುವವರು ತಮ್ಮ 19 ವರ್ಷದ ಮಗಳೊಂದಿಗೆ ವಾಸವಿದ್ದು, ಜೀವನೋಪಾಯಕ್ಕಾಗಿ ಪ್ರಾವಿಷನ್ ಸ್ಟೋರ್ ನಡೆಸುತ್ತಿದ್ದರು. ಅದೇ ಏರಿಯಾದಲ್ಲಿ ಟೀ ಅಂಗಡಿ ಇಟ್ಟುಕೊಂಡಿದ್ದ ಮುತ್ತು ಅಭಿಮನ್ಯು ಎಂಬಾತನ ಪರಿಚಯ ಇವರಿಗಾಗಿತ್ತು. ಈ ಪರಿಚಯ ಬೆಳೆದು ಕಳೆದ ನಾಲ್ಕು ವರ್ಷಗಳಿಂದ ಮುತ್ತು ಕೂಡ ಇವರ ಮನೆಯಲ್ಲೇ ವಾಸವಿದ್ದ ಎನ್ನಲಾಗಿದೆ.
ಸಲುಗೆಯಿಂದ ಇದ್ದ ಮುತ್ತು, ಗೀತಾ ಅವರ 19 ವರ್ಷದ ಮಗಳನ್ನು ಮದುವೆ ಮಾಡಿಕೊಡುವಂತೆ ಪೀಡಿಸುತ್ತಿದ್ದ. ಆದರೆ, ಮಗಳು ಚಿಕ್ಕವಳು ಎಂದು ಸಬೂಬು ಹೇಳುತ್ತಾ ಆತನಿಗೆ ಮಗಳನ್ನು ಕೊಡದೇ ಮುಂದಕ್ಕೆ ಹಾಕುತ್ತಿದ್ದಳು. ಇತ್ತೀಚೆಗೆ ನಿನ್ನ ಮಗಳಿಗೆ ಕಾನೂನಾತ್ಮಕವಾಗಿ ಮದುವೆಯ ವಯಸ್ಸು ಬಂದಿದೆ, ನಿನ್ನ ಮಗಳನ್ನು ನನಗೇ ಕೊಟ್ಟು ಮದುವೆ ಮಾಡುವಂತೆ ಪುನಃ ಗೀತಾಗೆ ಪೀಡಿಸಿದ್ದಾನೆ. ಆಗ ಆತನ ನಡವಳಿಕೆ ಬಗ್ಗೆ ಆತನ ಸ್ನೇಹಿತರ ಬಳಿ ವಿಚಾರಿಸಿದಾಗ ಆತನ ನಡವಳಿಕೆ ಸರಿಯಿಲ್ಲ ಎಂಬುದು ತಿಳಿದುಬಂದಿದೆ. ಇದೇ ಕಾರಣದಿಂದ ತಾಯಿ ಗೀತಾ, ತನ್ನ ಮಗಳನ್ನು ನಿನಗೆ ಕೊಟ್ಟು ಮದುವೆ ಮಾಡುವುದಿಲ್ಲ ಎಂದು ಆತನ ಮದುವೆ ಪ್ರಸ್ತಾಪಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.
ಇದರಿಂದ ಕೆರಳಿದ ಮುತ್ತು, ಹುಡುಗಿಗೆ ಮದುವೆ ಮಾಡಿಕೊಳ್ಳುವ ವಯಸ್ಸಾಗಿದ್ದರೂ ಆಕೆಯ ತಾಯಿಯೇ ತನ್ನ ಮದುವೆಗೆ ಅಡ್ಡಿಯಾಗುತ್ತಿದ್ದಾಳೆ ಎಂದು ಭಾವಿಸಿ ಆಕೆಯನ್ನು ಇಲ್ಲವಾಗಿಸಲು ಸ್ಕೆಚ್ ಹಾಕಿದ್ದನು. ಇದೇ ಉದ್ದೇಶದಿಂದ ಕಳೆದ ಮಂಗಳವಾರ ಮಧ್ಯರಾತ್ರಿ ಸುಮಾರು 1 ಗಂಟೆಯ ಸುಮಾರಿಗೆ ಮನೆಯಲ್ಲಿದ್ದ ಗೀತಾ ಅವರ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಬೆಂಕಿಯ ಜ್ವಾಲೆಯಿಂದ ಗೀತಾ ದೇಹವು ಸುಮಾರು ಶೇ. 50 ರಷ್ಟು ಸುಟ್ಟುಹೋಗಿದ್ದು, ಸದ್ಯ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.
ಬೆಂಗಳೂರಿನ ಮನೆಯಲ್ಲಿ ಹುಡುಗಿಯ ತಾಯಿ ಗೀತಾಗೆ ಬೆಂಕಿ ಹಚ್ಚಿ ಕೊಲೆ ಮಾಡಲೆತ್ನಿಸಿದ ಕೃತ್ಯ ಎಸಗಿದ ಬಳಿಕ ತಲೆಮರೆಸಿಕೊಂಡಿದ್ದ ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದರು. ತಾಂತ್ರಿಕ ದಾಖಲೆಗಳ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದ ಪೊಲೀಸರು ಡಿಸೆಂಬರ್ 29ರಂದು ತಮಿಳುನಾಡಿನಲ್ಲಿ ಅವಿತಿದ್ದ ಮುತ್ತು ಅಭಿಮನ್ಯುವನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ.