
ಬೆಂಗಳೂರು (ಮಾ.16): ಸಿಲಿಕಾನ್ ಸಿಟಿಯಲ್ಲಿ ಸಣ್ಣಪುಟ್ಟ ವಿಚಾರಗಳಿಗೂ ಅಪರಾಧ ಕೃತ್ಯಗಳು ನಡೆಯುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ. ಹುಡುಗಿಯೊಬ್ಬಳ ಜೊತೆಗಿದ್ದ ದೃಶ್ಯವನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿದ ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬನನ್ನು ಸಿನಿಮೀಯ ಶೈಲಿಯಲ್ಲಿ ಕಿಡ್ನಾಪ್ ಮಾಡಿದ ಘಟನೆ ಬೆಂಗಳೂರಿನ ಮಹಾದೇವಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರು ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ.
ಮೂಲತಃ ಅಸ್ಸಾಂ ರಾಜ್ಯದವರಾದ ಶಬ್ಬೀರ್ ಅಲಿಯಾಸ್ ಸಾದಿರ್ ಖಾ ಎಂಬುವವರು ಬೆಂಗಳೂರಿನ ಜ್ಯೂಸ್ ಶಾಪ್ ಒಂದರಲ್ಲಿ ಕೆಲಸ ಮಾಡುತ್ತಿದ್ದರು. ಸಜೀದ್ ಎಂಬಾತ ಹುಡುಗಿಯೊಬ್ಬಳ ಜೊತೆ ಇದ್ದಾಗ, ಸಾದಿರ್ ಅದನ್ನು ತನ್ನ ಮೊಬೈಲ್‌ನಲ್ಲಿ ವಿಡಿಯೋ ಮಾಡಿಕೊಂಡಿದ್ದ ಎನ್ನಲಾಗಿದೆ. ಈ ವಿಚಾರ ಸಜೀದ್‌ಗೆ ತಿಳಿದಾಗ ತೀವ್ರ ಆಕ್ರೋಶಗೊಂಡಿದ್ದ. ತನ್ನ ಖಾಸಗಿ ಕ್ಷಣಗಳನ್ನು ವಿಡಿಯೋ ಮಾಡಿದ್ದಕ್ಕೆ ಸಾದಿರ್‌ನನ್ನು ಸದೆಬಡಿಯಲು ಸಜೀದ್ ಸಂಚು ರೂಪಿಸಿದ್ದ.
ಸಾದಿರ್ ತನ್ನ ಸ್ನೇಹಿತನ ಮನೆ ಬಳಿ ಇದ್ದಾಗ, ಆಟೋದಲ್ಲಿ ಬಂದ ಸಜೀದ್ ಮತ್ತು ಆತನ ನಾಲ್ವರು ಸಹಚರರು ಸಾದಿರ್‌ನನ್ನು ಬಲವಂತವಾಗಿ ಅಪಹರಿಸಿದ್ದಾರೆ. ಜನನಿಬಿಡ ಪ್ರದೇಶದಲ್ಲೇ ಈ ಕಿಡ್ನಾಪ್ ನಡೆದಿದ್ದು, ಸಾದಿರ್‌ನನ್ನು ರಾಮಮೂರ್ತಿನಗರದ ಕಡೆಗೆ ಕರೆದೊಯ್ದಿದ್ದಾರೆ. ದಾರಿಯುದ್ದಕ್ಕೂ ಆತನಿಗೆ ಬೆದರಿಕೆ ಹಾಕಿದ ಆರೋಪಿಗಳು, ಆತನ ಮೊಬೈಲ್‌ನಲ್ಲಿದ್ದ ವಿಡಿಯೋವನ್ನು ಬಲವಂತವಾಗಿ ಡಿಲೀಟ್ ಮಾಡಿಸಿದ್ದಾರೆ. ನಂತರ ಆತನನ್ನು ಬಿಟ್ಟು ಪರಾರಿಯಾಗಿದ್ದಾರೆ.
ಕಿಡ್ನಾಪ್‌ನಿಂದ ತಪ್ಪಿಸಿಕೊಂಡ ಸಾದಿರ್ ತಕ್ಷಣವೇ ಮಹಾದೇವಪುರ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಪ್ರಕರಣದ ಗಂಭೀರತೆಯನ್ನು ಅರಿತ ಪೊಲೀಸರು ತಕ್ಷಣವೇ ತನಿಖೆ ಆರಂಭಿಸಿ, ತಾಂತ್ರಿಕ ಸಾಕ್ಷ್ಯಗಳ ಆಧಾರದ ಮೇಲೆ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದರು.
ಪೊಲೀಸರ ಕಾರ್ಯಾಚರಣೆಯ ಫಲವಾಗಿ ಮುಖ್ಯ ಆರೋಪಿ ಸಜೀದ್, ಸುಬ್ರಮಣಿ ಹಾಗೂ ಓರ್ವ ಅಪ್ರಾಪ್ತನನ್ನು ಬಂಧಿಸಲಾಗಿದೆ. ಈ ಕಿಡ್ನಾಪ್ ಕೃತ್ಯದಲ್ಲಿ ಒಟ್ಟು ಐವರು ಭಾಗಿಯಾಗಿದ್ದು, ಉಳಿದ ಇಬ್ಬರು ಆರೋಪಿಗಳಾದ ವಿನ್ಸೆಟ್ ಮತ್ತು ಚಿಂಟು ಎಂಬುವವರಿಗಾಗಿ ಪೊಲೀಸರು ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.
ಬಂಧಿತ ಆರೋಪಿಗಳಿಂದ ಕಿಡ್ನಾಪ್‌ಗೆ ಬಳಸಿದ್ದ ಆಟೋವನ್ನು ವಶಪಡಿಸಿಕೊಳ್ಳುವ ಸಾಧ್ಯತೆಯಿದೆ. ಸದ್ಯ ಮಹಾದೇವಪುರ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ತಲೆಮರೆಸಿಕೊಂಡಿರುವ ಉಳಿದ ಆರೋಪಿಗಳ ಪತ್ತೆಗೆ ವಿಶೇಷ ತಂಡವನ್ನು ರಚಿಸಿದ್ದಾರೆ. ಬೆಂಗಳೂರಿನಲ್ಲಿ ಇತ್ತೀಚೆಗೆ ಇಂತಹ ಕಿಡ್ನಾಪ್ ಪ್ರಕರಣಗಳು ಹೆಚ್ಚಾಗುತ್ತಿರುವುದು ಸಾರ್ವಜನಿಕರಲ್ಲಿ ಭಯ ಮೂಡಿಸಿದೆ. ಮೊಬೈಲ್ ವಿಡಿಯೋ ವಿಚಾರವಾಗಿ ಕಾನೂನನ್ನು ಕೈಗೆತ್ತಿಕೊಂಡ ಆರೋಪಿಗಳಿಗೆ ಈಗ ಜೈಲು ಪಾಲಾಗುವ ಸ್ಥಿತಿ ಬಂದಿದೆ.