
ಬೆಂಗಳೂರಿನ ಖಾಸಗಿ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯದಿಂದ ವ್ಯಕ್ತಿಯೊಬ್ಬ ಮೃತಪಟ್ಟಿರುವ ಗಂಭೀರ ಆರೋಪ ಕೇಳಿಬಂದಿದೆ. ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಸಂತೋಷ್ ಕುಮಾರ್ ಎಂಬವರು ಕಿಡ್ನಿ ಟ್ರಾನ್ಸ್‌ಪ್ಲಾಂಟ್ ಶಸ್ತ್ರಚಿಕಿತ್ಸೆ ವೇಳೆ ಮೃತಪಟ್ಟಿದ್ದು, ವೈದ್ಯರ ಎಡವಟ್ಟೇ ಇದಕ್ಕೆ ಕಾರಣ ಎಂದು ಕುಟುಂಬಸ್ಥರು ಆರೋಪಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಂತೋಷ್ ಕುಮಾರ್ ಕೆಲ ಕಾಲದಿಂದ ಕಿಡ್ನಿ ಸಂಬಂಧಿತ ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ವೈದ್ಯರ ಸಲಹೆ ಮೇರೆಗೆ ಕಿಡ್ನಿ ಟ್ರಾನ್ಸ್‌ಪ್ಲಾಂಟ್ ಮಾಡಿಸಲು ಕುಟುಂಬಸ್ಥರು ನಿರ್ಧರಿಸಿದ್ದರು. ಈ ಸಂದರ್ಭದಲ್ಲಿ ಅವರ ಪತ್ನಿ ಮಾರ್ಟಿನಾ ಲೂಯಿ ಗಂಡನ ಜೀವ ಉಳಿಸಲು ತಮ್ಮದೇ ಕಿಡ್ನಿಯನ್ನು ದಾನ ಮಾಡಲು ಮುಂದಾಗಿದ್ದರು. ವೈದ್ಯಕೀಯ ಪರೀಕ್ಷೆಗಳ ನಂತರ ಎಲ್ಲವೂ ಸಾಮಾನ್ಯವಾಗಿದೆ, ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನಡೆಸಬಹುದು. ಯಾವುದೇ ಕಾರಣಕ್ಕೂ ಪ್ರಾಣಕ್ಕೆ ಏನು ಸಮಸ್ಯೆ ಆಗೋದಿಲ್ಲ ಅದಕ್ಕೆ ನಾವು ಗ್ಯಾರಂಟಿ ಕೊಡ್ತೀವಿ ಅಂತ ವೈದ್ಯರು ಕುಟುಂಬಕ್ಕೆ ಭರವಸೆ ನೀಡಿದ್ದರಂತೆ
ಕುಟುಂಬಸ್ಥರ ಹೇಳಿಕೆಯ ಪ್ರಕಾರ, ಶಸ್ತ್ರಚಿಕಿತ್ಸೆಗೆ ಮುನ್ನ ಆಸ್ಪತ್ರೆಯವರು ಸುಮಾರು ₹20 ಲಕ್ಷ ಶುಲ್ಕವನ್ನು ಪಾವತಿಸಿದ ನಂತರವೇ ಆಪರೇಶನ್ ನಡೆಸುವುದಾಗಿ ತಿಳಿಸಿದ್ದಾರೆ. ವೈದ್ಯರು ಎಲ್ಲ ಪರೀಕ್ಷೆಗಳೂ ಸರಿಯಾಗಿವೆ, ಯಾವುದೇ ರೀತಿಯ ಅಪಾಯ ಇಲ್ಲ, ಶಸ್ತ್ರಚಿಕಿತ್ಸೆ ಸುರಕ್ಷಿತವಾಗಿ ನಡೆಯಲಿದೆ ಎಂದು ಭರವಸೆ ನೀಡಿದ್ದಾರಂತೆ, ಆದರೆ ಶಸ್ತ್ರಚಿಕಿತ್ಸೆ ನಡೆಯುವ ಸಂದರ್ಭದಲ್ಲಿ ಸಂತೋಷ್ ಕುಮಾರ್ ಅವರಿಗೆ ಹೃದಯಾಘಾತ ಸಂಭವಿಸಿ ಅವರು ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆಯವರು ಮನೆಯವರಿಗೆ ತಿಳಿಸಿದ್ದಾರೆ.
ಈ ವಿಷಯ ಕೇಳಿದ ಕುಟುಂಬಸ್ಥರಿಗೆ ಶಾಕ್ ಆಗಿದೆ. ವೈದ್ಯರ ನಿರ್ಲಕ್ಷ್ಯದಿಂದಲೇ ಸಂತೋಷ್ ಮೃತಪಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಸ್ಪಷ್ಟನೆ ಕೇಳಿದಾಗ ವೈದ್ಯರು ಸರಿಯಾದ ಉತ್ತರ ನೀಡದೇ, “ಬನ್ನಿ ಕೂತು ಮಾತನಾಡೋಣ” ಎಂದು ನಿರ್ಲಕ್ಷ್ಯದಿಂದ ಉಡಾಫೆ ಉತ್ತರ ನೀಡಿದ್ದಾರೆ. ಈ ಘಟನೆ ನಗರದ ಇಸ್ಕಾನ್ ದೇವಸ್ಥಾನದ ಸಮೀಪದಲ್ಲಿರುವ NU ಖಾಸಗಿ ಆಸ್ಪತ್ರೆಯಲ್ಲಿ ನಡೆದಿದೆ . ಇತ್ತ, ಗಂಡನಿಗಾಗಿ ತಮ್ಮ ಕಿಡ್ನಿಯನ್ನು ದಾನ ಮಾಡಿದ ಪತ್ನಿ ಮಾರ್ಟಿನಾ ಲೂಯಿ ಶಸ್ತ್ರಚಿಕಿತ್ಸೆಯ ನಂತರ ಇನ್ನೂ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗಂಡ ಸಾವನ್ನಪ್ಪಿರುವ ವಿಷಯವನ್ನು ಅವರಿಗೆ ಇನ್ನೂ ತಿಳಿಸಲಾಗಿಲ್ಲ. ಒಂದು ಕಿಡ್ನಿಯೂ ಇಲ್ಲ.
ಸಂತೋಷ್ ಕುಮಾರ್ ಅವರ ಕುಟುಂಬಸ್ಥರು ಆಸ್ಪತ್ರೆಯ ಮುಂದೆ ಪ್ರತಿಭಟನೆ ನಡೆಸಿ ವೈದ್ಯರ ವಿರುದ್ಧ ಕಿಡಿಕಾರಿದ್ದಾರೆ. ವೈದ್ಯರ ನಿರ್ಲಕ್ಷ್ಯ ಮತ್ತು ಹಣದಾಸೆಯಿಂದಲೇ ಸಂತೋಷ್ ಬಲಿಯಾಗಿದ್ದಾರೆ ಎಂದು ಆರೋಪಿಸಿದ್ದಾರೆ. ಅಲ್ಲದೆ, ಈ ಆಸ್ಪತ್ರೆಯಲ್ಲಿ ಕಿಡ್ನಿ ಸಂಬಂಧಿತ ಅಕ್ರಮಗಳು ನಡೆಯುತ್ತಿರುವ ಶಂಕೆಯೂ ವ್ಯಕ್ತಪಡಿಸಿ, ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.
ಘಟನೆಯ ಹಿನ್ನೆಲೆಯಲ್ಲಿ ಆಸ್ಪತ್ರೆ ಆವರಣದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಸಂತೋಷ್ ಕುಟುಂಬಸ್ಥರು ಹಾಗೂ ಬಂಧುಗಳು ನ್ಯಾಯಕ್ಕಾಗಿ ಹೋರಾಟ ಮುಂದುವರಿಸುವುದಾಗಿ ತಿಳಿಸಿದ್ದಾರೆ. ವೈದ್ಯರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ಮೃತ ವ್ಯಕ್ತಿಗೆ ನ್ಯಾಯ ದೊರಕಿಸಬೇಕು ಎಂದು ಅವರು ಸರ್ಕಾರ ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.