ಬೆಂಗಳೂರಿನ ಜಯನಗರ ಶಾಪಿಂಗ್ ಕಾಂಪ್ಲೆಕ್ಸ್ನ ಫುಟ್‌ಪಾತ್ ಒತ್ತುವರಿ ಮಾಡಿದ್ದ ಬೀದಿ ಬದಿ ವ್ಯಾಪಾರಿಗಳನ್ನು ಬಬಿಎಂಪಿ ಮುಲಾಜಿಲ್ಲದೇ ತೆರವುಗೊಳಿಸಿದೆ.
ಬೆಂಗಳೂರು (ನ.07): ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಜಯನಗರ ಬಿಡಿಎ ಶಾಪಿಂಗ್ ಕಾಂಪ್ಲೆಕ್ಸ್ ಬಳಿ ವ್ಯಾಪಾರ- ವಹಿವಾಟು ಮಾಡುತ್ತಿದ್ದ ಬೀದಿ ಬದಿ ವ್ಯಾಪಾರಿಗಳಿಗೆ ಬಿಬಿಎಂಪಿ ಭರ್ಜರಿ ಶಾಕ್ ನೀಡಿದೆ. ಅಂದರೆ ಅನಧಿಕೃತವಾಗಿ ಪೆಟ್ಟಿ ಅಂಗಡಿಗಳನ್ನು ಇಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದ ಎಲ್ಲ ಬೀದಿ ಬದಿ ವ್ಯಾಪಾರಿಗಳನ್ನು ಬಿಬಿಎಂಪಿ ಅಧಿಕಾರಿಗಳು ಜೆಸಿಬಿ ಮೂಲಕ ತೆರವುಗೊಳಿಸಿದ್ದಾರೆ. ಬೆಳಗ್ಗೆ 11 ಗಂಟೆಯಿಂದ ತೆರವು ಕಾರ್ಯಾಚರಣೆ ಕೈಗೊಂಡಿದ್ದು ಮಧ್ಯಾಹ್ನ 3 ಗಂಟೆ ವೇಳೆಗೆ 45 ತರಕಾರಿ ಅಂಗಡಿಗಳು ಹಾಗೂ 17 ಡಬ್ಬಿ ಅಂಗಡಿಗಳನ್ನು ಜೆಸಿಬಿ ಮೂಲಕ ತೆರವು ಮಾಡಲಾಗಿದೆ.
ದೀಪಾವಳಿ ಹಬ್ಬದ ಸಂಭ್ರಮದಲ್ಲಿ ವ್ಯಾಪಾರ ವಹಿವಾಟು ನಡೆಸುತ್ತಿರುವ ಬೀದಿಬದಿ ವ್ಯಾಪಾರಿಗಳು ಅತಂತ್ರ ಸ್ಥಿತಿ ಉಂಟಾಗಿದೆ. ಫುಟ್‌ಪಾತ್ ವ್ಯಾಪಾರಿಗಳ ಅಂಗಡಿಮುಂಗಟ್ಟು ತೆರವು ಕಾರ್ಯವನ್ನು ಬಿಬಿಎಂಪಿ ಕೈಗೆತ್ತಿಕೊಂಡಿದೆ. ಹಬ್ಬದ ಸಂದರ್ಭದಲ್ಲಿ ಬಂಪರ್ ಮಾರಾಟಕ್ಕಾಗಿ ಎದುರು ನೋಡುತ್ತಿದ್ದ ಫುಟ್‌ಪಾತ್ ಅನ್ನು ಒತ್ತುವರಿ ಮಾಡಿಕೊಂಡು ಅಂಗಡಿ-ಮುಂಗಟ್ಟು ಇಟ್ಟುಕೊಂಡಿದ್ದ ವ್ಯಾಪಾರಿಗಳನ್ನು ತೆರವು ಮಾಡಲಾಗುತ್ತಿದೆ. ಬಿಬಿಎಂಪಿ ಮಾರ್ಷಲ್‌ಗಳ ತಂಡ ಸ್ಥಳಕ್ಕೆ ಆಗಮಿಸಿ, ಬೀದಿಬದಿ ವ್ಯಾಪಾರಿಗಳನ್ನು ಫುಟ್‌ಪಾತ್‌ನಿಂದ ತೆರವು ಮಾಡಲಾಗುತ್ತಿದ್ದು, ಅವರ ಅಂಗಡಿಗಳನ್ನ ಜೆಸಿಬಿ ಮೂಲಕ ಕೆಡವಿ ಹಾಕಲಾಗುತ್ತಿದೆ.
ಪ್ರಧಾನಿ ನರೇಂದ್ರ ಮೋದಿ ಪರವಾಗಿ ಬ್ಯಾಟ್ ಬೀಸಿದ ನಟ ಅಹಿಂಸಾ ಚೇತನ್
ಎರಡು ವಾರಗಳ ಹಿಂದೆಯೇ ತೆರವು ಸೂಚನೆ ನೀಡಿದ್ದ ಮುಖ್ಯ ಆಯುಕ್ತರು: ಬಿಬಿಎಂಪಿ ವತಿಯಿಂದ ಇತ್ತೀಚೆಗೆ ಮಲೇಶ್ವರಂ ನಲ್ಲಿಯೂ ತೆರವು ಕಾರ್ಯಚರಣೆಯನ್ನು ಬಿಬಿಎಂಪಿ ಮಾಡಿತ್ತು. ಇದಾದ ನಂತರ ಕಳೆದೆರಡು ವಾರಗಳಲ್ಲಿ ಜಯನಗರ ಶಾಪಿಂಗ್ ಕಾಫ್ಲೆಕ್ಸ್‌ಗೆ ತರೆಳಿದ್ದ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಪಾದಚಾರಿ ಮಾರ್ಗ ಮತ್ತು ಪಾಲಿಕೆ ಸ್ವತ್ತು ಅತಿಕ್ರಮಣ ಮಾಡಿಕೊಂಡ ವ್ಯಾಪಾರಿಗಳು ಸ್ವಇಚ್ಛೆಯಿಂದ ತೆರವು ಮಾಡುವಂತೆ ಸೂಚನೆ ನೀಡಿದ್ದರು. ಜೊತೆಗೆ, ಪಾಲಿಕೆಯಿಂದ ತೆರವು ಕಾರ್ಯಕ್ಕೆ ಬಂದಾಗ ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ ಎಂಬ ಸುಳಿವನ್ನೂ ನೀಡಿದ್ದರು. ಆದರೂ, ನಿರ್ಲಕ್ಷ್ಯ ಮಾಡಿದ್ದ ವ್ಯಾಪಾರಿಗಳು ಇಂದು ಬೀದಿಗೆ ಬಿದ್ದಿದ್ದಾರೆ.
ಪಾಲಿಕೆ, ಪೊಲೀಸ್ ಸಿಬ್ಬಂದಿಯೊಂದಿಗೆ ಮಾತಿನ ಚಕಮಕಿ: ಜಯನಗರ ಶಾಪಿಂಗ್ ಕಾಂಪ್ಲೆಕ್ಸ್ ಬಳಿ ಪಾದಚಾರಿಗಳಿಗೆ ಸುಗಮ ರಸ್ತೆ ಮಾಡಲು ತೆರವು ಕಾರ್ಯವನ್ನು ಕೈಗೊಳ್ಳಲಾಗಿದೆ. ಬೀದಿ ವ್ಯಾಪಾರಿಗಳ ಶಡ್, ಬಟ್ಟೆ ಎಲ್ಲವನ್ನು ಮಾರ್ಷಲ್‌ಗಳು ತೆರವು ಮಾಡುತ್ತಿದ್ದಾರೆ. ಇದಕ್ಕೆ ಅಡ್ಡಿಪಡಿಸದಂತೆ ಸ್ಥಳದಲ್ಲಿ ಪೊಲೀಸರು ಬಂದೋಬಸ್ತ್ ಮಾಡಲಾಗಿತ್ತು. ಪಾಲಿಕೆ ಕಾರ್ಯಚರಣೆಗೆ ಬೀದಿ ಬದಿ ವ್ಯಾಪಾರಸ್ಥರ ಆಕ್ರೊಶ ವ್ಯಕ್ತಪಡಿಸಿದ್ದಾರೆ. ಜೆಸಿಬಿ ತಡೆದು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಅವರನ್ನು ಪೊಲೀಸರು ಹಿಂದಕ್ಕೆ ತಳ್ಳುತ್ತಿದ್ದಾರೆ. ಹೀಗಾಗಿ, ಪೋಲಿಸ್ ಹಾಗೂ ಪಾಲಿಕೆ ಅಧಿಕಾರಿಗಳೊಂದಿಗೆ ವ್ಯಾಪಾರಿಗಳು ಮಾತಿನ ಚಕಮಕಿ ಬೆಳೆಸಿದ್ದಾರೆ. ಈ ವೇಳೆ ಬಿಬಿಎಂಪಿ ಆದೇಶ ಹಾಗೂ ಕಾನೂನು ಬಗ್ಗೆ ಪಾಲಿಕೆ ಅಧಿಕಾರಿಗಳು ಮನದಟ್ಟು ಮಾಡಿದ್ದಾರೆ.
ನಟ ದರ್ಶನ್ ಮೇಲೆ ದೂರು ಕೊಟ್ಟ ಮಹಿಳೆಗೆ ಪೊಲೀಸರಿಂದಲೇ ಕಿರುಕುಳ?
ವ್ಯಾಪಾರಸ್ಥರು ಅಂಗಲಾಚಿದರೂ ತೆರವು ಕಾರ್ಯ ನಿಲ್ಲಿಸದ ಬಿಬಿಎಂಪಿ: ಬೆಳಗ್ಗೆ ಆರಂಭವಾದ ಬೀದಿ ಬದಿ ವ್ಯಾಪಾರಿಗಳ ಒತ್ತುವರಿ ತೆರವು ಕಾರ್ಯಾಚರಣೆ ಮಧ್ಯಾಹ್ನ 2 ಗಂಟೆವರೆಗೂ ಸಾಗಿದ್ದು, ಜಯನಗರದಲ್ಲಿ ಜೆಸಿಬಿ ಘರ್ಜನೆ ಮುಂದುವರೆದಿದೆ. ಪುಟ್ ಪಾತ್ ಮೇಲಿರುವ ಅಂಗಡಿಗಳನ್ನ ತೆರವು ಮಾಡಲಾಗುತ್ತಿದ್ದು, ಈಗಲೂ ಕೆಲವು ಅಂಗಡಿ ಮಾಲೀಕರು ತಮ್ಮ ಅಂಗಡಿ ತೆರವು ಮಾಡದಂತೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ನಮಗೆ 2 ಗಂಟೆ ಸಮಯ ಕೊಡಿ ಎಂದು ಅಂಗಡಿಗಳ ಮಾಲೀಕರು ಅಂಗಲಾಚಿ ಕೇಳುತ್ತಿದ್ದರೂ ಪಾಲಿಕೆ ಅಧಿಕಾರಿಗಳು ಮುಲಾಜಿಲ್ಲದೇ ತೆರವು ಮಾಡುತ್ತಿದ್ದಾರೆ. ಈವರೆಗೆ 45 ತರಕಾರಿ ಅಂಗಡಿಗಳು ಸೇರಿ 17 ಡಬ್ಬಿ ಅಂಗಡಿಗಳ ತೆರವು ಮಾಡಲಾಗಿದೆ. ಜೊತೆಗೆ, ಯಾವುದೇ ನೋಟೀಸ್ ಇಲ್ಲದೇ ಬಿಬಿಎಂಪಿ ತೆರವು ಕಾರ್ಯಾಚರಣೆ ಮಾಡ್ತಿದೆ ಎಂದು ಬೀದಿ ಬದಿ ವ್ಯಾಪಾರಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.