
ಬೆಂಗಳೂರು (ಫೆ.26): ಸಿಲಿಕಾನ್ ಸಿಟಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (KIA) ಹೋದರೆ ಜೇಬಿಗೆ ಕತ್ತರಿ ಬೀಳುವುದು ಗ್ಯಾರಂಟಿ ಎಂಬ ಮಾತಿದೆ. ಇದೀಗ ಈ ಮಾತು ಮತ್ತೊಮ್ಮೆ ಸಾಬೀತಾಗಿದ್ದು, ವಿಮಾನ ನಿಲ್ದಾಣದ ಟರ್ಮಿನಲ್-1 ರಲ್ಲಿರುವ ಪ್ರಸಿದ್ಧ 'ರಾಮೇಶ್ವರಂ ಕೆಫೆ'ಯ ಬಿಲ್ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ನಾಂದಿ ಹಾಡಿದೆ. ಕೇವಲ ಒಂದು ಪ್ಲೇಟ್ 'ಘೀ ಪೋಡಿ ಇಡ್ಲಿ'ಗೆ ಬರೋಬ್ಬರಿ 315 ರೂಪಾಯಿ ಪಾವತಿಸಿದ ಗ್ರಾಹಕರೊಬ್ಬರು ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.
ಫೆಬ್ರವರಿ 23-24ರ ಸುಮಾರಿಗೆ ರೆಡಿಟ್ (Reddit) ಸಾಮಾಜಿಕ ಜಾಲತಾಣದಲ್ಲಿ ಗ್ರಾಹಕರೊಬ್ಬರು ತಾವು ಪಾವತಿಸಿದ ಬಿಲ್‌ನ ಫೋಟೋವನ್ನು ಹಂಚಿಕೊಂಡಿದ್ದಾರೆ. ನಗರದ ಇತರ ಭಾಗಗಳಲ್ಲಿರುವ ರಾಮೇಶ್ವರಂ ಕೆಫೆಯ ಶಾಖೆಗಳಲ್ಲಿ ಇದೇ ಘೀ ಪೋಡಿ ಇಡ್ಲಿಯ ಬೆಲೆ ಸುಮಾರು 90 ರೂಪಾಯಿ ಇದೆ. ಆದರೆ ವಿಮಾನ ನಿಲ್ದಾಣದಲ್ಲಿ ಇದು ಸರಿಸುಮಾರು 4 ಪಟ್ಟು ಹೆಚ್ಚು ಅಂದರೆ 315 ರೂಪಾಯಿಗೆ ಮಾರಾಟವಾಗುತ್ತಿದೆ. ಈ ಬೆಲೆ ವ್ಯತ್ಯಾಸವನ್ನು ಕಂಡು ದಂಗಾದ ಗ್ರಾಹಕ, ‘ಏರ್‌ಪೋರ್ಟ್ ಬೆಲೆಗಳ ಮೇಲೆ ಯಾವುದೇ ನಿಯಂತ್ರಣವಿಲ್ಲವೇ?’ ಎಂದು ಪ್ರಶ್ನಿಸಿದ್ದಾರೆ.
ಅನೇಕರು ಹೋಟೆಲ್ ಮಾಲೀಕರ ಪರವಾಗಿ ಬ್ಯಾಟಿಂಗ್ ಮಾಡಿದ್ದಾರೆ. 'ವಿಮಾನ ನಿಲ್ದಾಣದಲ್ಲಿ ಅಂಗಡಿ ಬಾಡಿಗೆ ತಿಂಗಳಿಗೆ ಲಕ್ಷಾಂತರ ರೂಪಾಯಿ ಇರುತ್ತದೆ. ಅಷ್ಟು ದೊಡ್ಡ ಮೊತ್ತದ ಬಾಡಿಗೆ, ವಿದ್ಯುತ್ ಬಿಲ್ ಮತ್ತು ಸಿಬ್ಬಂದಿ ವೇತನವನ್ನು ಭರಿಸಬೇಕಾದರೆ ಬೆಲೆ ಹೆಚ್ಚಿರಲೇಬೇಕು. ಇದು ರೈಲ್ವೆ ಸ್ಟೇಷನ್ ಅಲ್ಲ, ಏರ್‌ಪೋರ್ಟ್' ಎಂದು ವಾದಿಸಿದ್ದಾರೆ. ಇನ್ನು ಕೆಲವರು, 'ಇದು ನಿಮ್ಮ ವೈಯಕ್ತಿಕ ಆಯ್ಕೆ. ಬೆಲೆ ಜಾಸ್ತಿ ಅನಿಸಿದರೆ ತಿನ್ನಬೇಡಿ ಅಥವಾ ಮನೆಯಿಂದಲೇ ಊಟ ತರಿಕೊಳ್ಳಿ' ಎಂದು ಕಟುವಾಗಿ ಪ್ರತಿಕ್ರಿಯಿಸಿದ್ದಾರೆ.
ಮತ್ತೊಂದೆಡೆ ಸಾಮಾನ್ಯ ಪ್ರಯಾಣಿಕರು ಬೆಲೆ ಏರಿಕೆಯನ್ನು 'ಸುಲಿಗೆ' ಎಂದು ಕರೆದಿದ್ದಾರೆ. 'ಆಹಾರ ಎನ್ನುವುದು ಅಗತ್ಯವಸ್ತುವೇ ಹೊರತು ಐಷಾರಾಮಿ ವಸ್ತುವಲ್ಲ. ವಿಮಾನ ವಿಳಂಬವಾದಾಗ ಅಥವಾ ತುರ್ತು ಸಂದರ್ಭದಲ್ಲಿ ಪ್ರಯಾಣಿಕರು 3-4 ಗಂಟೆ ಏರ್‌ಪೋರ್ಟ್‌ನಲ್ಲಿ ಕಳೆಯಬೇಕಾಗುತ್ತದೆ. ಅಂತಹ ಸಮಯದಲ್ಲಿ ಒಂದು ಪ್ಲೇಟ್ ಇಡ್ಲಿಗೆ 300 ರೂಪಾಯಿ ಕೇಳುವುದು ಯಾವ ನ್ಯಾಯ?' ಎಂದು ಪ್ರಶ್ನಿಸಿದ್ದಾರೆ. ಮಧ್ಯಮ ವರ್ಗದ ಜನರಿಗೆ ವಿಮಾನ ನಿಲ್ದಾಣದಲ್ಲಿ ಆಹಾರ ಸೇವಿಸುವುದು ಕನಸಿನ ಮಾತಾಗಿದೆ ಎಂಬ ಅಳಲು ಕೇಳಿಬಂದಿದೆ.
ಒಬ್ಬ ಬಳಕೆದಾರರ ಪ್ರಕಾರ, ಬೆಂಗಳೂರು ನಗರದಿಂದ 40 ಕಿ.ಮೀ ದೂರದಲ್ಲಿರುವ ವಿಮಾನ ನಿಲ್ದಾಣಕ್ಕೆ ದಿನನಿತ್ಯ ಸಿಬ್ಬಂದಿ ಬಂದು ಹೋಗಲು ಸಾರಿಗೆ ವೆಚ್ಚವೂ ಹೆಚ್ಚಿರುತ್ತದೆ. ಅಲ್ಲದೆ, ಏರ್‌ಪೋರ್ಟ್ ಆವರಣದಲ್ಲಿ ವ್ಯಾಪಾರ ಮಾಡಲು ಕಟ್ಟುನಿಟ್ಟಾದ ಭದ್ರತಾ ಶಿಷ್ಟಾಚಾರಗಳನ್ನು ಪಾಲಿಸಬೇಕಾಗುತ್ತದೆ. ಇವೆಲ್ಲವೂ ಆಹಾರದ ಬೆಲೆಯ ಮೇಲೆ ಪರಿಣಾಮ ಬೀರುತ್ತವೆ.
ಒಟ್ಟಾರೆಯಾಗಿ, ಈ ಘಟನೆಯು ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿನ ಮುಕ್ತ ಮಾರುಕಟ್ಟೆ ದರ ಮತ್ತು ಸಾಮಾನ್ಯ ಜನರ ಆರ್ಥಿಕ ಶಕ್ತಿಯ ನಡುವಿನ ಕಂದಕವನ್ನು ಮತ್ತೊಮ್ಮೆ ಬಯಲು ಮಾಡಿದೆ.