
ತುಮಕೂರು (ಫೆ.26): ಸಾಲಬಾಧೆ ತಾಳದೇ ರೈತನೊಬ್ಬ ಮದ್ಯ ಸೇವಿಸಿ 120 ಅಡಿ ಎತ್ತರ ವಿದ್ಯುತ್ ಹೈಟೆನ್ಶನ್ ಟವರ್ ಹತ್ತಿ ಆತ್ಮ೧ಹತ್ಯೆಗೆ ಯತ್ನಿಸಿದ ಘಟನೆ ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ಬಿಕೆ ಹಳ್ಳಿ–ದಳವೆಹಳ್ಳಿ ರಸ್ತೆಯಲ್ಲಿ ಇಂದು ನಡೆದಿದೆ.
ಬಿಕೆ ಹಳ್ಳಿ ಗ್ರಾಮದ ರೈತ ಗೋಪಾಲ್ (53), ಆತ್ಮ೧ಹತ್ಯೆಗೆ ಯತ್ನಿಸಿದ ರೈತ. ಸುಮಾರು 120 ಅಡಿ ಎತ್ತರದ ವಿದ್ಯುತ್ ಹೈಟೆನ್ಷನ್ ಕಂಬ ಹತ್ತಿ ಸಾಯಲು ಮುಂದಾಗಿರುವುದು ಗಮನಿಸಿದ ಸ್ಥಳೀಯರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದು, ಕೆಲಕಾಲ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು ರೈತನನ್ನು ಕೆಳಗಿಳಿಸಲು ಕಾರ್ಯಾಚರಣೆ ಆರಂಭಿಸಿದರು. ಸುಮಾರು 3 ಗಂಟೆಗಳ ಕಾಲ ಸತತ ಹರಸಾಹಸ ಪಟ್ಟ ಸಿಬ್ಬಂದಿ, ರೈತ ಗೋಪಾಲ್‌ಗೆ ಯಾವುದೇ ಪ್ರಾಣಾಪಾಯವಾಗದಂತೆ ಅತ್ಯಂತ ಜಾಗರೂಕತೆಯಿಂದ ಕೆಳಗಿಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಜೀವಂತವಾಗಿ ರಕ್ಷಿಸಲ್ಪಟ್ಟ ರೈತನನ್ನು ಕಂಡು ಸ್ಥಳೀಯರು ನಿಟ್ಟುಸಿರು ಬಿಟ್ಟಿದ್ದಾರೆ.
ರಕ್ಷಿಸಿದ ಬಳಿಕ ರೈತ ಗೋಪಾಲ್ ತನ್ನ ಸಂಕಷ್ಟವನ್ನು ಬಿಚ್ಚಿಟ್ಟಿದ್ದಾರೆ. ತನ್ನ ಜಮೀನಿನಲ್ಲಿ ಬೋರ್‌ವೆಲ್ ಕೊರೆಸಲು ಹಾಗೂ ಮಗಳ ಮದುವೆ ಮಾಡಲು ಸುಮಾರು 6 ಲಕ್ಷ ರೂಪಾಯಿ ಸಾಲ ಮಾಡಿಕೊಂಡಿರುವುದಾಗಿ ತಿಳಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸಾಲಗಾರರ ಕಾಟ ವಿಪರೀತವಾಗಿದ್ದರಿಂದ ಮನನೊಂದು, ಮದ್ಯದ ಅಮಲಿನಲ್ಲಿ ಈ ಹಂತಕ್ಕೆ ಮುಂದಾಗಿದ್ದಾಗಿ ಅವರು ಅಳಲು ತೋಡಿಕೊಂಡಿದ್ದಾರೆ.
ಸಕಾಲದಲ್ಲಿ ಸ್ಪಂದಿಸಿ ರೈತನ ಜೀವ ಉಳಿಸಿದ ಅಗ್ನಿಶಾಮಕ ದಳದ ಅಧಿಕಾರಿಗಳು, ಸಿಬ್ಬಂದಿ ಹಾಗೂ ಪೊಲೀಸ್ ಇಲಾಖೆಯ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ. ಸದ್ಯ ರೈತನನ್ನು ಸಾಂತ್ವನಗೊಳಿಸಿ ಮುಂದಿನ ಕ್ರಮ ಕೈಗೊಳ್ಳಲಾಗಿದೆ.