
ಬೆಂಗಳೂರು [ಆ.21]: ತನ್ನ ಮಗಳಿಂದ ಭೀಕರವಾಗಿ ಹತ್ಯೆಗೀಡಾದ ರಾಜಾಜಿನಗರದ ಬಟ್ಟೆವ್ಯಾಪಾರಿ ಜೈಕುಮಾರ್ ಅವರಿಗೆ ಐದು ದಿನಗಳ ಹಿಂದೆಯೇ ಮಗಳ ಪ್ರಿಯಕರನಿಂದ ಬೆದರಿಕೆ ಬಂದಿತ್ತು ಎಂಬ ಸಂಗತಿ ಬೆಳಕಿಗೆ ಬಂದಿದೆ.
ಈ ಕೊಲೆ ಪ್ರಕರಣ ಸಂಬಂಧ ಬಂಧಿತನಾಗಿರುವ ಪ್ರವೀಣ್ ವಿಚಾರಣೆ ವೇಳೆ ಬೆದರಿಕೆ ವಿಷಯ ಬಯಲಾಗಿದೆ.
ಮಗಳ ಪ್ರೀತಿ ವಿಷಯ ತಿಳಿದು ಕೋಪಗೊಂಡ ಜೈಕುಮಾರ್ ಅವರು, ಮಗಳಿಂದ ಮೊಬೈಲ್ ಕಸಿದು ಮನೆಯಲ್ಲೇ ಕೂಡಿ ಹಾಕಿದ್ದರು. ಇದರಿಂದ ಪ್ರಿಯತಮೆ ಜತೆ ಸಂವಹನಕ್ಕೆ ಪ್ರವೀಣ್‌ಗೆ ಅಡ್ಡಿಯಾಗಿತ್ತು. ಆಗ ಆಕೆಯನ್ನು ಹುಡುಕಿಕೊಂಡು ಮನೆ ಬಳಿಗೆ ಆತ ತೆರಳಿದ್ದ. ಆ ವೇಳೆ ಆತನನ್ನು ನೋಡಿದ ಜೈಕುಮಾರ್, ನೀನು ಮನೆ ಬಳಿ ಬಂದರೆ ಬಾರಿಸುತ್ತೇನೆ ಎಂದು ಬೈದು ಕಳುಹಿಸಿದ್ದರು. ಈ ಮಾತಿಗೆ ಕೆರಳಿದ ಪ್ರವೀಣ್, ನಮ್ಮ ಪ್ರೀತಿಗೆ ಅಡ್ಡ ಬಂದರೆ ಪರಿಸ್ಥಿತಿ ನೆಟ್ಟಗಿರುವುದಿಲ್ಲ. ಮಗಳಿಗೆ ಏನಾದರೂ ತೊಂದರೆ ಆದರೆ ನಿನಗೆ ಗತಿ ಕಾಣಿಸುತ್ತೇನೆ ಎಂದು ಬೆದರಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಆದರೆ ಪ್ರವೀಣ್ ಮಾತನ್ನು ಜೈಕುಮಾರ್ ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಚಿಕ್ಕ ಹುಡುಗ, ಕೋಪದಲ್ಲಿ ಮಾತನಾಡಿದ್ದಾನೆ ಎಂದು ಅವರು ನಿರ್ಲಕ್ಷ್ಯಿಸಿದ್ದು ಆಪತ್ತಿಗೆ ಕಾರಣವಾಯಿತು ಎಂದು ಪೊಲೀಸರು ಹೇಳಿದ್ದಾರೆ.
ಆಶ್ರಯ ಕೊಡಲು ತಾಂತ್ರಿಕ ದೋಷ
ಈ ಕೊಲೆ ಪ್ರಕರಣದಲ್ಲಿ ಬಂಧಿತಳಾಗಿರುವ ಜೈಕುಮಾರ್ ಅವರ ಅಪ್ರಾಪ್ತ ಪುತ್ರಿಯನ್ನು ರಾಜಾಜಿನಗರ ಠಾಣೆ ಪೊಲೀಸರು, ಮಂಗಳವಾರ ಬಾಲ ನ್ಯಾಯಮಂಡಳಿ ಮುಂಭಾಗ ಹಾಜರುಪಡಿಸಿದರು. ವಿಚಾರಣೆ ನಡೆಸಿದ ನ್ಯಾಯಾ ಮಂಡಳಿ, ಸರ್ಕಾರಿ ಸ್ವೀಕಾರ ಮಂದಿರಕ್ಕೆ ಕಳುಹಿಸುವಂತೆ ಆದೇಶಿಸಿತು. ಆದರೆ ಅಲ್ಲಿನ ಅಧಿಕಾರಿಗಳು, 18 ವರ್ಷ ಮೇಲ್ಪಟ್ಟವರಿಗೆ ಮಾತ್ರ ಸ್ವೀಕಾರ ಕೇಂದ್ರದಲ್ಲಿ ಆಶ್ರಯ ಕೊಡುವುದಾಗಿ ಲಿಖಿತ ಪತ್ರ ನೀಡಿ ವಾಪಸ್ ಕಳುಹಿಸಿದ್ದಾರೆ. ಇದರಿಂದ ಇಕ್ಕಟ್ಟಿಗೆ ಸಿಲುಕಿದ ಪೊಲೀಸರು, ಕೊನೆಗೆ ತಾತ್ಕಾಲಿಕವಾಗಿ ಸರ್ಕಾರಿ ಬಾಲಕಿಯರ ಬಾಲ ಮಂದಿರದಲ್ಲಿ ಆಕೆಗೆ ಆಶ್ರಯ ಕಲ್ಪಿಸಿದ್ದಾರೆ ಎಂದು ತಿಳಿದು ಬಂದಿದೆ.