ಐಎಂಎ ಕೇಸ್‌ ಸಿಬಿಐಗೆ ಹಸ್ತಾಂತರ? ಬೇಗ್‌, ಜಮೀರ್‌ಗೆ ಸಂಕಷ್ಟ?

By Kannadaprabha NewsFirst Published Aug 21, 2019, 7:47 AM IST
Highlights

ಐಎಂಎ ವಂಚನೆ ಪ್ರಕರಣವನ್ನು ಸಿಬಿಐಗೆ ವಹಿಸುವ ಸಾಧ್ಯತೆ ಇದೆ. ಇದರಿಂದ ಇಬ್ಬರು ನಾಯಕರಿಗೆ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ. 

ಬೆಂಗಳೂರು [ಆ.21]:  ಪೋನ್‌ ಕದ್ದಾಲಿಕೆ ಪ್ರಕರಣವನ್ನು ಸಿಬಿಐಗೆ ವಹಿಸಿದ ಬೆನ್ನಲ್ಲೇ ರಾಜ್ಯ ಸರ್ಕಾರವು ಇತ್ತೀಚಿನ ಐಎಂಎ ಬಹುಕೋಟಿ ವಂಚನೆ ಪ್ರಕರಣವನ್ನು ಕೂಡ ಸಿಬಿಐಗೆ ನೀಡಲು ಮುಂದಾಗಿದೆ.

ಈ ಸಂಬಂಧ ಹೈಕೋರ್ಟ್‌ಗೆ ಮಂಗಳವಾರ ಮಾಹಿತಿ ನೀಡುವ ಸಾಧ್ಯತೆಯಿದೆ ಎಂಬ ಮಾತುಗಳು ದಟ್ಟವಾಗಿ ಕೇಳಿ ಬಂದಿವೆ. ಇದರೊಂದಿಗೆ ಮಹಾಮೋಸದ ಕೃತ್ಯದಲ್ಲಿ ಹೆಸರು ಕೇಳಿ ಬಂದಿರುವ ಮಾಜಿ ಸಚಿವರಾದ ರೋಷನ್‌ ಬೇಗ್‌, ಜಮೀರ್‌ ಅಹಮ್ಮದ್‌ ಖಾನ್‌, ಐಪಿಎಸ್‌ ಮತ್ತು ಐಎಎಸ್‌ ಅಧಿಕಾರಿಗಳು ಸೇರಿದಂತೆ ಹಲವು ಮಂದಿಗೆ ಸಂಕಷ್ಟಎದುರಾಗುವ ಸಾಧ್ಯತೆ ಇದೆ.

ಐಎಂಎ ವಂಚನೆ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಕೋರಿ ಹೈಕೋರ್ಟ್‌ನಲ್ಲಿ ಕೆಲವರು ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿ ವಿಚಾರಣೆ ಕೈಗೆತ್ತಿಕೊಂಡಿರುವ ನ್ಯಾಯಾಲಯವು, ಆರೋಪಿತ ಕಂಪನಿಯ ಆಸ್ತಿ ಮುಟ್ಟುಗೋಲು ಬಗ್ಗೆ ಸಕ್ಷಮ ಪ್ರಾಧಿಕಾರದ ಅಧಿಕಾರಿಗಳು ತೆಗೆದುಕೊಂಡಿರುವ ಕ್ರಮಗಳ ಕುರಿತು ಆ.20ರಂದು ವರದಿ ನೀಡುವಂತೆ ಸರ್ಕಾರಕ್ಕೆ ಸೂಚಿಸಿತ್ತು. ಈಗ ತನಿಖೆಯನ್ನು ಸಿಬಿಐಗೆ ವಹಿಸಿದ ಆದೇಶದ ಪ್ರತಿಯನ್ನು ನ್ಯಾಯಾಲಯಕ್ಕೆ ಸರ್ಕಾರ ಸಲ್ಲಿಸಲು ನಿರ್ಧರಿಸಿದೆ ಎಂದು ಗೃಹ ಇಲಾಖೆ ಉನ್ನತ ಮೂಲಗಳು ‘ಕನ್ನಡಪ್ರಭ’ಕ್ಕೆ ತಿಳಿಸಿವೆ.

ಅಧಿಕ ಲಾಭಾಂಶದ ಆಮಿಷವೊಡ್ಡಿ 40 ಸಾವಿರಕ್ಕೂ ಅಧಿಕ ಜನರಿಗೆ ಐ ಮಾನಿಟರಿ ಅಡ್ವೈಸರ್‌ (ಐಎಂಎ) ಕಂಪನಿ ಮಾಲೀಕ ಮಹಮ್ಮದ್‌ ಮನ್ಸೂರ್‌ ಖಾನ್‌ ವಂಚಿಸಿದ್ದ. ಈ ಹಗರಣದಲ್ಲಿ ಹಲವು ರಾಜಕೀಯ ನಾಯಕರು, ಸರ್ಕಾರಿ ಅಧಿಕಾರಿಗಳು ಹಾಗೂ ಉದ್ಯಮಿಗಳು ಸೇರಿದಂತೆ ಹಲವರ ಹೆಸರು ಕೇಳಿ ಬಂದಿತ್ತು. ಈ ವಂಚನೆ ಬೆಳಕಿಗೆ ಬಂದ ದಿನದಿಂದಲೂ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಬಿಜೆಪಿ ಒತ್ತಾಯಿಸುತ್ತಾ ಬಂದಿದೆ. ಅಲ್ಲದೆ, ಈ ಸಂಬಂಧ ಕೇಂದ್ರ ಗೃಹ ಸಚಿವರಿಗೂ ಬಿಜೆಪಿ ಸಂಸದರು ದೂರು ಸಲ್ಲಿಸಿದ್ದರು. ಆದರೆ ಬಿಜೆಪಿ ನಾಯಕರ ಮನವಿಯನ್ನು ತಿರಸ್ಕರಿಸಿದ್ದ ಆಗಿನ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು, ಪ್ರಕರಣದ ತನಿಖೆಗೆ ಎಸ್‌ಐಟಿ ರಚಿಸಿದ್ದರು. ಈ ನಿರ್ಧಾರ ಪ್ರಶ್ನಿಸಿ ಕೆಲವರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಈಗ ಅಧಿಕಾರಕ್ಕೇರಿದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪನವರು ತಮ್ಮ ಮಾತಿನಂತೆ ಐಎಂಎ ಮಹಾಮೋಸದ ಕೃತ್ಯವನ್ನು ಸಿಬಿಐಗೆ ವಹಿಸಲು ನಿರ್ಧರಿಸಿದ್ದಾರೆ. ಈ ಸಂಬಂಧ ಸೋಮವಾರ ಮುಖ್ಯಮಂತ್ರಿಗಳು, ಹಿರಿಯ ಪೊಲೀಸ್‌ ಅಧಿಕಾರಿಗಳು ಹಾಗೂ ಕಾನೂನು ತಜ್ಞರ ಜೊತೆ ಸಮಾಲೋಚನೆ ನಡೆಸಿದ್ದಾರೆ ಎಂದು ಹೇಳಲಾಗಿದೆ.

ಈಗಾಗಲೇ ಮಹಮ್ಮದ್‌ ಮನ್ಸೂರ್‌ ಖಾನ್‌, ಆತನ ಕಂಪನಿಯ ನಿರ್ದೇಶಕರು, ಲಂಚ ಸ್ವೀಕರಿಸಿದ ಆರೋಪದ ಮೇರೆಗೆ ಬೆಂಗಳೂರಿನ ನಗರ ಜಿಲ್ಲಾಧಿಕಾರಿ ವಿಜಯಶಂಕರ್‌, ಉಪ ವಿಭಾಗಾಧಿಕಾರಿ ಎಲ್‌.ಸಿ.ನಾಗರಾಜ್‌ ಹಾಗೂ ಬಿಡಿಎ ಎಂಜಿನಿಯರ್‌ ಕುಮಾರ್‌ ಸೇರಿದಂತೆ ಹಲವರ ಬಂಧನವಾಗಿದೆ. ಹಾಗೆಯೇ ಪ್ರಕರಣ ಸಂಬಂಧ ಮಾಜಿ ಸಚಿವರಾದ ಜಮೀರ್‌ ಅಹಮದ್‌, ರೋಷನ್‌ ಬೇಗ್‌ ಹಾಗೂ ಐಪಿಎಸ್‌ ಅಧಿಕಾರಿ ಅಜಯ್‌ ಹಿಲೋರಿ ಹೀಗೆ ಮತ್ತಿತರರನ್ನು ಎಸ್‌ಐಟಿ ವಿಚಾರಣೆ ನಡೆಸಿ ಹೇಳಿಕೆ ಪಡೆದಿದೆ.

click me!