1 ರಸ್ತೆ ಗುಂಡಿಗೆ 1 ಸಾವಿರ ದಂಡ ಖಚಿತ!

By Web DeskFirst Published Aug 21, 2019, 7:33 AM IST
Highlights

ಒಂದು ರಸ್ತೆ ಗುಂಡಿಗೆ ಒಂದು ಸಾವಿರ ದಂಡ ವಿಧಿಸಲು ತೀರ್ಮಾನಿಸಲಾಗಿದೆ. ರಸ್ತೆಯಲ್ಲಿ ಅತ್ಯಧಿಕ ಗುಂಡಿಗಳು ಬಿದ್ದು ಸಾರ್ವಜನಿಕರು ಸಮಸ್ಯೆ ಎದುರಿಸುತ್ತಿದ್ದು ಈ ನಿಟ್ಟಿನಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ. 

ಬೆಂಗಳೂರು [ಆ.21]:  ವೈಜ್ಞಾನಿಕವಾಗಿ ರಸ್ತೆ ಗುಂಡಿ ಮುಚ್ಚಿಸದ ಪಾಲಿಕೆ ಎಂಜಿನಿಯರ್‌ಗೆ ತಲಾ ಗುಂಡಿಗೆ ಒಂದು ಸಾವಿರ ರುಪಾಯಿ ದಂಡ ವಿಧಿಸುವುದಾಗಿ ಬಿಬಿಎಂಪಿ ಎಂಜಿನಿಯರಿಂಗ್‌ ವಿಭಾಗದ ಮುಖ್ಯಸ್ಥ ಎಂ.ಆರ್‌. ವೆಂಕಟೇಶ್‌ ಎಚ್ಚರಿಕೆ ನೀಡಿದ್ದಾರೆ.

ಮಂಗಳವಾರ ಮೇಯರ್‌ ಗಂಗಾಂಬಿಕೆ ಅಧ್ಯಕ್ಷತೆಯಲ್ಲಿ ದಕ್ಷಿಣ ವಲಯದ ವಾರ್ಡ್‌ಗಳ ಅಧಿಕಾರಿಗಳ ಸಭೆ ನಡೆಸಲಾಯಿತು. ಈ ವೇಳೆ ಮಾತನಾಡಿದ ಎಂ.ಆರ್‌.ವೆಂಕಟೇಶ್‌, ನಗರದ ಯಾವುದೇ ವಾರ್ಡ್‌ನಲ್ಲಿ ರಸ್ತೆ ಗುಂಡಿ ಇರಬಾರದು. ಸೃಷ್ಟಿಯಾದ ಗುಂಡಿಗಳನ್ನು ವೈಜ್ಞಾನಿಕವಾಗಿ ಮುಚ್ಚಿರಬೇಕು. ಒಂದು ವೇಳೆ ಅವೈಜ್ಞಾನಿಕವಾಗಿ ಮುಚ್ಚಿರುವುದು ಕಂಡುಬಂದರೆ ಸಂಬಂಧ ಪಟ್ಟಕಾರ್ಯಪಾಲಕ ಎಂಜಿನಿಯರ್‌ ಮತ್ತು ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ಗೆ ಪ್ರತಿ ಗುಂಡಿಗೆ ಒಂದು ಸಾವಿರ ರು. ದಂಡ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಮೇಯರ್‌ ಗಂಗಾಂಬಿಕೆ ಮಾತನಾಡಿ, ವಾರ್ಡ್‌ ಮಟ್ಟದ ರಸ್ತೆ ಗುಂಡಿ, ಪಾದಚಾರಿ ಮಾರ್ಗ ದುರಸ್ತಿ, ಕಸದ ಬ್ಲಾಕ್‌ ಸ್ಪಾಟ್‌, ಮಳೆ ನೀರು ನಿಲ್ಲುವುದು, ಬೀದಿ ದೀಪ ದುರಸ್ತಿ ಸೇರಿದಂತೆ ಮೂಲಸೌಕರ್ಯ ಸಮಸ್ಯೆಗಳ ಪರಿಹಾರ ಆಯಾ ವಾರ್ಡ್‌ ಎಂಜಿನಿಯರ್‌ ಜವಾಬ್ದಾರರು. ವಾರ್ಡ್‌ನ ತುರ್ತು ಕಾಮಗಾರಿಗೆ ಪ್ರತ್ಯೇಕ ಅನುದಾನ ನೀಡಲಾಗಿದೆ. ಅದನ್ನು ಬಳಕೆ ಮಾಡಿಕೊಂಡು ದುರಸ್ತಿ ಕಾರ್ಯ ಮಾಡುವಂತೆ ಸೂಚನೆ ನೀಡಿದ ಅವರು, ನಿರ್ಲಕ್ಷ್ಯ ವಹಿಸುವ ವಾರ್ಡ್‌ ಎಂಜಿನಿಯರ್‌ಗಳನ್ನು ಅಮಾನತು ಮಾಡುವುದಾಗಿ ಎಚ್ಚರಿಸಿದರು

click me!