ಬೆಂಗಳೂರನಿಂದ ಕನಕಪುರದ ಸಂಗಮಕ್ಕೆ ಪ್ರವಾಸಕ್ಕೆಂದು ತೆರಳಿದ್ದ ಐವರು ವಿದ್ಯಾರ್ಥಿಗಳು ಈಜಲು ತೆರಳಿ, ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ದುರ್ಘಟನೆ ನಡೆದಿದೆ.
ರಾಮನಗರ (ಏ.29): ಬೆಂಗಳೂರನಿಂದ ಕನಕಪುರದ ಸಂಗಮಕ್ಕೆ ಪ್ರವಾಸಕ್ಕೆಂದು ತೆರಳಿದ್ದ 12 ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳ ಪೈಕಿ ಐವರು ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ದುರ್ಘಟನೆ ನಡೆದಿದೆ.
ಬೇಸಿಗೆಯ ಹಿನ್ನೆಲೆಯಲ್ಲಿ ತೀವ್ರ ಬಿಸಿಲಿನ ತಾಪಮಾನ ತಾಳಲಾರದೇ ನೀರಿರುವ ಪ್ರದೇಶವಾದ ಕನಕಪುರ ತಾಲೂಕಿನ ಕಾವೇರಿ ನದಿ ಹರಿಯುವ ಸಂಗಮದಲ್ಲಿ 12 ಜನ ವಿದ್ಯಾರ್ಥಿಗಳು ಈಜಾಡಲು ತೆರಳಿದ್ದಾರೆ. ಆದರೆ, ಎಲ್ಲರೂ ಕೂಡ ಇಲ್ಲಿಗೆ ಹೊಸಬರಾಗಿದ್ದರಿಂದ ನೀರಿನ ಆಳದ ಬಗ್ಗೆ ಮಾಹಿತಿ ಇರಲಿಲ್ಲ. ಆದರೂ, ನೀರಿಗಿಳಿದು ಈಜಲು ತೆರಳಿದ್ದ ಐವರು ಸುಳಿ ಇರುವ ಜಾಗಕ್ಕೆ ತೆರಳಿದ್ದಾರೆ. ನೀರಿನ ಸುಳಿಗೆ ಸಿಲುಕಿ ಮೇಲೆ ಬರಲಾಗದೇ ಮೂವರು ವಿದ್ಯಾರ್ಥಿನಿಯರು ಹಾಗೂ ಇಬ್ಬರು ವಿದ್ಯಾರ್ಥಿಗಳು ಸೇರಿದಂತೆ ಒಟ್ಟು ಐವರು ಇಂಜಿನಿಯರಿಂಗ್ ವಿದ್ಯಾರ್ಥಿಗಳು ದುರಂತ ಸಾವಿಗೀಡಾಗಿದ್ದಾರೆ.
ನಮ್ಮ ಹೆಚ್.ಡಿ.ರೇವಣ್ಣ ಸಾಹೇಬ್ರು ದೇವರಂತೋರು, ಕಂಪ್ಲೇಂಟ್ ಕೊಟ್ಟಿರೋ ನನ್ ಸೊಸೆ ನಡತೆಯೇ ಸರಿಯಿಲ್ಲ
ಕನಕಪುರ ತಾಲೂಕಿನ ಸಂಗಮದ ಕಾವೇರಿ ನದಿಯಲ್ಲಿ ಮಧ್ಯಾಹ್ನ ಘಟನೆ ನಡೆದಿದೆ. ನೀರಿನಲ್ಲಿ ಮುಳುಗಿದ ವಿದ್ಯಾರ್ಥಿಗಳ ಸ್ನೇಹಿತರು ಕೂಡಲೇ ಸ್ಥಳೀಯರು ಪೊಲೀಸ್ ಠಾಣೆ ಮತ್ತು ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ನಂತರ ಸ್ಥಳಕ್ಕೆ ಆಗಮಿಸಿದ ಪೊಲೀಸರು ಹಾಗೂ ಅರಣ್ಯ ಸಿಬ್ಬಂದಿ ಸ್ಥಳೀಯ ನುರಿತ ಈಜುಗಾರರ ತಂಡದ ಸಹಾಯದಿಂದ ವಿದ್ಯಾರ್ಥಿಗಳನ್ನು ಹುಡುಕಲು ಆರಂಭಿಸಿದ್ದಾರೆ. ಕಾವೇರಿ ನದಿಯಲ್ಲಿ ಸುಳಿ ಇರುವ ಜಾಗದಲ್ಲಿ ತೆರಳಿ ಹುಡುಕಿದಾಗ ಐವರು ವಿದ್ಯಾರ್ಥಿಗಳ ಮೃತ ದೇಹಗಳು ಪತ್ತೆಯಾಗಿವೆ.
ಮೃತರನ್ನು ಹರ್ಷಿತ (20), ಅಭಿಷೇಕ್ (20), ತೇಜಸ್ (21), ವರ್ಷ (20) ಹಾಗೂ ಸ್ನೇಹ (19) ಎಂದು ಗುರುತಿಸಲಾಗಿದೆ. ಇವರೆಲ್ಲರೂ ಬೆಂಗಳೂರಿನ ಪೀಣ್ಯ ಸೆಕೆಂಡ್ ಸ್ಟೇಜ್ ಬಳಿಯ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳು ಎಂಬುದು ತಿಳಿದುಬಂದಿದೆ, ಉಳಿದಂತೆ 7 ವಿದ್ಯಾರ್ಥಿಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಪೊಲೀಸರು ಮೃತದೇಹಗಳನ್ನು ದಯಾನಂದ ಸಾಗರ್ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಸಾತನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ.