
ಬೆಂಗಳೂರು (ಫೆ.4): ಫುಡ್ ಡೆಲಿವರಿ ಬಾಯ್ ಮೇಲೆ ಬೆಂಗಳೂರಿನ ರೆಸ್ಟೋರೆಂಟ್‌ವೊಂದರಲ್ಲಿ ಮಾರಣಾಂತಿಕ ಹಲ್ಲೆ ಆಗಿರುವ ವಿಚಾರ ತಡವಾಗಿ ಬೆಳಕಿಗೆ ಬಂದಿದೆ. ಹೆಸರಘಟ್ಟ ರಸ್ತೆಯ ಸಪ್ತಗಿರಿ ಆಸ್ಪತ್ರೆಯ ಎದುರಿನ ಗಬ್ರು ಬಿಸ್ಟ್ರೋ ಮತ್ತು ಕೆಫೆಯಲ್ಲಿ ಕಳೆದ ಭಾನುವಾರ ಈ ಘಟನೆ ನಡೆದಿದೆ. ಅರ್ಡರ್ ಮಾಡಿದ ಫುಡ್ ನೀಡಲು ವಿಳಂಬವಾಗುತ್ತಿರುವುದನ್ನು ಪ್ರಶ್ನೆ ಮಾಡಿದ್ದಕ್ಕೆ ರೆಸ್ಟೋರೆಂಟ್ ಸಿಬ್ಬಂದಿ ಈ ಹಲ್ಲೆ ನಡೆಸಿದ್ದಾರೆ. ಈ ದಾಳಿಯ ಸಿಸಿಟಿವಿ ದೃಶ್ಯಗಳು ಆನ್‌ಲೈನ್‌ನಲ್ಲಿ ಹರಿದಾಡುತ್ತಿದ್ದು, ಆಕ್ರೋಶಕ್ಕೆ ಕಾರಣವಾಗಿದೆ.
ಗ್ರಾಹಕ ಆರ್ಡರ್ ಮಾಡಿದ್ದ ಫುಡ್‌ಅನ್ನು ತೆಗೆದುಕೊಳ್ಳಲು ಡೆಲಿವರಿ ಬಾಯ್ ರೆಸ್ಟೋರೆಂಟ್‌ಗೆ ಹೋಗಿದ್ದ. ಅರ್ಧ ಗಂಟೆಗೂ ಹೆಚ್ಚು ಸಮಯ ಕಾಯ್ದರೂ ಪಾರ್ಸೆಲ್ ಸಿದ್ಧವಾಗಿರಲಿಲ್ಲ. ಗ್ರಾಹಕನಿಂದ ಕರೆಗಳು ಬರಲು ಆರಂಭವಾಗುತ್ತಿದ್ದಂತೆ, ವಿಳಂಬದ ಬಗ್ಗೆ ರೆಸ್ಟೋರೆಂಟ್‌ನಲ್ಲಿ ವಿಚಾರಿಸಿ, ಪ್ರಕ್ರಿಯೆಯನ್ನು ತ್ವರಿತಗೊಳಿಸುವಂತೆ ಸಿಬ್ಬಂದಿಯನ್ನು ವಿನಂತಿಸಿದ್ದಾನೆ. ಈ ಬಗ್ಗೆ ಸಮಾಧಾನದಿಂದ ಪ್ರತಿಕ್ರಿಯಿಸುವ ಬದಲು, ರೆಸ್ಟೋರೆಂಟ್ ಸಿಬ್ಬಂದಿ ಆಕ್ರಮಣಕಾರಿಯಾಗಿ ಹಲ್ಲೆ ನಡೆಸಿದ್ದಾರೆ.
ಡೆಲಿವರಿ ಬಾಯ್‌ಗೆ ರೆಸ್ಟೋರೆಂಟ್ ಸಿಬ್ಬಂದಿ ಬೈದು, ಎಳೆದೊಯ್ದು, ನಿರ್ದಯವಾಗಿ ಹಲ್ಲೆ ನಡೆಸಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ವರದಿ ಮಾಡಿದ್ದಾರೆ. ಸಿಸಿಟಿವಿ ದೃಶ್ಯಗಳು ಆಘಾತಕಾರಿ ಘಟನೆಯನ್ನು ತೋರಿಸಿದೆ. ರಾತ್ರಿ 10 ಗಂಟೆ ಸುಮಾರಿಗೆ ನಡೆದ ಈ ಘಟನೆ, ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರವೇ ಬೆಳಕಿಗೆ ಬಂದಿದೆ. ಈ ಹಲ್ಲೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದ್ದು, ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಯೂಸರ್‌ಗಳು ಒತ್ತಾಯಿಸಿದ್ದಾರೆ. ಎಕ್ಸ್‌ನಲ್ಲಿ ಸಾಕಷ್ಟು ಯೂಸರ್‌ಗಳು ಡೆಲಿವರಿ ಬಾಯ್ ಮೇಲೆ ಹಲ್ಲೆ ಮಾಡಿದ ರೆಸ್ಟೋರೆಂಟ್ ಸಿಬ್ಬಂದಿಯನ್ನು ತಕ್ಷಣವೇ ಬಂಧಿಸಬೇಕೆಂದು ಒತ್ತಾಯಿಸಿದ್ದಾರೆ.
ತಮ್ಮ ಕರ್ತವ್ಯಗಳನ್ನು ನಿರ್ವಹಿಸಲು ಶ್ರಮಿಸುತ್ತಿದ್ದರೂ, ಡೆಲಿವರಿ ಬಾಯ್‌ಗಳಿಗೆ ಸುರಕ್ಷಿತವಲ್ಲದ ಕೆಲಸದ ಪರಿಸ್ಥಿತಿಗಳ ಬಗ್ಗೆ ಹಲವು ನೆಟ್ಟಿಗರು ಗಮನಸೆಳೆದಿದ್ದಾರೆ. ಈ ಘಟನೆಯು ಗಿಗ್ ಕಾರ್ಮಿಕರ ದುರ್ಬಲತೆ ಮತ್ತು ಉತ್ತಮ ರಕ್ಷಣೆ ಮತ್ತು ಕಾರ್ಮಿಕ ಹಕ್ಕುಗಳ ಜಾರಿಯ ಅಗತ್ಯವನ್ನು ಮತ್ತೊಮ್ಮೆ ಎತ್ತಿ ತೋರಿಸಿದೆ.
ಬೆಂಗಳೂರು ವಿವಿ ಹಾಸ್ಟೆಲ್‌ನಲ್ಲಿ ಸ್ನಾತಕೋತ್ತರ ವಿದ್ಯಾರ್ಥಿನಿ ಆತ್ಮಹತ್ಯೆ
ಈ ಘಟನೆ ಸೋಲದೇವನಹಳ್ಳಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದ್ದು, ಅಧಿಕಾರಿಗಳು ಈ ಬಗ್ಗೆ ತನಿಖೆ ನಡೆಸಿದ್ದಾರೆ. ಆದಾಗ್ಯೂ, ದಾಳಿ ನಡೆಸಿದ ಸಿಬ್ಬಂದಿಯ ಗುರುತು ಇನ್ನೂ ದೃಢಪಟ್ಟಿಲ್ಲ. ಪೊಲೀಸರು ಸಿಸಿಟಿವಿ ದೃಶ್ಯಗಳನ್ನು ವಿಶ್ಲೇಷಿಸುತ್ತಿದ್ದಾರೆ ಮತ್ತು ಭಾಗಿಯಾಗಿರುವ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ನಿರೀಕ್ಷೆಯಿದೆ.
Watch: ಕುಂಭಮೇಳದಲ್ಲಿ ಅಮೃತಸ್ನಾನ ಮಾಡಿದ ಕನ್ನಡದ ಸ್ಟಾರ್ ನಟಿ!