ಕೋಸು ಜಾತಿಯ ತರಕಾರಿಗಳು ಕಡಿಮೆ ಅವಧಿ ಬೆಳೆಗಳಾಗಿದ್ದು, ರೈತರಿಗೆ ತ್ವರಿತವಾಗಿ ಆದಾಯ ತಂದು ಕೊಡುವ ಬೆಳೆಗಳಾಗಿವೆ. ಎಲ್ಲಾ ಕಾಲದಲ್ಲೂ ಬೆಳೆಯಬಹುದಾದ ವಿಶೇಷ ತಳಿಗಳ ಲಭ್ಯತೆ ಇರುವುದರಿಂದ ಕೋಸು ತರಕಾರಿಗಳಿಗೆ ಮಾರುಕಟ್ಟೆಯಲ್ಲಿ ನಿರಂತರ ಬೇಡಿಕೆ ಇದೆ.
ಬಿ.ಶೇಖರ್ ಗೋಪಿನಾಥಂ
ಮೈಸೂರು : ಕೋಸು ಜಾತಿಯ ತರಕಾರಿಗಳು ಕಡಿಮೆ ಅವಧಿ ಬೆಳೆಗಳಾಗಿದ್ದು, ರೈತರಿಗೆ ತ್ವರಿತವಾಗಿ ಆದಾಯ ತಂದು ಕೊಡುವ ಬೆಳೆಗಳಾಗಿವೆ. ಎಲ್ಲಾ ಕಾಲದಲ್ಲೂ ಬೆಳೆಯಬಹುದಾದ ವಿಶೇಷ ತಳಿಗಳ ಲಭ್ಯತೆ ಇರುವುದರಿಂದ ಕೋಸು ತರಕಾರಿಗಳಿಗೆ ಮಾರುಕಟ್ಟೆಯಲ್ಲಿ ನಿರಂತರ ಬೇಡಿಕೆ ಇದೆ.
undefined
ಹೂ ಕೋಸು, ಎಲೆ ಕೋಸು ಮತ್ತು ಗೆಡ್ಡೆ ಕೋಸುಗಳು ಆಗರವಾಗಿದ್ದು, ಇವುಗಳಲ್ಲಿ ಜೀವಸತ್ವ ಸಿ, ಜೀವಸತ್ವ ಇ ಮತ್ತು ಕೆ ಹಾಗೂ ಖನಿಜಾಂಶಗಳು ಹೆಚ್ಚಾಗಿರುವುದರಿಂದ ಆರೋಗ್ಯದ ದೃಷ್ಠಿಯಿಂದಲೂ ಉತ್ತಮವಾದಬೆಳಗಳಾಗಿವೆ.
ಈ ತರಕಾರಿಗಳ ವಾಸನೆಗೆ ಕಾರಣವಾಗಿರುವ ಗ್ಲುಕೋಸಿನೇಟ್ ಎಂಬ ರಾಸಾಯನಿಕವು ವೈದ್ಯಕೀಯ ಗುಣಗಳನ್ನು ಹೊಂದಿದ್ದು, ಕ್ಯಾನ್ಸರ್ ರೋಗಗಳ ವಿರುದ್ಧ ಹೋರಾಡುವ ಶಕ್ತಿಯನ್ನು ಹೊಂದಿದೆ ಎಂಬ ಅಂಶವು ಇತ್ತೀಚಿನ ಸಂಶೋಧನೆಯಿಂದ ತಿಳಿದು ಬಂದಿದೆ.
ಎಲ್ಲಾ ತರಹಜ ಮಣ್ಣಿನಲ್ಲಿ ಬೆಳೆಯಬಹುದು
ಈ ತರಕಾರಿಗಳನ್ನು ಎಲ್ಲಾ ತರಹದ ಮಣ್ಣಿನಲ್ಲಿ ಬೆಳೆಯಬಹುದಾಗಿದೆ. ನೀರು ಬಸಿದು ಹೋಗುವಂತಹ ಮಧ್ಯಮ ಕಪ್ಪು ಮತ್ತು ಮರಳು ಮಿಶ್ರಿತ ಮಣ್ಣು ಅತಿ ಸೂಕ್ತವಾದವುಗಳು. ಇದಲ್ಲದೇ ಸವಳು ಮಣ್ಣಿನ ವಿದ್ಯುದ್ವನತೆ 6 ರಿಂದ 8 ಡೆ.ಸೈ./ ಮೀ. ಇರುವಲ್ಲಿ ಬೆಳೆಯಬಹುದು.
ಎಲೆ ಕೋಸನ್ನು ಜೂನ್- ಜುಲೈ ಮತ್ತು ಅಕ್ಟೋಬರ್- ನವೆಂಬರ್‌ನಲ್ಲಿ, ಹೂ ಕೋಸನ್ನು ಅಲ್ಪಾವಧಿ ತಳಿ- ಜೂನ್ ಮತ್ತು ಜುಲೈ, ಮಧ್ಯಮಾವಧಿ ತಳಿಗಳಾದಲ್ಲಿ ಆಗಸ್ಟ್ ಮತ್ತು ಸೆಪ್ಟೆಂಬರ್ ಮತ್ತು ದೀರ್ಘಾವಧಿ ತಳಿಗಳಾದಲ್ಲಿ ಅಕ್ಟೋಬರ್ - ನವೆಂಬರ್ ತಿಂಗಳಿನಲ್ಲಿ ನಾಟಿ ಮಾಡಬಹುದು. ಮೊದಲೇ ಕೋಸು ಜಾತಿಯ ಬೆಳೆಗಳನ್ನು ಬೆಳೆದಿರುವ ಜಮೀನಿನಲ್ಲಿ ಪುನಃ ಬೆಳೆಯುವುದು ಸೂಕ್ತವಲ್ಲ.
ಜಮೀನು ಸಿದ್ಧಗೊಳಿಸಬೇಕು
ಮೊದಲಿಗೆ ಜಮೀನನ್ನು 2 ಬಾರಿ ಆಳವಾಗಿ ಉಳುಮೆ ಮಾಡಿ 15- 20 ದಿನಗಳ ಕಾಲ ಬಿಸಿಲಿಗೊಡ್ಡಿ ನಂತರ ಮತ್ತೊಮ್ಮೆ ನಂತರ ಮತ್ತೊಮ್ಮೆ ಕಲ್ಟಿವೇಟರ್ ಉಳುಮೆ ಮಾಡಿ ಸಿದ್ದ ಮಾಡಿಕೊಳ್ಳಬೇಕು. ಪ್ರತಿ ಎಕರೆಗೆ 10 ಟನ್‌ಕೊಟ್ಟಿಗೆ ಗೊಬ್ಬರ ಹಾಗೂ 250 ಕೆ.ಜಿ ಬೇವಿನ ಹಿಂಡಿಯನ್ನು ಮಣ್ಣಿಗೆ ಸೇರಿಸುವುದು ಜೊತೆಗೆ ಜೈವಿಕ ಗೊಬ್ಬರಗಳಾದ ಅಜಟೋಬ್ಯಾಕ್ಟರ್, ಪಿ.ಎಸ್.ಬಿ, ಕೆ.ಎಸ್.ಬಿ, ಅಜೋಸ್ಪಿರಿಲಿಯಂ ಜೀವಾಣುಗಳಿರುವ ಅಣುಗೊಬ್ಬರವನ್ನು (100 ಕೆ.ಜಿ ಕೊಟ್ಟಿಗೆ ಗೊಬ್ಬರಕ್ಕೆ 1 ಕೆ.ಜಿ.ಯಂತೆ) ನೀಡುವುದು.
ಅಲ್ಪಾವಧಿ ತಳಿಗಳು 45 ಸೆಂ.ಮೀ. ಅಂತರದಲ್ಲಿ ಮತ್ತು ದೀರ್ಘಾವಧಿ ತಳಿಗಳಾದಲ್ಲಿ 60 ಸೆಂ.ಮೀ. ಬೋದು ಮತ್ತು ಹರಿಗಳನ್ನು ತಯಾರಿಸಬೇಕು. ಸಸಿಗಳನ್ನು 30 ಸೆಂ.ಮೀ. ಅಂತರದಲ್ಲಿ ನಾಟಿ ಮಾಡಬೇಕು. ಎಕರೆಗೆ ಸರಿ ಸುಮಾರು 20000- 22000 ಸಸಿಗಳು ಬೇಕಾಗುತ್ತವೆ.
ಶಿಫಾರಸ್ಸು ಮಾಡಿದ (60:40:50 ಕೆ.ಜಿ ಸಾ:ರಂ:ಪೊ/ಎಕರೆಗೆ) ಶೇ.50 ರಷ್ಟು ಸಾರಜನಕ ಮತ್ತು ಪೂರ್ತಿ ಪ್ರಮಾಣದ ರಂಜಕ, ಪೊಟ್ಯಾಷ್ ಗೊಬ್ಬರ ಹಾಕಿ ಮಣ್ಣಿನಲ್ಲಿ ಚೆನ್ನಾಗಿ ಬೆರೆಸಬೇಕು. ನಾಟಿ ಮಾಡುವುದಕ್ಕಿಂತ ಮೊದಲು ಭೂಮಿಗೆ ತೆಳುವಾಗಿ ನೀರನ್ನು ಹಾಯಿಸಬೇಕು. ನಾಟಿ ಮಾಡಿದ 4 ವಾರಗಳ ನಂತರ ಶೇ.50 ರಷ್ಟು ಸಾರಜನಕವನ್ನು ಮೇಲು ಗೊಬ್ಬರವಾಗಿ ಕೊಡಬೇಕು.
ನಾಟಿ ಮಾಡುವ ಮೊದಲು ಪ್ರತಿ ಎಕರೆಗೆ 400 ಕೆ.ಜಿ ಎರೆಹುಳು ಗೊಬ್ಬರವನ್ನು ಮೂರು ದಿನ ಮೊದಲು ಭೂಮಿಯಲ್ಲಿ ಬೆರೆಸುವುದರಿಂದ ಶಿಫಾರಸು ಮಾಡಿದ ಗೊಬ್ಬರದ ಪ್ರಮಾಣದಲ್ಲಿ ಅರ್ಧದಷ್ಟು ಕಡಿಮೆ ಮಾಡಬಹುದು. ಸಸಿ ನಾಟಿ ಮಾಡಿದ ನಂತರ ಪ್ರತೀ ಲೀಟರ್ ನೀರಿಗೆ ೦.3 ಮಿ.ಲೀ. ಇಮಿಡಾ ಕ್ಲೋಪ್ರಿಡ್ ಹಾಗೂ 3 ಗ್ರಾಂ ತಾಮ್ರದ ಆಕ್ಸಿಕ್ಲೋರೈಡ್ ಬೆರೆಸಿದ ದ್ರಾವಣದಿಂದ ಸಸಿಗಳ ಬುಡ ತೋಯಿಸಬೇಕು.
ಸಾಂಪ್ರದಾಯಿಕವಾಗಿ ಬೆಳೆಯುವವರು ಮರಳು ಮಣ್ಣಾದಲ್ಲಿ 2- 3 ದಿನಕ್ಕೊಮ್ಮೆ, ಗೋಡು ಮಣ್ಣಾದಲ್ಲಿ 3- 4 ದಿನಕ್ಕೊಮ್ಮೆ ಹಾಗೂ ಕಪ್ಪು ಮಣ್ಣಾದಲ್ಲಿ 4- 5 ದಿನಗಳಿಗೊಮ್ಮೆ ಬೆಳೆಯ ಹಂತ ಆಧರಿಸಿ ನೀರು ಕೊಡಬೇಕು. ಎಕರೆಗೆ ಸಮಗ್ರವಾಗಿ ಕಳೆ ನಿರ್ವಹಣೆ ಮಾಡಲು 1 ಲೀ ಅಲಾಕ್ಲೋರ್ ಶೇ.50 ಇಸಿ ಅಥವಾ 700 ಮಿ.ಲೀ ಪೆಂಡಿಮೆಥಾಲಿನ್ 38.7% ಸಿಎಸ್ ಅಥವಾ 250 ಮಿ.ಲೀ ಆಕ್ಸಿಫ್ಲೋರೋಫೆನ್ 23.5 ಇಸಿ ಅನ್ನು 250- 300 ಲೀಟರ್ ನೀರಿಗೆ ಬೆರೆಸಿ ಮಣ್ಣಿನಲ್ಲಿ ತೇವಾಂಶವನ್ನು ಖಾತ್ರಿ ಮಾಡಿಕೊಂಡು ನಾಟಿ ಮಾಡಿದ 3 ದಿನಗಳ ಒಳಗೆ ಮಣ್ಣಿನ ಮೇಲೆ ಹಿಮ್ಮುಖವಾಗಿ ಸಿಂಪಡಿಸಬೇಕು.
ಐಐಎಚ್ಆರ್‌ಅನುಮೋದಿ ತತರಕಾರಿ ಸ್ಪೆಶಲ್‌ಅನ್ನು ಪ್ರತಿ ಲೀಟರ್ ನೀರಿಗೆ 5 ಗ್ರಾಂ ಬೆರೆಸಿ ನಾಟಿ ಮಾಡಿದ 20, 40, ಹಾಗೂ 60ನೇ ದಿನಗಳಲ್ಲಿ ಸಿಂಪಡಿಸಬೇಕು. ತಳಿಗಳ ಅನುಗುಣವಾಗಿ ಪ್ರತಿ ಎಕರೆಗೆ 30- 33 ಟನ್ ಇಳುವರಿ ಪಡೆಯಬಹುದು ಎಂದು ಮೈಸೂರು ತಾಲೂಕು ನಾಗನಹಳ್ಳಿಯ ವಿಸ್ತರಣಾ ಶಿಕ್ಷಣ ಘಟಕದ ತೋಟಗಾರಿಕೆ ಸಹಾಯಕ ಪ್ರಾಧ್ಯಾಪಕ ರಾಹುಲ್‌ದಾಸ್ ತಿಳಿಸಿದ್ದಾರೆ.
ರೈತರು ಹೆಚ್ಚಿನ ಮಾಹಿತಿಗೆ ಮೊ. 98803 38630 ಸಂಪರ್ಕಿಸಬಹುದು.