ಕೆಆರ್‌ಎಸ್ ಜಲಾಶಯ ಭರ್ತಿಯ ಹಂತ ತಲುಪಿರುವುದರಿಂದ ಭಾನುವಾರ ಬೆಳಗ್ಗೆಯಿಂದ ಅಣೆಕಟ್ಟೆಯಿಂದ 50 ಸಾವಿರ ಕ್ಯುಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಜಲಾಶಯದ ಒಳಹರಿವಿನ ಪ್ರಮಾಣ ಹೆಚ್ಚಾದಂತೆ ಹೊರಹರಿವಿನ ಪ್ರಮಾಣವನ್ನು ಹೆಚ್ಚಿಸಲಾಗಿದೆ.
ಮಂಡ್ಯ : ಕೆಆರ್‌ಎಸ್ ಜಲಾಶಯ ಭರ್ತಿಯ ಹಂತ ತಲುಪಿರುವುದರಿಂದ ಭಾನುವಾರ ಬೆಳಗ್ಗೆಯಿಂದ ಅಣೆಕಟ್ಟೆಯಿಂದ 50 ಸಾವಿರ ಕ್ಯುಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಜಲಾಶಯದ ಒಳಹರಿವಿನ ಪ್ರಮಾಣ ಹೆಚ್ಚಾದಂತೆ ಹೊರಹರಿವಿನ ಪ್ರಮಾಣವನ್ನು ಹೆಚ್ಚಿಸಲಾಗಿದೆ.
ಜಲಾಶಯದ ಗರಿಷ್ಠ ಮಟ್ಟ 124.80 ಅಡಿಗಳಾಗಿದ್ದು, ಈಗಾಗಲೇ ಜಲಾಶಯದ ನೀರಿನ ಮಟ್ಟ 123.10 ಅಡಿಗೆ ತಲುಪಿದೆ. ಅಣೆಕಟ್ಟೆಗೆ 69,617 ಕ್ಯುಸೆಕ್ ನೀರು ಹರಿದುಬರುತ್ತಿದೆ. ಅಣೆಕಟ್ಟೆಯಲ್ಲಿ ನೀರಿನ ಒತ್ತಡವನ್ನು ಕಡಿಮೆ ಮಾಡಲು ಜಲಾಶಯದಿಂದ 50 ಸಾವಿರ ಕ್ಯೂಸೆಕ್ ನೀರು ನದಿಗೆ ಹರಿಯಬಿಡಲಾಗಿದೆ. ಅಣೆಕಟ್ಟೆಯಲ್ಲಿ 46.567 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ. ನದಿಗೆ ಹೆಚ್ಚಿನ ಪ್ರಮಾಣದ ನೀರನ್ನು ಹರಿಯಬಿಟ್ಟಿರುವುದರಿಂದ ಕಾವೇರಿ ನದಿ ಪಾತ್ರದಲ್ಲಿ ಪ್ರವಾಹದ ಭೀತಿ ಸೃಷ್ಟಿಯಾಗಿದ್ದು, ಜನರು ಎಚ್ಚರಿಕೆಯಿಂದ ಇರುವಂತೆ ಜಿಲ್ಲಾಡಳಿತ ಮುನ್ಸೂಚನೆ ನೀಡಿದೆ.
undefined
ಕಾವೇರಿ ಜಲಾನಯನ ಪ್ರದೇಶದಲ್ಲಿ ವ್ಯಾಪಕ ಮಳೆಯಾಗುತ್ತಿರುವುದರಿಂದ ಒಳಹರಿವಿನ ಪ್ರಮಾಣ ಏರಿಕೆಯಾಗುತ್ತಲೇ ಇದೆ. ಶನಿವಾರ ಬೆಳಗ್ಗೆ 51,375 ಕ್ಯುಸೆಕ್ ಇದ್ದ ಒಳಹರಿವಿನ ಪ್ರಮಾಣ ರಾತ್ರಿ 8 ರ ಸಮಯಕ್ಕೆ 60,224 ಕ್ಯುಸೆಕ್‌ಗೆ ಏರಿಕೆಯಾಗಿತ್ತು. ಭಾನುವಾರ ಬೆಳಗಿನ ವೇಳೆಗೆ 69,617 ಕ್ಯುಸೆಕ್‌ಗೆ ಏರಿಕೆಯಾಗಿತ್ತು.
ರಂಗನತಿಟ್ಟು ಪಕ್ಷಿಧಾಮಕ್ಕೆ ಪ್ರವೇಶ ನಿರ್ಬಂಧ:
ಅಣೆಕಟ್ಟೆಯಿಂದ ಹೆಚ್ಚಿನ ಪ್ರಮಾಣದ ನೀರನ್ನು ಹರಿಯಬಿಟ್ಟಿರುವುದರಿಂದ ಶ್ರೀರಂಗಪಟ್ಟಣ ತಾಲೂಕಿನ ರಂಗನತಿಟ್ಟು ಪಕ್ಷಿಧಾಮಕ್ಕೆ ಪ್ರವಾಸಿಗರ ಪ್ರವೇಶ ನಿರ್ಬಂಧಿಸಲಾಗಿದೆ. ಶನಿವಾರ 15 ಸಾವಿರ ಕ್ಯುಸೆಕ್ ನೀರು ಹರಿಸುತ್ತಿದ್ದುದರಿಂದ ದೋಣಿ ವಿಹಾರ ಸ್ಥಗಿತಗೊಳಿಸಿ ಪ್ರವಾಸಿಗರ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿತ್ತು.
ಪ್ರಸ್ತುತ ನದಿಗೆ 50 ಸಾವಿರ ಕ್ಯುಸೆಕ್ ನೀರನ್ನು ಹರಿಸುತ್ತಿರುವುದರಿಂದ ಪಕ್ಷಿಧಾಮದ ಪ್ರವೇಶಕ್ಕೆ ನಿರ್ಬಂಧ ವಿಧಿಸಿ ಮೈಸೂರು ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಶರಣಬಸಪ್ಪ ಆದೇಶ ಹೊರಡಿಸಿದ್ದಾರೆ.
ಇಂದು ಡಿಸಿಎಂ, ಸಚಿವರಿಂದ ವೀಕ್ಷಣೆ:
ಕೆಆರ್‌ಎಸ್ ಜಲಾಶಯ ಭರ್ತಿಯ ಹಂತ ತಲುಪಿರುವುದರಿಂದ ಸೋಮವಾರ ಬೆಳಗ್ಗೆ 7.45ಕ್ಕೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಕೃಷಿ, ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರು ಅಣೆಕಟ್ಟೆಗೆ ಭೇಟಿ ನೀಡಿ ವೀಕ್ಷಣೆ ನಡೆಸಲಿದ್ದಾರೆ.
ಜು.27ರಂದು ತುಂಬಿದ ಅಣೆಕಟ್ಟೆಗೆ ಸಿಎಂ ಬಾಗಿನ: ರಮೇಶ್ ಬಂಡಿಸಿದ್ದೇಗೌಡ
ಶ್ರೀರಂಗಪಟ್ಟಣ
ತಾಲೂಕಿನ ಕೆಆರ್‌ಎಸ್ ಅಣೆಕಟ್ಟೆ ಸಂಪೂರ್ಣವಾಗಿ ಭರ್ತಿಯಾಗುತ್ತಿರುವ ಹಿನ್ನೆಲೆಯಲ್ಲಿ ಜು. 27ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾವೇರಿ ಮಾತೆಗೆ ಬಾಗಿನ ಸಮರ್ಪಣೆ ಮಾಡುವುದಾಗಿ ಶಾಸಕ ರಮೇಶ್ ಬಂಡಿಸಿದ್ದೇಗೌಡ ತಿಳಿಸಿದರು.
ಭಾನುವಾರ ಕೆ.ಆರ್.ಎಸ್ ಅಣೆಕಟ್ಟು ವೀಕ್ಷಣೆ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಉತ್ತಮ ಮಳೆಯಿಂದ ಜಲಾಶಯ ಜುಲೈ ತಿಂಗಳಲ್ಲೇ ಭರ್ತಿಯಾಗಿದೆ. ನಮ್ಮ ರೈತ ಕುಲಕ್ಕೆ ಇದೊಂದು ರೀತಿಯ ಹಬ್ಬವಾಗಿದೆ.
ಹೀಗಾಗಿ ತುಂಬಿರುವ ಕಾವೇರಿ ಮಾತೆಗೆ ಬಾಗಿನ ಅರ್ಪಿಸಲಾಗುವುದು ಎಂದು ಹೇಳಿದರು.
ಜು.27ರಂದು ಬಾಗಿನ ಸಮರ್ಪಣೆ ಕಾರ್ಯಕ್ರಮ ನಿಗದಿಯಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಸೇರಿ ಸಚಿವರು ಹಾಗೂ ಮಂಡ್ಯ, ಮೈಸೂರು ಭಾಗದ ಎಲ್ಲಾ ಶಾಸಕರು ಭಾಗಿಯಾಗಲಿದ್ದಾರೆ ಎಂದರು.
ಬಾಗಿನ ಕಾರ್ಯಕ್ರಮದ ಸಿದ್ಧತೆ ಪರಿಶೀಲಿಸಿದ್ದು, ಮುಂದಿನ ಶುಕ್ರವಾರದವರೆಗೂ ಅಧಿವೇಶನ ಇದೆ. ಹೀಗಾಗಿ ಅಧಿವೇಶನ ಮುಗಿದ ನಂತರ ಜು.27ಕ್ಕೆ ಬಾಗಿನ ಸಮರ್ಪಣೆ ಕಾರ್ಯಕ್ರಮ ನಿಗದಿಪಡಿಸಿರುವುದಾಗಿ ತಿಳಿಸಿದರು.
ಸದ್ಯ ಅಣೆಕಟ್ಟೆಗೆ 70 ಸಾವಿರ ಕ್ಯುಸೆಕ್ ಒಳ ಹರಿವಿದೆ. 50 ಸಾವಿರ ಕ್ಯುಸೆಕ್ ನೀರನ್ನು ಹೊರ ಬಿಡುತ್ತಿದ್ದೇವೆ. ಡ್ಯಾಂನ ಗರಿಷ್ಟ ಮಟ್ಟ 124.80ಅಡಿ. ಇಂದಿನ ಮಟ್ಟ 123.10 ಅಡಿ ಇದೆ. ಅಣೆಕಟ್ಟು ಭರ್ತಿಗೆ ಒಂದು ಅಡಿ ಮಾತ್ರ ಇದೆ ಎಂದು ಶಾಸಕರು ಹೇಳಿದರು.