
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹಣದ ಆಸೆಗೆ ಬಿದ್ದು ಬಾಡಿಗೆ ಮನೆಗಳಲ್ಲಿ ಅನೈತಿಕ ಚಟುವಟಿಕೆ ನಡೆಸುತ್ತಿದ್ದ ಜಾಲದ ಮೇಲೆ ಸಿಸಿಬಿ ಪೊಲೀಸರು ಭರ್ಜರಿ ದಾಳಿ ನಡೆಸಿದ್ದಾರೆ. ನಗರದ ಸೋಲದೇವನಹಳ್ಳಿ ಮತ್ತು ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಇಬ್ಬರು ಮಹಿಳೆಯರನ್ನು ಬಂಧಿಸಲಾಗಿದ್ದು, ದಂದೆಯಲ್ಲಿ ತೊಡಗಿದ್ದ ಮೂವರು ಮಹಿಳೆಯರನ್ನು ರಕ್ಷಿಸಲಾಗಿದೆ.
ಬೆಂಗಳೂರಿನ ಸಿಸಿಬಿ (CCB) ಮಹಿಳಾ ಸಂರಕ್ಷಣಾ ದಳದ ಅಧಿಕಾರಿಗಳಿಗೆ ನಗರದ ಹೊರವಲಯದ ಕೆಲವು ಬಡಾವಣೆಗಳಲ್ಲಿ ವೇಶ್ಯಾವಾಟಿಕೆ ದಂದೆ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಲಭಿಸಿತ್ತು. ಈ ಮಾಹಿತಿಯನ್ನಾಧರಿಸಿ ಯೋಜಿತವಾಗಿ ದಾಳಿ ನಡೆಸಿದ ಸಿಸಿಬಿ ತಂಡ, ಸೋಲದೇವನಹಳ್ಳಿ ಮತ್ತು ಬ್ಯಾಡರಹಳ್ಳಿ ವ್ಯಾಪ್ತಿಯಲ್ಲಿ ಬಾಡಿಗೆ ಮನೆಗಳಲ್ಲಿ ನಡೆಯುತ್ತಿದ್ದ ಅಕ್ರಮಗಳನ್ನು ಬಯಲಿಗೆಳೆದಿದೆ.
ಬಂಧಿತ ಇಬ್ಬರು ಮಹಿಳೆಯರು ಪೊಲೀಸರ ವಿಚಾರಣೆ ವೇಳೆ ತಮ್ಮ ತಪ್ಪೊಪ್ಪಿಕೊಂಡಿದ್ದಾರೆ. ಸುಲಭವಾಗಿ ಮತ್ತು ಹೆಚ್ಚಿನ ಹಣವನ್ನು ಗಳಿಸುವ ಉದ್ದೇಶದಿಂದ ನಾವು ಈ ದಂದೆಯನ್ನು ಶುರು ಮಾಡಿದ್ದೆವು ಎಂದು ಇವರು ಬಾಯಿಬಿಟ್ಟಿದ್ದಾರೆ. ಈ ಮಹಿಳೆಯರು ನಗರದ ಜನನಿಬಿಡ ಪ್ರದೇಶಗಳಿಗಿಂತ ಸ್ವಲ್ಪ ದೂರದಲ್ಲಿರುವ ಬಡಾವಣೆಗಳಲ್ಲಿ ಬಾಡಿಗೆ ಮನೆಗಳನ್ನು ಪಡೆದು, ಯಾರಿಗೂ ಸಂಶಯ ಬರದಂತೆ ವೇಶ್ಯಾವಾಟಿಕೆ ಅಡ್ಡೆಗಳನ್ನು ನಡೆಸುತ್ತಿದ್ದರು.
ಈ ಕಾರ್ಯಾಚರಣೆಯ ಸಮಯದಲ್ಲಿ ದಂದೆಯಲ್ಲಿ ತೊಡಗಿದ್ದ ಮತ್ತು ವಂಚನೆಗೆ ಒಳಗಾಗಿದ್ದ ಮೂವರು ಮಹಿಳೆಯರನ್ನು ಪೊಲೀಸರು ರಕ್ಷಿಸಿದ್ದಾರೆ. ರಕ್ಷಿಸಲ್ಪಟ್ಟ ಮಹಿಳೆಯರನ್ನು ಪುನರ್ವಸತಿ ಕೇಂದ್ರಕ್ಕೆ ಕಳುಹಿಸುವ ಪ್ರಕ್ರಿಯೆ ನಡೆಯುತ್ತಿದೆ. ಸಮಾಜದ ದುರ್ಬಲ ವರ್ಗದ ಮಹಿಳೆಯರನ್ನು ಆಮಿಷವೊಡ್ಡಿ ಇಂತಹ ಕೆಲಸಗಳಿಗೆ ಬಳಸಿಕೊಳ್ಳಲಾಗುತ್ತಿತ್ತು ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಈ ಸಂಬಂಧ ಸೋಲದೇವನಹಳ್ಳಿ ಮತ್ತು ಬ್ಯಾಡರಹಳ್ಳಿ ಪೊಲೀಸ್ ಠಾಣೆಗಳಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ. ಬಂಧಿತ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಈ ಜಾಲದ ಹಿಂದೆ ಬೇರೆ ಯಾರಾದರೂ ಪ್ರಭಾವಿ ವ್ಯಕ್ತಿಗಳ ಕೈವಾಡವಿದೆಯೇ ಎಂಬ ಬಗ್ಗೆ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಬೆಂಗಳೂರಿನಲ್ಲಿ ಇತ್ತೀಚೆಗೆ ಬಾಡಿಗೆ ಮನೆಗಳನ್ನು ಅನೈತಿಕ ಚಟುವಟಿಕೆಗಳಿಗೆ ಬಳಸಿಕೊಳ್ಳುತ್ತಿರುವ ಘಟನೆಗಳು ಹೆಚ್ಚಾಗುತ್ತಿದ್ದು, ಮನೆ ಮಾಲೀಕರು ಬಾಡಿಗೆದಾರರಿಗೆ ಮನೆ ನೀಡುವ ಮುನ್ನ ಎಚ್ಚರಿಕೆ ವಹಿಸಬೇಕು ಎಂದು ಪೊಲೀಸರು ಸೂಚಿಸಿದ್ದಾರೆ.