
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ದಾಖಲೆಗಳಿಲ್ಲದ ಕಂತೆ ಕಂತೆ ಹಣ ಶೆಡ್ ಒಂದರಲ್ಲಿ ಪತ್ತೆಯಾಗಿದೆ. ನಗರದ ಕುರುಬರಹಳ್ಳಿಯ ಶೆಡ್ ಒಂದರ ಮೇಲೆ ದಾಳಿ ನಡೆಸಿದ ಮಹಾಲಕ್ಷಿ ಲೇ ಔಟ್ ಪೊಲೀಸರು, ನಾಲ್ಕು ಬ್ಯಾಗ್‌ಗಳಲ್ಲಿ ಅಡಗಿಸಿಡಲಾಗಿದ್ದ ಬರೋಬ್ಬರಿ 2 ಕೋಟಿ 98 ಲಕ್ಷದ 900 ರೂಪಾಯಿ ನಗದನ್ನು ವಶಪಡಿಸಿಕೊಂಡಿದ್ದಾರೆ. ಖಚಿತ ಮಾಹಿತಿಯ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು ಹಣವನ್ನು ಜಪ್ತಿ ಮಾಡಿದ್ದಲ್ಲದೆ, ಘಟನೆಗೆ ಸಂಬಂಧಿಸಿದಂತೆ ಪ್ರಮುಖ ಆರೋಪಿಗಳಾದ ನಾಗರಾಜ್ ಮತ್ತು ವೆಂಕಟೇಶ್ ಎಂಬುವವರನ್ನು ಬಂಧಿಸಿದ್ದಾರೆ.
ಜೂನ್ 2 ರಂದು ಮಹಾಲಕ್ಷ್ಮೀ ಲೇಔಟ್ ಠಾಣೆಯ ಪಿಎಸ್‌ಐ ರಾಕೇಶ್ ಹಾಗೂ ಸಿಬ್ಬಂದಿ ಎಂದಿನಂತೆ ರೌಂಡ್ಸ್‌ನಲ್ಲಿದ್ದರು. ಈ ವೇಳೆ ಕುರುಬರಹಳ್ಳಿಯ ಶೆಡ್ ಒಂದರಲ್ಲಿ ಭಾರಿ ಪ್ರಮಾಣದ ನಗದು ಹಣವನ್ನು ಅಕ್ರಮವಾಗಿ ಬಚ್ಚಿಡಲಾಗಿದೆ ಎಂಬ ಖಚಿತ ಮಾಹಿತಿ ಸಿಕ್ಕಿತ್ತು. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರ ತಂಡ ಕುರುಬರಹಳ್ಳಿಯ 11ನೇ ಕ್ರಾಸ್‌ನಲ್ಲಿರುವ ‘ಶೇಷಾದ್ರಿ ಇಂಡಸ್ಟ್ರೀಸ್’ ಹೆಸರಿನ ಶೆಡ್‌ಗೆ ದಾಳಿ ನಡೆಸಿತು.
ದಾಳಿ ನಡೆಸಿ ಶೆಡ್ ಪರಿಶೀಲಿಸಿದಾಗ ಪೊಲೀಸರಿಗೆ ಒಂದು ಕ್ಷಣ ನಂಬಲಾಗದ ದೃಶ್ಯ ಎದುರಾಯಿತು. ಅಲ್ಲಿ ತಲಾ ನಾಲ್ಕು ದೊಡ್ಡ ಬ್ಯಾಗ್‌ಗಳಲ್ಲಿ ಕಂತೆ ಕಂತೆ ನೋಟುಗಳನ್ನು ತುಂಬಿ ಇಡಲಾಗಿತ್ತು. ಬ್ಯಾಗ್‌ಗಳಲ್ಲಿದ್ದ ಕೋಟಿ ಕೋಟಿ ಹಣವನ್ನು ಕಂಡು ಸ್ವತಃ ಪೊಲೀಸರೇ ಶಾಕ್ ಆದರು. ತಕ್ಷಣವೇ ಪಿಎಸ್‌ಐ ರಾಕೇಶ್ ಅವರು ತಮ್ಮ ಠಾಣೆಯ ಇನ್ಸ್‌ಪೆಕ್ಟರ್ ಹಾಗೂ ಹಿರಿಯ ಅಧಿಕಾರಿಗಳಿಗೆ ವಿಷಯ ಮುಟ್ಟಿಸಿದರು. ಸ್ಥಳಕ್ಕೆ ಧಾವಿಸಿದ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಇಡೀ ರಾತ್ರಿ ನೋಟು ಎಣಿಸುವ ಕಾರ್ಯ ನಡೆಯಿತು. ಅಂತಿಮವಾಗಿ ಒಟ್ಟು ಮೊತ್ತ 2,98,00,900 ರೂಪಾಯಿ (ಸುಮಾರು 3 ಕೋಟಿ) ಇರುವುದು ದೃಢಪಟ್ಟಿತು.
ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಜಪ್ತಿ ಮಾಡಲಾದ ಈ ಕೋಟಿ ಕೋಟಿ ಹಣವು ಮೂಲತಃ ಬೆಂಗಳೂರಿನ ತಾವರೆಕೆರೆ ನಿವಾಸಿಯಾದ ನಾಗರಾಜ್ ಎಂಬಾತನಿಗೆ ಸೇರಿದ್ದಾಗಿದೆ. ನಾಗರಾಜ್ ಈ ಭಾರಿ ಮೊತ್ತದ ಹಣಕ್ಕೆ ಯಾವುದೇ ಅಧಿಕೃತ ದಾಖಲೆಗಳು ಇಲ್ಲದ ಕಾರಣ, ಕುರುಬರಹಳ್ಳಿಯಲ್ಲಿರುವ ತನ್ನ ಸ್ನೇಹಿತ ವೆಂಕಟೇಶ್ ಎಂಬಾತನಿಗೆ ಸೇರಿದ ಇಂಡಸ್ಟ್ರಿಯಲ್ ಶೆಡ್‌ನಲ್ಲಿ ಅತ್ಯಂತ ರಹಸ್ಯವಾಗಿ ಬಚ್ಚಿಟ್ಟಿದ್ದ ಎಂಬುದು ಬೆಳಕಿಗೆ ಬಂದಿದೆ.
ಇಷ್ಟು ದೊಡ್ಡ ಪ್ರಮಾಣದ ನಗದು ಪತ್ತೆಯಾದ ತಕ್ಷಣ ಮಹಾಲಕ್ಷ್ಮೀ ಲೇಔಟ್ ಪೊಲೀಸರು ಆದಾಯ ತೆರಿಗೆ (IT) ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ತದನಂತರ ನ್ಯಾಯಾಲಯದ ಅನುಮತಿಯನ್ನು ಪಡೆದು, ಕರ್ನಾಟಕ ಪೊಲೀಸ್ ಕಾಯ್ದೆ (KP Act) ಸೆಕ್ಷನ್ 98 ರ ಅಡಿಯಲ್ಲಿ ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣೆಯಲ್ಲಿ ಅಧಿಕೃತವಾಗಿ ಎಫ್‌ಐಆರ್ (FIR) ದಾಖಲಿಸಿಕೊಳ್ಳಲಾಗಿದೆ. ಸದ್ಯ ಅಕ್ರಮ ಹಣವನ್ನು ಸೀಜ್ ಮಾಡಲಾಗಿದ್ದು, ಆರೋಪಿಗಳಾದ ನಾಗರಾಜ್ ಹಾಗೂ ವೆಂಕಟೇಶ್‌ನನ್ನು ಜೈಲಿಗಟ್ಟಲಾಗಿದೆ.
ಬಂಧಿತ ಆರೋಪಿಗಳನ್ನು ಹಣದ ಮೂಲದ ಬಗ್ಗೆ ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದಾಗ, ಅವರು ಯಾವುದೇ ಸಮರ್ಪಕವಾದ ಉತ್ತರ ಅಥವಾ ದಾಖಲೆಗಳನ್ನು ಒದಗಿಸಿಲ್ಲ. ಬದಲಿಗೆ, ಬ್ಯಾಂಕಿನಲ್ಲಿರುವ ಸಾಲವನ್ನು ಮರುಪಾವತಿಸಲು ಈ ಹಣವನ್ನು ತಂದು ಇಲ್ಲಿ ಇಟ್ಟಿದ್ದೆವು ಎಂದು ಹಾರಿಕೆ ಉತ್ತರದ ನೆಪ ಹೇಳಿ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದಾರೆ.
ಆದರೆ, ಇಷ್ಟೊಂದು ದೊಡ್ಡ ಮೊತ್ತವನ್ನು ಬ್ಯಾಂಕ್ ಸಾಲ ತೀರಿಸಲು ಶೆಡ್‌ನಲ್ಲಿ ಬ್ಯಾಗ್ ತುಂಬಿ ಇಡುವ ಅಗತ್ಯವೇನಿದೆ? ಈ ಹಣದ ಅಸಲಿ ಮಾಲೀಕ ಯಾರು? ಇದು ಹವಾಲಾ ದಂಧೆಯ ಹಣವೇ ಅಥವಾ ಇನ್ಯಾವುದೋ ಅಕ್ರಮ ವ್ಯವಹಾರಕ್ಕೆ ಸಂಬಂಧಿಸಿದ್ದೇ? ಎಂಬ ಹಲವು ಪ್ರಶ್ನೆಗಳಿಗೆ ಉತ್ತರ ಹುಡುಕಲು ಮಹಾಲಕ್ಷ್ಮೀ ಲೇಔಟ್ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ.