
ಮಂಗಳೂರು: ಮಂಗಳೂರಿನಿಂದ ವಸಾಯ್ ರೋಡ್ ಮೂಲಕವಾಗಿ ಬಾಂದ್ರಾ ಟರ್ಮಿನಸ್‌ಗೆ ನೇರ ರೈಲು ಸೇವೆ ಆರಂಭವಾಗುವ ಸಾಧ್ಯತೆಗಳು ಹೆಚ್ಚಾಗಿದ್ದು, ಈ ಸಂಬಂಧ ರೈಲ್ವೆ ಇಲಾಖೆಯಲ್ಲಿ ಸಕಾರಾತ್ಮಕ ಬೆಳವಣಿಗೆಗಳು ನಡೆಯುತ್ತಿರುವುದಾಗಿ ವರದಿ ತಿಳಿಸಿದೆ. ಪ್ರಸ್ತುತ ಮಂಗಳೂರು ಸೆಂಟ್ರಲ್‌ನಿಂದ ರೈಲು ಸಂಖ್ಯೆ 16622 ಸಾಪ್ತಾಹಿಕವಾಗಿ ಪ್ರತಿ ಶನಿವಾರ ರಾಮೇಶ್ವರಂಗೆ ತೆರಳಿ, ಸೋಮವಾರ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣಕ್ಕೆ ಮರಳುತ್ತದೆ. ಸೋಮವಾರದಿಂದ ಶನಿವಾರ ವರೆಗೆ ಸುಮಾರು ಐದು ದಿನಗಳ ಕಾಲ ಜರ್ಮನ್ ತಂತ್ರಜ್ಞಾನದ ಎಲ್‌ಎಚ್‌ಬಿ (LHB) ಬೋಗಿಗಳನ್ನು ಒಳಗೊಂಡ ಸಂಪೂರ್ಣ ರೇಕ್ ಮಂಗಳೂರು ಸೆಂಟ್ರಲ್ ನಿಲ್ದಾಣದಲ್ಲೇ ಖಾಲಿಯಾಗಿ ನಿಲ್ಲುತ್ತದೆ. ಈ ರೇಕಲ್ಲಿ 4 ಸಾಮಾನ್ಯ ಬೋಗಿ, 2 ಹವಾನಿಯಂತ್ರಿತ ಟು ಟಯರ್, 6 ತ್ರೀ ಟಯರ್, 6 ಸ್ಲೀಪರ್ ಹಾಗೂ 2 ಎಕಾನಮಿ ಬೋಗಿಗಳು ಸೇರಿವೆ.
ಈ ರೇಕ್ ಅನ್ನು ಉಪಯೋಗಿಸಿ ಮಂಗಳೂರು ಸೆಂಟ್ರಲ್‌ನಿಂದ ಕೊಂಕಣ ರೈಲ್ವೆ ಮಾರ್ಗವಾಗಿ ವಸಾಯ್ ರೋಡ್ ಮೂಲಕ ಬಾಂದ್ರಾ ಟರ್ಮಿನಸ್ ತನಕ ರೈಲು ಸೇವೆ ಆರಂಭಿಸುವ ಪ್ರಯತ್ನಗಳು ನಡೆಯುತ್ತಿವೆ. ಇದೇ ರೇಕ್ ಬಾಂದ್ರಾ ಟರ್ಮಿನಸ್‌ನಿಂದ ವಾಪಸ್ ವಸಾಯ್ ರೋಡ್ ಮುಖಾಂತರ ಮಂಗಳೂರು ಸೆಂಟ್ರಲ್‌ಗೆ ಸಂಚರಿಸುವ ಪ್ರಸ್ತಾವನೆಯೂ ಪರಿಶೀಲನೆಯಲ್ಲಿದೆ ಎಂದು ವರದಿ ತಿಳಿಸಿವೆ.
ಮಂಗಳೂರು ಸೆಂಟ್ರಲ್ ಮತ್ತು ವಸಾಯ್ ರೋಡ್ ನಡುವಿನ ಈ ಹೊಸ ರೈಲು ಸೇವೆಗೆ ಅಗತ್ಯವಾದ ರೈಲು ಮಾರ್ಗ (ರಹದಾರಿ) ಲಭ್ಯವಿರುವುದು ಯೋಜನೆಗೆ ಮತ್ತಷ್ಟು ಬಲ ನೀಡಿದೆ. ಇತ್ತೀಚೆಗೆ ಸೂರತ್-ಮಂಗಳೂರು ಸಾಪ್ತಾಹಿಕ ರೈಲು ಸೇವೆ ಆರಂಭವಾದ ಬಳಿಕ ವಾರದಲ್ಲಿ 4 ದಿನಗಳ ಕಾಲ ಈ ರೈಲು ಮಾರ್ಗದಲ್ಲಿ ಅವಕಾಶವಿರುವುದಾಗಿ ಹೇಳಲಾಗಿದೆ.
ಈ ಲಭ್ಯವಿರುವ ಮಾರ್ಗವನ್ನು ಬಳಸಿಕೊಂಡು, ಪ್ರಸ್ತುತ ರಾಮೇಶ್ವರಂ-ಮಂಗಳೂರು ನಡುವೆ ಸಂಚರಿಸುತ್ತಿರುವ ರೈಲಿನ ರೇಕ್‌ನ್ನೇ ಮಂಗಳೂರು-ವಸಾಯ್ ರೋಡ್-ಬಾಂದ್ರಾ ಟರ್ಮಿನಸ್ ಸೇವೆಗೆ ಬಳಸಬಹುದಾಗಿದೆ ಎಂದು ಮುಂಬೈ ರೈಲು ಯಾತ್ರಿ ಸಂಘದ ಕಾರ್ಯಕಾರಿ ಕಾರ್ಯದರ್ಶಿ ಒಲಿವರ್ ಡಿ ಸೋಜಾ ತಿಳಿಸಿದ್ದಾರೆ.
ಈ ಕುರಿತು ಮಂಗಳೂರು, ಉಡುಪಿ ಹಾಗೂ ಉತ್ತರ ಕನ್ನಡ ಕ್ಷೇತ್ರಗಳ ಸಂಸದರು ರೈಲ್ವೆ ಸಚಿವರಿಗೆ ಲಿಖಿತ ಮನವಿ ಸಲ್ಲಿಸಿದ್ದಾರೆ. ಇದರ ಜೊತೆಗೆ ಮುಂಬೈ ಭಾಗದಿಂದಲೂ ಈ ಯೋಜನೆಗೆ ಬೆಂಬಲ ವ್ಯಕ್ತವಾಗಿದ್ದು, ಪಿಯೂಷ್ ಗೋಯಲ್ ಹಾಗೂ ಮಾಜಿ ಸಂಸದ ಗೋಪಾಲ ಶೆಟ್ಟಿ ಅವರು ವಿಶೇಷ ಮುತುವರ್ಜಿ ವಹಿಸಿ ರಾಮೇಶ್ವರಂ-ಮಂಗಳೂರು ರೈಲಿನ ರೇಕ್ ಅನ್ನು ಮಂಗಳೂರು ಸೆಂಟ್ರಲ್-ಬಾಂದ್ರಾ ಟರ್ಮಿನಸ್ ಸೇವೆಗೆ ವಿಸ್ತರಿಸಲು ಕ್ರಮ ಕೈಗೊಳ್ಳಬೇಕು ಎಂದು ರೈಲ್ವೆ ಇಲಾಖೆಯನ್ನು ಒತ್ತಾಯಿಸಿದ್ದಾರೆ.
ಈ ಯೋಜನೆ ಅನುಷ್ಠಾನಗೊಂಡರೆ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಸಾವಿರಾರು ಪ್ರಯಾಣಿಕರಿಗೆ ಮುಂಬೈ ಸಂಪರ್ಕ ಮತ್ತಷ್ಟು ಸುಲಭವಾಗಲಿದೆ. ಕೊಂಕಣ ರೈಲ್ವೆ ಮಾರ್ಗದಲ್ಲಿ ಹೆಚ್ಚುವರಿ ಪ್ರಯಾಣ ಸೌಲಭ್ಯ ದೊರೆಯುವ ನಿರೀಕ್ಷೆ ವ್ಯಕ್ತವಾಗಿದೆ. ರೈಲ್ವೆ ಸಚಿವಾಲಯ ಮತ್ತು ಸಂಬಂಧಿತ ಜನಪ್ರತಿನಿಧಿಗಳ ಮುಂದಿನ ಕ್ರಮಗಳತ್ತ ಪ್ರಯಾಣಿಕರು ಕಾತರದಿಂದ ಎದುರು ನೋಡುತ್ತಿದ್ದಾರೆ.