ಬೆಂಗಳೂರು ಜಲಮಂಡಳಿಯಿಂದ ವಿಶೇಷ ಸಾಧನೆ; ಮಳೆಗಾಲಕ್ಕೂ ಮುನ್ನ 986 ಇಂಗು ಗುಂಡಿಗಳ ನಿರ್ಮಾಣ

By Sathish Kumar KHFirst Published May 4, 2024, 4:58 PM IST
Highlights

ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಿಂದ ಮಳೆಗಾಲಕ್ಕೂ ಮುನ್ನವೇ 986 ಇಂಗು ಗುಂಡಿಗಳನ್ನು ನಿರ್ಮಾಣ ಮಾಡಲಾಗಿದೆ. 

ಬೆಂಗಳೂರು (ಮೇ 04): ಇತರರಿಗೆ ಹೇಳುವ ಮುನ್ನ ಆ ವಿಷಯವನ್ನು ನಮ್ಮಲ್ಲಿ ಮೊದಲು ಅಳವಡಿಸಿಕೊಳ್ಳಬೇಕು ಎನ್ನುವ ಮಹತ್ಮಾ ಗಾಂಧೀಜಿಯವರ ಮಾತುಗಳಂತೆ, ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಮಳೆ ಪ್ರಾರಂಭವಾಗುವ ಮುನ್ನವೇ ನಗರದಾದ್ಯಂತ 986 ಮಳೆ ನೀರು ಇಂಗು ಗುಂಡಿಗಳನ್ನು ನಿರ್ಮಿಸುವ ಮೂಲಕ ಮಾದರಿಯಾಗಿದೆ. 

ಬೆಂಗಳೂರು ನಗರದಲ್ಲಿ ಎದುರಾಗಿರುವ ನೀರಿನ ಅಭಾವ ಕಾವೇರಿ ನೀರಿನ ಕೊರತೆಯಿಂದ ಅಲ್ಲ. ಅಂತರ್ಜಲದ ಮೇಲೆ ಅವಲಂಬಿತರಾಗಿದ್ದ ಲಕ್ಷಾಂತರ ಜನರಿಗೆ ನೀರು ಒದಗಿಸುತ್ತಿದ್ದ ಕೊಳವೆ ಬಾವಿಗಳು ಬತ್ತಿ ಹೋದ ಕಾರಣ ನೀರಿನ ಅಭಾವ ಕಂಡುಬಂದಿತ್ತು. ಮಳೆ ನೀರು ಕೊಯ್ಲು ಅಳವಡಿಸಿಕೊಂಡಿರುವ ಹಲವಾರು ಕಟ್ಟಡಗಳಲ್ಲಿ ಮಳೆ ನೀರಿನ ಇಂಗುಗುಂಡಿಗಳನ್ನು ರಚಿಸದೇ ಇರುವ ಕಾರಣ ಅಂತರ್ಜಲ ಮರುಪೂರಣ ಸರಿಯಾಗಿ ಆಗುತ್ತಿಲ್ಲ. ಮರುಪೂರಣ ಆಗದೇ ಇರುವ ಕಾರಣ ದಿನೇ ದಿನೇ ಅಂತರ್ಜಲ ಮಟ್ಟ ಕುಸಿಯುತ್ತಲೇ ಇದೆ. ಇದನ್ನ ತಡೆಗಟ್ಟುವ ನಿಟ್ಟಿನಲ್ಲಿ ಜನರು ಮಳೆ ನೀರು ಮರುಪೂರಣಕ್ಕೆ ಅನಾದರ ತೋರಿಸದೇ ಇಂಗು ಗುಂಡಿಗಳನ್ನ ನಿರ್ಮಿಸಬೇಕು ಎನ್ನುವ ಜಾಗೃತಿ ಮೂಡಿಸಬೇಕು ಎನ್ನುವುದು ಜಲಮಂಡಳಿಯ ಗುರಿಯಾಗಿದೆ. 

ಬೆಂಗಳೂರು ವಿಪ್ರೋಗೆ ಜಲಮಂಡಳಿಯಿಂದ ನಿತ್ಯ 3 ಲಕ್ಷ ಲೀ. ಝೀರೋ ಬ್ಯಾಕ್ಟೀರಿಯಾ ನೀರು ಸರಬರಾಜು

ವ್ಯಾಪಕವಾಗಿ ಮಳೆ ನೀರು ಇಂಗುಗುಂಡಿಗಳ ನಿರ್ಮಾಣಕ್ಕೆ ಸೂಚನೆ: ನಗರದಲ್ಲಿ ಜಲಮಂಡಳಿಯ ಅಧೀನದಲ್ಲಿರುವ ಬತ್ತಿ ಹೋಗಿರುವ ಕೊಳವೆ ಬಾವಿಗಳಲ್ಲಿ ಮಳೆ ನೀರು ಇಂಗುಗುಂಡಿಗಳನ್ನು ನಿರ್ಮಿಸಬೇಕು ಎಂದು ಜಲಮಂಡಳಿ ಅಧ್ಯಕ್ಷರಾದ ಡಾ ರಾಮ್‌ ಪ್ರಸಾತ್‌ ಮನೋಹರ್‌ ಸೂಚನೆ ನೀಡಿದ್ದರು. ಈ ನಿಟ್ಟಿನಲ್ಲಿ ಕಾರ್ಯತತ್ಪರರಾದ ಜಲಮಂಡಳಿ ಅಧಿಕಾರಿಗಳೂ ಒಂದು ತಿಂಗಳ ಅವಧಿಯಲ್ಲಿ 986 ಮಳೆ ನೀರು ಇಂಗುಗುಂಡಿಗಳನ್ನು ನಿರ್ಮಿಸಿದ್ದಾರೆ. ವಲಯವಾರು ನಿರ್ಮಿಸಲಾಗುವ ಇಂಗುಗುಂಡಿಗಳ ಮೂಲಕ ಮಳೆಯ ನೀರು ಯಾವುದೇ ಕಲ್ಮಶವಿಲ್ಲದೇ ನೆಲದಡಿಗೆ ಇಳಿಯುವಂತೆ. ಹಾಗೆಯೇ, ರಸ್ತೆಗಳಲ್ಲಿನ ನೀರು ಹರಿದು ಒಳಚರಂಡಿಗೆ ಸೇರ್ಪಡೆ ಆಗಿ ತೊಂದರೆ ಆಗದಂತೆ ತಡೆಯಲು ಇದು ಸಹಕಾರಿಯಾಗಲಿದೆ. 

74 ಕಡೆಗಳಲ್ಲಿ ಸಮುದಾಯ ಮಳೆ ನೀರು ಕೊಯ್ಲು ಅಳವಡಿಕೆ:  ಅಂತರ್ಜಲ ಕುಸಿತದಿಂದ ನೀರಿನ ಅಭಾವಕ್ಕೆ ತುತ್ತಾಗಿರುವ ಬೆಂಗಳೂರು ನಗರದಲ್ಲಿ ಅಂತರ್ಜಲ ವೃದ್ಧಿಸುವ ಹಾಗೂ ಕೆರೆಗಳಿಗೆ ಮಳೆ ನೀರು ತುಂಬಿಸುವ ಉದ್ದೇಶದಿಂದ ಪ್ರಾರಂಭಿಸಲಾಗಿರುವ ಸಮುದಾಯ ಮಳೆ ಕೋಯ್ಲು (ಕಮ್ಯೂನಿಟಿ ರೈನ್‌ ಹಾರ್ವೆಸ್ಟಿಂಗ್‌) ಗೂ ಬಹಳಷ್ಟು ಒಲವು ವ್ಯಕ್ತವಾಗಿದೆ. ಕಮ್ಯೂನಿಟಿ ರೈನ್‌ ಹಾರ್ವೆಸ್ಟಿಂಗ್‌ ಅಳವಡಿಸುವ 74 ಪ್ರಸ್ತಾವನೆಗಳ ಬಗ್ಗೆ ಜಲಮಂಡಳಿ ಅಧಿಕಾರಿಗಳು ಮಾಹಿತಿ ನೀಡಿದ್ದು, ಸದ್ಯದಲ್ಲೇ ಮೊದಲ ಯೋಜನೆಗೆ ಚಾಲನೆ ದೊರೆಯಲಿದೆ. 

ಸಾರ್ವಜನಿಕರು ಮಳೆ ನೀರು ಇಂಗುಗುಂಡಿಗಳನ್ನು ಕಡ್ಡಾಯವಾಗಿ ನಿರ್ಮಿಸಿಕೊಳ್ಳಿ ಎಂದು ಹೇಳುವ ಮುನ್ನವೇ ಜಲಮಂಡಳಿಯ ವತಿಯಿಂದ ಮಳೆ ನೀರು ಇಂಗುಗುಂಡಿಗಳನ್ನು ನಿರ್ಮಿಸಲಾಗಿದೆ. ಸಣ್ಣ ಸಮಯದಲ್ಲಿ 986 ಇಂಗುಗುಂಡಿಗಳನ್ನು ನಿರ್ಮಿಸಲಾಗಿದ್ದು, ಇನ್ನೂ ಹೆಚ್ಚಿನ ಕಡೆಗಳಲ್ಲಿ ನಿರ್ಮಿಸುವ ಮೂಲಕ ಮಳೆ ನೀರು ನಮ್ಮ ಅಂತರ್ಜಲವನ್ನು ಸಮೃದ್ದಗೊಳಿಸಲು ಅನುವು ಮಾಡಿಕೊಡುವುದು. ಸಾರ್ವಜನಿಕರು ತಮ್ಮ ಕಟ್ಟಡಗಳಲ್ಲಿ ಇಂಗು ಗುಂಡಿಗಳನ್ನ ಅಳವಡಿಸಿಕೊಳ್ಳುವ ಮೂಲಕ ಭವಿಷ್ಯದ ಸಮೃದ್ಧ ಬೆಂಗಳೂರಿಗೆ ಕೊಡುಗೆ ನೀಡುವಂತೆ ಮನವೊಲಿಸುವುದು ನಮ್ಮ ಗುರಿಯಾಗಿದೆ.
- ರಾಮ್ ಪ್ರಸಾತ್ ಮನೋಹರ್, ಅಧ್ಯಕ್ಷರು, ಬಿಡಬ್ಲ್ಯೂಎಸ್‌ಎಸ್‌ಬಿ 

click me!