Bengaluru Metro:ಆಗಸ್ಟ್‌ನಿಂದ 2 ಹೊಸ ಮಾರ್ಗದಲ್ಲಿ ಮೆಟ್ರೋ ಸಂಚಾರ ಆರಂಭ

By Sathish Kumar KH  |  First Published Jul 24, 2023, 10:47 AM IST

ಮೆಟ್ರೋ ರೈಲು ಆಗಸ್ಟ್‌ ತಿಂಗಳಿಂದ ಇನ್ನೂ ಎರಡು ಹೊಸ ಮಾರ್ಗದಲ್ಲಿ ಸಂಚಾರ ಮಾಡಲಿದೆ. ಇದರಿಂದ ಬರೋಬ್ಬರಿ 5 ಲಕ್ಷಕ್ಕೂ ಅಧಿಕ ಪ್ರಯಾಣಿಕರಿಗೆ ಅನುಕೂಲ ಆಗಲಿದೆ.


ಬೆಂಗಳೂರು (ಜು.24): ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಟ್ರಾಫಿಕ್‌ ರಹಿತ ಸಂಚಾರಕ್ಕೆ ಅನುಕೂಲ ಆಗಿರುವ ಮೆಟ್ರೋ ರೈಲು ಆಗಸ್ಟ್‌ ತಿಂಗಳಿಂದ ಇನ್ನೂ ಎರಡು ಹೊಸ ಮಾರ್ಗದಲ್ಲಿ ಸಂಚಾರ ಮಾಡಲಿದೆ. ಇದರಿಂದ ಬರೋಬ್ಬರಿ 5 ಲಕ್ಷಕ್ಕೂ ಅಧಿಕ ಪ್ರಯಾಣಿಕರಿಗೆ ಅನುಕೂಲ ಆಗಲಿದೆ.

ಬೆಂಗಳೂರು ಮೆಟ್ರೋ ರೇಲ್‌ ಕಾರ್ಪೋರೇಷನ್‌ ಲಿ. (ಬಿಎಂಆರ್‌ಸಿಎಲ್‌ನ) ವತಿಯಿಂದ ಬೆಂಗಳೂರು ನಿವಾಸಿಗಳಿಗೆ ಗುಡ್‌ ನ್ಯೂಸ್‌ ಸಿಕ್ಕಿದೆ. ಬೈಯಪ್ಪನಹಳ್ಳಿ- ಕೆ.ಆರ್.ಪುರ ಹಾಗೂ ಕೆಂಗೇರಿ- ಚಲ್ಲಘಟ್ಟದ ನಡುವೆ ಮುಂದಿನ ತಿಂಗಳು ಮೆಟ್ರೋ ಸೇವೆ ಆರಂಭವಾಗಲಿದೆ. ಆಗಸ್ಟ್ ಕೊನೆ ವಾರದಲ್ಲಿ ನೇರಳೆ ಮಾರ್ಗದ ವಿಸ್ತರಿತವಾದ ಬೈಯಪ್ಪನಹಳ್ಳಿ- ಕೆ.ಆರ್.ಪುರ ನಡುವಿನ 2.5 ಕಿ.ಮೀ ಮಾರ್ಗದಲ್ಲಿ ಹೊಸದಾಗಿ ಮೆಟ್ರೋ ರೈಲು ಉದ್ಘಾಟನೆಗೊಳ್ಳಲಿದೆ. ಜೊತೆಗೆ, ಇದೇ ಮಾರ್ಗದ ದಕ್ಷಿಣ ತುದಿಯಾದ ವಿಸ್ತರಿತ ಮಾರ್ಗ ಕೆಂಗೇರಿ - ಚಲ್ಲಘಟ್ಟ ನಡುವಿನ 1.9 ಮೆಟ್ರೋ ಮಾರ್ಗವೂ ಕೂಡ ವಾಣಿಜ್ಯ ಸೇವೆಗೆ ಮುಕ್ತವಾಗಲಿದೆ.

Tap to resize

Latest Videos

undefined

Bengaluru : ಮೆಟ್ರೋ ಪ್ರಯಾಣಿಕರಿಗೆ ಶಾಕ್‌, ಒಂದು ತಿಂಗಳು ಸಂಚಾರ ಸ್ಥಗಿತ

ಒಂದು ತಿಂಗಳು ಬೆಳಗ್ಗಿನ ಸಂಚಾರ ಸ್ಥಗಿತ: ಈಗಾಗಲೇ ಬೈಯಪ್ಪನಹಳ್ಳಿ - ಕೆ.ಆರ್.ಪುರ ಮಾರ್ಗದಲ್ಲಿ ಕೊನೆಯ ಹಂತದ ಕಾಮಗಾರಿ ನಡೆಯುತ್ತಿದೆ. ಇದೇ ಕಾರಣಕ್ಕೆ ನೇರಳೆ ಮಾರ್ಗಗಳಾದ ಬೈಯಪ್ಪನಹಳ್ಳಿ- ಎಸ್.ವಿ ರಸ್ತೆ ಹಾಗೂ ಕೃಷ್ಣರಾಜಪುರ- ವೈಟ್ ಫೀಲ್ಡ್ ನಿಲ್ದಾಣಗಳ ನಡುವೆ ಬೆಳಿಗ್ಗೆ 5 ಗಂಟೆಯಿಂದ 7 ಗಂಟೆಯವರೆಗೆ ಮೆಟ್ರೋ ಸೇವೆ ಸ್ಥಗಿತಗೊಳಿಸಲಾಗಿದೆ. ಇದೇ ವೇಳೆ ಬಿಎಂಆರ್‌ಸಿಎಲ್ ಅಧಿಕಾರಿಗಳು ಮಾರ್ಗ ಪರಿಶೀಲನೆ ಮಾಡಿದ್ದಾರೆ. ಈಗಾಗಲೇ ಕಾಮಗಾರಿ ಪರಿಶೀಲನೆಗೆ ರೈಲ್ವೇ ಸುರಕ್ಷಿತ ಆಯುಕ್ತರಿಗೆ ಬಿಎಂಆರ್‌ಸಿಎಲ್ ಪತ್ರ ಬರೆದಿದೆ. 

ರೈಲ್ವೆ ಸುರಕ್ಷಿತ ಆಯುಕ್ತರಿಂದ ಪರಿಶೀಲನೆ: ಇನ್ನು ಆಗಸ್ಟ್ 2 ನೇ ವಾರದಲ್ಲಿ ರೈಲ್ವೇ ಸುರಕ್ಷಿತ ಆಯುಕ್ತರು ನಗರಕ್ಕೆ ಬರಲಿದ್ದು, ಆರು ದಿನಗಳಲ್ಲಿ ಪರಿಶೀಲನೆ ವರದಿ ಸಲ್ಲಿಸಲಿದ್ದಾರೆ. ರೈಲ್ವೇ ಸುರಕ್ಷಿತ ಆಯುಕ್ತರ ಅನುಮತಿ ಬಳಿಕ ಅದನ್ನು ಕೇಂದ್ರ ಸರ್ಕಾರದ ರೈಲ್ವೆ ಸಚಿವಾಲಯಕ್ಕೆ ಕಳುಹಿಸಲಾಗುತ್ತದೆ. ಅಲ್ಲಿ ಬೆಂಗಳೂರು ಮೆಟ್ರೋ ವಿಸ್ತರಿತ ಮಾರ್ಗದಲ್ಲಿ ರೈಲು ಸಂಚಾರಕ್ಕೆ ಅನುಮತಿ ನೀಡಿದ ಕೂಡಲೇ ಆಗಸ್ಟ್ ಕೊನೆಯ ವಾರದಲ್ಲಿ ಮೆಟ್ರೋ ಸೇವೆ ಆರಂಭ ಮಾಡುವ ಸಾಧ್ಯತೆಯಿದೆ ಎಂದು ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಆಂಜುಂ ಪರ್ವೇಜ್ ಮಾಹಿತಿ ನೀಡಿದ್ದಾರೆ. 

ಮಿಸ್ಸಿಂಗ್‌ ಲಿಂಕ್‌ ಮಾರ್ಗಗಳ ಸೇರ್ಪಡೆ:  'ಮಿಸ್ಸಿಂಗ್‌ ಲಿಂಕ್‌' ಎನ್ನಿಸಿಕೊಂಡಿರುವ ಬೈಯಪ್ಪನಹಳ್ಳಿ-ಕೆ.ಆರ್‌.ಪುರ ಮೆಟ್ರೋ ಜೊತೆಗೆ ಕೆಂಗೇರಿ-ಚಲ್ಲಘಟ್ಟ ನಡುವಿನ ಮೆಟ್ರೋ ಮಾರ್ಗವನ್ನೂ ಏಕಕಾಲಕ್ಕೆ ಪ್ರಯಾಣಿಕರಿಗೆ ಮುಕ್ತಗೊಳಿಸಲು ಬಿಎಂಆರ್‌ಸಿಎಲ್‌ ತೀರ್ಮಾನಿಸಿದೆ. ಆಗಸ್ಟ್‌ ಅಂತ್ಯ ಅಥವಾ ಸೆಪ್ಟೆಂಬರ್‌ ಎರಡನೇ ವಾರದೊಳಗೆ ಜನತೆ ಈ ಮಾರ್ಗಗಳಲ್ಲಿ ಸಂಚರಿಸಲು ಸಾಧ್ಯವಾಗುವ ನಿರೀಕ್ಷೆಯಿದೆ. ಬೈಯಪ್ಪನಹಳ್ಳಿ-ಕೆ.ಆರ್‌.ಪುರ ಮೆಟ್ರೋ 2.1 ಕಿ.ಮೀ. ಹಾಗೂ ಕೆಂಗೇರಿ-ಚಲ್ಲಘಟ್ಟನಡುವಿನ 1.9 ಕಿ.ಮೀ. ಮೆಟ್ರೋ ಕಾಮಗಾರಿ ಬಾಕಿ ಇದೆ. ಇವೆರಡೂ ಪೂರ್ಣಗೊಂಡಲ್ಲಿ ನೇರಳೆ ಮಾರ್ಗದ 43.5 ಕಿ.ಮೀ. ಲೈನ್‌ ಪೂರ್ಣವಾದಂತಾಗಲಿದೆ. 

Bengaluru: ನಾಗವಾರ- ಕಾಳೇನ ಅಗ್ರಹಾರ ಮೆಟ್ರೋ ಕಾಮಗಾರಿ ವಿವರ ಬಿಚ್ಚಿಟ್ಟ ಬಿಎಂಆರ್‌ಸಿಎಲ್

ಶೇ.98 ಕಾಮಗಾರಿಗಳು ಪೂರ್ಣ:  ಎರಡೂ ಮಾರ್ಗದ ಶೇ.98ರಷ್ಟು ಕಾಮಗಾರಿಗಳು ಪೂರ್ಣಗೊಂಡಿವೆ. ಹೀಗಾಗಿ ಎರಡೂ ಮಾರ್ಗವನ್ನು ಬೇರೆ ಬೇರೆ ಸಂದರ್ಭದಲ್ಲಿ ಜನತೆಗೆ ಮುಕ್ತಗೊಳಿಸುವ ಬದಲು ಒಂದೇ ಸಮಯಕ್ಕೆ ಪ್ರಯಾಣದ ಅವಕಾಶ ಮಾಡಿಕೊಡಲು ಬಿಎಂಆರ್‌ಸಿಎಲ್‌ ನಿರ್ಧರಿಸಿದೆ. ಸಿಗ್ನಲಿಂಗ್‌, ಟ್ರ್ಯಾಕಿಂಗ್‌ ಸೇರಿ ಇತರೆ ಕಾಮಗಾರಿಗಳು ಇವೆರಡೂ ಮಾರ್ಗದಲ್ಲಿ ಬಾಕಿ ಇವೆ. ಪೂರ್ಣ ಸ್ಟ್ರೆಚನ್ನು ಏಕಕಾಲಕ್ಕೆ ಪ್ರಯಾಣಕ್ಕೆ ಮುಕ್ತಗೊಳಿಸಬೇಕಾದ ಕಾರಣ ಸಂಪೂರ್ಣ ಮಾರ್ಗದ ಸಿಗ್ನಲಿಂಗ್‌ ವ್ಯವಸ್ಥೆಯನ್ನು ಮರು ರೂಪಿಸಿಕೊಳ್ಳಬೇಕಿದೆ. 

click me!