ದುಶ್ಚಟಗಳಲ್ಲಿ ಮದ್ಯಪಾನ ಮೊದಲು. ಅದನ್ನು ಬಿಟ್ಟರೆ ಎಲ್ಲಾ ದುಶ್ಚಟಗಳು ಬಿಡುವುದಕ್ಕೆ ಸೂಕ್ತವಾದ ಮಾರ್ಗವನ್ನು ಮನಸ್ಸೇ ತೋರಿಸುತ್ತದೆ ಎಂದು ತೆವೆಡೆಹಳ್ಳಿ ಗದ್ದುಗೆ ಮಠದ ಗೋಸಲ ಚನ್ನಬಸವೇಶ್ವರ ಸ್ವಾಮೀಜಿ ತಿಳಿಸಿದರು.
ಗುಬ್ಬಿ : ದುಶ್ಚಟಗಳಲ್ಲಿ ಮದ್ಯಪಾನ ಮೊದಲು. ಅದನ್ನು ಬಿಟ್ಟರೆ ಎಲ್ಲಾ ದುಶ್ಚಟಗಳು ಬಿಡುವುದಕ್ಕೆ ಸೂಕ್ತವಾದ ಮಾರ್ಗವನ್ನು ಮನಸ್ಸೇ ತೋರಿಸುತ್ತದೆ ಎಂದು ತೆವೆಡೆಹಳ್ಳಿ ಗದ್ದುಗೆ ಮಠದ ಗೋಸಲ ಚನ್ನಬಸವೇಶ್ವರ ಸ್ವಾಮೀಜಿ ತಿಳಿಸಿದರು.
ಗ್ರಾಮದ ಪಟೇಲ್ ಕಲ್ಯಾಣ ಮಂಟಪದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಜಿಲ್ಲಾ ಜನಜಾಗೃತಿ ವೇದಿಕೆ ಮಧ್ಯವರ್ಜನ ಶಿಬಿರ ವ್ಯವಸ್ಥಾಪನ ಸಮಿತಿ ಹಾಗೂ ಚೇಳೂರು ವತಿಯಿಂದ ಆಯೋಜಿಸಿದ್ದ 1685ನೇ ಮಧ್ಯವರ್ಜನ ಶಿಬಿರ ಸಮಾರೋಪ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.
ಎಲ್ಲೋ ಹುಟ್ಟಿ, ಎಲ್ಲೋ ಬೆಳೆದು ಒಂದೇ ತಾಯಿ ಮಕ್ಕಳನ್ನು ಒಂದೆಡೆ ಸೇರಿಸಿದ್ದೇವೆ ಎಂದರೆ ಅದು ದೈವ ಕೃಪೆಯಿಂದ ಮಾತ್ರ ಸಾಧ್ಯ. ಮಂಜುನಾಥ ಸ್ವಾಮಿ ಸನ್ನಿಧಿಯಲ್ಲಿ ಉತ್ತಮ ಜೀವನ ಕಟ್ಟಿಕೊಳ್ಳಲು ಅವಕಾಶವಾಗಿದೆ. ಜಾತಿ ಯಾವುದಾದರು ಜ್ಯೋತಿ ಒಂದೇ ಎಂದು ಪ್ರತಿ ಶಿಬಿರಾರ್ಥಿಗಳ ಕುಟುಂಬದಲ್ಲಿ ದೀಪ ಹಚ್ಚುವ ಮೂಲಕ ಬೆಳಕನ್ನು ಜೀವನದಲ್ಲಿ ಕಂಡು ಕೊಂಡರೆ ಪೂಜ್ಯ ಕಾವಂದರಿಗೆ ನೀವು ನೀಡುವ ಗೌರವವಾಗಿರುತ್ತದೆ. ಸಂಸ್ಕಾರವಿಲ್ಲದ ವ್ಯಕ್ತಿ ಶ್ರೇಷ್ಠನಾಗಲು ಎಂದಿಗೂ ಸಾಧ್ಯವಿಲ್ಲ. ತಂದೆ ತಾಯಿ ಬೆಳೆಯುವ ಮಕ್ಕಳಿಗೆ ಸಂಸ್ಕಾರವನ್ನು ನೀಡಿದಾಗ ಮಾತ್ರ ಅವರು ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ಬಾಳುತ್ತಾರೆ, ಬದುಕುತ್ತಾರೆ ಎಂದು ತಿಳಿಸಿದರು.
ಜಿಲ್ಲಾ ನಿರ್ದೇಶಕಿ ದಯಾಶೀಲ ಮಾತನಾಡಿ, ನಮ್ಮ ಸಂಸ್ಥೆಯಿಂದ ಹಲವು ಸಾಮಾಜಿಕ ಕೆಲಸ ಕಾರ್ಯಗಳು ನಿರಂತರವಾಗಿ ನಡೆಯುತ್ತಲೇ ಇವೆ. ಅದರ ಜೊತೆಯಲ್ಲಿ ಮನೆಯಲ್ಲಿ ಆವರಿಸಿರುವ ಕತ್ತಲನ್ನು ಓಡಿಸಿ ಆ ಮನೆಗೆ ಬೆಳಕು ನೀಡುವ ಕೆಲಸವನ್ನು ನಾವು ಮಾಡಿದ್ದು, ಮತ್ತೆ ವ್ಯಸನಿಗಳಾಗಿ ಇಡೀ ಕುಟುಂಬವೇ ಬೀದಿಗೆ ಬೀಳುತ್ತಿದ್ದವು. ಇಂತಹ ಸಂದರ್ಭದಲ್ಲಿ ಅವರಿಗೆ ಜಾಗೃತಿ ಮೂಡಿಸಿ ಅವರ ಬಾಳಲಿ ಬೆಳಕು ಮೂಡಿಸಲು ಮುಂದಾಗಿದ್ದೇವೆ. ಇದಕ್ಕೆ ಪ್ರತಿಯೊಬ್ಬರ ಸಹಕಾರ ಸಹಾಯವಿದ್ದು, ಮುಂದಿನ ದಿನದಲ್ಲಿ ಇಲ್ಲಿ ಬದಲಾವಣೆಯಾಗಿರುವವರು ಇನ್ನಿತರರಿಗೆ ಮಾದರಿಯಾಗುತ್ತಾರೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಧ್ಯವರ್ಜನ ಶಿಬಿರದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಸಿ.ಕೆ. ಲೋಕೇಶ್, ಗೌರವಾಧ್ಯಕ್ಷ ಸಿ. ಎನ್. ಬಸವರಾಜು, ಪ್ರಾದೇಶಿಕ ನಿರ್ದೇಶಕ ಜನಜಾಗೃತಿ ವೇದಿಕೆಯ ತಿಮ್ಮಯ್ಯನಾಯಕ್, ರಾಮಸ್ವಾಮಿ, ತಾಲೂಕು ಯೋಜನಾಧಿಕಾರಿ ರಾಜೇಶ್, ಯೋಜನೆಯ ಮೇಲ್ವಿಚಾರಕರು, ಸೇವಾ ಪ್ರತಿನಿಧಿಗಳು, ಗ್ರಾಪಂ ಸದಸ್ಯರು, ಮುಖಂಡರು, ಗ್ರಾಮಸ್ಥರು ಹಾಗೂ ಇತರರು ಹಾಜರಿದ್ದರು.
ಈ ಶಿಬಿರದಲ್ಲಿ 58 ಶಿಬಿರಾರ್ಥಿಗಳು ಹಾಗೂ ಅವರ ಕುಟುಂಬದವರು ಭಾಗವಹಿಸಿದ್ದರು.