Bengaluru: ಕಾನೂನು ಸುವ್ಯವಸ್ಥೆಯಲ್ಲಿ ಬೆಂಗಳೂರು ಬೆಸ್ಟ್‌: ಸಿಎಂ ಬೊಮ್ಮಾಯಿ

By Kannadaprabha News  |  First Published Dec 4, 2021, 6:16 AM IST

*   ಒಂದು ಕಾಲದಲ್ಲಿ ನಗರದಲ್ಲಿ ದಿನ ಬೆಳಗಾದರೆ ಕೊಲೆ ಆದರೆ ಇಂದು ಶಾಂತ
*   ರಾಜಕೀಯ ಇಚ್ಛಾಶಕ್ತಿಯಿಂದ ಇದೆಲ್ಲ ಸಾಧ್ಯ: ಸಿಎಂ
*   ಗೋವಿಂದರಾಜ ನಗರ ಪೊಲೀಸ್‌ ಠಾಣೆ ಉದ್ಘಾಟಿಸಿದ ಮುಖ್ಯಮಂತ್ರಿ
 


ಬೆಂಗಳೂರು(ಡಿ.04):  ಆಳುವ ಸರ್ಕಾರದ ನಾಯಕತ್ವದಲ್ಲಿ ರಾಜಕೀಯ ಇಚ್ಛಾಶಕ್ತಿ ಇದ್ದಾಗ ಮಾತ್ರ ಪೊಲೀಸರಿಗೆ ಮುಕ್ತವಾಗಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಸಾಧ್ಯವಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಅಭಿಪ್ರಾಯಪಟ್ಟಿದ್ದಾರೆ.

ನಗರ ಪೊಲೀಸ್‌ ಇಲಾಖೆ(Police Department) ಹಾಗೂ ಬಿಬಿಎಂಪಿ(BBMP) ವತಿಯಿಂದ ಶುಕ್ರವಾರ ಆಯೋಜಿಸಿದ್ದ ಸರಸ್ವತಿ ನಗರದಲ್ಲಿ ನೂತನವಾಗಿ ನಿರ್ಮಿಸಿರುವ ಗೋವಿಂದರಾಜ ನಗರ ಪೊಲೀಸ್‌ ಠಾಣೆ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಆಳುವವರಿಗೆ ರಾಜಕೀಯ ಇಚ್ಛಾಶಕ್ತಿ ಇರಬೇಕು. ರಾಜಕಾರಣದಲ್ಲಿ(Politics) ಯಾವುದೇ ರೀತಿಯ ಹೊಂದಾಣಿಕೆ ಇಲ್ಲದೆ ಕಾನೂನು ಮತ್ತು ಸುವ್ಯವಸ್ಥೆಗೆ ತಕ್ಕಂತೆ ನಡೆದುಕೊಳ್ಳುವ ನಾಯಕತ್ವ ಇದ್ದಾಗ ಪೊಲೀಸರು ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಾರೆ ಎಂದರು.

Tap to resize

Latest Videos

undefined

ನಾನು ಗೃಹ ಸಚಿವನಾಗಿದ್ದಾಗ ಮಾದಕ ವಸ್ತು ಮಾಫಿಯಾ(Drugs Mafia) ವಿರುದ್ಧ ಸಮರ ಸಾರುವಂತೆ ಪೊಲೀಸರಿಗೆ ಸೂಚಿಸಿದೆ. ಆಗ ಹಿಂದೆಂದೂ ಕೇಳರಿಯದ ರೀತಿಯಲ್ಲಿ ಮಾದಕ ವಸ್ತು ದಂಧೆ ವಿರುದ್ಧ ಪೊಲೀಸರ ದಾಳಿ ನಡೆಯಿತು. ಎಷ್ಟರ ಮಟ್ಟಿಗೆ ಅಂದರೆ ಡ್ರಗ್ಸ್‌ ಸಂಬಂಧ ಎರಡು ವರ್ಷದಲ್ಲಿ ಕರ್ನಾಟಕದಲ್ಲಿ(Karnataka) ದಾಖಲಾದ ಪ್ರಕರಣಗಳ ಸಂಖ್ಯೆಯೂ ದೇಶದ ಇತರೆ ರಾಜ್ಯಗಳ ಒಟ್ಟು ಪ್ರಕರಣಗಳಿಗಿಂತ ಹೆಚ್ಚಾಗಿತ್ತು. ಮೊದಲ ಬಾರಿಗೆ ಒಂದೇ ದಿನ 50 ಕೋಟಿ ಮೌಲ್ಯದ ಡ್ರಗ್ಸ್‌ ಅನ್ನು ಬೆಂಕಿ ಇಟ್ಟು ಸುಡಲಾಯಿತು ಎಂದು ಹೇಳಿದರು.

Omicron ಆತಂಕದ ನಡುವೆ ದ. ಆಫ್ರಿಕಾದಿಂದ ಬೆಂಗಳೂರಿಗೆ ಬಂದಿದ್ದ 10 ಪ್ರಯಾಣಿಕರು ನಾಪತ್ತೆ!

ಅಂದು ರೌಡಿ ರಾಜ್ಯ ಈಗ ಶಾಂತ ರಾಜ್ಯ

ಒಂದು ಕಾಲದಲ್ಲಿ ಬೆಂಗಳೂರಿನ ಕಾನೂನು ಸುವ್ಯವಸ್ಥೆ(Law and Order) ಹೇಗಿತ್ತು ಎಂಬುದನ್ನು ನೆನಪು ಮಾಡಿಕೊಳ್ಳಬೇಕು. ದಿನ ಬೆಳಗಾದರೆ ಬೀದಿಗಳಲ್ಲಿ ಕೊಲೆಗಳಾಗುತ್ತಿದ್ದವು. ಆದರೆ ಇವತ್ತು ಅಂಥ ಪರಿಸ್ಥಿತಿ ಇಲ್ಲ. ಕೆಲ ಸಣ್ಣಪುಟ್ಟಘಟನೆಗಳ ಹೊರತು ನಗರ ಶಾಂತವಾಗಿದೆ. ಅಂದು ರೌಡಿ ರಾಜ್ಯ ಇತ್ತು. ಈಗ ಕಾನೂನು ಮತ್ತು ಸುವ್ಯವಸ್ಥೆಯ ರಾಜ್ಯ ಇದೆ. ರಾಷ್ಟ್ರ ಮಟ್ಟದ ಪ್ರತಿಷ್ಠಿತ ನಿಯತಕಾಲಿಕವೊಂದು ಕರ್ನಾಟಕವು ದೇಶದಲ್ಲೇ ಕಾನೂನು ಮತ್ತು ಸುವ್ಯವಸ್ಥೆ ನಿರ್ವಹಣೆಯಲ್ಲಿ ಮೊದಲ ಸ್ಥಾನದಲ್ಲಿದೆ ಎಂದು ಹೇಳಿದೆ ಎಂದು ಮುಖ್ಯಮಂತ್ರಿಗಳು ಶ್ಲಾಘಿಸಿದರು.

ಕಾರ್ಯಕ್ರಮದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ, ಕಂದಾಯ ಸಚಿವ ಆರ್‌.ಅಶೋಕ್‌, ಸಂಸದ ತೇಜಸ್ವಿ ಸೂರ್ಯ, ಪೊಲೀಸ್‌ ಮಹಾನಿರ್ದೇಶಕ ಪ್ರವೀಣ್‌ ಸೂದ್‌ ಹಾಗೂ ನಗರ ಪೊಲೀಸ್‌ ಆಯುಕ್ತ ಕಮಲ್‌ ಪಂತ್‌ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

ಗೋವಿಂದರಾಜ ನಗರ ಠಾಣೆ ಮಂಜೂರು ನನ್ನ ಕೊನೆ ಆದೇಶ

ನಾನು ಗೃಹ ಸಚಿವನಾಗಿ ಸಹಿ ಮಾಡಿದ ಕೊನೆಯ ಆದೇಶವೇ ಗೋವಿಂದರಾಜ ನಗರ ಠಾಣೆ ಮಂಜೂರಾತಿ ಆಗಿತ್ತು. ಅತ್ಯುನ್ನತ ಮಟ್ಟದಲ್ಲಿ ಪೊಲೀಸ್‌ ಠಾಣೆಯನ್ನು ಸೋಮಣ್ಣ ನವರು ಬಹಳ ಮುತುವರ್ಜಿವಹಿಸಿ ನಿರ್ಮಿಸಿದ್ದಾರೆ. ಹೊಸ ಗೃಹ ಸಚಿವರನ್ನು ಕರೆದುಕೊಂಡು ಹೋಗಿ ಠಾಣೆ ಉದ್ಘಾಟಿಸುವಂತೆ ಹೇಳಿದ್ದೆ. ಆದರೆ ಕೊನೆಗೆ ನಾನೇ ಸಂಪುಟದ ಸಹೋದ್ಯೋಗಿಗಳ ಜತೆ ಬಂದು ಠಾಣೆಯನ್ನು ಉದ್ಘಾಟಿಸಿದ್ದು ಸಂತೋಷವಾಗಿದೆ ಎಂದು ಮುಖ್ಯಮಂತ್ರಿಗಳು ನುಡಿದರು.

ನಗರ ಉಸ್ತುವಾರಿ ಉಸಾಬರಿ ಬೇಡ!

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾತನಾಡುವ ವೇಳೆ ಸಚಿವ ಸೋಮಣ್ಣ(V Somanna) ಅವರಿಗೆ ಬೆಂಗಳೂರು ಉಸ್ತುವಾರಿ ನೀಡುವಂತೆ ಸಚಿವರ ಬೆಂಬಲಿಗರು ಕೂಗಿದರು. ಅರೆಕ್ಷಣ ಭಾಷಣ ನಿಲ್ಲಿಸಿದ ಮುಖ್ಯಮಂತ್ರಿ ಬೊಮ್ಮಾಯಿ, ನನಗೆ ಸಂಕಷ್ಟತಂದಿಡುತ್ತೀರಲ್ಲಪ್ಪ. ಈ ವೇದಿಕೆಯ ಮೇಲಿರುವ ಎಲ್ಲರೂ ಬೆಂಗಳೂರು ಉಸ್ತುವಾರಿಗಳೇ. ಆದರೆ ಅವರಿಗೆ ಉಸ್ತುವಾರಿ ಉಸಾಬರಿ ಮಾತ್ರ ಬೇಡ ಎಂದು ಹಾಸ್ಯ ಚಟಾಕಿ ಹಾರಿಸಿದರು.

Murder Sketch: ಬಿಜೆಪಿ ಶಾಸಕ ವಿಶ್ವನಾಥ್ ಹತ್ಯೆ ಸ್ಕೆಚ್ ಪ್ರಕರಣಕ್ಕೆ ಟ್ವಿಸ್ಟ್

ಮಗು ಕೊಂದ ಘಟನೆ ಹೇಗೆ ಮರೆಯಲಿ: ವಿ.ಸೋಮಣ್ಣ

ಸರಸ್ವತಿ ನಗರದಲ್ಲಿ ಮಧ್ಯಮ ವರ್ಗ, ಕೂಲಿ ಕಾರ್ಮಿಕರು(Labors) ಹಾಗೂ ಬಡ ಜನರು ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿದ್ದಾರೆ. ಈ ಪ್ರದೇಶದಲ್ಲಿ ಜನರು ನಿರ್ಭೀತಿಯಿಂದ ಜೀವನ ಸಾಗಿಸುವ ವಾತಾವರಣ ಕಟ್ಟಿಕೊಂಡಬೇಕಿತ್ತು. ವಿಜಯನಗರ ಠಾಣೆಯು ಐದಾರು ಕಿ.ಮೀ. ವಿಶಾಲ ವ್ಯಾಪ್ತಿ ಇದ್ದ ಕಾರಣ ಗಾಂಜಾ ದಂಧೆ ಸೇರಿದಂತೆ ಕಾನೂನು ಮತ್ತು ಸುವ್ಯವಸ್ಥೆ ನಿಯಂತ್ರಣಕ್ಕೆ ತೊಂದರೆಯಾಗುತ್ತಿತ್ತು. ಕೊನೆಗೂ ಸರಸ್ವತಿ ನಗರದ ಜನರ ಬಹುದಿನದ ಬೇಡಿಕೆ ಈಡೇರಿಸಿದ್ದೇನೆ ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದರು.

1990ರ ದಶಕದಲ್ಲಿ ಒಂದು ದಿನ ಸರಸ್ವತಿ ನಗರದಲ್ಲಿ ಸಂಜೆ ವೇಳೆ ಮಗು ಕುತ್ತಿಗೆಯಲ್ಲಿ ಚಿನ್ನದ ಸರ ಕದಿಯಲು ಯತ್ನಿಸಿದ ದುಷ್ಕರ್ಮಿ, ಆ ಮಗುವನ್ನೇ ಹತ್ಯೆಗೈದು ಹೋಗಿದ್ದ. ಇವತ್ತಿಗೂ ಆ ಮಗುವಿನ ಕೊಲೆ ಕೃತ್ಯವನ್ನು ಮರೆಯಲು ಸಾಧ್ಯವಿಲ್ಲ. ಈ ಘಟನೆ ಬಳಿಕ ಸರಸ್ವತಿ ನಗರದಲ್ಲಿ ಪೊಲೀಸ್‌ ಹೊರ ಠಾಣೆಯನ್ನು ಆರಂಭಿಸಿದ್ದೆ. ಆದರೆ ಹತ್ತು ವರ್ಷಗಳ ಹಿಂದೆ ನಾನು ಮಾಡಿದ ತಪ್ಪಿನ ಪರಿಣಾಮ ಬೇರೆಯವರು ಗೆದ್ದರು. ಅವರಿಂದ ಹೊರ ಠಾಣೆಗೂ ಬೀಗ ಬಿತ್ತು. ಈಗ ಹೊಸ ಠಾಣೆ ಸ್ಥಾಪಿಸಲಾಗಿದೆ ಎಂದು ಸಚಿವರು ತಿಳಿಸಿದರು.
 

click me!