
ಬೆಂಗಳೂರು (ಜ.30): ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿನ ಮಹದೇವಪುರದ 60 ಆಸ್ತಿಗಳ ಮಾಲೀಕರು ದೀರ್ಘಕಾಲದಿಂದ ಆಸ್ತಿ ತೆರಿಗೆ ಪಾವತಿಸದೇ ಬಾಕಿ ಉಳಿಸಿಕೊಂಡಿದ್ದಾರೆ. ಆಸ್ತಿ ತೆರಿಗೆ ಪಾವತಿಗೆ ಡಿಮ್ಯಾಂಡ್ ನೋಟೀಸ್ ಹಾಗೂ ಆಸ್ತಿ ಮುಟ್ಟುಗೋಲು ನೋಟೀಸ್ ಕೊಟ್ಟರೂ ಉತ್ತರಿಸದ ಹಿನ್ನೆಲೆಯಲ್ಲಿ ಪಾಲಿಕೆಯಿಂದ ಈ ಸ್ಥಿರ ಆಸ್ತಿಗಳನ್ನು ಹರಾಜಿನ ಮೂಲಕ ಮಾರಾಟ ಮಾಡಲು ಬಿಬಿಎಂಪಿ ಮುಂದಾಗಿದೆ.
ಈ ಕುರಿತು ಮಾತನಾಡಿದ ವಲಯ ಜಂಟಿ ಆಯುಕ್ತರಾದ ದಾಕ್ಷಾಯಿಣಿ ಅವರು, ಮಹದೇವಪುರ ವಲಯದಲ್ಲಿ 60 ಆಸ್ತಿಗಳಿಂದ ದೀರ್ಘಕಾಲದ ಆಸ್ತಿ ತೆರಿಗೆ ಬಾಕಿ ವಸೂಲಿಗಾಗಿ ಸ್ಥಿರ ಆಸ್ತಿಗಳ ಹರಾಜು ಮಾರಾಟ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಬಿಬಿಎಂಪಿ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಸಂಗ್ರಹಿಸುವ ವಿಚಾರವಾಗಿ ಕಾರಣ ಕೇಳಿ ನೋಟೀಸ್, ಬೇಡಿಕೆ ನೋಟೀಸ್, ಆಸ್ತಿಗಳ ಮುಟ್ಟೊಗೋಲು, ವಸತಿಯೇತರ ಆಸ್ತಿಗಳಿಗೆ ಬೀಗಮುದ್ರೆ ಸೇರಿದಂತೆ ಇನ್ನಿತರೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಆದರೂ ಕೂಡಾ ಸಾಕಷ್ಟು ಆಸ್ತಿ ಮಾಲೀಕರು ದೀರ್ಘಕಾಲದಿಂದ ಪಾಲಿಕೆಗೆ ಆಸ್ತಿ ತೆರಿಗೆ ಪಾವತಿಸುತ್ತಿಲ್ಲ. ಈ ಸಂಬಂಧ ಆಸ್ತಿ ತೆರಿಗೆ ಬಾಕಿ ವಸೂಲಿ ಮಾಡುವ ಸಲುವಾಗಿ ಆಸ್ತಿ ತೆರಿಗೆ ಪಾವತಿಸದ ಸುಸ್ತಿದಾರರ ಸ್ಥಿರ ಆಸ್ತಿಗಳನ್ನು ತುರ್ತು ಮಾರಾಟ ಮಾಡಲು ಹರಾಜು ಪ್ರಕ್ರಿಯೆಯನ್ನು ಆರಂಭಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: ಬೆಂಗಳೂರು ನಿವಾಸಿಗಳೇ ನಿಮ್ಮ ಆಸ್ತಿಯ ಅಂತಿಮ 'ಬಿಬಿಎಂಪಿ ಇ-ಖಾತಾ' ಪಡೆಯಲು ಸೂಚನೆ!
ಇನ್ನು ಪಾಲಿಕೆಯಿಂದ ಸುಸ್ತಿದಾರರ ಆಸ್ತಿ ಹರಾಜು ಪ್ರಕ್ರಿಯೆಯನ್ನು ಬಿಬಿಎಂಪಿ ಕಾಯ್ದೆ 2020ರ ಸೆಕ್ಷನ್ 156 ಉಪಪ್ರಕರಣ 5ರ ಅಡಿಯಲ್ಲಿ ಮಾಡಲಾಗುತ್ತದೆ. ಹರಾಜಿನಲ್ಲಿ ಸ್ವೀಕರಿಸಿದ ಯಾವುದೇ ಹೆಚ್ಚುವರಿ ಹಣವನ್ನು ಪಾಲಿಕೆಗೆ ಸಂದಾಯವಾಗಬೇಕಿರುವ ಪೂರ್ಣ ಬಾಕಿ ವಸೂಲಿ ಮಾಡಿದ ನಂತರ ಮಾಲೀಕರ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುವುದು. ಅದರಂತೆ, ವಿಶೇಷ ಆಯುಕ್ತರಾದ ಮುನೀಶ್ ಮೌದ್ಗಿಲ್, ವಲಯ ಆಯುಕ್ತರಾದ ರಮೇಶ್ ರವರ ನಿರ್ದೇಶನದಂತೆ ಮಹದೇವಪುರ ವಲಯ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಉಪ ವಿಭಾಗಗಳಲ್ಲಿ ಬರುವ ಆಸ್ತಿ ಸ್ವತ್ತುಗಳಿಗೆ ಕಂದಾಯ ಪರಿಷ್ಕರಣೆ/ಬಾಕಿ ಉಳಿಸಿಕೊಂಡಿರುವ ಅಥವಾ ಇದುವರೆಗೂ ಆಸ್ತಿ ತೆರಿಗೆಯನ್ನು ಪಾವತಿಸದಿರುವ ಸ್ವತ್ತುಗಳನ್ನು ಗುರುತಿಸಿ ನಿಯಮಾನುಸಾರವಾಗಿ ಪರಿಶೀಲಿಸಿ ಹರಾಜು ಪ್ರಕ್ರಿಯೆ ನಡೆಸಲಾಗುತ್ತಿದೆ.
60 ಸ್ವತ್ತುಗಳ ಹರಾಜು: ಮಹದೇವಪುರ ವಲಯದಲ್ಲಿ ಬರುವ ಹೊರಮಾವು, ಹೆಚ್.ಎ.ಎಲ್, ಕೆ.ಆರ್ ಪುರಂ, ಮಾರತಹಳ್ಳಿ, ಹೂಡಿ ಹಾಗೂ ವೈಟ್ ಫೀಲ್ಡ್ ಉಪವಿಭಾಗ ಸೇರಿದಂತೆ ಪ್ರತಿ ಉಪ ವಿಭಾಗದಲ್ಲಿಯೂ ದೀರ್ಘಕಾಲದ ಆಸ್ತಿ ತೆರಿಗೆ ಬಾಕಿ ವಸೂಲಿಗಾಗಿ ತಲಾ 10 ಆಸ್ತಿಗಳಂತೆ ಒಟ್ಟು 60 ಆಸ್ತಿಗಳನ್ನು 13ನೇ ಫೆಬ್ರವರಿ 2025 ರಂದು ಹರಾಜು ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.