
ಬೆಂಗಳೂರು (ಅ.13) ಸಾರ್ವಜನಿಕ ಸ್ಥಳಗಳು ಹಾಗೂ ರಸ್ತೆಬದಿಗಳಲ್ಲಿ ವೈದ್ಯಕೀಯ ತ್ಯಾಜ್ಯವನ್ನು (Medical Waste) ಅಕ್ರಮವಾಗಿ ಎಸೆಯುವ ಆಸ್ಪತ್ರೆ ಹಾಗೂ ಕ್ಲಿನಿಕ್‌ಗಳ ವಿರುದ್ಧ ಬೆಂಗಳೂರು ಮಹಾನಗರ ಪಾಲಿಕೆ ಕಠಿಣ ಕ್ರಮ ಕೈಗೊಂಡಿದೆ. ಮಂಗಮ್ಮನಪಾಳ್ಯ ಮುಖ್ಯರಸ್ತೆಯಲ್ಲಿ ವೈದ್ಯಕೀಯ ತ್ಯಾಜ್ಯವನ್ನು ರಸ್ತೆ ಬದಿ ಸುರಿದಿದ್ದ 'ಅಲ್-ಶಿಫಾ ಪಾಲಿಕ್ಲಿನಿಕ್'ಗೆ (Al-Shifa Polyclinic) 15,000 ರೂ. ದಂಡ ವಿಧಿಸಲಾಗಿದೆ ಎಂದು ಆಯುಕ್ತರಾದ ಕೆ.ಎನ್. ರಮೇಶ್ ತಿಳಿಸಿದ್ದಾರೆ.
ಬೆಂಗಳೂರು ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯ ಬಿಟಿಎಂ ಲೇಔಟ್ ವಿಭಾಗದ ಈಜಿಪುರ ವ್ಯಾಪ್ತಿಯ ಶ್ರೀನಿವಾಗಿಲು ಹಾಗೂ ಮಂಗಮ್ಮನಪಾಳ್ಯ ಮುಖ್ಯರಸ್ತೆಯಲ್ಲಿ ಕಸ ವಿಲೇವಾರಿ ಕುರಿತಂತೆ ಪಾಲಿಕೆಯ ಕಿರಿಯ ಆರೋಗ್ಯ ಪರಿವೀಕ್ಷಕರ ತಂಡವು ಬೆಳಗ್ಗೆ ತಪಾಸಣೆ ನಡೆಸಿತು.
ಈ ವೇಳೆ ರಸ್ತೆಬದಿಯ ಸಾರ್ವಜನಿಕ ಸ್ಥಳದಲ್ಲಿ ಔಷಧಿಗಳ ಪೊಟ್ಟಣಗಳು, ವೈದ್ಯಕೀಯ ತ್ಯಾಜ್ಯ ಹಾಗೂ ಮಿಶ್ರ ಕಸವನ್ನು ಅಕ್ರಮವಾಗಿ ಎಸೆದಿರುವುದು ಕಂಡುಬಂದಿದೆ. ಸ್ಥಳದಲ್ಲಿದ್ದ ಪ್ರಿಸ್ಕ್ರಿಪ್ಷನ್ ಚೀಟಿಗಳು ಹಾಗೂ ದಾಖಲೆಗಳನ್ನು ಪರಿಶೀಲಿಸಿದಾಗ, ಈ ಕಸವು ಮಂಗಮ್ಮನಪಾಳ್ಯ ಮುಖ್ಯರಸ್ತೆಯ 'ಅಲ್-ಶಿಫಾ ಪಾಲಿಕ್ಲಿನಿಕ್'ಗೆ ಸೇರಿದ್ದು ಎಂಬುದು ಖಚಿತವಾಯಿತು.
ಘನತ್ಯಾಜ್ಯ ನಿರ್ವಹಣಾ ನಿಯಮಗಳನ್ನು ಉಲ್ಲಂಘಿಸಿ ಸಾರ್ವಜನಿಕ ಸ್ಥಳದಲ್ಲಿ ಅನಧಿಕೃತವಾಗಿ ತ್ಯಾಜ್ಯ ವಿಲೇವಾರಿ ಮಾಡಿದ್ದಕ್ಕಾಗಿ ಹಾಗೂ ಬೃಹತ್ ತ್ಯಾಜ್ಯ ಉತ್ಪಾದಕರ ನಿಯಮ ಪಾಲಿಸದ ಹಿನ್ನೆಲೆಯಲ್ಲಿ ಅಲ್-ಶಿಫಾ ಪಾಲಿಕ್ಲಿನಿಕ್‌ಗೆ ಸ್ಥಳದಲ್ಲೇ 15,000 ರೂ. ದಂಡ ವಿಧಿಸಿ ವಸೂಲಿ ಮಾಡಲಾಗಿದೆ. ಅಲ್ಲದೆ, ಕ್ಲಿನಿಕ್‌ನ ವೈದ್ಯರು ಮತ್ತು ಸಿಬ್ಬಂದಿಗೆ ತ್ಯಾಜ್ಯ ನಿರ್ವಹಣೆ ಕುರಿತು ಎಚ್ಚರಿಕೆ ಹಾಗೂ ಅರಿವು ಮೂಡಿಸಲಾಯಿತು.
ಸಾರ್ವಜನಿಕರ ಆರೋಗ್ಯಕ್ಕೆ ಹಾನಿಯುಂಟುಮಾಡುವ ರೀತಿಯಲ್ಲಿ ರಸ್ತೆಬದಿಗಳಲ್ಲಿ ವೈದ್ಯಕೀಯ ಹಾಗೂ ಘನತ್ಯಾಜ್ಯವನ್ನು ಎಸೆಯಬಾರದು. ಕಡ್ಡಾಯವಾಗಿ ನಿಯಮಾನುಸಾರ ಅಧಿಕೃತ ಏಜೆನ್ಸಿಗಳ ಮೂಲಕವೇ ವೈಜ್ಞಾನಿಕವಾಗಿ ವಿಲೇವಾರಿ ಮಾಡಬೇಕು. ಆಸ್ಪತ್ರೆಗಳು, ಕ್ಲಿನಿಕ್‌ಗಳು ಮತ್ತು ಲ್ಯಾಬ್‌ಗಳು ಜೈವಿಕ ವೈದ್ಯಕೀಯ ತ್ಯಾಜ್ಯ ನಿಯಮಗಳನ್ನು ಪಾಲಿಸಬೇಕು. ನಿಯಮ ಉಲ್ಲಂಘಿಸುವವರ ವಿರುದ್ಧ ಮುಲಾಜಿಲ್ಲದೆ ಭಾರೀ ದಂಡ ಹಾಗೂ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಆಯುಕ್ತರಾದ ಕೆ.ಎನ್. ರಮೇಶ್ ಎಚ್ಚರಿಕೆ ನೀಡಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಬಿಟಿಎಂ ಲೇಔಟ್ ಉಪವಿಭಾಗದ ಕಿರಿಯ ಆರೋಗ್ಯ ಪರಿವೀಕ್ಷಕರು ಮತ್ತು ಸಿಬ್ಬಂದಿ ಪಾಲ್ಗೊಂಡಿದ್ದರು.