
ಬೆಂಗಳೂರು (ಫೆ.19): ಮನೆಯ ಮುಂದೆ ಆಟವಾಡುತ್ತಿದ್ದ ಪುಟ್ಟ ಮಗುವಿನ ಮೇಲೆ ಜೆಬಿಜಿ ಹರಿದು ದಾರಿಣವಾಗಿ ಸಾವನ್ನಪ್ಪಿದ ದುರ್ಘಟನೆ ನಡೆದಿದೆ. ಜನವಸತಿ ಪ್ರದೇಶದಲ್ಲಿ ಜೆಸಿಬಿ ಚಾಲಕ ಅತಿವೇಗವಾಗಿ ನಿರ್ಲಕ್ಷ್ಯದಿಂದ ಜೆಸಿಬಿ ಚಲಾಯಿಸಿಕೊಂಡು ಬಂದಿದ್ದೇ ಈ ದುರ್ಘಟನೆಗೆ ಕಾರಣವೆಂದು ಸ್ಥಳೀಯರು ಆಕ್ರೋಶ ಹೊರ ಹಾಕಿದ್ದಾರೆ.
ಬೆಂಗಳೂರಿನ ಕಾಡುಗೋಡಿ ಬಳಿಯ ಸಿಟಿ ಲೇಔಟ್ ನಲ್ಲಿ ಘಟನೆ ನಡೆದಿದೆ. ಸಿಟಿ ಲೇಔಟ್‌ನಲ್ಲಿ ಮನೆ ಮುಂದೆ ಆಟವಾಡುತ್ತಿದ್ದ 2 ವರ್ಷದ ಮಗುವಿನ ಮೇಲೆ ಜೆಸಿಬಿ ಹರಿದಿದೆ. ಥವನ್ ರೆಡ್ಡಿ (2)ಮೃತಪಟ್ಟ ಮಗು. ನಿನ್ನೆ ಸಂಜೆ 6.30 ಕ್ಕೆ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಜೆಸಿಬಿ ಚಾಲಕ ವಾಹನವನ್ನು ಅತೀವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿದ್ದೇ ಇದಕ್ಕೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ. ಇನ್ನು ಜೆಸಿಬಿ ಬರುವುದನ್ನು ಗಮನಿಸದೇ ದಿನನಿತ್ಯ ಆಟವಾಡುತ್ತಿದ್ದ ರೀತಿಯಲ್ಲಿಯೇ ಮನೆ ಮುಂದೆ ಮಗು ಆಟವಾಡುತ್ತಿತ್ತು.
ಆಗ ಥನವ್ ರೆಡ್ಡಿ ತಲೆಯ ಮೇಲೆ ಜೆ.ಸಿ.ಬಿ ಹರಿದಿದೆ. ಕೂಡಲೇ ಗಾಯಗೊಂಡ ಮಗುವನ್ನು ವೈದೇಹಿ ಆಸ್ಪತ್ರೆಗೆ ಚಿಕಿತ್ಸೆಗೆ ರವಾನಿಸಲಾಗಿದೆ. ಆದರೆ, ಪರೀಕ್ಷೆ ನಡೆಸಿದ ವೈದ್ಯರು ಮಾರ್ಗ ಮಧ್ಯದಲ್ಲಿ ಮಗು ಮೃತ ಪಟ್ಟಿರುವುದಾಗಿ ತಿಳಿಸಿದ್ದಾರೆ. ವೈದೇಹಿ ಆಸ್ಪತ್ರೆಯಲ್ಲಿ ಮಗುವಿನ ಮರಣೋತ್ತರ ಪರೀಕ್ಷೆ ಮಾಡಲಾಗಿದೆ. ಮಹಾದೇವಪುರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ.