
ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು (ಫೆ.18): ಕೊಡಗು ಎಂದ ಕೂಡಲೇ ವಿಶಿಷ್ಟ ಸಂಸ್ಕೃತಿ ಆಚಾರ, ವಿಚಾರಗಳಿಗೆ ಫೇಮಸ್. ಹಾಗೆ ಇಲ್ಲಿನ ಮದುವೆ ಸಮಾರಂಭಗಳೆಂದರೆ ಎಣ್ಣೆ ಬೇಕೇ ಬೇಕು. ಮದುವೆಗಳಲ್ಲಿ ಮುಕ್ತವಾಗಿ ಬಾರನ್ನೇ ತೆರೆಯಲಾಗಿರುತ್ತದೆ. ಇದು ಕೊಡಗಿನ ಮದುವೆಗಳ ಸಂಪ್ರದಾಯ. ಯಾರೇ ಮದುವೆಗಳನ್ನು ಮಾಡಿದ್ರು ತಮ್ಮ ಶಕ್ತಿ ಅನುಸಾರ ಎಣ್ಣೆ ಖರೀದಿಸಿ ಮದುವೆ ಮಂಟಪಗಳಲ್ಲೇ ಮುಕ್ತವಾದ ಬಾರ್ ಓಪನ್ ಮಾಡುತ್ತಿದ್ದರು. ಇದಕ್ಕೆ ಸಿಎಲ್ 5 ನಿಯಮವಿದ್ದರೂ ಕೊಡಗಿನ ಸಂಪ್ರದಾಯಕ್ಕೆ ಅಡ್ಡಿ ಆಗಬಾರದೆಂಬ ಹಿನ್ನೆಲೆಯಲ್ಲಿ ಇದುವರೆಗೆ ಆ ನಿಯಮವನ್ನೇನು ಕಟ್ಟು ನಿಟ್ಟಾಗಿ ಜಾರಿ ಮಾಡಿರಲಿಲ್ಲ.
ಆದರೀಗ ಮದುವೆ ಸೇರಿದಂತೆ ಯಾವುದೇ ಸಮಾರಂಭಗಳಿಗೂ ಸಾಂಧರ್ಭಿಕ ಸನ್ನದ್ದು ಪಡೆಯುವುದನ್ನು ಸರ್ಕಾರ ಕಡ್ಡಾಯ ಮಾಡಿರುವುದಕ್ಕೆ ಕೊಡಗಿನಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಒಂದು ದಿನಕ್ಕೆ ಮದುವೆ ಅಥವಾ ಮತ್ತಿತರ ಯಾವುದೇ ಕಾರ್ಯಕ್ರಮಗಳಿಗೆ 11 ಸಾವಿರದ 500 ರೂಪಾಯಿ ಶುಲ್ಕ ಪಾವತಿಸಿ ಸಾಂಧರ್ಭಿಕ ಸನ್ನದ್ದು ಪಡೆಯಲೇಬೇಕು. ಇದು ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಒಂದಷ್ಟು ಸಂಕಷ್ಟ ತಂದಿಟ್ಟಿದೆ. ತಮ್ಮ ಮನೆಯ ಮದುವೆ ಸಮಾರಂಭಗಳನ್ನೇ ಸಂಕಷ್ಟದಲ್ಲಿ ಮಾಡುತ್ತಿರುತ್ತೇವೆ. ನೆಂಟರಿಷ್ಟರಿಗೆ ಬಂಧು ಬಾಂಧವರಿಗೆಲ್ಲ ಎಣ್ಣೆ ಕೊಡಲೇಬೇಕೆಂಬ ದೃಷ್ಟಿಯಿಂದ ಹೇಗೋ ಖರೀದಿ ಮಾಡುತ್ತೇವೆ. ಆದರೆ ಎಣ್ಣೆ ಖರೀದಿಸುವುದಕ್ಕೂ ಹನ್ನೊಂದುವರೆ ಸಾವಿರ ರೂಪಾಯಿ ಶುಲ್ಕ ಪಾವತಿಸುವುದು ಹೊರೆಯಾಗಲಿದೆ.
43 ವರ್ಷವಾದರೂ ಹೆಣ್ಣು ಸಿಗಲಿಲ್ಲ ಎಂಬ ಕೊರಗಿನಲ್ಲಿ ಖಿನ್ನತೆ: ಶೂಟ್ ಮಾಡಿಕೊಂಡು ಸಾವಿಗೆ ಶರಣಾದ ವ್ಯಕ್ತಿ!
15 ರಿಂದ 20 ಬಾಟೆಲ್ ಖರೀದಿಸುವ ಬಡವರು ತಾವು ಖರೀದಿಸುವ ಮದ್ಯದ ಮೌಲ್ಯಕ್ಕಿಂತ ಶುಲ್ಕವನ್ನೇ ಜಾಸ್ತಿ ಕಟ್ಟುವುದೆಂದರೆ ಹೇಗೆ ಎಂದು ಸ್ಥಳೀಯರು ಆಕ್ರೋಶ ಹೊರಹಾಕುತ್ತಿದ್ದಾರೆ. ಮದ್ಯ ಬಳಕೆ ನಮ್ಮ ಸಂಪ್ರದಾಯ. ನಮ್ಮ ಸಂಪ್ರದಾಯದ ಮೇಲೆ ದಾಳಿ ಮಾಡುವುದು ಒಳ್ಳೆಯ ಬೆಳವಣಿಗೆ ಅಲ್ಲ ಎನ್ನುತ್ತಿದ್ದಾರೆ. ಅಬಕಾರಿ ಇಲಾಖೆ ಸೂಪರಿಡಿಂಟೆಂಡ್ ಅವರನ್ನು ಕೇಳಿದರೆ, ಇದೇನು ಹೊಸ ನಿಯಮವಲ್ಲ. ಹಿಂದಿನಿಂದಲೂ ನಿಯಮ ಜಾರಿಯಲ್ಲಿದೆ. ಆದರೆ ಅದನ್ನು ಕಟ್ಟುನಿಟ್ಟಾಗಿ ಜಾರಿ ಮಾಡಿರಲಿಲ್ಲ. ಇತ್ತೀಚೆಗೆ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಅಕ್ರಮ ಮದ್ಯದ ಬಳಕೆ ಪ್ರಕರಣಗಳು ಬೆಳಕಿಗೆ ಬಂದಿರುವುದರಿಂದ ಈ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿ ಮಾಡುವಂತೆ ಸೂಚನೆ ಇದೆ. ಇಲ್ಲದಿದ್ದರೆ ದಂಡ ವಿಧಿಸಲಾಗುವುದು.
ಹೀಗಾಗಿ ಸಾರ್ವಜನಿಕ ಸ್ಥಳಗಳಲ್ಲಿ ಮದ್ಯ ಮಾರಾಟ ಮಾಡುವುದಾದರೆ ಒಂದು ದಿನಕ್ಕೆ ಲೈಸೆನ್ಸ್ ಪಡೆಯುವುದು ಕಡ್ಡಾಯ ಎನ್ನುತ್ತಿದ್ದಾರೆ. ಈ ಕುರಿತು ಮಾತನಾಡಿರುವ ಮಾಜಿ ಸ್ಪೀಕರ್ ವಿರಾಜಪೇಟೆ ಮಾಜಿ ಶಾಸಕ ಕೆ.ಜಿ. ಬೋಪಯ್ಯ ಅವರು ಅನಾದಿ ಕಾಲದಿಂದಲೂ ಕೊಡಗಿನಲ್ಲಿ ಎಲ್ಲಾ ಮದುವೆ, ನಾಮಕರಣ, ತಿಥಿ ಸೇರಿದಂತೆ ಎಲ್ಲಾ ಸಮಾರಂಭಗಳಿಗೂ ಮದ್ಯ ಬಳಕೆ ಮಾಡಲೇಬೇಕು ಎನ್ನುವ ಸಂಪ್ರದಾಯವಿದೆ. ಇದು ನಮ್ಮ ಸಂಸ್ಕೃತಿ. ಹಿಂದಿನಿಂದಲೂ ಯಾವುದೇ ನಿರ್ಬಂಧವಿರಲಿಲ್ಲ. ನಮ್ಮ ಬಿಜೆಪಿ ಸರ್ಕಾರ ಇದ್ದಾಗಲಂತೂ ಅಂತಹ ನಿಯಮಗಳಿಗೆ ಅವಕಾಶವೇ ಇರಲಿಲ್ಲ. ಆದರೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಹಣ ಮಾಡುವುದಕ್ಕಾಗಿ ಇಂತಹ ನಿಯಮಗಳನ್ನು ಜಾರಿ ಮಾಡಿ ಕೊಡಗಿನ ವಿರೋಧಿ ನೀತಿಯನ್ನು ಅನುಷ್ಠಾನಗೊಳಿಸಿದೆ.
ಕಟ್ಟೆಮಾಡು ಮಹಾಮೃತ್ಯುಂಜಯ ದೇವಾಲಯದ ಸಾಂಪ್ರದಾಯಿಕ ವಸ್ತ್ರ ನಿರ್ಬಂಧಕ್ಕೆ ಹೈಕೋರ್ಟ್ ತಡೆ
ಈಗಾಲಾದರೂ ಇಲ್ಲಿನ ಶಾಸಕರು ಈ ನಿಯಮದ ರದ್ದುಪಡಿಸುವಂತೆ ಸರ್ಕಾರದ ಜೊತೆಗೆ ಚರ್ಚಿಸಿ ಕೂಡಲೇ ಕೊಡಗಿಗೆ ವಿನಾಯಿತಿ ನೀಡುವಂತೆ ಆಗ್ರಹಿಸುತ್ತೇನೆ ಎಂದಿದ್ದಾರೆ. ಕಾಂಗ್ರೆಸ್ ಮುಖಂಡರು ಮಾತ್ರ ಈ ನಿಯಮವನ್ನು ಯಾವುದೇ ಕಾರಣಕ್ಕೂ ಜಾರಿ ಮಾಡುವುದಕ್ಕೆ ಬಿಡುವುದಿಲ್ಲ. ಸರ್ಕಾರ ಯಾವಾಗಲೂ ಜಿಲ್ಲೆಯ ಜನರ ಪರವಾಗಿ ಇರಲಿದೆ. ಇದನ್ನು ತಕ್ಷಣದಲ್ಲೇ ಹಿಂಪಡೆಯುವುದಕ್ಕೆ ಶಾಸಕರು, ಸಚಿವರು ಹಾಗೂ ಸರ್ಕಾರದೊಂದಿಗೆ ಚರ್ಚಿಸಲಾಗುವುದು ಎನ್ನುತ್ತಿದ್ದಾರೆ. ಏನೇ ಆಗಲಿ ಸದ್ಯ ಸರ್ಕಾರ ಜಾರಿ ಮಾಡಿರುವ ನಿಯಮಕ್ಕೆ ಜಿಲ್ಲೆಯಲ್ಲಿ ಭಾರೀ ವಿರೋಧ ವ್ಯಕ್ತವಾಗುತ್ತಿದೆ.