ಹೇಮಾವತಿ ಜಲಾಶಯದಿಂದ ನಾಲೆಗಳಿಗೆ ನೀರು ಬಿಡಲು ರಾಜ್ಯ ಸರ್ಕಾರದ ಮಲತಾಯಿ ಧೋರಣೆ

Published : Feb 18, 2025, 08:47 PM ISTUpdated : Feb 18, 2025, 08:49 PM IST
ಹೇಮಾವತಿ ಜಲಾಶಯದಿಂದ ನಾಲೆಗಳಿಗೆ ನೀರು ಬಿಡಲು ರಾಜ್ಯ ಸರ್ಕಾರದ ಮಲತಾಯಿ ಧೋರಣೆ

ಸಾರಾಂಶ

ಹೇಮಾವತಿ ಅಣೆಕಟ್ಟೆ ತುಂಬಿದ್ದರೂ ಕೆ.ಆರ್.ಪೇಟೆ, ಪಾಂಡವಪುರ, ನಾಗಮಂಗಲ ತಾಲೂಕಿನ ರೈತರು ಹೇಮೆಯ ನೀರಿಗಾಗಿ ಪರಿತಪಿಸುತ್ತಿದ್ದಾರೆ. 

ಎಂ.ಕೆ.ಹರಿಚರಣ್ ತಿಲಕ್

ಕೆ.ಆರ್.ಪೇಟೆ (ಫೆ.18): ಹೇಮಾವತಿ ಅಣೆಕಟ್ಟೆ ತುಂಬಿದ್ದರೂ ಕೆ.ಆರ್.ಪೇಟೆ, ಪಾಂಡವಪುರ, ನಾಗಮಂಗಲ ತಾಲೂಕಿನ ರೈತರು ಹೇಮೆಯ ನೀರಿಗಾಗಿ ಪರಿತಪಿಸುತ್ತಿದ್ದಾರೆ. ನೀರು ಬಿಡುವ ವಿಚಾರದಲ್ಲಿ ಕೆಆರ್ ಎಸ್ ಜಲಾಶಯ ವ್ಯಾಪ್ತಿ ರೈತರಿಗೊಂದು, ಹೇಮಾವತಿ ಜಲಾಶಯ ವ್ಯಾಪ್ತಿ ರೈತರಿಗೊಂದು ನೀರಾವರಿ ನೀತಿ ಅನುಸರಿಸಿ ಸರ್ಕಾರ ಮಲತಾಯಿ ಧೋರಣೆ ಪ್ರದರ್ಶಿಸುತ್ತಿದೆ. ಕಳೆದ ಮುಂಗಾರಿನಲ್ಲಿ ಉತ್ತಮ ಮಳೆಯಾಗಿ ಕೆ.ಆರ್.ಎಸ್, ಹಾಸನ ಜಿಲ್ಲೆ ಗೊರೂರಿನ ಹೇಮಾವತಿ ಜಲಾಶಯ ಸೇರಿದಂತೆ ಕಾವೇರಿ ಜಲಾನಯನ ಪ್ರದೇಶದ ಎಲ್ಲಾ ಅಣೆಕಟ್ಟೆಗಳಲ್ಲಿ ಇಂದಿನ ಬೇಸಿಗೆ ದಿನದಲ್ಲೂ ಸಮೃದ್ಧವಾದ ನೀರಿದೆ. ಆದರೆ, ಸರ್ಕಾರದ ಇಚ್ಛಾಶಕ್ತಿಯ ಕೊರತೆಯಿಂದ ರೈತರ ಹೊಲಗದ್ದೆಗಳಿಗೆ ನೀರು ಬರುತ್ತಿಲ್ಲ.

ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ನೇತೃತ್ವದಲ್ಲಿ ಈಗಾಗಲೇ ಕೆಆರ್ ಎಸ್ ಜಲಾಶಯ ವ್ಯಾಪ್ತಿಯ ನೀರಾವರಿ ಸಲಹಾ ಸಮಿತಿ ಸಭೆ ನಡೆದು ಕಟ್ಟು ನೀರು ಪದ್ಧತಿಯಡಿ ವಿಶ್ವೇಶ್ವರಯ್ಯ ನಾಲೆಯಲ್ಲಿ ನೀರು ಹರಿಸಲಾಗುತ್ತಿದೆ. ಆದರೆ ಹೇಮೆಯಲ್ಲಿ ನೀರಿದ್ದರೂ ಇದುವರೆಗೂ ಹೇಮೆ ನಾಲೆಗಳಿಗೆ ನೀರು ಹರಿಸುವ ಸಂಬಂಧ ಒಂದೇ ಒಂದು ನೀರಾವರಿ ಸಲಹಾ ಸಮಿತಿ ಸಭೆ ನಡೆದಿಲ್ಲ. ನಾಲೆಗಳಿಗೆ ನೀರು ಬಿಡುವ ಬಗ್ಗೆ ಕನಿಷ್ಠ ಮಾಹಿತಿ ನೀಡುವ ಗೋಜಿಗೂ ನೀರಾವರಿ ಇಲಾಖೆ ಮುಂದಾಗಿಲ್ಲ. ರೈತರು ನೀರು ಬಿಡುತ್ತಾರೆ ಎಂಬ ಆಶಯದೊಂದಿಗೆ ಹೊಲಗದ್ದೆಗಳನ್ನು ಬಿತ್ತನೆಗೆ ಸಜ್ಜುಗೊಳಿಸಿಕೊಂಡು ಕಾಯುತ್ತಿದ್ದಾರೆ.

ಒಳ್ಳೆಯ ಕೆಲಸಗಳಿಗೆ ಭಗವಂತ ಯಾವ ರೂಪದಲ್ಲಾದರೂ ಸಹಾಯ ಮಾಡುತ್ತಾನೆ: ನಿಖಿಲ್ ಕುಮಾರಸ್ವಾಮಿ

ಹೇಮಾವತಿ ಜಲಾಶಯದ ಮುಖ್ಯನಾಲೆ ವ್ಯಾಪ್ತಿಯಲ್ಲಿ ೪೭ ರಿಂದ ೬೪ ರವರೆಗೆ ಒಟ್ಟು 17 ವಿತರಣಾ ನಾಲೆಗಳಿವೆ. 54,088 ಎಕರೆ ಪ್ರದೇಶ ಅರೆ ನೀರಾವರಿಗೆ ಒಳಪಟ್ಟಿದೆ. ಹೇಮಾವತಿ ಜಲಾಶಯ ಯೋಜನಾ ವ್ಯಾಪ್ತಿ ಒಟ್ಟು 235 ಕೆರೆಗಳು ಹೇಮೆಯ ನೀರನ್ನೇ ಆಶ್ರಯಿಸಿ ತಮ್ಮ ಒಡಲು ತುಂಬಿಸಿಕೊಂಡು ಜನ- ಜಾನುವಾರುಗಳ ಉಪಯೋಗಕ್ಕೆ ಬಳಕೆಯಾಗುತ್ತಿವೆ. ಹೇಮಾವತಿ ನದಿ ಅಣೆಕಟ್ಟೆ ನಾಲೆಗಳಾದ ಮಂದಗೆರೆ ಬಲ, ಎಡದಂಡೆ ನಾಲೆ ಮತ್ತು ಹೇಮಗಿರಿ ನಾಲಾ ವ್ಯಾಪ್ತಿಯ 16, 556 ಎಕರೆ ಕೃಷಿ ಭೂಮಿ ಹೇಮೆಯ ನೀರನ್ನು ಆಶ್ರಯಿಸಿ ನಿಂತಿವೆ. ನದಿ ಅಣೆಕಟ್ಟೆ ನಾಲಾ ವ್ಯಾಪ್ತಿಯಲ್ಲಿ ರೈತರು ಭತ್ತ ಮತ್ತು ಕಬ್ಬು, ತೆಂಗು, ಅಡಿಕೆ, ಶುಂಠಿ ಬೆಳೆಗಳನ್ನು ಪ್ರಮುಖವಾಗಿ ಬೆಳೆದರೆ, ಅರೆ ನೀರಾವರಿಗೆ ಸೇರಿದ ಹೇಮಾವತಿ ಜಲಾಶಯದ ಎಡದಂಡೆ ನಾಲೆ ಮತ್ತು ಕೆರೆ ಬಯಲಿನಲ್ಲಿ ಭತ್ತ ಮತ್ತು ಕಬ್ಬಿನ ಜೊತೆಗೆ ರಾಗಿ. ಜೋಳ, ಅಲಸಂದೆ, ಹುರುಳಿ, ತೆಂಗು, ಅಡಿಕೆ ಮುಂತಾದ ಬೆಳೆಗಳನ್ನು ರೈತರು ಬೆಳೆಯುತ್ತಿದ್ದಾರೆ.

ಸರ್ಕಾರ ಇದುವರೆಗೂ ಹೇಮಾವತಿ ಎಡದಂಡೆ ನಾಲೆಗಳು ಮತ್ತು ನದಿ ಅಣೆಕಟ್ಟೆ ನಾಲೆಗಳಲ್ಲಿ ಬೇಸಿಗೆ ಬೆಳೆಗೆ ನೀರು ಹರಿಸುವ ಸಂಬಂಧ ಯಾವುದೇ ಜಲನೀತಿ ಪ್ರಕಟಿಸದಿರುವುದು ರೈತರ ಆತಂಕಕ್ಕೆ ಕಾರಣವಾಗಿದೆ. ಹೇಮಾವತಿ ಜಲಾಶಯದಿಂದ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ ತುಮಕೂರು ಭಾಗಕ್ಕೆ ನೀರು ತೆಗೆದುಕೊಂಡು ಹೋಗುತ್ತಿದ್ದಾರೆ. ಹೇಮೆಯ ನೀರು ತುಮಕೂರು ಭಾಗಕ್ಕೆ ಹರಿದು ಹೋಗುತ್ತಿದ್ದರೂ ಮಂಡ್ಯ ಜಿಲ್ಲೆಯ ರಾಜಕಾರಣಿಗಳು ಧ್ವನಿ ಎತ್ತಿ ತಮ್ಮ ಭಾಗದ ರೈತರಿಗೆ ಆಗುತ್ತಿರುವ ಅನ್ಯಾಯವನ್ನು ತಪ್ಪಿಸಲು ಮುಂದಾಗುತ್ತಿಲ್ಲ. ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರ ಸ್ವಕ್ಷೇತ್ರ ನಾಗಮಂಗಲವೂ ಹೇಮೆ ನೀರಿನಿಂದ ವಂಚಿತವಾಗಿದ್ದರೂ ತಕ್ಷಣವೇ ನೀರಾವರಿ ಸಲಹಾ ಸಮಿತಿ ಸಭೆ ಕರೆಸಿ, ಮಂಡ್ಯ ಜಿಲ್ಲೆಯ ರೈತರ ಹೊಲಗದ್ದೆಗಳಿಗೆ ನಿಯಮಾನುಸಾರ ನೀರು ಹರಿಸುವ ಪ್ರಯತ್ನಕ್ಕೆ ಮುಂದಾಗಬೇಕಿದೆ.

ರಾಜ್ಯ ಸರ್ಕಾರದಿಂದ ಜನರಿಗೆ ತೃಪ್ತಿಪಡಿಸುವ ಕೆಲಸ: ಸಚಿವ ಚಲುವರಾಯಸ್ವಾಮಿ

‘ತಕ್ಷಣ ಹೇಮಾವತಿ ಜಲಾಶಯದ ಎಡದಂಡೆ ನಾಲೆಗೆ ನೀರು ಹರಿಸಬೇಕು. ನದಿ ಅಣೆಕಟ್ಟೆ ನಾಲೆಗಳಾದ ಮಂದಗೆರೆ ಎಡ ಮತ್ತು ಬಲದಂಡೆ ನಾಲೆಗಳು ಹಾಗೂ ಹೇಮಗಿರಿ ನಾಲೆಗಳಿಗೆ ಭತ್ತದ ಬೆಳೆಗೆ ಕಾಯಂ ನೀರು ಹರಿಸಬೇಕು. ಇಲ್ಲದಿದ್ದರೆ ರಾಜ್ಯ ರೈತಸಂಘ ಬೃಹತ್ ಹೋರಾಟ ಆರಂಭಿಸಲಿದೆ.’
-ಕಾರಿಗನಹಳ್ಳಿ ಪುಟ್ಟೇಗೌಡ, ತಾಲೂಕು ರೈತ ಸಂಘದ ಅಧ್ಯಕ್ಷ.

PREV
Read more Articles on
click me!

Recommended Stories

ಕಾಂಗ್ರೆಸ್ ಸರ್ಕಾರ ಶೇ.60ರಷ್ಟು ಭ್ರಷ್ಟಾಚಾರದಲ್ಲಿ ಮುಳುಗಿದೆ: ಮಾಜಿ ಸಚಿವ ಬಿ.ಸಿ.ಪಾಟೀಲ್ ಆರೋಪ
ಜನರ ವಿಶ್ವಾಸ ಕಳೆದುಕೊಂಡ ಕಾಂಗ್ರೆಸ್, ಚುನಾವಣೆಗೇ ಬನ್ನಿ: ಸರ್ಕಾರಕ್ಕೆ ಸಿ.ಟಿ.ರವಿ ಸವಾಲು