ಬೆಳ್ತಂಗಡಿಯಲ್ಲಿ ಮಳೆಯೇ ಇಲ್ಲದಿದ್ದರೂ ಮೃತ್ಯುಂಜಯ ನದಿಯಲ್ಲಿ ಏಕಾಏಕಿ ಪ್ರವಾಹ ಉಂಟಾಗಿ ಜನರು ಆತಂಕಕ್ಕೆ ಒಳಗಾಗಿದ್ದಾರೆ. ಚಾರ್ಮಾಡಿ ಘಾಟಿ ಪ್ರದೇಶದಲ್ಲಿ ಭೂ ಕುಸಿತ ಉಂಟಾಗಿರುವುದೇ ಇದಕ್ಕೆ ಕಾರಣ ಎಂದು ಶಂಕಿಸಲಾಗಿದೆ.
ಬೆಳ್ತಂಗಡಿ (ಆ.21): ಸೋಮವಾರ ಸಂಜೆ ಮೇಘಸ್ಪೋಟದಿಂದಾಗಿ ಮೃತ್ಯುಂಜಯ ಹಾಗೂ ನೇತ್ರಾವತಿ ನದಿಗಳು ಉಕ್ಕಿ ಹರಿದಿದ್ದವು. ಆದರೆ ತಾಲೂಕಿನಲ್ಲಿ ಎಲ್ಲಿಯೂ ಮಳೆ ಇಲ್ಲದಿದ್ದರೂ ಮಂಗಳವಾರ ಸಂಜೆ ಮೃತ್ಯುಂಜಯ ನದಿಯಲ್ಲಿ ಏಕಾಏಕಿ ಪ್ರವಾಹ ಉಂಟಾಗಿ ಭಯ ಭೀತಿ ಮೂಡಿಸಿದೆ. ಚಾರ್ಮಾಡಿ ಘಾಟಿ ಮತ್ತು ಘಟ್ಟ ಪ್ರದೇಶದಲ್ಲಿ ಭಾರಿ ಮಳೆ ಬಿದ್ದ ಮತ್ತು ಭೂ ಕುಸಿತ ಉಂಟಾಗಿರುವ ಕಾರಣ ಈ ರೀತಿ ವ್ಯತಿರಿಕ್ತ ಪರಿಣಾಮ ಉಂಟಾಗಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.
ಮೃಂತ್ಯುಜಯ ನದಿ ಉಗಮ ಸ್ಥಾನದಲ್ಲಿ ಮಳೆ ಬಿದ್ದ ಪರಿಣಾಮ ಭಾರೀ ನೀರು ಬಂದು ಚಾರ್ಮಾಡಿ ಘಾಟಿ ರಸ್ತೆಯಲ್ಲಿ ಹರಿದಿದೆ. ಕೆಸರು ಮಿಶ್ರಿತ ನೀರು ಮಾತ್ರವಲ್ಲದೆ ದೊಡ್ಡ ಕಲ್ಲುಗಳು, ಮರಮಟ್ಟುಗಳೂ, ಕೆಸರು ರಸ್ತೆಗೆ ಬಿದ್ದಿದೆ. ಇದರಿಂದ ಸಂಜೆ ವೇಳೆ ಕೆಲ ಕಾಲ ಸಂಚಾರ ಸ್ಥಗಿತಗೊಂಡಿತ್ತು. ಮೃತ್ಯುಂಜಯ ನದಿ ತೀರದಲ್ಲಿರುವ ಅಡಕೆ ತೋಟಗಳಿಗೆ ಮಂಗಳವಾರವೂ ನೀರು ನುಗ್ಗಿದು ಕಂಡುಬಂತು. ಮಳೆಯೇ ಇಲ್ಲದಿದ್ದರೂ ನದಿಯಲ್ಲಿ ನೀರು ಉಕ್ಕಿ ಹರಿಯುತ್ತಿರುವುದು ನದಿ ದಡದಲ್ಲಿರುವ ನಿವಾಸಿಗಳು ಕಂಗಾಲಾಗಿದ್ದಾರೆ.
undefined
ನೇತ್ರಾವತಿಯಲ್ಲಿ ಸೋಮವಾರ ಸಂಜೆ ಭಾರಿ ನೀರು ಕಂಡುಬಂದು 2019ರ ಚಿತ್ರಣ ಮತ್ತೆ ಮರುಕಳಿಸಬಹುದೇನೋ ಎಂಬ ಆತಂಕ ಮೂಡಿತ್ತು. ನದಿ ದಡದಲ್ಲಿದ್ದ ಕೆಲ ಜನರನ್ನು ಸ್ಥಳಾಂತರವೂ ಮಾಡಲಾಗಿತ್ತು. ಆದರೆ ಮಂಗಳವಾರ ನೇತ್ರಾವತಿ ಶಾಂತವಾಗಿ ಹರಿಯುತ್ತಿರುವುದು ಕಂಡು ಬಂತು. ಮೃತ್ಯುಂಜಯ ನದಿ ಮಾತ್ರ ಸಂಜೆ ಉಕ್ಕಿ ಹರಿದಿದ್ದರೂ ರಾತ್ರಿ ವೇಳೆ ನೀರಿನ ಮಟ್ಟ ತಗ್ಗಿದೆ. ಬಂಡಾಜೆ ಹಳ್ಳದಿಂದ ಕೆಸರು ಮಿಶ್ರಿತ ನೀರು ಬಂದಿದೆ.
ಮಂಗಳವಾರ ರಾತ್ರಿ ಪಾಳಿಯಲ್ಲಿ ಊರಿನ ಜನ ಗಮನಿಸಲಿದ್ದಾರೆ. ಬುಧವಾರ ಮುಂಜಾನೆ ಜಿಲ್ಲಾಧಿಕಾರಿ ಹಾಗೂ ಜಿಯಾಲಾಜಿಸ್ಟ್‌ಗಳು ಬಂದು ವಸ್ತುಸ್ಥಿತಿ ಬಗ್ಗೆ ವರದಿ ನೀಡಲಿದ್ದಾರೆ ಎಂದು ತಿಳಿದುಬಂದಿದೆ. ಪಶ್ಚಿಮ ಘಟ್ಟದ ಬೆಟ್ಟದಲ್ಲಿ ಬಿರುಕು ಕಾಣಿಸಿಕೊಂಡರೆ ಮಳೆ ಬರದಿದ್ದರೂ ಆ ಬಿರುಕಿನ ಒಳಗೆ ಸಂಗ್ರಹವಾದ ನೀರು ಒಮ್ಮೆಲೇ ಕೆಳಗಿನ ಪ್ರದೇಶಕ್ಕೆ ಬರುತ್ತದೆ. ಸೋಮವಾರ ಮತ್ತು ಮಂಗಳವಾರ ಬೆಳ್ತಂಗಡಿ ಸುತ್ತ ಮುತ್ತ ಮಳೆ ಆಗದಿದ್ದರೂ ಹೊಳೆಯಲ್ಲಿ ಬರುವ ನೀರು ಇದುವೇ ಎಂದು ವಿಶ್ಲೇಷಿಸಲಾಗುತ್ತಿದೆ.
ನೇತ್ರ‍್ರಾವತಿ ನದಿಯ ನೀರಿನ ಮಟ್ಟ ಏಕಾಏಕಿ ಏರಿಕೆ
ನೇತ್ರಾವತಿಯ ಉಗಮ ಸ್ಥಳ ಉಪ್ಪಿನಂಗಡಿಯಲ್ಲಿ ಸೋಮವಾರ ಭಾರೀ ಪ್ರವಾಹ ಕಾಣಿಸಿದ ಹಿನ್ನೆಲೆಯಲ್ಲಿ ಸೋಮವಾರ ತಡ ರಾತ್ರಿ ಉಪ್ಪಿನಂಗಡಿಯಲ್ಲಿ ನೇತ್ರ‍್ರಾವತಿ ನದಿಯ ನೀರಿನ ಮಟ್ಟವು ಏಕಾಏಕಿ ಹೆಚ್ಚಳ ಕಂಡು ೧.೭ ಮೀಟರ್ ಏರಿಕೆಯನ್ನು ದಾಖಲಿಸಿತು.
ಸೋಮವಾರ ಸಾಯಂಕಾಲ ಸಮುದ್ರ ಮಟ್ಟದಿಂದ 24 ಮೀಟರ್ ಎತ್ತರದಲ್ಲಿ ಹರಿಯುತ್ತಿದ್ದ ನೇತ್ರಾವತಿ ನದಿಯ ನೀರಿನ ಮಟ್ಟವು ತಡ ರಾತ್ರಿ ವೇಳೆ ಒಂದೇ ಸವನೆ ಏರಿಕೆಯನ್ನು ದಾಖಲಿಸಿ 25.7 ಮೀಟರ್ ಎತ್ತರದಲ್ಲಿ ಹರಿಯತೊಡಗಿತು. ಆದರೆ ಮಂಗಳವಾರ ಮುಂಜಾನೆಯಿಂದ ಮತ್ತೆ ಇಳಿಮುಖವಾಗಿದ್ದು, ಸಂಜೆ ವೇಳೆಗೆ 24.3 ಮೀಟರ್ ನಲ್ಲಿ ದಾಖಲಾಗಿತ್ತು.