- ಅಧಿಕಾರಿಗಳೇ ಲಿಂಗನಹಳ್ಳಿ ತಾಂಡಾ ನೋಡಿದ್ದೀರಾ?
- ಸರ್ಕಾರದ ಸೌಲಭ್ಯಗಳಿಲ್ಲಿ ತೀರಾ ಅಪರೂಪ
- ಗುಳೇ ಹೋಗುವುದೇ ಇಲ್ಲಿಯ ಜನತೆಯ ಮುಖ್ಯ ಕಾಯಕ
ಬಳ್ಳಾರಿ (ಆ.06): ಗ್ರಾಮ ನಾಗರಿಕ ಸೌಲಭ್ಯಗಳಿಂದ ಬಹು ದೂರ, ಇದೂವರೆಗೂ ಗ್ರಾಪಂ ಸದಸ್ಯರಾಗಿರುವ ಉದಾಹರಣೆ ಇಲ್ಲ, 4-5 ವಿದ್ಯುತ್ ಕಂಬ, ತುಸು ಸಿಸಿ ರಸ್ತೆ, ಕಿರಿಯ ಪ್ರಾಥಮಿಕ ಶಾಲೆ ಬಿಟ್ಟರೆ ಉಳಿದೆಲ್ಲಾ ಸೌಲಭ್ಯವನ್ನು ನೀವು ಕೇಳಲೇಬೇಡಿ.
ಈಗ ಪ್ರತಿದಿನ ರಾತ್ರಿ ಚಿರತೆಕಾಟ ಬೇರೆ. ಈ ನತದೃಷ್ಟ ಗ್ರಾಮವನ್ನು ಎಂದಾದರೂ ನೋಡಿದ್ದೀರಾ? ಎಂದರೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಲ್ಲಿ ಉತ್ತರಗಳೇ ಇಲ್ಲ. ಈ ಗ್ರಾಮದ ಹೆಸರೇ ಲಿಂಗನಹಳ್ಳಿ ತಾಂಡಾ. ಈ ಗ್ರಾಮದಲ್ಲಿ 80 ಮನೆಗಳಿವೆ. ಪರಿಶಿಷ್ಟ ಜಾತಿಯ ಲಂಬಾಣಿಗಳೇ ವಾಸಿಸುವ ಈ ಗ್ರಾಮ ಗುಡೇಕೋಟೆ ಹೋಬಳಿ ಕೇಂದ್ರದಿಂದ 3 ಕಿ.ಮೀ. ದೂರದಲ್ಲಿದೆ. ಬೆಟ್ಟ ಹತ್ತಿ ಇಳಿದು ಹೋದಾಗಲೇ ಈ ಗ್ರಾಮ ತಲುಪಬಹುದು.
undefined
ಈ ಗ್ರಾಮಕ್ಕೆ ಎಲ್ಲಿಂದ ಹೋಗಬೇಕೆನ್ನುವ ಮಾರ್ಗಸೂಚಿಯಂತೂ ಇಲ್ಲವೇ ಇಲ್ಲ. ರಸ್ತೆಯಂತೂ ಕೇಳಲೇಬೇಡಿ. ತೀರಾ ಕಚ್ಛಾ. ಮಳೆಬಂದರಂತೂ ಬೈಕ್ ಹೋಗುವುದು ಕಷ್ಟ. ರಾತ್ರಿಯಾದರಂತೂ ಈ ಗ್ರಾಮ ದ್ವೀಪದಂತೆ ಭಾಸವಾಗುತ್ತದೆ. ಕರಡಿ, ಚಿರತೆಗಳು ಈ ಗ್ರಾಮದಲ್ಲಿ ಪ್ರತಿನಿತ್ಯ ಕಾಣಿಸಿಕೊಳ್ಳುತ್ತವೆ. ಹಾಡಹಗಲೇ ಮನೆಯ ಮುಂದಿನ ಕೋಳಿ, ಜಾನುವಾರುಗಳನ್ನು ಎತ್ತಿಕೊಂಡು ಹೋಗುತ್ತವೆ. ಈಗಾಗಲೇ ನಾಲ್ಕೈದು ಜನತೆ ಮೇಲೆ ಚಿರತೆ, ಕರಡಿಗಳು ದಾಳಿ ಮಾಡಿ ಗಂಭೀರ ಗಾಯಗೊಳಿಸಿವೆ.
ಆದರೂ ಸ್ಥಳೀಯ ಆಡಳಿತ, ಜನಪ್ರತಿನಿಧಿಗಳು ಇಲ್ಲಿಯ ಜನತೆಯ ಸಮಸ್ಯೆಗಳೇನು ಎಂದು ಕೇಳುವ ಗೋಜಿಗೆ ಹೋಗಿಲ್ಲ. ಇತ್ತೀಚೆಗೆ ಕುರಿಹಟ್ಟಿಯಲ್ಲಿ ಎಮ್ಮೆ ಕರು ಹಾಗೂ ಕುರಿಮರಿಗಳನ್ನು ತಿಂದು ತೇಗಿರುವ ಚಿರತೆ ದಾಳಿಯಿಂದ ಇಲ್ಲಿಯ ರೈತರು ರೋಸಿ ಹೋಗಿದ್ದಾರೆ. 5 ನೇ ತರಗತಿಯ ವರೆಗಿರುವ ಕಿರಿಯ ಪ್ರಾಥಮಿಕ ಶಾಲೆ ಬಿಟ್ಟರೆ ಹೇಳಿಕೊಳ್ಳುವಂತಹ ಯಾವುದೇ ಸರ್ಕಾರಿ ಸೌಲಭ್ಯಗಳು ಈ ಗ್ರಾಮಕ್ಕೆ ದೊರಕಿಲ್ಲ. ಪಡಿತರ ಅಕ್ಕಿ ತರಲು ಇಲ್ಲಿಯ ಗ್ರಾಮಸ್ಥರು 2 ಕಿಮೀ ದೂರದ ಯರ‌್ರೋಬಯ್ಯನಹಟ್ಟಿ ಗ್ರಾಮಕ್ಕೆ ಹಳ್ಳ, ಕೊಳ್ಳ ದಾಟಿ ಕಚ್ಛಾ ದಾರಿಯಲ್ಲಿ ಹೋಗಬೇಕು.
ರಸ್ತೆಯೇ ಇಲ್ಲವೆಂದ ಮೇಲೆ ಇನ್ನು ಬಸ್‌ಗಳು ಬರುವುದು ಕನಸಿನ ಮಾತೇ ಸರಿ. ಈ ಗ್ರಾಮದ ಜನತೆಗೆ ಜಮೀನುಗಳು ಇರುವುದು ಅಷ್ಟಕ್ಕಷ್ಟೇ. ಪ್ರತಿವರ್ಷ ಆಗಸ್ಟ್ ತಿಂಗಳಲ್ಲಿ ಮೈಸೂರು, ಮಂಡ್ಯ, ಚನ್ನರಾಯಪಟ್ಟಣ ಮುಂತಾದ ಕಡೆ ಕಬ್ಬು ಕಟಾವು ಮಾಡಲಿಕ್ಕೆ ಹೋಗುತ್ತಾರೆ, ಮತ್ತೆ ದೀಪಾವಳಿಗೆ ಊರು ಸೇರುತ್ತಾರೆ. ಮತ್ತೆ ಒಂದು ತಿಂಗಳು ಊರಲ್ಲಿದ್ದು ಮತ್ತೆ ಗುಳೆ ಹೋಗುತ್ತಾರೆ. ಈ ವರ್ಷವೂ ಇಲ್ಲಿಯ ಬಹುತೇಕ ಜನತೆ ಈಗಾಗಲೇ ಗುಳೇ ಹೋಗಿರುವುದರಿಂದ
ಈ ಊರಲ್ಲಿ ಅಂಗವಿಕಲರು, ವೃದ್ಧರು, ಮಹಿಳೆಯರು ಮಾತ್ರ ನಿಮಗೆ ಕಾಣಿಸುತ್ತಾರೆ.
80 ಮನೆಗಳಿರುವ ಗ್ರಾಮಕ್ಕೆ ಕಾಡುಪ್ರಾಣಿಗಳ ಭಯ ಬೇರೆ. ಈ ಗ್ರಾಮದ 55 ವರ್ಷದ ರೂಪ್ಲಾ ನಾಯ್ಕ ಜಮೀನಿಗೆ ಹೋದಾಗ ಕರಡಿಯೊಂದು ಮುಖ, ತಲೆಯ ಭಾಗವನ್ನು ಗಂಭೀರ ಗಾಯಗೊಳಿಸಿದೆ. ಅಲ್ಲದೇ ವರ್ಷಕ್ಕೆ ಹತ್ತಾರು ಕುರಿ, ಕೋಳಿ, ದನಕರುಗಳು ಚಿರತೆಗಳ ಪಾಲಾಗುತ್ತವೆ. ಆದರೂ ಸರ್ಕಾರ ಇದೂವರೆಗೂ ಇಲ್ಲಿಯ ರೈತರಿಗೆ ಪರಿಹಾರವನ್ನೂ ನೀಡಿಲ್ಲ.
-ಭೀಮಣ್ಣ ಗಜಾಪುರ