ಬಳ್ಳಾರಿ BY-SKY ಗೆ ಬಂತು ಭಾರೀ ಬೇಡಿಕೆ: ಟಿಕೆಟ್ ದುಬಾರಿಯಾದ್ರೂ ಮುಗಿಬಿದ್ದ ಜನರು!

By Kannadaprabha News  |  First Published Jan 22, 2023, 7:41 AM IST
  • ಬಳ್ಳಾರಿ ಬೈ-ಸ್ಕೈಗೆ ಬಂತು ಭಾರೀ ಬೇಡಿಕೆ
  • ನೂರಾರು ಜನರು ವಿಮಾನ ನಿಲ್ದಾಣ ಕಡೆ ಲಗ್ಗೆ
  • ಟಿಕೆಟ್‌ಗಾಗಿ ಗಂಟೆಗಟ್ಟಲೆ ಕಾದು ನಿಂತರು
  • ದುಬಾರಿಯಾದರೂ ಆಗಸದಲ್ಲಿ ಹಾರಾಟಕ್ಕೆ ಮುಗಿಬಿದ್ದ ಬಳ್ಳಾರಿಗರು

ಬಳ್ಳಾರಿ (ಜ.22) : ಉತ್ಸವದ ಮೊದಲ ದಿನವಾದ ಗುರುವಾರ ಬಳ್ಳಾರಿ ಬೈಸ್ಕೈಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಬರೀ ಎಂಟು ಜನ ಮಾತ್ರ ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಸಿಕೊಂಡಿದ್ದರು. ಇದರಿಂದ ಬೈಸ್ಕೈ ಬಳ್ಳಾರಿಗೆ ಬರುವಂತೆ ಸಾಕಷ್ಟುಮುತುವರ್ಜಿ ವಹಿಸಿದ್ದ ಜಿಲ್ಲಾಡಳಿತ ಜನರಿಂದ ಸ್ಪಂದನೆ ಸಿಗುತ್ತಿಲ್ಲ ಎಂದು ದಿಗಿಲುಗೊಂಡಿತ್ತು. ಆದರೆ, ಉತ್ಸವದ ದಿನ ಆಕಾಶದಿಂದ ಬಳ್ಳಾರಿಗೆ ವೀಕ್ಷಣೆಗೆಂದು ನೂರಾರು ಸಂಖ್ಯೆಯಲ್ಲಿ ಬಳ್ಳಾರಿ ಹೊರ ವಲಯದ ಕೊಳಗಲ್‌ ಬಳಿಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಮಕ್ಕಳು ಪೋಷಕರೊಂದಿಗೆ ಹೆಲಿಕಾಪ್ಟರ್‌ನಲ್ಲಿ ಹಾರಾಡುವ ಆಸೆ ಹೊತ್ತು ಆಗಮಿಸಿದ್ದರು. ಆದರೆ, ಹೆಚ್ಚಿನ ಸಂಖ್ಯೆಯಲ್ಲಿ ಜನ ಜಮಾಯಿಸಿದ್ದರಿಂದ ಹೆಲಿಕಾಪ್ಟರ್‌ನಲ್ಲಿ ಹಾರಾಡಲು ಗಂಟೆಗಟ್ಟಲೆ ಕಾಯುವಂತಾಯಿತು. ಆದಾಗ್ಯೂ ಜನರು ತಾಳ್ಮೆಯಿಂದಿದ್ದು ಆಕಾಶದಿಂದ ಹಾರಾಡಿ ಬಳ್ಳಾರಿಯನ್ನು ಕಣ್ತುಂಬಿಕೊಂಡರು.

ಜ. 19ರಂದು ಗುರುವಾರ 28 ರೌಂಡ್‌ನಲ್ಲಿ 168 ಜನರು ಆಗಸದಿಂದ ಬಳ್ಳಾರಿಯನ್ನು ವೀಕ್ಷಣೆ ಮಾಡಿದ್ದಾರೆ. ಉತ್ಸವದ ಮೊದಲ ದಿನವಾದ ಶನಿವಾರ 600 ರಿಂದ 700 ಜನರನ್ನು ಬೈಸ್ಕೈನಲ್ಲಿ ಕಳಿಸಿಕೊಡಬೇಕು ಎಂದು ನಿರ್ಧರಿಸಲಾಗಿದೆ ಎಂದು ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕ ಡಾ.ಎಸ್‌.ತಿಪ್ಪೇಸ್ವಾಮಿ ಕನ್ನಡಪ್ರಭಕ್ಕೆ ತಿಳಿಸಿದರು.

Latest Videos

undefined

ಗಣಿ ಧಣಿಗಳಿಗೆ ಮಾತ್ರವಲ್ಲ- ಸಾಮಾನ್ಯರಿಗೂ ಹೆಲಿಕಾಪ್ಟರ್‌ ಹತ್ತುವ ಭಾಗ್ಯ: ಬಳ್ಳಾರಿಯ ಬೈ-ಸ್ಕೈ ಸೇವೆ

ಕಾಪ್ಟರ್‌ಗೆ ಪ್ಯಾರಾಸೀಲಿಂಗ್‌ ಕಿರಿಕಿರಿ:

ಹೆಲಿಕಾಪ್ಟರ್‌(Helicopter) ಹಾರಾಟಕ್ಕೆ ಪ್ಯಾರಾಸೀಲಿಂಗ್‌ನಿಂದಾಗಿ ಸಮಸ್ಯೆಯಾಗಿದೆ ಎಂಬ ಆರೋಪಗಳು ಕೇಳಿ ಬಂದವು. ವಿಮಾನ ನಿಲ್ದಾಣದಲ್ಲಿ ಬಳ್ಳಾರಿ ಬೈಸ್ಕೈ ಜೊತೆಗೆ ಪ್ಯಾರಾಸೀಲಿಂಗ್‌ಗೂ ಅವಕಾಶ ನೀಡಲಾಗಿತ್ತು. ಆದರೆ, ಪ್ಯಾರಾಸೀಲಿಂಗ್‌ಗೆಂದು ಜನರು ಹೆಚ್ಚಿನ ಜನರು ಬರುತ್ತಿರುವುದರಿಂದ ಹೆಲಿಕಾಪ್ಟರ್‌ ಹಾರಾಟಕ್ಕೆ ಸಮಸ್ಯೆಯಾಗುತ್ತಿದೆ ಎಂದು ಫೈಲಟ್‌ ಹೇಳುತ್ತಿದ್ದರಿಂದ ಆಗಾಗ್ಗೆ ಹಾರಾಟಕ್ಕೆ ತಡೆಯಾಗುತ್ತಿತ್ತು. ಆದರೆ, ಪ್ಯಾರಾಸಿಲಿಂಗ್‌ಗೆಂದು .500ಗಳ ಶುಲ್ಕ ನೀಡಿ ಆಗಮಿಸಿದ್ದ 40ಕ್ಕೂ ಹೆಚ್ಚು ಜನರು ಗಂಟೆಗಟ್ಟಲೆ ಕಾದು ಕುಳಿತಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ಪ್ರವಾಸೋದ್ಯಮ ಇಲಾಖೆ ಅಧಿಕಾರಿ ತಿಪ್ಪೇಸ್ವಾಮಿ ಹಾಗೂ ಪ್ಯಾರಾಸೀಲಿಂಗ್‌ ಆಯೋಜನೆಯ ಜವಾಬ್ದಾರಿ ಹೊತ್ತಿರುವ ನೋಪಾಸನಾ ಸಂಸ್ಥೆ ವಟ್ಟಂ ಅವರ ನಡುವೆ ವಾಗ್ವಾದ ಜರುಗಿತು.

ಪ್ಯಾರಾಸೀಲಿಂಗ್‌ನಿಂದ ಹೆಲಿಕಾಪ್ಟರ್‌ ಹಾರಾಟಕ್ಕೆ ಯಾವುದೇ ಸಮಸ್ಯೆಯಿಲ್ಲ ಎಂದು ನೋಪಾಸನಾ ಸಂಸ್ಥೆಯ ವಟ್ಟಂ ವಾದಿಸಿದರೆ, ನಿಮ್ಮಿಂದಲೇ ಸಮಸ್ಯೆಯಾಗುತ್ತಿದೆ. ಒಂದು ವೇಳೆ ಏನಾದರೂ ಅವಘಡ ಸಂಭವಿಸಿದರೆ ಯಾರು ಜವಾಬ್ದಾರಿ ಎಂದು ಪ್ರವಾಸೋದ್ಯಮ ಅಧಿಕಾರಿ ವಟ್ಟಂ ಅವರ ಜೊತೆ ವಾಗ್ವಾದಕ್ಕಿಳಿದಿದ್ದರು. ಕೊನೆಗೆ ಪೊಲೀಸ್‌ ಅಧಿಕಾರಿಗಳು ಮಧ್ಯಪ್ರವೇಶ ಮಾಡಿ ಕೆಲ ಹೊತ್ತು ಕಾಪ್ಟರ್‌ ನಿಲುಗಡೆ ಮಾಡಿಸಿ, ಪ್ಯಾರಾಸಿಲಿಂಗ್‌ಗೆ ಅವಕಾಶ ಕಲ್ಪಿಸಿದರು.

ಹೆಲಿಕಾಪ್ಟರ್‌ನಲ್ಲಿ ತೆರಳಲು ಜನರು ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ್ದರಿಂದ ಜನ ನಿಯಂತ್ರಿಸಲು ಪೊಲೀಸರು ಪರದಾಡಿದರು. ಇದೇ ವೇಳೆ ಟಿಕೆಟ್‌ ಪಡೆದವರನ್ನು ಒಳಗಡೆ ಬಿಡಲು ಪೊಲೀಸರು ತಡೆಯೊಡ್ಡಿದ್ದರಿಂದ ರೊಚ್ಚಿಗೆದ್ದ ಕೆಲವರು ಪೊಲೀಸರ ವರ್ತನೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರಲ್ಲದೆ, ನಿಮ್ಮ ವರ್ತನೆಗಳಿಂದ ಜನರು ಉತ್ಸವಗಳಿಂದ ದೂರವಾಗುತ್ತಿದ್ದಾರೆ ಎಂದು ಪೊಲೀಸರ ವಿರುದ್ಧ ಹರಿಹಾಯ್ದರು.

ಪ್ಲಾಸ್ಟಿಕ್‌ ಬಾಟಲ್‌, ಹೆಲಿಕಾಪ್ಟರ್‌ ರೆಕ್ಕೆಗೆ ಬಡಿಯಿತು:

ಬೈಸ್ಕೈ (BYSKY) ವೇಳೆ ಯಾವುದೇ ಸಮಸ್ಯೆಯಾಗಬಾರದು ಎಂದು ಅಧಿಕಾರಿಗಳು ಎಷ್ಟೇ ಮುತುವರ್ಜಿ ವಹಿಸಿದರೂ ಶನಿವಾರ ಸಣ್ಣದೊಂದು ಅವಘಡ ಜರುಗಿತು. ಬೈಸ್ಕೈಗೆಂದು ಪುಟ್ಟಮಗುವ ಹೊತ್ತು ಆಗಮಿಸಿದ್ದ ಕುಟುಂಬವೊಂದು ಮಗುವಿನ ಕೈಗೆ ಕುಡಿವ ನೀರಿನ ಪ್ಲಾಸ್ಟಿಕ್‌ ಬಾಟಲ್‌ ನೀಡಿತ್ತು. ಬಾಟಲ್‌ ಕೆಳಗೆ ಬಿದ್ದಿದ್ದು ಹೆಲಿಕಾಪ್ಟರ್‌ನ ತಿರುಗುವ ರೆಕ್ಕೆಯ ವೇಗದ ಗಾಳಿಗೆ ಮೇಲೆದ್ದು ಬಂದು ಹೆಲಿಕಾಪ್ಟರ್‌ ರೆಕ್ಕೆಗೆ ಬಡಿದಿದ್ದರಿಂದ ಸುಮಾರು ಅರ್ಧಗಂಟೆ ಕಾಲ ತಿರುಗಾಟ ನಿಲ್ಲಿಸಲಾಗಿತ್ತು. ಹೀಗಾಗಿಯೇ ನಾವು ಸಾಕಷ್ಟುಮುತುವರ್ಜಿ ವಹಿಸಬೇಕಾಗಿದೆ ಎಂದು ಪ್ರವಾಸೋದ್ಯಮ ಇಲಾಖೆ ಅಧಿಕಾರಿ ತಿಪ್ಪೇಸ್ವಾಮಿ ತಿಳಿಸಿದರು.

Karnataka Tourism: ಪ್ರವಾಸಿ ಗೈಡ್‌ಗಳಿಗೆ ಸರ್ಕಾರದ ಭಾರಿ ಬಂಪರ್‌!

ಜ.23ರವರೆಗೆ ಹೆಲಿಕಾಪ್ಟರ್‌ ಹಾರಾಟವಿರುತ್ತೆ

ಬಳ್ಳಾರಿ ಉತ್ಸವ ಹಿನ್ನೆಲೆಯಲ್ಲಿ ಆಯೋಜಿಸಿರುವ ಬಳ್ಳಾರಿಬೈಸ್ಕೈ ಜನವರಿ 23ರವರೆಗೆ ಹಾರಾಟ ನಡೆಸಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸುತ್ತಿರುವುದರಿಂದ ಮತ್ತೊಂದು ಹೆಲಿಕಾಪ್ಟರ್‌ ತರಿಸಿಕೊಳ್ಳುವ ಯೋಚನೆ ಇದೆ. ಬೈಸ್ಕೈಗೆ ಬಳ್ಳಾರಿ ಜನರಿಂದ ಉತ್ತಮ ಸ್ಪಂದನೆ ಬರುತ್ತಿದೆ. ಹೀಗಾಗಿ ಹೆಚ್ಚುಹೆಚ್ಚು ಜನರನ್ನು ಆಗಸದಿಂದ ಬಳ್ಳಾರಿ ನೋಡುವ ಆಸೆಯನ್ನು ಪೂರೈಸಲು ಶ್ರಮಿಸುತ್ತಿದ್ದೇವೆ. ಜಿಲ್ಲಾಡಳಿತ ಅಗತ್ಯ ಸಾಥ್‌ ನೀಡಿ ಸಹಕರಿಸುತ್ತಿರುವುದರಿಂದ ಇಷ್ಟೆಲ್ಲಾ ಸಾಧ್ಯವಾಗಿದೆ ಎಂದು ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ತಿಳಿಸಿದರು.

click me!