Belagavi: 2 ಕೋಟಿ ವಿಮೆಗಾಗಿ ಮಾಜಿ ಸೈನಿಕನ ಕೊಂದ ಪತ್ನಿ, ವಿಡಿಯೋ ಮಾಡಿ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಪ್ರಿಯಕರ!

Published : Jun 13, 2026, 05:38 PM IST
Ex Serviceman Sandeep Manjari Murder Case Belagavi

ಸಾರಾಂಶ

ಬೆಳಗಾವಿಯ ಘೋಡಗೇರಿ ಗ್ರಾಮದ ಮಾಜಿ ಸೈನಿಕ ಸಂದೀಪ್ ಮಾಂಜರಿ ಅವರ ನಿಗೂಢ ಸಾವು ಕೊಲೆ ಎಂದು ದೃಢಪಟ್ಟಿದೆ. 2 ಕೋಟಿ ರೂಪಾಯಿ ವಿಮೆ ಹಣಕ್ಕಾಗಿ ಪತ್ನಿ ಸುಮಾ, ಪ್ರಿಯಕರನ ಸಹಾಯದಿಂದ ವಿಷವಿಕ್ಕಿ ಕೊಂದಿರುವುದು ಪ್ರಿಯಕರನ ಸೆಲ್ಫಿ ವಿಡಿಯೋದಿಂದ ಬಯಲಾಗಿದೆ. ಶವಪರೀಕ್ಷೆಯಲ್ಲಿ ವಿಷಪ್ರಾಶನ ದೃಢಪಟ್ಟಿದ್ದು, ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ಚಿಕ್ಕೋಡಿ: ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಘೋಡಗೇರಿ ಗ್ರಾಮದಲ್ಲಿ ನಡೆದಿದ್ದ ಮಾಜಿ ಸೈನಿಕ ಸಂದೀಪ್ ಮಾಂಜರಿ ಅವರ ನಿಗೂಢ ಸಾವು ಇದೀಗ ಭಾರಿ ತಿರುವು ಪಡೆದುಕೊಂಡಿದೆ. 2 ಕೋಟಿ ರೂಪಾಯಿ ವಿಮೆ (Insurance) ಹಣಕ್ಕಾಗಿ ಪತ್ನಿಯೇ ತನ್ನ ಗಂಡನಿಗೆ ವಿಷವಿಕ್ಕಿ ಕೊಂದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ನಿಯ ಪ್ರಿಯಕರನೇ ಸ್ವತಃ ಸೆಲ್ಫಿ ವಿಡಿಯೋ ಬಿಡುಗಡೆ ಮಾಡುವ ಮೂಲಕ ಸ್ಫೋಟಕ ಹೇಳಿಕೆ ನೀಡಿದ್ದಾನೆ.

ಪ್ರಿಯಕರ ಪುಂಡಲೀಕ ಬಿಡುಗಡೆ ಮಾಡಿದ ಸೆಲ್ಫಿ ವಿಡಿಯೋದಲ್ಲೇನಿದೆ?

ಈ ಕೊಲೆ ಪ್ರಕರಣದ ತನಿಖೆಗೆ ದಿಢೀರ್ ವೇಗ ಸಿಗಲು ಕಾರಣವಾಗಿದ್ದು ಸುಮಾಳ ಪ್ರಿಯಕರ ಪುಂಡಲೀಕ ಡೊಂಬರ್ ಬಿಡುಗಡೆ ಮಾಡಿರುವ ವಿಡಿಯೋ ಹೇಳಿಕೆ. ಅದರಲ್ಲಿ ಸುಮಾಳ ಕ್ರೂರ ಆಲೋಚನೆಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾನೆ.

"ನಾನು ಘೋಡಗೇರಿ ಗ್ರಾಮದಲ್ಲಿ ಒಂದು ಸಣ್ಣ ಎಗ್ ರೈಸ್ ಅಂಗಡಿ ಮಾಡಿಕೊಂಡಿದ್ದೆ. ಅಲ್ಲಿಗೆ ಆರ್ಮಿಯಿಂದ ನಿವೃತ್ತಿಯಾಗಿ ಬಂದಿದ್ದ ಸಂದೀಪ್ ಬರುತ್ತಿದ್ದ. ಆತ ನಿವೃತ್ತಿಯ ನಂತರ ಸುಮ್ಮನೆ ಕೂರಬಾರದು ಎಂದು ನನ್ನ ಅಂಗಡಿಯ ಪಕ್ಕದಲ್ಲೇ ಒಂದು ಟೀ ಸ್ಟಾಲ್ ಆರಂಭಿಸಿದ. ಬಳಿಕ ಆತನಿಗೆ ಕೆಲಸಕ್ಕೆ ಆಳು ಸಿಗದ ಕಾರಣ, ನನ್ನ ಎಗ್ ರೈಸ್ ಅಂಗಡಿ ಬಂದ್ ಮಾಡಿಸಿ ತನ್ನ ಟೀ ಅಂಗಡಿಗೆ ಕರೆದುಕೊಂಡು ಹೋದ. ಅಲ್ಲಿಗೆ ಹೋದ ಮೇಲೆಯೇ ನನಗೆ ಸಂದೀಪ್ ಪತ್ನಿ ಸುಮಾಳ ಪರಿಚಯವಾಗಿ, ಅದು ಸ್ನೇಹಕ್ಕೆ ತಿರುಗಿ ಬಳಿಕ ನಮ್ಮಿಬ್ಬರ ನಡುವೆ ಸಂಬಂಧ (Relationship) ಬೆಳೆಯಿತು."

ಗಂಡ ಸತ್ತರೂ ಸಾಯಲಿ ಎನ್ನುತ್ತಿದ್ದ ಪತ್ನಿ!

ಸುಮಾ ತನ್ನ ಗಂಡನಿಗೆ ಪ್ರತಿದಿನ ಬಾಕ್ಸ್ ಗಟ್ಟಲೆ ಮದ್ಯ ತಂದುಕೊಡುತ್ತಿದ್ದಳು ಮತ್ತು ಅದಕ್ಕೆ ನಿದ್ದೆ ಮಾತ್ರೆಗಳನ್ನು ಬೆರೆಸಿ ಕುಡಿಸುತ್ತಿದ್ದಳು. ಇದನ್ನು ಕಂಡು ನಾನು ಹೀಗೆ ಯಾಕೆ ಮಾಡುತ್ತಿದ್ದೀಯಾ ಎಂದು ಕೇಳಿದಾಗ, 'ಗಂಡ ಸತ್ತರೂ ಸಾಯಲಿ ಬಿಡು' ಎಂದು ನಿರ್ದಯವಾಗಿ ಹೇಳುತ್ತಿದ್ದಳು. ಇತ್ತೀಚೆಗೆ ಹುಕ್ಕೇರಿ ಜಾತ್ರೆಗೆ ಹೋಗಿ ಬರುವಾಗ ಸಂದೀಪ್‌ಗೆ ಅಪಘಾತವಾಗಿ ಆಸ್ಪತ್ರೆಗೆ ದಾಖಲಾಗಿದ್ದ. ಆ ಸಂದರ್ಭದಲ್ಲಿ ಸುಮಾ ನನಗೆ ಕರೆ ಮಾಡಿ, ಹುಳುಗಳಿಗೆ ಹೊಡೆಯುವ (ಗಿಡಗಳಿಗೆ ಸಿಂಪಡಿಸುವ) ಕೀಟನಾಶಕ ಔಷಧವನ್ನು ತಂದುಕೊಡುವಂತೆ ಕೇಳಿದಳು. ಆಕೆ ಹೇಳಿದಂತೆ ನಾನು ಔಷಧ ತಂದುಕೊಟ್ಟ ಮಾರನೇ ದಿನವೇ ಸಂದೀಪ್ ಆಸ್ಪತ್ರೆಯಲ್ಲಿ ನಿಗೂಢವಾಗಿ ಸಾವನ್ನಪ್ಪಿದ ಎಂದಿದ್ದಾನೆ

₹2 ಕೋಟಿ ಇನ್ಶೂರೆನ್ಸ್ ಮತ್ತು ಬೆಳಗಾವಿ ಸೆಟ್ಲ್‌ಮೆಂಟ್ ಪ್ಲಾನ್!

ಸಂದೀಪ್ ಸತ್ತ ತಕ್ಷಣ ಸುಮಾ ನನಗೆ ಫೋನ್ ಮಾಡಿ, ನಾನು ಆತನ ಮೇಲೆ 2 ಕೋಟಿ ರೂಪಾಯಿ ಇನ್ಶೂರೆನ್ಸ್ ಮಾಡಿಸಿದ್ದೇನೆ. ಆ ಹಣ ಈಗ ನಮಗೆ ಸಿಗುತ್ತದೆ. ಆ ಹಣವನ್ನು ತಗೆದುಕೊಂಡು ನಿನ್ನ ಇಬ್ಬರು ಮಕ್ಕಳು ಮತ್ತು ನನ್ನ ಇಬ್ಬರು ಮಕ್ಕಳು ಸೇರಿ ಒಟ್ಟು ನಾಲ್ಕು ಮಕ್ಕಳೊಂದಿಗೆ ಬೆಳಗಾವಿಗೆ ಹೋಗಿ ಸೆಟ್ಲ್ ಆಗೋಣ ಎಂದಿದ್ದಳು. ಅಷ್ಟೇ ಅಲ್ಲದೆ, ಗಂಡ ಸತ್ತ ಮಾರನೇ ದಿನವೇ ನಾನು ತಂದುಕೊಟ್ಟಿದ್ದ ಕೀಟನಾಶಕದ ಬಾಟಲಿ ಹಾಗೂ ಇನ್ನಿತರ ವಸ್ತುಗಳನ್ನು ತಂದುಕೊಟ್ಟು, ಇದನ್ನೆಲ್ಲಾ ಯಾರಿಗೂ ತಿಳಿಯದಂತೆ ಎಲ್ಲಾದರೂ ದೂರ ಹೋಗಿ ಚೆಲ್ಲಿ ಬಾ ಎಂದು ಗಾಬರಿಯಿಂದ ಹೇಳಿದ್ದಳು. ಆಕೆಯ ಮಾತುಗಳನ್ನು ಕೇಳಿದಾಗ ನನಗೆ ಆಕೆಯ ಮೇಲೆ ತೀವ್ರ ಅನುಮಾನ ಶುರುವಾಯಿತು ಎಂದು ಪುಂಡಲೀಕ ಹೇಳಿದ್ದಾನೆ.

ಜೈಲಿಗೆ ಹೋಗಲು ಸಿದ್ಧ, ಇನ್ಶೂರೆನ್ಸ್ ಹಣ ಕೊಡಬೇಡಿ:

ಇಲ್ಲಿ ದೇಶ ಕಾಯ್ದ ಒಬ್ಬ ಸೈನಿಕನ ಸಾವಾಗಿದೆ. ಆತನಿಗೆ ನ್ಯಾಯ ಸಿಗಬೇಕು. ತಪ್ಪು ಮಾಡಿದವರಿಗೆ ಕಠಿಣ ಶಿಕ್ಷೆಯಾಗಬೇಕು. ಇದರಲ್ಲಿ ನಾನೇನಾದರೂ ಸುಳ್ಳು ಹೇಳಿದ್ದರೆ ನಾನೂ ಕೂಡ ಜೈಲಿಗೆ ಹೋಗಲು ಸಿದ್ಧನಿದ್ದೇನೆ. ಈ ಪ್ರಕರಣದ ಮರು ತಪಾಸಣೆಯಾಗಬೇಕು, ಅಲ್ಲಿಯವರೆಗೆ ಸುಮಾಳಿಗೆ ಇನ್ಶೂರೆನ್ಸ್‌ನ ಒಂದು ರೂಪಾಯಿ ಹಣವೂ ಸಿಗದಂತೆ ತಡೆಯಬೇಕು ಎಂದು ಪುಂಡಲೀಕ ವಿಡಿಯೋದಲ್ಲಿ ಒತ್ತಾಯಿಸಿದ್ದಾನೆ.

ಶವ ಹೊರತೆಗೆದು ಮರಣೋತ್ತರ ಪರೀಕ್ಷೆ: ವಿಷಪ್ರಾಶನ ದೃಢ!

ಅನುಮಾನದ ಹಿನ್ನೆಲೆ ಬೆಳಗಾವಿ ಎಸಿ (AC) ಶ್ರವಣಕುಮಾರ್ ನಾಯಕ ಅವರ ಸಮ್ಮುಖದಲ್ಲಿ ಪೊಲೀಸರು ಸಂದೀಪ್ ಮಾಂಜರಿ ಅವರ ಶವವನ್ನು ಸಮಾಧಿಯಿಂದ ಹೊರತೆಗೆದು ಸ್ಥಳದಲ್ಲೇ ಮರಣೋತ್ತರ ಪರೀಕ್ಷೆ (Post-mortem) ನಡೆಸಿದ್ದಾರೆ. ಸದ್ಯ ಲಭ್ಯವಾಗಿರುವ ಪ್ರಾಥಮಿಕ ವರದಿಯಲ್ಲಿ ಮಾಜಿ ಸೈನಿಕ ಸಂದೀಪ್ ಅವರಿಗೆ ವಿಷಪ್ರಯೋಗ (Poisoning) ಮಾಡಿ ಹತ್ಯೆ ಮಾಡಿರುವುದು ದೃಢಪಟ್ಟಿದೆ ಎಂಬುದನ್ನು ಪೊಲೀಸರು ತಿಳಿಸಿದ್ದಾರೆ.

ಸೇನೆಯಿಂದ ನಿವೃತ್ತರಾದ ಬಳಿಕ ಸಂದೀಪ್ ಅವರಿಗೆ ಇದ್ದ ಮದ್ಯಪಾನದ ಚಟವನ್ನೇ ಬಂಡವಾಳ ಮಾಡಿಕೊಂಡ ಪತ್ನಿ ಸುಮಾ, ಪತಿಯ ಹೆಸರಿನಲ್ಲಿ ಭಾರಿ ಮೊತ್ತದ ವಿಮೆ ಮಾಡಿಸಿ, ಪ್ರಿಯಕರನ ಸಹಾಯದೊಂದಿಗೆ ಈ ಭೀಕರ ಕೊಲೆಗೆ ಸ್ಕೆಚ್ ಹಾಕಿರುವುದು ಬೆಳಕಿಗೆ ಬಂದಿದೆ. ಸದ್ಯ ಪೊಲೀಸರು ಆರೋಪಿಗಳ ವಿರುದ್ಧ ಕೊಲೆ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.

PREV
Read more Articles on
click me!

Recommended Stories

DGP Alok Kumar: ಧಾರವಾಡ ಜೈಲರ್ ಆತ್ಮ*ಹತ್ಯೆ ಪ್ರಕರಣ: ಡಿಜಿಪಿ ಅಲೋಕ್ ಕುಮಾರ್ ವಿರುದ್ಧ ಕುಟುಂಬದ ಗಂಭೀರ ಆರೋಪ!
ಧಾರವಾಡ ಜೈಲಲ್ಲಿ ಶಿವಮೊಗ್ಗ ಹರ್ಷಾ ಕೊಲೆ ಆರೋಪಿಗಳ ಪುಂಡಾಟ, ವಾರ್ಡನ್ ಮೇಲೆ ಭೀಕರ ಹಲ್ಲೆ, ಜೈಲರ್ ಕಠಿಣ ಶಿಕ್ಷೆ!