
ಬೆಳಗಾವಿ (ನ.1): ಇಡೀ ರಾಜ್ಯ ರಾಜ್ಯೋತ್ಸವದ ಸಂಭ್ರಮದಲ್ಲಿರುವಾಗಲೇ ಗಡಿ ನಾಡು ಬೆಳಗಾವಿಯಲ್ಲಿ ಆಘಾತಕಾರಿ ಘಟನೆ ನಡೆದಿದೆ. ಬೆಳಗಾವಿಯಲ್ಲಿ ರಾಜ್ಯೋತ್ಸವ ಮೆರವಣಿಗೆ ನಡೆಯುವಾಗ ಐವರಿಗೆ ಚಾಕು ಇರಿಯಲಾಗಿದೆ. ಇವರನ್ನು ಸ್ಥಳೀಯ ಬಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ. ಬೆಳಗಾವಿಯ ಸದಾಶಿವ ನಗರದ ಲಕ್ಷ್ಮೀ ಕಾಂಪ್ಲೆಕ್ಸ್ ಬಳಿ ಘಟನೆ ನಡೆದಿದೆ. ರಾಜ್ಯೋತ್ಸವ ಅಂಗವಾಗಿ ರೂಪಕಗಳ ಮೆರವಣಿಗೆ ನಡೆಯುತ್ತಿತ್ತು. ಈ ಮೆರವಣೆಗೆ ಗುಂಪಿನಲ್ಲಿ ಏಕಾಏಕಿ ಬಂದ ದುಷ್ಕರ್ಮಿಗಳು ಯದ್ವತದ್ವಾ ಚಾಕು ಇರಿದು ಪರಾರಿಯಾಗಿದ್ದಾರೆ. ಚಾಕು,ಜಂಬೆ ಸಮೇತ ಆಗಮಿಸಿ ಐವರ ಮೇಲೆ ದಾಳಿ ನಡೆಸಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.
ಗುರುನಾಥ ವಕ್ಕುಂದ, ಸಚಿನ್ ಕಾಂಬಳೆ, ಲೋಕೇಶ್ ಬೆಟಗೇರಿ, ಮಹೇಶ್ ಹಾಗೂ ವಿನಾಯಕಗೆ ಚಾಕು ಇರಿಯಲಾಗಿದೆ. ಬೆಳಗಾವಿಯ ಎಪಿಎಂಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಚಾಕು ಇರಿತವಾದ ಘಟನೆ ತಿಳಿಯುತ್ತಿದ್ದಂತೆ ಸ್ಥಳದಲ್ಲಿ ಕೋಲಾಹಲ ಸೃಷ್ಟಿಯಾಗಿತ್ತು. ಪರಿಸ್ಥಿತಿ ನಿಯಂತ್ರಿಸುವ ಸಲುವಾಗಿ ಪೊಲೀಸರು ಲಾಠಿ ಪ್ರಹಾರ ಕೂಡ ಮಾಡಿದ್ದಾರೆ.
ರಾಜ್ಯೋತ್ಸವ ಸಂದರ್ಭದಲ್ಲಿ ಚಾಕು ಇರಿತ ಪ್ರಕರಣ ಆಗಿರುವುದ ಇದೇ ಮೊದಲೇನಲ್ಲ. 2022ರಲ್ಲಿ ಜಿಲ್ಲೆಯ ಹುಕ್ಕೇರಿ ಪಟ್ಟಣದಲ್ಲಿ ನಡೆದ ಕನ್ನಡ ರಾಜ್ಯೋತ್ಸವ (Kannada Rajyotsava) ಮೆರವಣಿಗೆಯಲ್ಲಿ ಗುಂಪು ಘರ್ಷಣೆಯಾಗಿದ್ದು, ಈ ವೇಳೆ ಓರ್ವ ಯುವಕನಿಗೆ ದುಷ್ಕರ್ಮಿಗಳು ಚಾಕುವಿನಿಂದ ಇರಿದಿದ್ದರು.
ಯುವಕರ ಗುಂಪುಗಳ ನಡುವೆ ಜಗಳದಲ್ಲಿ ಚೇತನ್ ಎನ್ನುವ ಯುವಕನಿಗೆ ಚಾಕು ಇರಿಯಲಾಗಿತ್ತು.ಗಲಾಟೆಯಲ್ಲಿ ಅಶೋಕ ಸಿಂಧೂರೆ, ವಿಕಾಸ ಸುಣಗಾರ ಎನ್ನುವವರು ಗಾಯಗೊಂಡಿದ್ದರು.
ಮೆರವಣಿಗೆಯಲ್ಲಿ ಡ್ಯಾನ್ಸ್ ಮಾಡುವಾಗ ತಳ್ಳಿದರು ಎಂಬ ಕಾರಣಕ್ಕೆ ಯುವಕರ ಗುಂಪುಗಳ ನಡುವೆ ಮಾತಿಗೆ ಮಾತು ಬೆಳೆದು ಅದು ಒಬ್ಬರಿಗೊಬ್ಬರು ಬಡಿದಾಡಿಕೊಂಡಿದ್ದಾರೆ. ಈ ಗಲಾಟೆ ಮಧ್ಯೆ ದುಷ್ಕರ್ಮಿಗಳು ಚೇತನ ಹಡಪದ ಎಂಬ ಯುವಕನಿಗೆ ಚಾಕು ಇರಿದು ಪರಾರಿಯಾಗಿದ್ದರು. ಮೋಶೀನ್ ಗ್ಯಾಂಗ್‌ನಿಂದ ಹಲ್ಲೆ ಹಾಗೂ ಚಾಕು ಇರಿದಿರುವ ಆರೋಪ ಕೇಳಿ ಬಂದಿತ್ತು.
ಬೆಳಗಾವಿ ಬಿಮ್ಸ್ ಆಸ್ಪತ್ರೆಗೆ ಪೊಲೀಸ್ ಕಮಿಷನರ್ ಭೂಷಣ್ ಬೊರಸೆ ಗಾಯಾಳುಗಳು ಅಡ್ಮಿಟ್ ಆದ ವಾರ್ಡ್‌ಗೆ ಭೇಟಿ ನೀಡಿದ್ದರು. ಈ ವೇಳೆ ಚಾಕು ಇರಿತಕ್ಕೊಳಗಾದವರಿಂದ ಮಾಹಿತಿ ಪಡೆದುಕೊಂಡಿದ್ದಾರೆ. ಗಾಯಾಳುಗಳ ಭೇಟಿ ಬಳಿಕ ಪೊಲೀಸ್ ಕಮಿಷನರ್ ಭೂಷಣ್ ಮಾತನಾಡಿದ್ದು, 'ವೈ ಜಂಕ್ಷನ್ ಬಳಿ ರಾಜ್ಯೋತ್ಸವ ಮೆರವಣಿಗೆಯಲ್ಲಿ ಘರ್ಷಣೆ ಆಗಿದೆ. ನಾಲ್ಕು ಜನರಿಗೆ ಚಾಕು ಇರಿತ ಆಗಿದೆ, ಒಬ್ಬರಿಗೆ ತಲೆಗೆ ಗಾಯ ಆಗಿದೆ. ಐದೂ ಜನರು ಔಟ್ ಆಫ್ ಡೇಂಜರ್ ಇದ್ದಾರೆ. ಯಾರು ಹಲ್ಲೆ ಮಾಡಿದಾರೆ ಯಾಕೆ ಮಾಡಿದಾರೆ ಅನ್ನೋ ಮಾಹಿತಿ ಪಡೆಯುತ್ತಿದ್ದೇವೆ. ಘಟನೆಯಾದ ಜಾಗದಲ್ಲಿ ಸಿಸಿಟಿವಿ ಪರಿಶೀಲನೆ ಕೂಡ ಮಾಡುತ್ತೇವೆ. ಗಾಯಗೊಂಡ ಎಲ್ಲರೂ ನೆಹರು ನಗರದ ನಿವಾಸಿಗಳು ಎಂದು ಹೇಳಿದ್ದಾರೆ.