
ಕಾರವಾರ (ಅ.1): ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಗೇರುಸೊಪ್ಪ ಬಳಿ ಕಾರು ಹಾಗೂ ಬಸ್‌ನ ನಡುವೆ ಭೀಕರ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ 11 ಮಂದಿಗೆ ಗಂಭೀರ ಗಾಯವಾಗಿದ್ದು, ಓರ್ವ ವ್ಯಕ್ತಿ ಸಾವು ಕಂಡಿದ್ದಾನೆ. ಹೊನ್ನಾವರದ ಗೇರುಸೊಪ್ಪ ಬಳಿಕ ಸುಳಿಮನೆ ಮುರ್ಕಿ ಬಳಿ ಭೀಕರ ದುರ್ಘಟನೆ ಸಂಭವಿಸಿದೆ. ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಗೇರುಸೊಪ್ಪದಲ್ಲಿ ಘಟನೆ ನಡೆದಿದ್ದು, ಢಿಕ್ಕಿಯ ರಭಸಕ್ಕೆ ರಸ್ತೆ ಪಕ್ಕದ ಕಂದಕಕ್ಕೆ ಬಸ್ ಪಲ್ಟಿಯಾಗಿದೆ. ಬೆಂಗಳೂರಿನಿಂದ ಭಟ್ಕಳಕ್ಕೆ ಬರುತ್ತಿದ್ದ ಕೆಎಸ್ಆರ್‌ಟಿಸಿ ಬಸ್ ಅಪಘಾತಕ್ಕೆ ಈಡಾಗಿದೆ. ಸುಳಿಮನೆ ಮುರ್ಕಿ ಕ್ರಾಸ್‌ನಲ್ಲಿ ನಿಯಂತ್ರಣ ತಪ್ಪಿ ಕಾರು ಬಸ್ ನಡುವೆ ಢಿಕ್ಕಿ ಸಂಭವಿಸಿದೆ. ಗಾಯಗೊಂಡವರನ್ನು 108 ಹಾಗೂ ಖಾಸಗಿ ಅಂಬುಲೆನ್ಸ್ ಮೂಲಕ ಹೊನ್ನಾವರ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. 30ಕ್ಕೂ ಹೆಚ್ಚು ಪ್ರಯಾಣಿಕರನ್ನು ಬಸ್ ಸಾಗಿಸುತ್ತಿತ್ತು. ಅಗ್ನಿಶಾಮಕ ಸಿಬ್ಬಂದಿಯಿಂದ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಹೊನ್ನಾವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಅಪಘಾತದಿಂದ ಹೊನ್ನಾವರ-ಬೆಂಗಳೂರಿನ ಮಾರ್ಗ ಸಂಪೂರ್ಣ ಜಾಮ್ ಆಗಿತ್ತು. ಈಗ ನಿಧಾನಗತಿಯಲ್ಲಿ ವಾಹನ ಸಂಚಾರ ಆರಂಭವಾಗಿದೆ. ಸಂಜೆಯ ಸಮಯಲ್ಲಿ ಈ ಮಾರ್ಗದಲ್ಲಿಯೇ ಹೆಚ್ಚಿನ ಬಸ್‌ಗಳು ಸಂಚಾರ ಮಾಡುವುದರಿಂದ ವಾಹನ ದಟ್ಟಣೆ ಜಾಸ್ತಿ ಇರುತ್ತದೆ.