
ಬೆಂಗಳೂರು (ನ.1): ಉದ್ಯಾನನಗರಿ ಬೆಂಗಳೂರಿನಲ್ಲಿ 25 ವರ್ಷದ ಯುವತಿ ಅನುಮಾನಾಸ್ಪದವಾಗಿ ಸಾವು ಕಂಡಿದ್ದಾಳೆ. ಆಕೆಯ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತ ಯುವತಿಯನ್ನು ದಾವಣಗೆರೆ ಮೂಲದ ಸುಪ್ರಿಯಾ ಎಂದು ಗುರುತಿಸಲಾಗಿದೆ. ಎಂಬಿಎ ವ್ಯಾಸಂಗ ಮಾಡಿದ್ದ ಸುಪ್ರಿಯಾ ಬೈಕ್ ರೈಡಿಂಗ್ ತರಬೇತಿ ಪಡೆದುಕೊಳ್ಳುತ್ತಿದ್ದರು ಎನ್ನಲಾಗಿದೆ.
ಗಾಯತ್ರಿನಗರದ ರೈಲ್ವೆ ಪ್ಯಾರಲಲ್ ರಸ್ತೆಯಲ್ಲಿ ಬಾಡಿಗೆ ಮನೆಯಲ್ಲಿ ಸುಪ್ರಿಯಾ ವಾಸವಿದ್ದರು. ಕಳೆದ ಎರಡು ದಿನಗಳಿಂದ ಆಕೆ ವಾಸವಾಗಿದ್ದ ರೂಮ್ ಲಾಕ್ ಆಗಿತ್ತು. ಈ ಬಗ್ಗೆ ಅನುಮಾನಗೊಂಡ ಮನೆಯ ಮಾಲೀಕ ಬಾಗಿಲು ಓಪನ್ ಮಾಡಿದ್ದಾಗ ಘಟನೆ ಬೆಳಕಿಗೆ ಬಂದಿದೆ.
ಸುಪ್ರಿಯಾ ಅವರ ಪೋಷಕರು ಕಳೆದ ಎರಡು ದಿನಗಳಿಂದ ಕರೆ ಮಾಡುತ್ತಿದ್ದರೂ, ಮಗಳು ಕರೆ ಸ್ವೀಕರಿಸದೇ ಇರೋದಕ್ಕೆ ಅನುಮಾನಪಟ್ಟಿದ್ದಾರೆ. ಎರಡನೇ ದಿನವೂ ಹೀಗೆಯೇ ಆದಾಗ, ಮನೆಯ ಮಾಲೀಕರಿಗೆ ಕರೆ ಮಾಡಿ ವಿಚಾರ ತಿಳಿಸಿದ್ದರು. ಈ ವೇಳೆ ಅವರು ಸುಪ್ರಿಯಾ ಇದ್ದ ಮನೆಯ ಬಳಿ ಹೋಗಿದ್ದರು ಎನ್ನಲಾಗಿದೆ.
ಸುಬ್ರಹ್ಮಣ್ಯನಗರ ಮಿಲ್ಕ್ ಕಾಲೋನಿಲ್ಲಿರೋ ಮನೆಯಲ್ಲಿ ಮೃತದೇಹ ಪತ್ತೆಯಾಗಿದೆ. ಕಳೆದ 2 ವರ್ಷ 8 ತಿಂಗಳಿನಿಂದ ಯುವತಿ ಈ ಮನೆಯಲ್ಲಿ ವಾಸ ಮಾಡುತ್ತಿದ್ದರು. ಮನೆಯ ಮೂರನೇ ಮಹಡಿಯಲ್ಲಿದ್ದ ಮನೆಯಲ್ಲಿ ಯುವತಿ ವಾಸವಿದ್ದಳು. ಎರಡು ದಿನಗಳಿಂದ ಮನೆ ಲಾಕ್ ಆಗಿದ್ದರಿಂದ ಇಂದು ಮನೆಯ ಡೋರ್ ಓಪನ್ ಮಾಡಿದ್ದಾರೆ. ಈ ವೇಳೆ ಫ್ಯಾನ್ ಗೆ ನೇಣು ಬಿಗಿದು ತುಂಡಾಗಿ ಬಿದ್ದ ಸ್ಥಿತಿಯಲ್ಲಿ ಮೃತದೇಹ ಕಂಡಿದೆ. ಪೊಲೀಸ್ ಬಂದಾಗ ಕೊಳೆತ ಸ್ಥಿತಿಯಲ್ಲಿ ಮೃತದೇಹ ಇತ್ತು.
ಸುಬ್ರಹ್ಮಣ್ಯನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಮರಣೋತ್ತರ ಪರೀಕ್ಷೆಗಾಗಿ ಶವವನ್ನು ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಸದ್ಯ ಪ್ರಕರಣದ ಬಗ್ಗೆ ಯುಡಿಆರ್ ಕೇಸ್ ದಾಖಲಿಸಿಕೊಂಡಿರುವ ಸುಬ್ರಹ್ಮಣ್ಯ ನಗರ ಪೊಲೀಸರು ತನಿಖೆ ಕೈಗೊಂಡಿದ್ದಾರೆ.