
ಬೆಳಗಾವಿ: ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿ ಕೃಷ್ಣ ಮೃಗಗಳ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ವರದಿ ಹೊರಬಂದಿದ್ದು, ಕಡೆಗೂ ಕೃಷ್ಣ ಮೃಗಗಳ ಸಾವಿನ ರಹಸ್ಯ ಹೊರಬಿದ್ದಿದೆ. ಮರಣೋತ್ತರ ಪರೀಕ್ಷೆ ಬಗ್ಗೆ ಲ್ಯಾಬ್ ವರದಿ ಬಂದಿದೆ. ಬೆಂಗಳೂರಿನ ಬ್ಯಾಕ್ಟೀರಿಯಾಲಜಿ ಮತ್ತು ಮೈಕಾಲಜಿ ಸಂಸ್ಥೆ ನೀಡಿದ ವರದಿಯಂತೆ ಕೃಷ್ಣಮೃಗಗಳು ಹಿಮೋರಿಜಿಕ್ ಸೆಪ್ಟಿಸೀಮಿಯಾ ಬ್ಯಾಕ್ಟೀರಿಯಾದಿಂದ ಮೃತಪಟ್ಟಿದೆ ಎಂದು ವರದಿ ಬಹಿರಂಗಪಡಿಸಿದೆ. ಗಳಲೆ ರೋಗದಿಂದ ಮೃತಪಟ್ಟ ಬಗ್ಗೆ ವರದಿ ಬಂದಿದೆ ಎಂದು ಸುದ್ಧಿಗೋಷ್ಠಿ ನಡೆಸಿ ಡಿಎಫ್‌ಒ ಕ್ರಾಂತಿ ಹೇಳಿಕೆ ನೀಡಿದ್ದಾರೆ.
ಏಳು ಜೀವಂತ ಇರುವ ಕೃಷ್ಣ ಮೃಗಗಳ ಆರೋಗ್ಯವಾಗಿವೆ. ಕೆಲ ದಿನಗಳವರೆಗೂ ಎಲ್ಲವನ್ನ ನಿಗಾದಲ್ಲಿ ಇಡಲಾಗುತ್ತೆ. ಹೊರಗಿಂದ ಈ ಕಾಯಿಲೆ ಬರಬೇಕು ಇಲ್ಲಾ ಆ ಪ್ರಾಣಿಯಲ್ಲಿ ಬ್ಯಾಕ್ಟೀರಿಯಾ ಇರುತ್ತೆ. ವಾತಾವರಣದಲ್ಲಿ ಏರುಪೇರು ಆದಾಗ ಒಳಗೆ ಇದ್ದ ಬ್ಯಾಕ್ಟೀರಿಯಾದಿಂದ ಕಾಯಿಲೆ ಬರುತ್ತೆ. ಗಾಳಿಯಿಂದಲೂ ಈ ಕಾಯಿಲೆ ಬರುವ ಸಾಧ್ಯತೆ ಇರುತ್ತೆ. ಮುಖ್ಯವಾಗಿ ಸಸ್ಯಹಾರಿ ಪ್ರಾಣಿಗಳಿಗೆ ಬರುವ ಕಾಯಿಲೆ ಇದು. ಈಗಾಗಲೇ ಮೃಗಾಲಯದಲ್ಲಿ ಬೇರೆ ಪ್ರಾಣಿಗಳಿಂದ ಅಂತರ ಕಾಯ್ದುಕೊಳ್ಳಲಾಗಿದೆ. ಎಲ್ಲ ಪ್ರಾಣಿಗಳನ್ನ ನಿಗಾದಲ್ಲಿ ಇಡಲಾಗಿದ್ದು, ಎಲ್ಲದಕ್ಕೂ ರೋಗ ನಿರೋಧಕ ಔಷಧಿ ಮೂಲಕ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಸಾಕು ಪ್ರಾಣಿಗಳಿಗೆ ಹರಡುವ ಸಾಧ್ಯತೆ ಇರುವ ಕಾರಣಕ್ಕೆ ಪಶು ಸಂಗೋಪನೆ ಇಲಾಖೆಗೆ ತಿಳಿಸಿದ್ದು ಮುಂಜಾಗ್ರತಾ ಕ್ರಮಗಳನ್ನ ವಹಿಸಲಾಗುತ್ತಿದೆ. ಮೃಗಾಲಯದಲ್ಲಿದ್ದ ಒಟ್ಟು 38 ಕೃಷ್ಣ ಮೃಗಗಳ ಪೈಕಿ 31 ಕೃಷ್ಣ ಮೃಗಗಳು ಸಾವನ್ನಪ್ಪಿದ್ದವು. ಏಕಾಏಕಿ ಕೃಷ್ಣ ಮೃಗಗಳು ಮೃಗಾಲಯದಲ್ಲಿ ಸಾವನ್ನಪ್ಪಿದ್ದವು. ಬೆಂಗಳೂರಿನಿಂದ ವೈದ್ಯರ ತಂಡ ಆಗಮಿಸಿ ಮರಣೋತ್ತರ ಪರೀಕ್ಷೆ ನಡೆಸಿತ್ತು. ಮರಣೋತ್ತರ ಪರೀಕ್ಷೆಯ ವರದಿ ಇಂದು ಬಿಡುಗಡೆ ಮಾಡಿದೆ. ನ.13ರಿಂದ ನಿರಂತರವಾಗಿ ಕೃಷ್ಣ ಮೃಗಗಳ ಸಾವಾಗಿತ್ತು. ಬ್ಯಾಕ್ಟೀರಿಯಾ ಇನ್ಪೆಕ್ಷನ್ ದಿಂದ ಸಾವಾಗಿರುವ ಸಂಶಯ ವ್ಯಕ್ತಪಡಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.
ಹಿಮೋರಿಜನ್ ಸೆಪ್ಟಿಸೀಮಿಯಾ ಬ್ಯಾಕ್ಟೀರಿಯಾದಿಂದ ಸಾವಾಗಿರುವ ಶಂಕೆ ಇತ್ತು. ಗುಜರಾತ್ ನ ವಡೋದರದಲ್ಲಿ ಹಿಂದೆ ಈ ರೋಗ ಪತ್ತೆಯಾಗಿತ್ತು. ಅಲ್ಲಿ ಚಿಕಿತ್ಸೆ ನೀಡಿದ್ದ ವೈದ್ಯರ ಬಳಿ ವಿಡಿಯೋ ಕಾನ್ಫರೆನ್ಸ್ ಮೂಲಕ ಚಿಕಿತ್ಸೆ ಬಗ್ಗೆ ಚರ್ಚೆ ಮಾಡಲಾಗಿತ್ತು ಎಂದು ಮಾಹಿತಿ ನೀಡಿದರು.