ಗೋಕಾಕ; ಕಾಲುವೆಯಲ್ಲಿ ಕೊಚ್ಚಿ ಹೋಗುತ್ತಿದ್ದವನ ಪ್ರಾಣ ಕಾಪಾಡಿದ ಬಾಲಕಿ

By Suvarna NewsFirst Published Jun 10, 2021, 10:36 PM IST
Highlights

* ನೀರಿನ ರಭಸಕ್ಕೆ ಕಾಲುವೆಯಲ್ಲಿ ತೇಲಿಹೋಗುತ್ತಿದ್ದ ವ್ಯಕ್ತಿಯ ರಕ್ಷಣೆ ಮಾಡಿದ ಬಾಲಿ
* ಸಮಯಪ್ರಜ್ಞೆ ಮತ್ತು ಶೌರ್ಯದಿಂದ ವ್ಯಕ್ತಿಯ ಪ್ರಾಣ ಕಾಪಾಡಿದ ಸಾಹಸಿ
* ಗೋಕಾಕ ತಾಲೂಕಿನ  ಶಶಿಕಲಾ ಪಾಟೀಲ ಹತ್ತನೇ ತರಗತಿ ವಿದ್ಯಾರ್ಥಿನಿ
* ವಾಯುವಿಹಾರಕ್ಕೆ ಬಂದ ವ್ಯಕ್ತಿ ನೀರಿಗೆ ಬಿದ್ದಿದ್ದರು

ಗೋಕಾಕ(ಜೂ.  10)  ಈ ಬಾಲಕಿಯ ಶೌರ್ಯ ಮತ್ತು ಪರಾಕ್ರಮಕ್ಕೆ ಒಂದು ಮೆಚ್ಚುಗೆ ಮೊದಲೆ ಹೇಳಿಬಿಡೋಣ. ಕಾಲುವೆಯಲ್ಲಿ ಕೊಚ್ಚಿ ಹೋಗುತ್ತಿದ್ದ ವ್ಯಕ್ತಿಯ ರಕ್ಷಣೆ ಮಾಡಿ ಆತನಿಗೆ ಹೊಸ ಬದುಕು ನೀಡಿದ್ದಾಳೆ.

ವಾಯು ವಿಹಾರಕ್ಕೆ ಹೋದ ವ್ಯಕ್ತಿಯೊಬ್ಬ ಕಾಲುವೆಗೆ ಜಾರಿ ಬಿದ್ದ ವೇಳೆ, ವ್ಯಕ್ತಿಯ ಜೀವ ರಕ್ಷಣೆಗೆ ತನ್ನ ಜೀವದ ಹಂಗೂ ಲೆಕ್ಕಿಸದೇ ವಿದ್ಯಾರ್ಥಿನಿಯೊಬ್ಬಳು ತಾನು ಉಟ್ಟ ವೇಲ್ ಅನ್ನೇ ಹರಿಬಿಟ್ಟು ವ್ಯಕ್ತಿಯ ರಕ್ಷಣೆ ಮಾಡಿದ್ದಾಳೆ. ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಹುದಲಿಯಲ್ಲಿ ಬಾಲಕಿ ಶೌರ್ಯ ಮೆರೆದಿದ್ದಾಳೆ.

ಹುದಲಿ ಗ್ರಾಮದ ಬಸಪ್ಪ ಪಾಟೀಲ ಎಂಬಾತನ ಜೀವವನ್ನು ಬಾಲಕಿ ಉಳಿಸಿದ್ದಾಳೆ. ಅಂಕಲಗಿಯಲ್ಲಿ ಅಡವಿಸಿದ್ಧೇಶ್ವರ ಸಂಯುಕ್ತ ಪಪೂ ಮಹಾವಿದ್ಯಾಲಯದಲ್ಲಿ 10ನೇ ತರಗತಿ ಓದುತ್ತಿರುವ ವಿದ್ಯಾರ್ಥಿನಿ ಶಶಿಕಲಾ ಪಾಟೀಲ ಈತನ ಪ್ರಾಣ ಕಾಪಾಡಿದವಳು.

ರಾಷ್ಟ್ರೀಯ ಶೌರ್ಯ ಪ್ರಶಸ್ತಿಯಲ್ಲಿ ಕರ್ನಾಟಕದ ಮಕ್ಕಳು

ಏನಿದು ಘಟನೆ?: ಹುದಲಿ ಗ್ರಾಮದ ಬಸಪ್ಪ ಪಾಟೀಲ ರಂಗದೋಳಿ ಪಕ್ಕದ ಮಾರ್ಕಂಡೇಯ ಜಲಾಶಯ ಕಾಲುವೆ ಪಕ್ಕ ವಾಯು ವಿಹಾರ ಮಾಡುತ್ತಿದ್ದರು. ಈ ವೇಳೆ ನೀರು ಕುಡಿಯಲು ಹೋದಾಗ ಕಾಲು ಜಾರಿ ಕಾಲುವೆಗೆ ಬಿದ್ದು, ನೀರಿನ ರಭಸಕ್ಕೆ ಹರಿದು ಹೋಗುತ್ತಿದ್ದರು. ಇದನ್ನು ಕಾಲುವೆ ದಡದಲ್ಲಿ ಬಟ್ಟೆ ತೊಳೆಯಲು ತನ್ನ ಸಹೋದರಿಯ ಜೊತೆ ಬಂದಿದ್ದ ಗೋಕಾಕ ವಲಯದ ಅಂಕಲಗಿ ಗ್ರಾಮದ ಶಶಿಕಲಾ ಪಾಟೀಲ ಗಮನಿಸಿದ್ದಾಳೆ. ನಂತರ ತಾನು ಉಟ್ಟಿದ್ದ ವೇಲ್ ಅನ್ನು ಕಾಲುವೆಯಲ್ಲಿ ಹರಿಬಿಟ್ಟಿದ್ದಾಳೆ. ಕೈಗಳನ್ನು ಬಡೆಯುತ್ತ ಹರಿದು ಹೋಗುತ್ತಿದ್ದ ವ್ಯಕ್ತಿಗೆ ವೇಲ್ ಹಿಡಿಯಲು ಹೇಳಿದ್ದಾಳೆ. ನಂತರ ವೇಲ್ ಜಗ್ಗಿ ದಡಕ್ಕೆ ಸೇರಿಸಿ ವ್ಯಕ್ತಿಯನ್ನು ಕಾಲುವೆಯಿಂದ ಮೇಲಕ್ಕೆತ್ತಿ ಆತನ ಜೀವ ಉಳಿಸಿದ್ದಾಳೆ.

ವಿದ್ಯಾರ್ಥಿನಿಯ ಈ ಧೈರ್ಯ ಹಾಗೂ ಸಮಯ ಪ್ರಜ್ಞೆಗೆ ಗ್ರಾಮದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ತನ್ನ ಪಾಡಿಗೆ ತಾನು ಬಟ್ಟೆ ತೊಳೆಯುವ ಸಂದರ್ಭದಲ್ಲಿ ಆಕಸ್ಮಿಕವಾಗಿ ನೀರಿನಲ್ಲಿ ಹರಿದು ಬರುತ್ತಿದ್ದ ವ್ಯಕ್ತಿಯನ್ನು ಗಮನಿಸಿ ನೀರಿಗೆ ವೇಲ್ ಹರಿ ಬಿಟ್ಟು ವ್ಯಕ್ತಿಯ ಪ್ರಾಣವನ್ನು ರಕ್ಷಿಸಿರುವ ಗೋಕಾಕ ತಾಲೂಕಿನ ಕುಮಾರಿ ಶಶಿಕಲಾ ಪಾಟೀಲಗೆ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ. ಆಕೆ ಓದುತ್ತಿರುವ ಪ್ರೌಢಶಾಲೆಯ ಎಲ್ಲ ಸಿಬ್ಬಂದಿ ವರ್ಗದವರು ವಿದ್ಯಾರ್ಥಿನಿಯ ಸಾಹಸ ಮತ್ತು ಶೌರ್ಯಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.

ಕಾಲುವೆಯಲ್ಲಿ ಬಟ್ಟೆ ತೊಳೆಯುವ ಸಂದರ್ಭದಲ್ಲಿ ಕಾಲು ಜಾರಿ ಬಿದ್ದ ವ್ಯಕ್ತಿಯನ್ನು ರಕ್ಷಿಸಿರುವ ಕುಮಾರಿ ಶಶಿಕಲಾ ಪಾಟೀಲಳ ಶೌರ್ಯ ಎಲ್ಲರಿಗೂ ಮಾದರಿಯಾಗಿದ್ದು, ಸರ್ಕಾರದಿಂದ ಕೊಡಮಾಡುವ ಶೌರ್ಯ ಪ್ರಶಸ್ತಿಗೆ ಇವಳ ಹೆಸರು ಸೂಚಿಸಲು ಕ್ರಮ ಕೈಗೊಳ್ಳಲಾಗುವುದು  ಎಂದು ಗೋಕಾಕ ಶಾಸಕ  ರಮೇಶ ಜಾರಕಿಹೊಳಿ ತಿಳಿಸಿದ್ದಾರೆ.

ವಿದ್ಯಾರ್ಥಿನಿ ಕುಮಾರಿ ಶಶಿಕಲಾ ಪಾಟೀಲ ಅವರ ಧೈರ್ಯ ಮತ್ತು ಸಾಹಸ ಮೆಚ್ಚುವಂತಹದ್ದು, ತಮ್ಮ ಪ್ರಾಣದ ಹಂಗು ತೊರೆದು ಓರ್ವ ವ್ಯಕ್ತಿಯ ಜೀವ ರಕ್ಷಿಸಿದ ವಿದ್ಯಾರ್ಥಿನಿ ನಿಜವಾಗಲೂ ಅಭಿನಂಧನಾರ್ಹಳು. ಮುಂದಿನ ದಿನಗಳಲ್ಲಿ ಇಲಾಖೆಯಿಂದ ಆಕೆಯನ್ನು ಗೌರವಿಸಿ ಸತ್ಕರಿಸಲಾಗುವುದು ಎಂದು ಬಿಇಒ ಜಿ.ಬಿ.ಬಳಗಾರ  ಹೇಳಿದ್ದಾರೆ.

ಬಟ್ಟೆ ತೊಳೆಯುವ ಸಂದರ್ಭದಲ್ಲಿ ಕಾಲುವೆಯಲ್ಲಿ ಹರಿದು ಬರುತ್ತಿದ್ದ ವ್ಯಕ್ತಿಯನ್ನು ಗಮನಿಸಿ ಏನು ಮಾಡಬೇಕು ಎಂದು ತೋಚದೆ ಧೈರ್ಯದಿಂದ ಕಾಲುವೆ ಎರಡು ಮೆಟ್ಟಿಲುಗಳನ್ನು ಇಳಿದು ವೇಲ್ ಹರಿ ಬಿಟ್ಟು ನಾನು ಮತ್ತು ನನ್ನ ಸಹೋದರಿ ವೇಲ್ ಹಿಡಿಯುವಂತೆ ಕಿರಿಚಿದೆವು. ನಂತರ ವ್ಯಕ್ತಿ ವೇಲ್ ಹಿಡಿದ ನಂತರ ಜೋರಾಗಿ ಎಳೆದು ದಡಕ್ಕೆ ಸೇರಿಸಿದೆವು. ಇದರಿಂದ ಆಗುವ ಅನಾಹುತ ತಪ್ಪಿತು. ಒಬ್ಬರ ಜೀವ ಉಳಿಯಲು ನಾನು ನೆರವಾಗಿದ್ದೇನೆ ಎಂದು ಸಾಹಸಿ ಶಶಿಕಲಾ ಪಾಟೀಲ ಹೇಳುತ್ತಾರೆ.

 

click me!