
ಅಥಣಿ (ಅ.10): ವಯಸ್ಸು ಸಾಧನೆಗೆ ಎಂದಿಗೂ ಅಡ್ಡಿಯಾಗದು ಎಂಬುದನ್ನು ಅಥಣಿಯ ಹವ್ಯಾಸಿ ಈಜುಗಾರ ಬಳವಂತ ಪತ್ತಾರ ಸಾಬೀತುಪಡಿಸಿದ್ದಾರೆ. ತಮ್ಮ 75ನೇ ವಯಸ್ಸಿನಲ್ಲಿ ಅಂತಾರಾಷ್ಟ್ರೀಯ ಮಟ್ಟದ ಏಷ್ಯನ್ ಮಾಸ್ಟರ್ಸ್ ಈಜು ಚಾಂಪಿಯನ್‌ಷಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಿ, ಎರಡು ರಜತ ಪದಕಗಳನ್ನು ಗೆಲ್ಲುವ ಮೂಲಕ ದೇಶದ ಹಾಗೂ ಕನ್ನಡ ನಾಡಿನ ಕೀರ್ತಿ ಹೆಚ್ಚಿಸಿದ್ದಾರೆ.
ಬೆಂಗಳೂರಿನಲ್ಲಿ ಅ.5ರಿಂದ 10ರವರೆಗೆ ನಡೆದ 2ನೇ ಆವೃತ್ತಿಯ ಏಷ್ಯನ್ ಮಾಸ್ಟರ್ಸ್ ಈಜು ಚಾಂಪಿಯನ್ ಶಿಪ್‌ನಲ್ಲಿ ಬಳವಂತ ಪತ್ತಾರ ಪಾಲ್ಗೊಂಡಿದ್ದರು. ಸ್ವಿಮ್ಮಿಂಗ್ ಫೆಡರೇಷನ್ ಆಫ್ ಇಂಡಿಯಾ (SFI) ಮತ್ತು ಕರ್ನಾಟಕ ಈಜು ಸಂಸ್ಥೆ (KSA) ಜಂಟಿಯಾಗಿ ಆಯೋಜಿಸಿದ್ದ ಈ ಚಾಂಪಿಯನ್ ಶಿಪ್‌ನಲ್ಲಿ ಏಷ್ಯಾದ ಒಂಬತ್ತು ಪ್ರಮುಖ ದೇಶಗಳ ಈಜುಪಟುಗಳು ಭಾಗವಹಿಸಿದ್ದರು.
ಅಥಣಿಯ ಗ್ರಾಮೀಣ ಪ್ರತಿಭೆಯಾದ ಬಳವಂತ ಪತ್ತಾರ ಅವರು 75ರಿಂದ 79 ವರ್ಷಗಳ ವಯೋಮಾನದ ವಿಭಾಗದಲ್ಲಿ ಫ್ರೀಸ್ಟೈಲ್‌ನ 200 ಮೀಟರ್ ಹಾಗೂ 400 ಮೀಟರ್ ಈಜು ಸ್ಪರ್ಧೆಗಳಲ್ಲಿ ದ್ವಿತೀಯ ಸ್ಥಾನ ಗಳಿಸಿ, ಎರಡೂ ವಿಭಾಗಗಳಲ್ಲಿ ರಜತ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ಹವ್ಯಾಸಿ ಈಜುಗಾರರಾಗಿರುವ ಪತ್ತಾರ ಅವರು ಈಗಾಗಲೇ ಹೈದರಾಬಾದ್, ಸೂರತ್, ಅಂಬಾಲಾ ಹಾಗೂ ಹುಬ್ಬಳ್ಳಿಯಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಈಜು ಸ್ಪರ್ಧೆಗಳಲ್ಲಿ ಭಾಗವಹಿಸಿ, 6 ಚಿನ್ನದ ಪದಕಗಳು ಮತ್ತು 4 ಕಂಚಿನ ಪದಕಗಳನ್ನು ಗೆದ್ದಿದ್ದಾರೆ. ಇದೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ತಮ್ಮ ಪ್ರತಿಭೆ ಮೆರೆದಿರುವುದು ಅಥಣಿ ಪಟ್ಟಣದ ಜನರಲ್ಲಿ ಹೆಮ್ಮೆ ಮೂಡಿಸಿದೆ.
75ನೇ ವಯಸ್ಸಿನಲ್ಲಿಯೂ ಕ್ರೀಡೆಯ ಮೇಲಿನ ಆಸಕ್ತಿ, ಶಿಸ್ತು ಮತ್ತು ದೃಢಸಂಕಲ್ಪದಿಂದ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಎರಡು ರಜತ ಪದಕಗಳನ್ನು ಗೆದ್ದಿರುವ ಪತ್ತಾರ ಅವರು ಯುವಜನತೆಗೆ ಸ್ಫೂರ್ತಿಯಾಗಿದ್ದಾರೆ. ಅವರ ಸಾಧನೆಗೆ ಸಚಿವ ಲಕ್ಷ್ಮಣ ಸವದಿ, ಅಥಣಿಯ ಹವ್ಯಾಸಿ ಈಜುಗಾರರ ಬಳಗ, ಕುಟುಂಬಸ್ಥರು ಹಾಗೂ ಪಟ್ಟಣದ ನಾಗರಿಕರು ಅಭಿನಂದನೆ ಸಲ್ಲಿಸಿದ್ದಾರೆ.
ಅಥಣಿಯ ಹವ್ಯಾಸಿ ಈಜುಗಾರ ಬಳವಂತ ಪತ್ತಾರ ಅವರು ಅಂತಾರಾಷ್ಟ್ರೀಯ ಈಜು ಸ್ಪರ್ಧೆಯಲ್ಲಿ ಭಾಗವಹಿಸಿ ರಜತ ಪದಕಗಳನ್ನು ಗೆಲ್ಲುವ ಮೂಲಕ ನಾಡಿಗೆ ಕೀರ್ತಿ ತಂದಿದ್ದಾರೆ. ಇಂತಹ ಪ್ರತಿಭಾವಂತ ಕ್ರೀಡಾಪಟುಗಳಿಗೆ ಸೂಕ್ತ ತರಬೇತಿ ನೀಡಲು ಹಾಗೂ ಯುವಕರಲ್ಲಿ ಈಜು ಕ್ರೀಡೆಯನ್ನು ಉತ್ತೇಜಿಸಲು ಸರ್ಕಾರ ಅಥಣಿಯಲ್ಲಿ ಸುಸಜ್ಜಿತ ಈಜುಕೊಳ ನಿರ್ಮಿಸಬೇಕು.
-ಲಾಸರಾವ ಕುಲಕರ್ಣಿ, ಜಲಯೋಗ ಪಟು