
ಆನೇಕಲ್ (ಅಕ್ಟೋಬರ್ 10): ಬೆಂಗಳೂರಿನ ಗ್ರಾಮಾಂತರ ಜಿಲ್ಲೆಯಿಂದ ಭಾರೀ ದುಃಖದ ಸುದ್ದಿಯೊಂದು ಬಂದಿದೆ.. 10 ತಿಂಗಳ ಮಗು ದಾರುಣವಾಗಿ ಪ್ರಾಣ ಕಳೆದುಕೊಂಡಿದ್ದು, ಹಲವು ಅನುಮಾನಗಳಿಗೆ ಕಾರಣ ಮಾಡಿಕೊಟ್ಟಿದೆ. ಇತ್ತ ಮುದ್ದು ಕಂದಮ್ಮನನ್ನು ಕಳೆದಕೊಂಡ ಅಪ್ಪ-ಅಮ್ಮ ದುಃಖ ನೋಡಲು ಅಸಾಧ್ಯವಾಗಿದೆ.
ಬಿಹಾರದ ದೇವೇಂದ್ರ ಕುಮಾರ್ ಮತ್ತು ಬ್ಯೂಟಿ ಕುಮಾರಿ ಬೆಂಗಳೂರಿಗೆ ಆಗಮಿಸಿ ಬಾಡಿಗೆ ಮನೆಯಲ್ಲಿ ಇದ್ದರು. ಈ ದಂಪತಿಗೆ ಮುದ್ದಾದ ಮಗು ಜನಿಸಿತ್ತು. 10 ತಿಂಗಳದ ಮಗು ಕಳೆದ ಒಂದು ವಾರದಿಂದ ಜ್ವರ, ಕೆಮ್ಮು, ಕಫದಿಂದ ಬಳಲುತ್ತಿತ್ತು. ಈ ಹಿನ್ನೆಲೆಯಲ್ಲಿ ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಚಂದಾಪುರ ಮುಖ್ಯರಸ್ತೆಯಲ್ಲಿರುವ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಮಗುವಿನ ಆರೋಗ್ಯ ತಪಾಸಣೆ ನಡೆಸಿದ ವೈದ್ಯರು ಅಂಟಿಬಯೊಟಿಕ್ ಸೇರಿಂದತೆ ನಾಲ್ಕು ರೀತಿಯ ಸಿರಪ್ ನೀಡಿದ್ದಾರೆ ಎನ್ನಲಾಗಿದೆ. ದಿನಕ್ಕೆ ಮೂರು ಬಾರಿ 0.6 ml ಮಗುವಿಗೆ ನೀಡುವಂತೆ ತಿಳಿಸಿದ್ದಾರೆ. ನಿನ್ನೆ ರಾತ್ರಿ ಮನೆಯಲ್ಲಿ ಮಗುವಿಗೆ ಸಿರಪ್ ನೀಡಿದ್ದಾರೆ.
ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಪರಿಶೀಲನೆ ನಡೆಸಿದ ವೈದ್ಯರು ಮಗು ಮೃತಪಟ್ಟಿದೆ ಎಂದು ತಿಳಿಸಿದ್ದಾರೆ. ವೈದ್ಯರು ನೀಡಿದ ಸಿರಪ್‌ನಿಂದ ಮಗು ಮೃತಪಟ್ಟಿದ್ದಾರೆ ಎಂಬ ಅನುಮಾನ ಇದೆ. ಹಾಗಾಗಿ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ವಹಿಸಬೇಕು ಎಂದು ತಂದೆತಾಯಿ ಸೂರ್ಯನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಪ್ರಕರಣ ಸಂಬಂಧ ಆಸ್ಪತ್ರೆಯಾಗಲಿ ಅಥವಾ ವೈದ್ಯರಾಗಿ ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಕೇಸ್ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಆದರೆ ಮಗುವನ್ನ ಕಳೆದುಕೊಂಡ ಪೋಷಕರ ನೋವು ಹೇಳ ತೀರದ್ದಾಗಿದೆ. ವೈದ್ಯರ ಸಿರಪ್‌ನಿಂದ ಮಗು ಮೃತಪಟ್ಟಿದೆ ಎಂದು ಪೋಷಕರು ಹೇಳ್ತಿದ್ದಾರೆ. ಆದರೆ ಆ ಮಗುವಿಗೆ ಇನ್ಯಾವುದೇ ಆರೋಗ್ಯ ಸಮಸ್ಯೆ ಇತ್ತಾ ಅನ್ನೋದು ಕೂಡ ತನಿಖೆ ಆಗಬೇಕಿದೆ.
ಮಕ್ಕಳಿಗೆ ಸಿರಪ್ ನೀಡುವ ವಿಚಾರದಲ್ಲಿ ತುಂಬಾ ಎಚ್ಚರ ವಹಿಸಬೇಕು. ವೈದ್ಯರ ಸೂಚನೆ ಇಲ್ಲದೇ ಬೇಕಾಬಿಟ್ಟಿ ಔಷಧಿಗಳನ್ನ ನೀಡಬಾರದು. ಕೆಲವೊಂದು ಸಿರಪ್‌ಗಳು ತುಂಬಾ ಗಂಭೀರ ಪರಿಣಾಮಗಳನ್ನು ಉಂಟು ಮಾಡುತ್ತವೆ. ಅದೇ ಕಾರಣಕ್ಕೆ ಕೇಂದ್ರ ಸರ್ಕಾರ ಕೆಲವು ಸಿರಪ್‌ಗಳನ್ನ ಬ್ಯಾನ್ ಮಾಡಿದೆ. ಜೊತೆಗೆ ಮೆಡಿಕಲ್ ಸ್ಟೋರ್‍ಗಳಿಗೆ ವೈದ್ಯರ ಡಿಸ್‌ಕ್ರಿಪ್ಷನ್ ಇಲ್ಲದೇ ಯಾವುದೇ ಸಿರಪ್‌ಗಳನ್ನ ನೀಡಬಾರದು ಎಂದು ಖಡಕ್ ಆಗಿ ಹೇಳಿದೆ.
ನೀವು ನಿಮ್ಮ ಮಗುವಿಗೆ ಸಿರಪ್ ಕೊಡುವ ಅಗತ್ಯ ಬಿದ್ದಾಗ ವೈದ್ಯರು ತಿಳಿಸಿದ ಸಿರಪ್ ಅನ್ನೇ ನೀಡಿ. ಮಗುವಿನ ವಯಸ್ಸು, ಸಾಮರ್ಥ್ಯ, ತೂಕಕ್ಕೆ ಅನುಗುಣವಾಗಿ ಸಿರಪ್ ನೀಡಬೇಕು. ಡೇಟ್ ಎಕ್ಸ್‌ಪೈರಿಗಳನ್ನು ತಪ್ಪದೇ ಗಮನಿಸಿ, ಚಮಚದ ಬದಲಾಗಿ ಔಷಧಿಯ ಅಳತೆ ಸಾಧನ ಬಳಸಿ. ಅವಧಿ ಮೀರಿದ ಸಿರಪ್ ನೀಡಬೇಡಿ. ಎರಡು ಔಷಧಿಗಳನ್ನು ವೈದ್ಯರ ಸಲಹೆ ಇಲ್ಲದೇ ಬೆರಸಬಾರದು. ಅಲರ್ಜಿ ಅಥವಾ ಅಡ್ಡ ಪರಿಣಾಮ ಕಂಡು ಬಂದರೆ ಕೂಡಲೇ ವೈದ್ಯರನ್ನ ಸಂಪರ್ಕಿಸಬೇಕು.