ಬೆಳಗಾವಿಯಲ್ಲಿ ಭೀಕರ ಅಪಘಾತ: 18 ಜನರಿದ್ದ ಕ್ರೂಸರ್ ಮರಕ್ಕೆ ಡಿಕ್ಕಿ, ಒಬ್ಬರು ಸಾವು

By Sathish Kumar KH  |  First Published Nov 20, 2024, 8:18 PM IST

ಬೆಳಗಾವಿ ಜಿಲ್ಲೆಯಲ್ಲಿ ಕ್ರೂಸರ್ ವಾಹನ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಒಬ್ಬರು ಸಾವನ್ನಪ್ಪಿ, 17 ಮಂದಿ ಗಾಯಗೊಂಡಿದ್ದಾರೆ. ಮಿತಿಮೀರಿ ಪ್ರಯಾಣಿಕರನ್ನು ತುಂಬಿಕೊಂಡು ಹೋಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.


ಬೆಳಗಾವಿ (ನ.20): ಉತ್ತರ ಕರ್ನಾಟಕದ ಬೆಳಗಾವಿಯಲ್ಲಿ 12 ಜನರು ಪ್ರಯಾಣಿಸಬಹುದಾದ ಒಂದು ಕ್ರೂಸರ್ ವಾಹನದಲ್ಲಿ ಬರೋಬ್ಬರಿ 18 ಕೂಲಿ ಕಾರ್ಮಿಕರನ್ನು ತುಂಬಿಕೊಂಡು ಕರೆದೊಯ್ಯುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದಿದೆ. ಈ ಭೀಕರ ಅಪಘಾತದಲ್ಲಿ ಒಬ್ಬ ವೃದ್ಧ ಸಾವನ್ನಪ್ಪಿದ್ದು, ಬಾಕಿ 17 ಮಂದಿಗೆ ಗಂಭೀರ ಗಾಯಗಳಾಗಿವೆ. ಇಲ್ಲಿ ಕ್ರೂಸರ್ ವಾಹನ ನಜ್ಜುಗುಜ್ಜಾಗಿದೆ.

ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮುನವಳ್ಳಿ ಹೊರವಲಯದಲ್ಲಿ ಘಟನೆ ನಡೆದಿದೆ. ರಾಮದುರ್ಗ ತಾಲೂಕಿನ ಚುಂಚನೂರು ಗ್ರಾಮದಿಂದ ಕೂಲಿ ಕೆಲಸಕ್ಕೆ 18 ಜನರು ತೆರಳಿದ್ದರು. ಧಾರವಾಡ ಜಿಲ್ಲೆ ನವಲಗುಂದ ತಾಲೂಕಿನ ಹೆಬ್ಬಳ್ಳಿ ಗ್ರಾಮಕ್ಕೆ ಕೂಲಿ ಕೆಲಸಕ್ಕೆ ತೆರಳಿದ್ದರು. ಕೂಲಿ ಕೆಲಸ ಮುಗಿಸಿಕೊಂಡು ಮರಳಿ ತಮ್ಮ ಊರಿಗೆ ಹೋಗುವಾಗ ವಾಹನದ ಬ್ರೇಕ್ ಫೇಲ್ ಆಗಿ ಕ್ರೂಸರ್ ವಾಹನ ಮರಕ್ಕೆ ಡಿಕ್ಕಿ ಹೊಡೆದಿದೆ. ಮರಕ್ಕೆ ಡಿಕ್ಕಿಯಾಗಿ ಕ್ರ್ಯೂಸರ್ ಪಲ್ಟಿಗಿದ್ದು, ಈ ಅಪಘಾತದಲ್ಲಿ ಓರ್ವ ವೃದ್ಧ ಸಾವನ್ನಪ್ಪಿದ್ದಾರೆ. ಜೊತೆಗೆ, 17 ಜನ ಕೂಲಿ ಕಾರ್ಮಿಕರಿಗೂ ಗಂಭೀರ ಗಾಯಗಳಾಗಿವೆ. 

Tap to resize

Latest Videos

ಮೃತ ವೃದ್ಧ ಕಾರ್ಮಿಕನನ್ನು ಕೆಂಚಪ್ಪ ಲಕ್ಷ್ಮಣ ಈರನ್ನವರ (60) ಎಂದು ಗುರುತಿಸಲಾಗಿದೆ. ಡ್ರೈವರ್ ಸೀಟಿನ ಪಕ್ಕದಲ್ಲಿಯೇ ಕುಳಿತುಕೊಂಡಿದ್ದ ಈ ವೃದ್ಧ ಕೆಂಚಪ್ಪ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಉಳಿದಂತೆ ಗಂಭೀರ ಗಾಯಗೊಂಡಿರುವ 17 ಜನರ ಪೈಕಿ 3 ಜನರ ಸ್ಥಿತಿ ಚಿಂತಾಜನಕವಾಗಿದೆ. ಆದ್ದರಿಂದ ಈ ಘಟನೆಯಲ್ಲಿ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆಯಿದೆ. ಇನ್ನು ಸ್ಥಳಕ್ಕೆ ಸವದತ್ತಿ ಪೋಲಿಸ್ ಠಾಣಾ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಇನ್ನು ವಾಹನದ ಬ್ರೇಕ್ ಫೇಲ್ ಆಗಿದೆ ಎಂದು ಹೇಳಲಾಗುತ್ತಿದ್ದು, ಪೊಲೀಸರು ಚಾಲಕನಿಂದ ಮಾಹಿತಿ ಕಲೆ ಹಾಕುತ್ತಿದ್ದಾರೆ.

ಇದನ್ನೂ ಓದಿ: ಎಲ್ಲವೂ ಚೆನ್ನಾಗಿತ್ತು, ಆದ್ರೆ ಪಾರ್ಸಲ್‌ನಲ್ಲಿ ಬಂದ ಹೇರ್ ಡ್ರೈಯರ್‌ನಿಂದ ನನ್ನ ಕೈಗಳೇ ಕಟ್ ಆಯ್ತು!

12 ಜನರ ಸೀಟಿನಲ್ಲಿ 18 ಕಾರ್ಮಿಕರ ಸಾಗಾಟ: ಉತ್ತರ ಕರ್ನಾಟಕ ಭಾಗದಲ್ಲಿ ಕ್ರೂಸರ್ ವಾಹನಗಳಲ್ಲಿ ಜನರನ್ನು ಸಾಗಿಸುವುದು ಹೊಸದೇನೂ ಅಲ್ಲ. ಕ್ರೂಸರ್‌ನಲ್ಲಿ ಹೆಚ್ಚೆಂದರೆ 12 ಜನರು ಕುಳಿತುಕೊಳ್ಳಬಹುದು. ಆದರೆ, ಇಲ್ಲಿ ಜನರನ್ನು ಕುರಿಗಳಂತೆ ಕ್ರೂಸರ್ ವಾಹನದಲ್ಲಿ ಮಿತಿಮೀರಿ ತುಂಬುತ್ತಾರೆ. ಒಂದೊಂದು ಕ್ರೂಸರ್ ವಾಹನದಲ್ಲಿ 12 ಸೀಟಿಗೆ 20 ಜನರನ್ನು ಕೂರಿಸಿ ವಾಹನ ಚಲಾಯಿಸುತ್ತಾರೆ. ಇಲ್ಲಿ ಮುಖ್ಯವಾಗಿ ಕ್ರೂಸರ್ ಚಾಲಕ ತನ್ನ ಸೀಟಿನಲ್ಲಿ ಆರಾಮವಾಗಿ ಕುಳಿತು ಚಾಲನೆ ಮಾಡುವುದಕ್ಕೂ ಸ್ಥಳವನ್ನು ಬಿಟ್ಟುಕೊಳ್ಳದೇ, ವಾಹನದ ಗೇರ್‌ನ ಪಕ್ಕದಲ್ಲಿಯೂ ಒಬ್ಬ ಪ್ರಯಾಣಿಕರನ್ನು ಕೂರಿಸಿಕೊಳ್ಳುತ್ತಾರೆ. ಇದರಿಂದ ವಾಹನದ ಬಗ್ಗೆ ಅರಿವಿಲ್ಲದೆ ಪ್ರಯಾಣಿಕ ಸ್ವಲ್ಪ ಎಡವಟ್ಟು ಮಾಡಿದರೂ ವಾಹನದಲ್ಲಿದ್ದ ಎಲ್ಲರ ಜೀವಕ್ಕೂ ಅಪಾಯ ಕಟ್ಟಿಟ್ಟ ಬುತ್ತಿ. ಇನ್ನು ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಿಂದ ಬೆಂಗಳೂರಿಗೆ ಕಾರ್ಮಿಕರನ್ನು ತರಲು ಕೂಡ ಕ್ರೂಸರ್ ವಾಹನಗಳು ಬರುತ್ತಿದ್ದು, ಅವುಗಳಲ್ಲಿಯೂ ಇಂತಹದೇ ಪರಿಸ್ಥಿತಿ ಇದೆ.

ಇದನ್ನೂ ಓದಿ: ರಾತ್ರೋ ರಾತ್ರಿ ಶಿವ, ಗಣೇಶ ದೇವಸ್ಥಾನ ನೆಲಸಮ ಮಾಡಿದ ಸರ್ಕಾರ!

click me!