
ಬೆಂಗಳೂರು (ಡಿ.11): ಆಧಾರ್ ಕಾರ್ಡಿನಿಂದ (Aadhaar card) ಹಿಡಿದು ಭೂ ಹಿಡುವಳಿ ಪ್ರಮಾಣ ಪತ್ರದವರೆಗೆ 79 ಅಗತ್ಯ ಸೇವೆಗಳನ್ನು ಜನರ ಮನೆ ಬಾಗಿಲಿಗೇ ತಲುಪಿಸುವ `ಜನಸೇವಕ’ ಯೋಜನೆ (Jansevaka Yojana) ವ್ಯಾಪ್ತಿಗೆ ಸದ್ಯದಲ್ಲೇ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ - BDA ) ಸೇವೆಗಳನ್ನೂ ಸೇರಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ (Ashwath Narayan) ಹೇಳಿದ್ದಾರೆ. ಸುಬ್ರಹ್ಮಣ್ಯ ನಗರ ವಾರ್ಡ್ ವ್ಯಾಪ್ತಿಯ ಸಂಗೊಳ್ಳಿ ರಾಯಣ್ಣ (Sangolli Rayanna) ಉದ್ಯಾನದಲ್ಲಿ ಇಂದು ನಡೆದ ಮಲ್ಲೇಶ್ವರಂ (Malleshwaram) ಕ್ಷೇತ್ರದಲ್ಲಿ ಇತ್ತೀಚೆಗೆ ಚಾಲನೆ ಕಂಡಿದ್ದ `ಜನಸೇವಕ’ ಕಾರ್ಯಕ್ರಮ ಕುರಿತಾದ ವಾರ್ಡ್ (Ward) ವಾರು ಪ್ರತ್ಯೇಕ ಕಿರುಹೊತ್ತಿಗೆ ಬಿಡುಗಡೆ ಹಾಗೂ ಜನರಿಗೆ ಸಾಂಕೇತಿಕವಾಗಿ ಸೇವೆಗಳನ್ನು ಒದಗಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬಿಡಿಎ (BDA) ಸೇವೆಗಳು ಕೂಡ ಇದರ ವ್ಯಾಪ್ತಿಗೆ ತರಬೇಕೆಂದು ಸ್ಥಳೀಯರು ಮನವಿ ಸಲ್ಲಿಸಿದ್ದಕ್ಕೆ ಅವರು ಉತ್ತರ ನೀಡಿದರು. ಈ ಸಂಬಂಧ ಮುಖ್ಯಮಂತ್ರಿ (CM) ಜತೆಗೂ ಚರ್ಚಿಸಲಾಗುವುದು ಎಂದರು.
'ಜನಸೇವಕ’ (Jan Sevaka) ಕಾರ್ಯಕ್ರಮದ ಬಗ್ಗೆ ಜನಜಾಗೃತಿ ಮೂಡಿಸಲು ಮಲ್ಲೇಶ್ವರಂ ಕ್ಷೇತ್ರ ವ್ಯಾಪ್ತಿಯಲ್ಲಿರುವ ಪ್ರತಿಯೊಂದು ಮನೆಗೂ ಜನ ಸೇವಕ ಕೈ ಪಿಡಿಯನ್ನು ವಿತರಿಸಲಾಗುವುದು. ಇದರ ಮೂಲಕ ಜನರು ತಮಗೆ ಅಗತ್ಯವಿರುವ ಸೇವೆಗಳನ್ನು ನಿಗದಿತ ಶುಲ್ಕ ಭರಿಸಿ, ಮನೆ ಬಾಗಿಲಲ್ಲೇ ಪಡೆದುಕೊಳ್ಳಬಹುದು ಎಂದರು.
ಜನರು ಯಾವ ಸೇವೆ ತಮಗೆ ಅಗತ್ಯವಿದೆ ಎಂದು ತಿಳಿಸಿದರೆ ನುರಿತ `ಜನಸೇವಕ’ ಸ್ವಯಂ ಸೇವಕರು ಮನೆ ಬಾಗಿಲಿಗೇ ಬಂದು, ಆಯಾ ಸೇವೆಗೆ ಅಗತ್ಯವಿರುವ ದಾಖಲೆಗಳನ್ನು ಪಡೆದುಕೊಂಡು ನಿಗದಿತ ದಿನಗಳಲ್ಲಿ ಆ ಸೇವೆಗಳನ್ನು ತಲುಪಿಸಲಿದ್ದಾರೆ. ಇದರಿಂದ ಜನರು ಅನಗತ್ಯವಾಗಿ ಕಚೇರಿಗೆ (Govt Office) ಅಲೆಯುವುದು, ಮಧ್ಯ ವರ್ತಿಗಳಿಂದ ವಂಚನೆಗೆ ಒಳಗಾಗುವುದು ಮತ್ತು ಲಂಚ ಕೊಡುವುದು ತಪ್ಪುತ್ತದೆ ಎಂದು ತಿಳಿಸಿದರು.
`ಜನಸೇವಕ’ ಮೂಲಕ ಪಡೆಯುವ ಸೇವೆಗಳಿಗೆ ಜನರು ಯಾರಿಗೂ ದುಡ್ಡು ಕೊಡಬೇಕಾದ ಅಗತ್ಯವೇ ಇಲ್ಲ. ನಿಗದಿತ ಸರಕಾರಿ ಶುಲ್ಕ ಮತ್ತು ಜನಸೇವಕ ಶುಲ್ಕಗಳನ್ನು ನಿಗದಿತ ಖಾತೆಗಳಿಗೆ ಡಿಜಿಟಲ್ ಪಾವತಿ (Digital Payment) ಮಾಡಿದರೆ ಸಾಕು ಎಂದು ಸಚಿವರು ವಿವರಿಸಿದರು. ಕಾರ್ಯಕ್ರಮದಲ್ಲಿ ಇ-ಆಡಳಿತ ಯೋಜನಾಧಿಕಾರಿ ಬಿ.ಎನ್.ವರ ಪ್ರಸಾದ್ ರೆಡ್ಡಿ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.
*ಮನೆಮನೆಗೂ `ಜನಸೇವಕ ಕೈಪಿಡಿ’ ವಿತರಣೆ
ಮಲ್ಲೇಶ್ವರಂ (Malleshwaram) ಕ್ಷೇತ್ರ ವ್ಯಾಪ್ತಿಯಲ್ಲಿರುವ ಮನೆಮನೆಗೂ ಕ್ಷೇತ್ರದ ಶಾಸಕ ಮತ್ತು ಸಚಿವರಾದ ಅಶ್ವತ್ಥನಾರಾಯಣ ಅವರ ಕಚೇರಿಯಿಂದ `ಜನಸೇವಕ ಸಮಗ್ರ ಮಾಹಿತಿ ಕೈಪಿಡಿ’ಯನ್ನು ತಲುಪಿಸಲು ವ್ಯವಸ್ಥೆ ಮಾಡಲಾಗಿದ್ದು, ಈ ಕಾರ್ಯಕ್ರಮಕ್ಕೂ ಇಂದು ಚಾಲನೆ ನೀಡಲಾಯಿತು.
ಈ ಕೈಪಿಡಿಯಲ್ಲಿ ಸೇವೆಗಳ ವಿವರಗಳು, ಅವುಗಳಿಗೆ ಸರಕಾರ ನಿಗದಿ ಪಡಿಸಿರುವ ಶುಲ್ಕ, ಜನಸೇವಕ ಶುಲ್ಕ, ಸೇವೆಗೆ ಬೇಕಾಗುವ ದಾಖಲಾತಿಗಳ ವಿವರ, ಎಷ್ಟು ದಿನಗಳಲ್ಲಿ ಸೇವೆ ಒದಗಿಸಲಾಗುವುದು ಮತ್ತು ಸಂಬಂಧಿಸಿದ ಜನಸೇವಕರ/ಅಧಿಕಾರಿಗಳ ದೂರವಾಣಿ ಸಂಖ್ಯೆ (Phone Number) ಎಲ್ಲವನ್ನೂ ನೀಡಲಾಗಿದೆ. ಈ ಸೇವೆಗಳಲ್ಲಿ ಆಧಾರ್ ಕಾರ್ಡ್ ಸಂಬಂಧಿತ ಸೇವೆಗಳು, ಆರೋಗ್ಯ ಹೆಲ್ತ್ ಕಾರ್ಡ್ (Helath card), ಬಯೋಮೆಟ್ರಿಕ್ ಪರಿಷ್ಕರಣೆ, ಆದಾಯ ಮತ್ತು ಜಾತಿ ಪ್ರಮಾಣ ಪತ್ರ, ಭೂ ಹಿಡುವಳಿ ಪ್ರಮಾಣಪತ್ರ ಮತ್ತು ಬೋನಾಫೈಡ್ ಪ್ರಮಾಣ ಪತ್ರ ಮುಂತಾದವು ಸೇರಿವೆ. ಈ ಸೇವೆಗಳನ್ನೆಲ್ಲ ಕನಿಷ್ಠ ಒಂದು ದಿನದಿಂದ ಹಿಡಿದು ಗರಿಷ್ಠ 21 ದಿನಗಳಲ್ಲಿ ಜನರ ಮನೆ ಬಾಗಿಲಿಗೇ ತಲುಪಿಸಲಾಗುವುದು ಎಂದು ಸಚಿವರು ಮಾಹಿತಿ ನೀಡಿದರು.
*79 ಸೇವೆಗಳಿಗೆ 79 ಬೂತ್ ಸ್ಥಾಪನೆ
ಸಂಗೊಳ್ಳಿ ರಾಯಣ್ಣ ಉದ್ಯಾನದಲ್ಲಿ `ಜನಸೇವಕ’ ಉಪಕ್ರಮದಡಿ ಒದಗಿಸಲಾಗುವ ಎಲ್ಲ 79 ಸೇವೆಗಳಿಗೆ ಸಂಬಂಧಿಸಿದಂತೆಯೂ ತಲಾ ಒಂದೊಂದು ಬೂತ್ ತೆರೆಯಲಾಗಿತ್ತು. ಇವುಗಳ ಮುಂದೆ ನೂರಾರು ಜನರು ಸರದಿಯಲ್ಲಿ ನಿಂತು ತಮಗೆ ಬೇಕಾದ ಸೇವೆಗಳನ್ನು ಪಡೆದುಕೊಳ್ಳುತ್ತಿದ್ದರು. ಕಾರ್ಯಕ್ರಮದಲ್ಲಿ ಸಚಿವರು 30 ನಾಗರಿಕರಿಗೆ ಹಲವು ಸೇವೆಗಳನ್ನು ಸಾಂಕೇತಿಕವಾಗಿ ವಿತರಿಸಿದರು. ಇದೇ ಮಾದರಿಯನ್ನು ಕ್ಷೇತ್ರದ ಎಲ್ಲಾ ವಾರ್ಡುಗಳಲ್ಲೂ ಅನುಸರಿಸಲಾಗುತ್ತಿದೆ ಎಂದು ಅಶ್ವತ್ಥ ನಾರಾಯಣ ತಿಳಿಸಿದರು.