ಕೆಂಪೇಗೌಡ ಬಡಾವಣೆಗೆ ಮೂಲ ಸೌಕರ್ಯ ಒದಗಿಸಿದ ಬಿಡಿಎಗೆ ಛೀಮಾರಿ; ಆಯುಕ್ತರ ಖುದ್ದು ಹಾಜರಾತಿಗೆ ಸೂಚನೆ!

Published : Jan 24, 2025, 08:15 PM IST
ಕೆಂಪೇಗೌಡ ಬಡಾವಣೆಗೆ ಮೂಲ ಸೌಕರ್ಯ ಒದಗಿಸಿದ ಬಿಡಿಎಗೆ ಛೀಮಾರಿ; ಆಯುಕ್ತರ ಖುದ್ದು ಹಾಜರಾತಿಗೆ ಸೂಚನೆ!

ಸಾರಾಂಶ

ನಾಡಪ್ರಭು ಕೆಂಪೇಗೌಡ ಬಡಾವಣೆಯ ಅಭಿವೃದ್ಧಿ ಕಾಮಗಾರಿ ವಿಳಂಬಕ್ಕೆ ಬಿಡಿಎ ಅಧಿಕಾರಿಗಳಿಗೆ ವಿಧಾನಸಭಾ ಅರ್ಜಿ ಸಮಿತಿಯಿಂದ ಛೀಮಾರಿ ಹಾಕಲಾಗಿದೆ. ಮೂಲ ಸೌಕರ್ಯಗಳನ್ನು ಒದಗಿಸುವಲ್ಲಿ ವಿಫಲವಾಗಿರುವ ಬಿಡಿಎ ಆಯುಕ್ತರು ಮುಂದಿನ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ.

ಬೆಂಗಳೂರು (ಜ.24): ನಾಡಪ್ರಭು ಕೆಂಪೇಗೌಡ ಬಡಾವಣೆಯ (ಎನ್‌ಪಿಕೆಎಲ್) ಅಭಿವೃದ್ಧಿಗೆ ಸಂಬಂಧಿಸಿದಂತೆ ಮೂಲ ಸೌಕರ್ಯಗಳನ್ನು ಒದಗಿಸಲು ಈಗಾಗಲೇ 2 ಬಾರಿ ಗಡುವು ನೀಡಿದರೂ ಕೆಲಸ ಮಾಡದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಅಧಿಕಾರಿಗಳಿಗೆ ವಿಧಾನಸಭಾ ಅರ್ಜಿ ಸಮಿತಿಯಿಂದ ಛೀಮಾರಿ ಹಾಕಲಾಯಿತು. ಕೆಂಪೇಗೌಡ ಬಡಾವಣೆ ಪ್ರಗತಿ ಕುರಿತಂತೆ ಜ.30ರಂದು ನಡೆಯಲಿರುವ ವಿಚಾರಣೆಗೆ ಯಾವುದೇ ಸಬೂಬು ಹೇಳದೆ ಬಿಡಿಎ ಆಯುಕ್ತ ಎನ್. ಜಯರಾಮ್ ಖುದ್ದಾಗಿ ಹಾಜರಾಗಬೇಕು ಎಂದು ವಿಧಾನಸಭಾ ಅರ್ಜಿ ಸಮಿತಿಯಿಂದ ಸೂಚಿಸಲಾಯಿತು. 

ವಿಧಾನಸಭೆ ಅರ್ಜಿ ಸಮಿತಿಯ ಕಚೇರಿಯಲ್ಲಿ ಗುರುವಾರ ನಾಡಪ್ರಭು ಕೆಂಪೇಗೌಡ ಬಡಾವಣೆಯ ಅಭಿವೃದ್ಧಿ ಕುರಿತಂತೆ ಬಿಡಿಎ ಅಧಿಕಾರಿಗಳನ್ನು ವಿಚಾರಣೆ ನಡೆಸಲಾಯಿತು. ಬಿಡಿಎ ಆಯುಕ್ತರ ಎನ್. ಜಯರಾಮ್ ನ್ಯಾಯಾಲಯದ ವಿಚಾರಣೆಯ ಕಾರಣಗಳನ್ನು ನೀಡಿ ಗೈರು ಹಾಜರಾಗಿದ್ದರು. ಆದರೆ, ಬಿಡಿಎ ಪರವಾಗಿ ಅಭಿಯಂತರ-ಸದಸ್ಯ ಎಚ್.ಆರ್.ಶಾಂತರಾಜಣ್ಣ, ನಗರಾಭಿವೃದ್ಧಿ ಇಲಾಖೆ ಪರವಾಗಿ ಉಪ ಕಾರ್ಯದರ್ಶಿ ಪ್ರಶಾಂತ್ ಹಾಜರಾಗಿದ್ದರು.

ವಿಚಾರಣೆ ವೇಳೆ ಸಮಿತಿ ಸದಸ್ಯ ಎಸ್. ಸುರೇಶ್ ಕುಮಾರ್ ಮಾತನಾಡಿ, ಕೆಂಪೇಗೌಡ ಬಡಾವಣೆಯ ಅಭಿವೃದ್ಧಿ ಕಾಮಗಾರಿ ಪೂರ್ಣಗೊಳಿಸಿಲು 2 ಬಾರಿ ಬಿಡಿಎಗೆ ಗಡುವು ವಿಸ್ತರಿಸಿದರೂ ಮೂಲಸೌಕರ್ಯಗಳನ್ನು ಒದಗಿಸುವಲ್ಲಿ ಬಿಡಿಎ ವಿಫಲವಾಗಿದೆ. ಆದರೆ, ಈವರೆಗೆ ಯಾವುದೇ ಸೈಟ್‌ಗಳನ್ನು ಹಂಚದ ಶಿವರಾಮ ಕಾರಂತ್ ಬಡಾವಣೆಗೆ ರಸ್ತೆಗಳಿಗೆ ಟಾರ್ ಹಾಕುವುದಕ್ಕೆ ಬಿಡಿಎ ಆದ್ಯತೆ ನೀಡಿದ್ದೇಕೆ? 10,000 ಸಾರ್ವಜನಿಕರಿಗೆ ಹಾಗೂ ಭೂಮಿ ಕೊಟ್ಟ ರೈತರಿಗೆ ನಿವೇಶನ ಹಂಚಿಕೆ ಸೇರಿದಂತೆ ಒಟ್ಟು 29 ಸಾವಿರ ನಿವೇಶನ ಹಂಚಲಾಗಿದೆ. ಆದರೂ, ಕೆಂಪೇಗೌಡ ಬಡಾವಣೆ ಅಭಿವೃದ್ಧಿಗೆ ಏಕೆ ಆದ್ಯತೆ ನೀಡುತ್ತಿಲ್ಲ ಎಂದು ಕಿಡಿಕಾರಿದರು.

ಬೆಂಗಳೂರಿನಲ್ಲಿ ಸ್ವಂತ ಮನೆಯನ್ನು ಮನೆ ನಿರ್ಮಿಸಲು ಎಲ್ಲರೂ ತಮ್ಮ ಜೀ ಮಾನದ ಸೇವಿಂಗ್ಸ್ ಹಣವನ್ನು ಸೈಟ್ ಖರೀದಿ ಮತ್ತು ಮನೆ ನಿರ್ಮಾಣಕ್ಕೆ ಹೂಡಿಕೆ ಮಾಡಿದ್ದಾರೆ. ಆದರೆ, ಈವರೆಗೆ ಬಿಡಿಎ ನಿವೇಶನ ಖರೀದಿ ಮಾಡಿದವರಿಗೆ ಸಮರ್ಪಕ ಮೂಲ ಸೌಕರ್ಯ ಒದಗಿಸಿಲ್ಲ. ರಸ್ತೆ ಸಂಪರ್ಕ, ಒಳಚರಂಡಿ, ವಿದ್ಯುತ್ ಮತ್ತು ಕುಡಿಯುವ ನೀರಿನ ಮೂಲ ಸೌಕರ್ಯಗಳು ಇಲ್ಲದ ಕಾರಣ ನಿವೇಶನ ಖರೀದಿ ಮಾಡಿದವರು ಮನೆಗಳನ್ನು ನಿರ್ಮಿಸಲು ಸಾಧ್ಯವಾಗುತ್ತಿಲ್ಲ. ಎಲ್ಲ ಕಷ್ಟಗಳ ನಡುವೆ ಮನೆಗಳನ್ನು ನಿರ್ಮಿಸಿದವರು ಸಹ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ಎನ್‌ಪಿಕೆಎಲ್ ಸದಸ್ಯರು ತಿಳಿಸಿದರು.

ಇದನ್ನೂ ಓದಿ: ಬೆಂಗಳೂರು: ಕೆಂಪೇಗೌಡ ಬಡಾವಣೆಯಲ್ಲಿ ಸೈಟ್‌ ಸಿಗಲು ಪುಣ್ಯ ಬೇಕು, ಹೈಕೋರ್ಟ್‌!

ಶಾಸಕ ಸಿ.ಎನ್. ಬಾಲಕೃಷ್ಣ ಅವರು ಸಮಿತಿಯು ಬಡಾವಣೆಯ ಮೌಲ್ಯಮಾಪನಕ್ಕಾಗಿ ಸ್ಥಳ ಪರಿಶೀಲನೆ ಮಾಡಬೇಕು ಎಂದು ಸೂಚಿಸಿದರು. ಇದಕ್ಕೆ ಸೋಮಶೇಖರ್ ಕೂಡ ಬೆಂಬಲಿಸಿದರು. ಹೀಗಾಗಿ, ಮುಂದಿನ ಸಭೆಯಲ್ಲಿ ಆಯುಕ್ತರನ್ನು ಕೇಳಿದ ನಂತರ ತೀರ್ಮಾನ ಕೈಗೊಳ್ಳುತ್ತೇಋವೆ ಎಂದು ಇಂಜಿನಿಯರಿಂಗ್ ಮೆಂಬರ್ ಶಾಂತರಾಜಣ್ಣ ಸಭೆಗೆ ಉತ್ತರಿಸಿದರು. ಆಗ ಶಾಸಕ ಯು.ಬಿ. ಬಣಕಾರ್ ಅವರು ಸಮಿತಿ ನೀಡಿದ ಗಡುವನ್ನು ಬಿಡಿಎ ಉಲ್ಲಂಘಿಸಿದರೆ ಸಮಿತಿಯ ಸೂಚನೆ ನಿರ್ಲಕ್ಷಿಸಿದಂತಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಇದೀಗ ಕೆಂಪೇಗೌಡ ಬಡಾವಣೆ ನಿವಾಸಿಗಳು ದೂರದಿಂದ  ವಿದ್ಯುತ್ ಲೈನ್‌ ಅನ್ನು ತಮ್ಮ ಸ್ವಂತ ವೆಚ್ಚದಲ್ಲಿ ಎಳೆದುಕೊಳ್ಳಲು ಮತ್ತು ವಿದ್ಯುತ್ ಬಳಕೆಗೆ ದುಬಾರಿ ವಾಣಿಜ್ಯ ದರವನ್ನು ಪಾವತಿಸಬೇಕಾಗಿದೆ. ಇದಕ್ಕೆ ಬೇರೆ ಆಯ್ಕೆ ಇಲ್ಲ. ಆದರೆ, ಬಿಡಿಎ ವತಿಯಿಂದ ಎಲ್ಲ ಮೂಲಸೌಕರ್ಯ ಒದಗಿಸುವುದಾಗಿ ನಿವೇಶನ ಮಾರಾಟ ಮಾಡಿದ ನಂತರ ಇದೀಗ, ಭೂಗತ ವಿದ್ಯುತ್ ಕೇಬಲ್ ಅಳವಡಿಕೆಗೆ ಪುನಃ ರಸ್ತೆ ಕತ್ತರಿಸುವ ಶುಲ್ಕವಾಗಿ ಎಲ್ಲ ನಿವೇಶನದಾರರಿಂದ 31,000 ರೂಪಾಯಿಗಳನ್ನು ಸಂಗ್ರಹಿಸಿದ್ದು ಏಕೆ ಎಂದು ಪ್ರಶ್ನೆ ಮಾಡಿದರು. ಇದಕ್ಕೆಲ್ಲ ಉತ್ತರ ಕೊಡಲಾಗದೇ ಬಿಡಿಎ ಅಧಿಕಾರಿ ತಡಬಡಾಯಿಸಿದರು. ಹೀಗಾಗಿ, ಮುಂದಿನ ವಿಚಾರಣೆಗೆ ಖುದ್ದಾಗಿ ಬಿಡಿಎ ಆಯುಕ್ತ ಎನ್. ಜಯರಾಮು ಅವರು ಹಾಜರಾಗುವಂತೆ ಸೂಚಿಸಲಾಯಿತು.

ಇದನ್ನೂ ಓದಿ: ಕೆಂಪೇಗೌಡ ಬಡಾವಣೆ ಸೈಟ್ ಖರೀದಿದಾರರ ಬವಣೆ ತೀರಿಸದ ಬಿಡಿಎ; ಮನೆ ಕಟ್ಟೋಕೂ ಆಗ್ತಿಲ್ಲ, ಕಟ್ಟಿದರೆ ಇರೋದಕ್ಕೂ ಆಗೊಲ್ಲ!

ವಿಧಾನಸಭಾ ಸಮಿತಿ ಅರ್ಜಿ ಸಮಿತಿ ವಿಚಾರಣೆ ವೇಳೆ ಶಾಸಕ ಎಸ್.ಟಿ. ಸೋಮಶೇಖರ್, ಎಸ್. ಸುರೇಶ್ ಕುಮಾರ್, ಯು.ಬಿ. ಬಣಕಾರ್, ಸಿ.ಎನ್. ಬಾಲಕೃಷ್ಣ, ಎ.ಸಿ. ಶ್ರೀನಿವಾಸ್, ಎ. ಮಂಜು, ಡಾ. ಅವಿಶ್ ಉಪಸ್ಥಿತರಿದ್ದರು.

PREV
Read more Articles on
click me!

Recommended Stories

ಪುಟಿನ್‌ಗೆ ಇಲ್ಲೇ ಎಲೆಕ್ಷನ್‌ ನಿಲ್ಲೋಕೆ ಟಿಕೆಟ್‌ ಕೊಡ್ತಾರೆ ಅಂದ್ಕೊಂಡಿದ್ದೆ.. ಸಂತೋಷ್‌ ಲಾಡ್‌ ಲೇವಡಿ
ಗಡುವು ಮೀರಿಸಿದರೆ ಮುಂದೆ ಕೆಲಸವಿಲ್ಲ: ಮೆಟ್ರೋ ಗುತ್ತಿಗೆದಾರರಿಗೆ ಡಿ.ಕೆ.ಶಿವಕುಮಾರ್‌ ಎಚ್ಚರಿಕೆ