ಬಿಡಿಎ ಅಧಿಕಾರಿಗಳ ಸೋಗಲ್ಲಿ ಅಕ್ರಮ ಮನೆ ಮಾಲೀಕರಿಂದ ಹಣ ವಸೂಲಿ

By Kannadaprabha NewsFirst Published Nov 22, 2020, 9:01 AM IST
Highlights

ಸೀಲು, ಸಹಿ ನಕಲು| ಸಿಎ ಸೈಟ್‌ ಗುತ್ತಿಗೆ ಪಡೆದವರಿಗೆ ಬಿಡಿಎ ಹೆಸರಲ್ಲಿ ಬೆದರಿಕೆ ಪತ್ರ| ಅಕ್ರಮ ಸೈಟ್‌ಗಳ ಸಕ್ರಮ ಮಾಡುವುದಾಗಿ ಹಣ ಲೂಟಿ, ಎಚ್ಚರವಾಗಿರಿ: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಡಾ.ಮಹದೇವ| 
 

ಬೆಂಗಳೂರು(ನ.22): ಸಿಎ ಸೈಟ್‌ನ ಗುತ್ತಿಗೆದಾರರಿಗೆ ಮತ್ತು ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ಮನೆ ಕಟ್ಟಿಕೊಂಡವರಿಗೆ ಬಿಡಿಎ ಅಧಿಕಾರಿ ಹೆಸರಲ್ಲಿ ಬೆದರಿಸಿ ದುಡ್ಡು ವಸೂಲಿ ಮಾಡಿ ವಂಚಿಸುತ್ತಿರುವ ಪ್ರಕರಣಗಳು ಪತ್ತೆಯಾಗುತ್ತಿದೆ. ಇಂತಹ ವ್ಯಕ್ತಿಗಳ ಬಗ್ಗೆ ಎಚ್ಚರವಾಗಿರುವಂತೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಡಾ.ಮಹದೇವ ತಿಳಿಸಿದ್ದಾರೆ.

ನಗರದ ವಿವಿಧ ಭಾಗಗಳಲ್ಲಿ ಮತ್ತು ಬಿಡಿಎ ಬಡಾವಣೆಗಳಲ್ಲಿ ನಾಗರಿಕ ಸೌಲಭ್ಯ ನಿವೇಶನ(ಸಿಎ ಸೈಟ್‌)ಗಳನ್ನು ವಿವಿಧ ಉದ್ದೇಶಕ್ಕಾಗಿ ಗುತ್ತಿಗೆ ಆಧಾರದ ಮೇಲೆ ಹಂಚಿಕೆ ಮಾಡಲಾಗಿದೆ. ಕೆಲವು ಕಿಡಿಗೇಡಿಗಳು ಪ್ರಾಧಿಕಾರದ ಪತ್ರಗಳು, ಅಧಿಕಾರಿಗಳ ಸಹಿ, ಮೊಹರುಗಳನ್ನು ನಕಲು ಮಾಡಿ, ನಿವೇಶನಗಳನ್ನು ಗುತ್ತಿಗೆ ಪಡೆದಿರುವ ಸಂಘ-ಸಂಸ್ಥೆಗಳಿಗೆ ಬಿಡಿಎ ಹೆಸರಿನಲ್ಲಿ ಪತ್ರಗಳನ್ನು ಕಳುಹಿಸಿ ಬೆದರಿಕೆ ಹಾಕುತ್ತಿದ್ದಾರೆ.

ಬಿಡಿಎ ಫ್ಲ್ಯಾಟ್‌ ಹಣ ಕಟ್ಟಲು ಮೂರು ತಿಂಗಳು ಗಡುವು

ಜತೆಗೆ ಗುತ್ತಿಗೆದಾರರಿಗೆ ಹಂಚಿಕೆ ಮಾಡಲಾದ ಸಿಎ ನಿವೇಶನವನ್ನು ಇತರೆ ಉದ್ದೇಶಕ್ಕೆ ಬಳಕೆ ಮಾಡಲಾಗುತ್ತಿದೆ. ಈ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದಿವೆ. ಆದ್ದರಿಂದ ತಮ್ಮ ಗುತ್ತಿಗೆಯನ್ನು ರದ್ದುಪಡಿಸಲು ಕ್ರಮ ಕೈಗೊಳ್ಳುವುದಾಗಿ ಬಿಡಿಎ ಅಧಿಕಾರಿಗಳ ಸಹಿ ಇರುವ ಪತ್ರಗಳನ್ನು ಗುತ್ತಿಗೆದಾರರಿಗೆ ಕಳುಹಿಸಿ ಭಯ ಹುಟ್ಟಿಸಿ ಹಣ ವಸೂಲಿ ಮಾಡುತ್ತಿರುವ ಪ್ರಕರಣಗಳು ಪ್ರಾಧಿಕಾರದ ಗಮನಕ್ಕೆ ಬಂದಿವೆ ಎಂದು ಆಯುಕ್ತರು ತಿಳಿಸಿದ್ದಾರೆ.

ಇದೇ ಮಾದರಿಯಲ್ಲಿ ಅಕ್ರಮ-ಸಕ್ರಮ ವ್ಯಾಪ್ತಿಗೆ ಒಳಪಡುವ ನಿವೇಶನ- ಮನೆ ಸಂಖ್ಯೆ ಇತ್ಯಾದಿಗಳನ್ನು ನಮೂದಿಸಿ ಪ್ರಾಧಿಕಾರದ ಆಯುಕ್ತರ ಆದೇಶದ ಮೇರೆಗೆ ಅಕ್ರಮವಾಗಿ ನಿರ್ಮಿಸಿರುವ ಕಟ್ಟಡಗಳನ್ನು ಸಕ್ರಮಗೊಳಿಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿ ಮನೆ ಮಾಲೀಕರಿಂದ ಹಣ ವಸೂಲಿ ಮಾಡುತ್ತಿದ್ದರೆ. ಇಂತಹ ಯಾವುದೇ ಪತ್ರಗಳನ್ನು ಬಿಡಿಎ ಈವರೆಗೂ ಕಳುಹಿಸಿಲ್ಲ. ಇಂತಹ ನಕಲಿ ಪತ್ರಗಳ ಬಗ್ಗೆ ಪ್ರಾಧಿಕಾರದ ಜಾಗೃತ ದಳವು ತನಿಖೆ ಪ್ರಾರಂಭಿಸಿದ್ದು, ಪ್ರಕರಣವು ತನಿಖೆಯ ಹಂತದಲ್ಲಿದೆ. ಸಾರ್ವಜನಿಕರಿಗೆ ಪ್ರಾಧಿಕಾರದ ಹೆಸರಿನಲ್ಲಿ ಇಂತಹ ಯಾವುದೇ ಪತ್ರಗಳು ಬಂದಿದ್ದರೆ ಬಿಡಿಎ ಕೇಂದ್ರ ಕಚೇರಿಯನ್ನು ಸಂಪರ್ಕಿಸಿ ಪತ್ರದ ಸತ್ಯಾಸತ್ಯತೆ ವಿಚಾರಿಸಿಕೊಳ್ಳಬೇಕು ಎಂದು ಆಯುಕ್ತರು ಸೂಚಿಸಿದ್ದಾರೆ.
 

click me!