ಬೆಂಗಳೂರು : ಜ.18ಕ್ಕಾದ್ರೂ ನಡೆಯುತ್ತಾ ಚುನಾವಣೆ?

By Kannadaprabha NewsFirst Published Jan 17, 2020, 8:12 AM IST
Highlights

ಜನವರಿ 18ಕ್ಕೆ ನಿಗದಿಯಾಗಿರುವ ಈ ಚುನಾವಣೆ ನಡೆಯುತ್ತಾ ..? ಅಥವಾ ಮತ್ತೆ ಮುಂದೂಡುತ್ತಾ ಎನ್ನೋ ಅನುಮಾನಗಳು ಕಾಡುತ್ತಿವೆ.  

ಬೆಂಗಳೂರು [ಜ.17]: ಮೂರು ಬಾರಿ ಮುಂದೂಡಿಕೆ ನಂತರ ನಾಲ್ಕನೇ ಬಾರಿಗೆ ನಿಗದಿಯಾಗಿರುವ ಬಿಬಿಎಂಪಿಯ 12 ಸ್ಥಾಯಿ ಸಮಿತಿಗಳ ಚುನಾವಣೆ ಜ. 18 ರಂದು ನಡೆಯುತ್ತದೆಯೇ ಅಥವಾ ಇಲ್ಲವೇ ಎಂಬ ಗೊಂದಲ ಮಾತ್ರ ಪರಿಹಾರವಾಗಿಲ್ಲ.

ಬಿಬಿಎಂಪಿಯ 12 ಸ್ಥಾಯಿ ಸಮಿತಿಗಳಿಗೆ ಪ್ರಾದೇಶಿಕ ಚುನಾವಣಾ ಆಯುಕ್ತರು ಜ.18ಕ್ಕೆ ದಿನಾಂಕ ನಿಗದಿ ಮಾಡಿದ್ದಾರೆ. ಬಿಬಿಎಂಪಿ ಕೌನ್ಸಿಲ್‌ ಸಭಾಂಗಣದಲ್ಲಿ ನಡೆಯಲಿರುವ ಚುನಾವಣೆಗೆ ಸಕಲ ಸಿದ್ಧತೆ ಮಾಡಲಾಗಿದೆ. ಪ್ರತಿವರ್ಷ ಸ್ಥಾಯಿ ಸಮಿತಿ ಸದಸ್ಯರ ಚುನಾವಣೆಗೂ ಮುನ್ನ ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ ಹಾಗೂ ಪಕ್ಷೇತರ ಸದಸ್ಯರ ಅನೌಪಚಾರಿಕ ಸಭೆ ನಡೆಸಿ ಯಾವ ಸ್ಥಾಯಿ ಸಮಿತಿಗೆ ಯಾರು ಸದಸ್ಯರಾಗಬೇಕು, ಪ್ರತಿ ಸ್ಥಾಯಿ ಸಮಿತಿಯಲ್ಲಿ ಆಡಳಿತ, ವಿರೋಧ ಪಕ್ಷದ ಎಷ್ಟುಮಂದಿ ಸದಸ್ಯರು ಇರಬೇಕು ಎಂಬುದರ ಬಗ್ಗೆ ಚರ್ಚೆ ನಡೆಸಲಾಗುತ್ತಿತ್ತು. ಆದರೆ, ಈ ಬಾರಿ ಅನೌಪಚಾರಿಕ ಸಭೆ ನಡೆಸಿಲ್ಲ.

ಬಿಬಿಎಂಪಿಯಲ್ಲೂ ವರ್ಗಾವಣೆ ನೀತಿ ಜಾರಿ..?...

ಸ್ಥಾಯಿ ಸಮಿತಿ ಚುನಾವಣೆ ಅಧಿಕಾರ ಅವಧಿಯೂ ಒಂದು ವರ್ಷವಿರುತ್ತದೆ. ಆದರೆ, ಈ ಬಾರಿ ನಾನಾ ಕಾರಣಗಳಿಂದ ಸ್ಥಾಯಿ ಸಮಿತಿ ಚುನಾವಣೆ ಮುಂದೂಡಿಕೆಯಾಗಿದ್ದು. ಸ್ಥಾಯಿ ಸಮಿತಿಗಳ ಅಧಿಕಾರ ಅವಧಿಯು ಕೇವಲ ಆರು ತಿಂಗಳಿಗೆ ಸೀಮಿತವಾಗಿದೆ. ಹೀಗಾಗಿ, ಸ್ಥಾಯಿ ಸಮಿತಿ ಸದಸ್ಯ ಮತ್ತು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಸದಸ್ಯರು ಹಿಂದೇಟು ಹಾಕುತ್ತಿದ್ದಾರೆ.

ಇಂದು ಮುಖಂಡರ ಸಭೆ ಸಾಧ್ಯತೆ:

ಸ್ಥಾಯಿ ಸಮಿತಿ ಚುನಾವಣೆ ಇರುವುದರಿಂದ ಬಿಜೆಪಿ, ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷಗಳು ಜ.17ರಂದು ಸಭೆ ಕರೆದಿವೆ.

ವಿಶೇಷವಾಗಿ ಬಿಜೆಪಿಯಲ್ಲಿ ಸ್ಥಾಯಿ ಸಮಿತಿಗೆ ಸದಸ್ಯರ ಆಯ್ಕೆ ಮಾಡುವುದು ಕಗ್ಗಂಟಾಗಿದೆ. ಪ್ರಮುಖವಾಗಿ ಮೂಲ ಬಿಜೆಪಿಗರು ಹಾಗೂ ಬಿಜೆಪಿ ಅಧಿಕಾರಕ್ಕೆ ಬರುವಲ್ಲಿ ಸಹಾಯ ಮಾಡಿದ ಜೆಡಿಎಸ್‌ ಹಾಗೂ ಪಕ್ಷೇತರ ಸದಸ್ಯರಿಗೆ ಯಾವ ಸಮಿತಿಯ ಅಧ್ಯಕ್ಷ ಸ್ಥಾನ ನೀಡಬೇಕು. ಇನ್ನು ಬಿಜೆಪಿ ಬೆಂಬಲಿತ ಕಾಂಗ್ರೆಸ್‌ನಿಂದ ಉಚ್ಛಾಟಿತ ಸದಸ್ಯರಿಗೆ ಸ್ಥಾಯಿ ಸಮಿತಿ ಸದಸ್ಯ ಸ್ಥಾನ ನೀಡಬೇಕೇ ಅಥವಾ ಬೇಡವೇ ಎನ್ನುವುದು ಇತ್ಯರ್ಥವಾಗಬೇಕಾಗಿದೆ. ಈ ಬಗ್ಗೆ ಬಿಜೆಪಿಯ ಶಾಸಕರು ಮತ್ತು ಮುಖಂಡರು ಸಭೆ ನಡೆಸಿ ಅಂತಿಮ ತೀರ್ಮಾನ ತೆಗೆದುಕೊಳ್ಳಲಿದ್ದಾರೆ.

ಜೆಡಿಎಸ್‌ ಏಕಾಂಗಿ ಸ್ಪರ್ಧೆಗೆ ಸಜ್ಜು : ಶೇ.50ರಷ್ಟು ಟಿಕೆಟ್‌ ಮಹಿಳೆಯರಿಗೆ.

ಯಾವುದೇ ಕಾರಣಕ್ಕೂ ಈ ಬಾರಿ ಸ್ಥಾಯಿ ಸಮಿತಿ ಚುನಾವಣೆ ಮುಂದೂಡಲು ಅವಕಾಶ ನೀಡುವುದಿಲ್ಲ. ಕಾಂಗ್ರೆಸ್‌ ಮತ್ತು ಜೆಡಿಎಸ್‌ನ ಪಾಲಿಕೆ ಸದಸ್ಯರು ಒಟ್ಟಾಗಿದ್ದು, ಬಿಜೆಪಿಯವರು ಸ್ಥಾಯಿ ಸಮಿತಿ ಚುನಾವಣೆಗೆ ನಾಮಪತ್ರ ಸಲ್ಲಿಕೆ ಮಾಡದೆ ಇದ್ದರೆ, ಒಂದು ಸ್ಥಾಯಿ ಸಮಿತಿಗೆ ಆರು ಜನ ಸದಸ್ಯರಂತೆ ಎಲ್ಲ ಸ್ಥಾಯಿ ಸಮಿತಿಗೆ ನಾಮಪತ್ರ ಸಲ್ಲಿಸಲಿದ್ದೇವೆ.

-ಅಬ್ದುಲ್‌ವಾಜಿದ್‌, ಪಾಲಿಕೆ ವಿರೋಧ ಪಕ್ಷದ ನಾಯಕ.

ಸ್ಥಾಯಿ ಸಮಿತಿ ಚುನಾವಣೆ ಮುಂದೂಡುವುದಿಲ್ಲ. ನೂರಕ್ಕೆ ನೂರಷ್ಟುಚುನಾವಣೆ ನಡೆಯಲಿದೆ. ಇದಕ್ಕೆ ಬೇಕಾದ ಎಲ್ಲ ಸಿದ್ಧತೆಗಳನ್ನೂ ಮಾಡಿಕೊಳ್ಳಲಾಗಿದೆ.

-ಮುನೀಂದ್ರಕುಮಾರ್‌, ಪಾಲಿಕೆ ಆಡಳಿತ ಪಕ್ಷದ ನಾಯಕ.
 
3 ಬಾರಿ ಚುನಾವಣೆ ಮುಂದೂಡಲಾಗಿತ್ತು

ಈ ಹಿಂದೆ ಅ.1, ಡಿ.4 ಹಾಗೂ ಡಿ.30ಕ್ಕೆ ಸ್ಥಾಯಿ ಸಮಿತಿ ಚುನಾವಣೆ ಘೋಷಣೆ ಮಾಡಲಾಗಿತ್ತು. ಆದರೆ, ಸ್ಥಾಯಿ ಸಮಿತಿಯ ಸದಸ್ಯಸ್ಥಾನಕ್ಕೆ ಪಾಲಿಕೆಯ ಯಾವುದೇ ಸದಸ್ಯರು ನಾಮಪತ್ರ ಸಲ್ಲಿಕೆ ಮಾಡದ ಹಿನ್ನೆಲೆಯಲ್ಲಿ ಪ್ರಾದೇಶಿಕ ಆಯುಕ್ತರು ಚುನಾವಣೆಯನ್ನು ಅನಿವಾರ್ಯವಾಗಿ ಮುಂದೂಡಿದ್ದರು.

click me!