ರೋಣ: ನೆರೆ ಸಂತ್ರಸ್ತರ ಭರವಸೆ ಮರೆತ ಜಿಲ್ಲಾಧಿಕಾರಿ

Kannadaprabha News   | Asianet News
Published : Jan 17, 2020, 08:11 AM IST
ರೋಣ: ನೆರೆ ಸಂತ್ರಸ್ತರ ಭರವಸೆ ಮರೆತ ಜಿಲ್ಲಾಧಿಕಾರಿ

ಸಾರಾಂಶ

ಸಂತ್ರಸ್ತರ ಮಧ್ಯಯೇ ಕಲಹದಿಂದ ಗ್ರಾಮದಲ್ಲಿ ಎರಡ್ಮೂರು ಬಾರಿ ಸಭೆ| ಮಹಾಮಳೆಗೆ ಬೆಣ್ಣೆಹಳ್ಳ ಪ್ರವಾಹ ಉಂಟಾಗಿ ಬಿ.ಎಸ್‌. ಬೇಲೇರಿ ಗ್ರಾಮದಲ್ಲಿ ಜನತೆ ತತ್ತರಿಸಿದ್ದರು| ಬಿ.ಎಸ್‌. ಬೇಲೇರಿ ಗ್ರಾಮದಲ್ಲಿ ನವಗ್ರಾಮ ಮನೆಗಳ ಹಕ್ಕು ಪತ್ರ ಸಂಬಂಧ ಸಂತ್ರಸ್ತರ ನಡುವೆ ಕಲಹ ಎದ್ದ ಉಂಟಾಗಿತ್ತು|

ಸಂಜೀವಕುಮಾರ ಹಿರೇಮಠ

ಹೊಳೆಆಲೂರ(ಜ.17): ಕಳೆದ ವರ್ಷ ಇಲ್ಲಿಗೆ ಸಮೀಪದ ಬಿ.ಎಸ್‌. ಬೇಲೇರಿ ಗ್ರಾಮದಲ್ಲಿ ಮಹಾಮಳೆಗೆ ಬೆಣ್ಣೆಹಳ್ಳ ಪ್ರವಾಹ ಉಂಟಾಗಿ ಜನತೆ ತತ್ತರಿಸಿದ್ದರು. ಈ ವೇಳೆ ಇಲ್ಲಿಯ ಸಂತ್ರಸ್ತರಿಗೆ ಶೀಘ್ರದಲ್ಲಿ ಹಕ್ಕುಪತ್ರ ವಿತರಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದರು. ಆದರೆ ಭರವಸೆ ಮಾತ್ರ ಇನ್ನೂ ಈಡೇರಿಲ್ಲ.

ಬಿ.ಎಸ್‌. ಬೇಲೇರಿ ಗ್ರಾಮದಲ್ಲಿ ನವಗ್ರಾಮ ಮನೆಗಳ ಹಕ್ಕು ಪತ್ರ ಸಂಬಂಧ ಸಂತ್ರಸ್ತರ ನಡುವೆ ಕಲಹ ಎದ್ದ ಉಂಟಾಗಿತ್ತು. ಸ್ವಾಮಿಗಳ ಸಮ್ಮುಖ, ಅಧಿಕಾರಿಗಳ ಹಾಜರಿಯಲ್ಲಿ ಗ್ರಾಮಸಭೆ ಕರೆಯುವುದಾಗಿ ಹೇಳಿ, ಗ್ರಾಮಸಭೆ ಕರೆದು ಹಕ್ಕು ಪತ್ರಗಳ ಠರಾವು ಮಾಡಿ ಕೊಟ್ಟು ಶೀಘ್ರದಲ್ಲೇ ಹಕ್ಕು ಪತ್ರ ವಿತರಿಸಲಾಗುವುದೆಂದು ಮೂರು ತಿಂಗಳ ಹಿಂದೆಯೇ ಜಿಲ್ಲಾಡಳಿತ, ತಾಲೂಕಾಡಳಿತ, ಪಂಚಾಯಿತಿ ಅಧಿಕಾರಿಗಳು ಸಭೆಯಲ್ಲಿ ಹೇಳಿಕೊಂಡಿದ್ದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ನಂತರ ಹಕ್ಕು ಪತ್ರ ಬರದೆ ಮತ್ತೆ ಇಲ್ಲಿಯ ಸಂತ್ರಸ್ತರ ನಡುವೆ ಕಲಹವಾಗಿದ್ದರಿಂದ, ಗ್ರಾಮಗಳಲ್ಲಿ ಎರಡು ಮೂರು ಬಾರಿ ಗ್ರಾಮಸಭೆಗಳು ನಡೆದಿವೆ. ನಂತರ ಸಂತರಸ್ತರ ನಡುವೆ ಇದ್ದ ಕಲಹಕ್ಕೆ ಗಣ್ಯಮಾನ್ಯರಿಂದ ರಾಜಿ ಸಂಧಾನಗಳು ಜರುಗಿದ್ದವು. ಗ್ರಾಮದ ಜನರು, ಹಿರಿಯರು ಕೂಡಿ ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ಜಿಲ್ಲಾಧಿಕಾರಿಗಳ ಕಚೇರಿಗೆ ಮನವಿ ಮಾಡಿಕೊಂಡಿದ್ದರು. ಅದಲ್ಲದೇ ಹೊಸಪೇಟೆಗೆ ಸಮಾರಂಭಕ್ಕೆ ಬಂದಿದ್ದ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರಿಗೆ ಅಲ್ಲಿಯೇ ಹೋಗಿ ವಾಹನ ನಿಲ್ಲಿಸಿ ಇಲ್ಲಿಯ ಸಂತ್ರಸ್ತರು ಮನವಿ ಪತ್ರ ಕೂಡ ಸಲ್ಲಿಸಿದ್ದರು.

ಆಮೇಲೆ ಕಳೆದ ಡಿಸೆಂಬರ್‌ 12ಕ್ಕೆ ನವಗ್ರಾಮ ಬಿ.ಎಸ್‌. ಬೇಲೇರಿ ಗ್ರಾಮಕ್ಕೆ ಆಗಮಿಸಿದ್ದ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಹಾಗೂ ಜಿಲ್ಲಾ ಅಧಿಕಾರಿಗಳು, ತಾಲೂಕು ಅಧಿಕಾರಿಗಳು ಸಭೆ ಮಾಡಿದ್ದರು. ಆ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು ಈ ಹಿಂದೆ ನೀವು ಕೇಳಿದ ಹಾಗೆ ಗ್ರಾಮ ಸಭೆಯಲ್ಲಿ ಮನೆ ಹಂಚಿಕೆ ಮಾಡಲಾಗಿದ್ದು, ಅದರಂತೆಯೆ ಮನೆಯ ಹಕ್ಕುಪತ್ರ ನೀಡಲಾಗುವುದು. ಆದರೆ ಅದಕ್ಕೆ ಕಾಲಾವಕಾಶ ಬೇಕು, ಇಲ್ಲಿಂದ ಬೆಂಗಳೂರಿಗೆ ಹೋಗಿ ನಿಮ್ಮ ಹಕ್ಕು ಪತ್ರಗಳು ಬದಲಾವಣೆಯಾಗಿ ಬರಬೇಕು ಎಂದಿದ್ದರು. ಆದರೂ ತ್ವರಿತಗತಿಯಲ್ಲಿ ನಮಗೆ ಹಕ್ಕು ಪತ್ರಗಳನ್ನು ವಿತರಿಸುವಂತೆ ಹೇಳಿದ್ದರು.

ಅಂದೇ ಜಿಲ್ಲಾಧಿಕಾರಿಗಳು ಹಾಗೂ ತಾಲೂಕು, ಗ್ರಾಮ ಪಂಚಾಯಿತಿ ಅಧಿಕಾರಿಗಳು ಚರ್ಚಿಸಿ, ಸಂತ್ರಸ್ತರಿಗೆ ಗ್ರಾಮ ಪಂಚಾಯಿತಿಯಿಂದ 10 ರು. ರಸೀದಿ ಪಡೆದು, ಗ್ರಾಮ ಪಂಚಾಯಿತಿಯ ಮೊಹರು ಇದ್ದು, ದೃಢೀಕರಿಸಿ ಮನೆಯ ನಂಬರ್‌ ಹಾಕಿ ಕೊಡುವಂತೆ ಪಂಚಾಯಿತಿ ಅಧಿಕಾರಿಗಳಿಗೆ ಸೂಚಿಸಿದ್ದರು. ಗ್ರಾಮಸ್ಥರಿಗೆ ಜನವರಿ ಮೊದಲನೆ ವಾರದಲ್ಲಿ ಹೊಸ ವರ್ಷದ ಉಡುಗೊರೆಯಾಗಿ ನಿಮಗೆ ಹಕ್ಕು ಪತ್ರ ವಿತರಿಸುವದಾಗಿ ಸ್ವತಃ ಜಿಲ್ಲಾಧಿಕಾರಿಗಳೆ ಅಂದು ಹೇಳಿದ್ದರು. ಆದ್ದರಿಂದ ನಿಶ್ಚಿಂತೆಯಿಂದ ಇದ್ದ ಇಲ್ಲಿಯ ಸಂತ್ರಸ್ತ ಕುಟುಂಬಗಳಲ್ಲಿ ಈಗ ಮತ್ತೆ ಅದೇ ರಾಗ ಅದೇ ತಾಳ ಹೊಮ್ಮುತ್ತಿದೆ. ಮತ್ತೆ ಸಂತ್ರಸ್ತರ ಮಧ್ಯೆ ಸಣ್ಣ, ಸಣ್ಣದಾಗಿ ಕಲಹ ಪ್ರಾರಂಭವಾಗಿದೆ ಎನ್ನುತ್ತಿದ್ದಾರೆ ಇಲ್ಲಿಯ ಹಿರಿಯರು.

ಜಿಲ್ಲಾಡಳಿತ ನಿಮ್ಮ ಜೊತೆಗಿದೆ, ಯಾವುದೇ ರೀತಿಯಾಗಿ ನೀವು ಜಗಳ ಮಾಡುವುದು ಬೇಡ, ನಾವು ನಿಮ್ಮ ಮನವಿಗೆ ಸ್ಪಂದಿಸಿದ್ದೇವೆ. ನವಗ್ರಾಮದ ಎಲ್ಲ ಸಮಸ್ಯೆಗಳನ್ನು ನಿವಾರಿಸುತ್ತೇವೆ. ಇಲ್ಲಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸುತ್ತೇವೆ. ನಿಮಗೆ ಸಂಪೂರ್ಣವಾಗಿ ನಿಮ್ಮ ಮನೆಯ ಹಕ್ಕು ಪತ್ರಗಳನ್ನು ಹೊಸ ವರ್ಷದ ಉಡುಗೊರೆಯಾಗಿ ನೀಡುತ್ತೇನೆ ಎಂದು ಹೇಳಿದರು. ಆದರೂ ಇನ್ನುವರೆಗೂ ಯಾವುದೇ ಹಕ್ಕು ಪತ್ರಗಳ ಸುಳಿವು ಸಿಗುತ್ತಿಲ್ಲ. ಆದ್ದರಿಂದ ಮತ್ತೆ ಅದೇ ಮೊದಲಿನ ಸ್ವರೂಪ ಪಡೆಯುತ್ತದೆ ಎನ್ನುತ್ತಾರೆ ಇಲ್ಲಿಯ ಸಂತ್ರಸ್ತರು.

ನಾವು ಹಾಗೂ ಗ್ರಾಮದ ಹಿರಿಯರು 15 ದಿವಸದ ಹಿಂದೆ ಹೊಳೆಆಲೂರ ಪ್ರವಾಸಿ ಮಂದಿರದಲ್ಲಿ ತಹಸೀಲ್ದಾರ್‌ ಜೆ.ಬಿ. ಜಕ್ಕನಗೌಡ್ರ ಅವರನ್ನು ಭೇಟಿ ಮಾಡಿ ವಿಚಾರಿಸಿದಾಗ ಅವರು ಸದ್ಯದಲ್ಲೆ ಬೇಲೇರಿಯ ಹಕ್ಕುಪತ್ರಗಳನ್ನು ಕೊಡುವುದಾಗಿ ಹೇಳಿದ್ದಾರೆ ಎಂದು ಹುನಗುಂಡಿ ತಾ.ಪಂ ಸದಸ್ಯ ರಾಮನಗೌಡ ಪಾಟೀಲ ಹಾಗೂ ಹೊಳೆಆಲೂರ ಜಿ.ಪಂ. ಸದಸ್ಯ ಪಡಿಯಪ್ಪ ಪೂಜಾರ ಅವರು ಹೇಳಿದ್ದಾರೆ. 

ಈ ಬಗ್ಗೆ ಮಾತನಾಡಿದ ರೋಣ ತಹಸೀಲ್ದಾರ್‌ ಜೆ.ಬಿ.ಜಕ್ಕನಗೌಡ್ರ ಅವರು, ಇಂದು ಒಬ್ಬರು ಮೆಂಬರ್‌ ಕಾಲ್‌ ಮಾಡಿದ್ರು, ಮತ್ತೆ ನಾವು ಇಓ ಅವರನ್ನು ಕ್ಲ್ಯಾರಿಪೀಕೇಶನ್‌ ಕೇಳಿದ್ರು, ಅವು ಅಪೂ›ವಲ್‌ ಆಗಿ ಬರಬೇಕು, ಅಧಿಕಾರಿಗಳು ಬರೆದು ಹಾಕಿದ್ದಾರೆ, ಬಂದ ತಕ್ಷಣ ಪ್ರಿಂಟ್‌ ಹಾಕಿ ಕೊಡುತ್ತೇವೆ ಎಂದು ಹೇಳಿದ್ದಾರೆ. 

ಬಿ.ಎಸ್‌. ಬೇಲೇರಿಯಲ್ಲಿ ಮೊದಲು ಸಮಸ್ಯೆಗಳು ಹೇಗೆ ಇದ್ದವು ಹಾಗೆ ಇವೆ, ಆದರೆ ಜನವರಿ ಒಳಗಾಗಿ ನಮಗೆ ಸಂಪೂರ್ಣ ಹಕ್ಕುಪತ್ರ ಕೊಡುವುದಾಗಿ ಹೇಳಿದ್ದ ಅಧಿಕಾರಿಗಳು ತಿಂಗಳು ಮುಗಿಯುತ್ತಾ ಬಂದರೂ ಪತ್ರಗಳ ಸುಳಿವು ಇಲ್ಲ. ಇಲ್ಲಿಯ ಜನರು ಸರಿಯಾಗಿ ಮನೆ ಬಳಕೆ ಮಾಡಾಲಾಗುತ್ತಿಲ್ಲ. ಆದಷ್ಟುಬೇಗ ಹಕ್ಕು ಪತ್ರಗಳನ್ನು ನೀಡಬೇಕು ಎಂದು ಬೇಲೇರಿ ಗ್ರಾಮದ ಹಿರಿಯ ಮುಖಂಡ ನಿಂಗಪ್ಪ ಮೇಟಿ ಆಗ್ರಹಿಸಿದ್ದಾರೆ. 
 

PREV
click me!

Recommended Stories

ಕೆಂಗೇರಿ ಮೆಟ್ರೋ ನಿಲ್ದಾಣದಲ್ಲಿ ಟ್ರ್ಯಾಕ್‌ಗೆ ಹಾರಿ ವ್ಯಕ್ತಿ ಆತ್ಮ೧ಹತ್ಯೆ; ನೇರಳೆ ಮಾರ್ಗದಲ್ಲಿ ರೈಲು ಸಂಚಾರಕ್ಕೆ ವ್ಯತ್ಯಯ!
ಬಾಗಲಕೋಟೆ: ದಾಸೋಹ ಚಕ್ರವರ್ತಿ, ಬಂಡಿಗಣಿ ಮಠದ ದಾನೇಶ್ವರ ಸ್ವಾಮೀಜಿ ಲಿಂಗೈಕ್ಯ!