ಜೇಬಿಗೆ ಕತ್ತರಿ: ಬಿಬಿಎಂಪಿಯಿಂದ ಜನವರಿಯಿಂದಲೇ ಕಸ ಶುಲ್ಕ ವಸೂಲಿ..?

By Kannadaprabha News  |  First Published Dec 17, 2020, 7:45 AM IST

ತೆರಿಗೆ ಸಂಗ್ರಹದಲ್ಲಿ ಇಳಿಕೆ, ಆದಾಯಕ್ಕಿಂತ ಹೆಚ್ಚು ವೆಚ್ಚ, ಗುತ್ತಿಗೆದಾರರಿಗೆ ಕೋಟ್ಯಂತರ ರು. ಬಾಕಿ ಮೊತ್ತ ಉಳಿಸಿಕೊಂಡಿರುವ ಬಿಬಿಎಂಪಿ ಈಗ ಹೊಸ ಸಂಪನ್ಮೂಲ ಕಂಡು ಕೊಳ್ಳಲು ತ್ಯಾಜ್ಯ ಸಂಗ್ರಹ ಶುಲ್ಕ ವಿಧಿಸಲು ಮುಂದಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ


ಬೆಂಗಳೂರು(ಡಿ.17): ವಿರೋಧದ ನಡುವೆ ನಗರದ ನಾಗರಿಕರು ಸೇರಿದಂತೆ ತ್ಯಾಜ್ಯ ಉತ್ಪಾದಕರರಾದ ಹೊಟೇಲ್‌, ಕಲ್ಯಾಣ ಮಂಟಪ, ಆಸ್ಪತ್ರೆ, ಶಾಪಿಂಗ್‌ ಮಾಲ್‌ಗಳಿಂದ ಹೊಸ ವರ್ಷದಿಂದ ಕಸ ಸಂಗ್ರಹಕ್ಕಾಗಿ ಪ್ರತಿ ತಿಂಗಳು ಕನಿಷ್ಠ 200 ರು.ನಿಂದ 14 ಸಾವಿರ ಶುಲ್ಕ ವಸೂಲಿಗೆ ಬಿಬಿಎಂಪಿ ಸಿದ್ಧತೆ ಮಾಡಿಕೊಳ್ಳುತ್ತಿದೆ.

ಈಗಾಗಲೇ ತೆರಿಗೆ ಸಂಗ್ರಹದಲ್ಲಿ ಇಳಿಕೆ, ಆದಾಯಕ್ಕಿಂತ ಹೆಚ್ಚು ವೆಚ್ಚ, ಗುತ್ತಿಗೆದಾರರಿಗೆ ಕೋಟ್ಯಂತರ ರು. ಬಾಕಿ ಮೊತ್ತ ಉಳಿಸಿಕೊಂಡಿರುವ ಪಾಲಿಕೆ ಈಗ ಹೊಸ ಸಂಪನ್ಮೂಲ ಕಂಡು ಕೊಳ್ಳಲು ತ್ಯಾಜ್ಯ ಸಂಗ್ರಹ ಶುಲ್ಕ ವಿಧಿಸಲು ಮುಂದಾಗಿದೆ.

Latest Videos

undefined

ಬಿಬಿಎಂಪಿಯ ಕಸ ನಿರ್ವಹಣೆ ಉಪ ನಿಯಮ-2020ರ ಅನ್ವಯ ಸೇವಾ ಶುಲ್ಕ ವಸೂಲಿ ಮಾಡಲು ಮುಂದಾಗಿದ್ದು, ಇದಕ್ಕೆ ಇತ್ತೀಚೆಗೆ ಸರ್ಕಾರ ಅನುಮೋದನೆ ನೀಡಿದೆ. ಈ ನೀತಿಯಂತೆ ಪ್ರತಿ ಮನೆಗೆ ಬಿಬಿಎಂಪಿ ಮಾಸಿಕವಾಗಿ 200 ರು. ಶುಲ್ಕ ವಿಧಿಸಬಹುದು. ಜತೆಗೆ ವಾಣಿಜ್ಯ ತ್ಯಾಜ್ಯ ಉತ್ಪಾದಕರಾದ ಹೋಟೆಲ್‌, ಕಲ್ಯಾಣ ಮಂಟಪ, ಆಸ್ಪತ್ರೆ, ಶಾಪಿಂಗ್‌ ಮಾಲ್‌ ಸೇರಿದಂತೆ ಮೊದಲಾದ ಕಡೆ ಪ್ರತಿ ದಿನ ಉತ್ಪಾದನೆ ಆಗುವ ತ್ಯಾಜ್ಯದ ಆಧಾರದ ಮೇಲೆ ದರ ನಿಗದಿ ಪಡಿಸಲಾಗಿದೆ. ಐದರಿಂದ 100 ಕೆ.ಜಿ ವರೆಗೆ 500 ರು. ನಿಂದ 14 ಸಾವಿರ ರು. ಮಾಸಿಕ ಶುಲ್ಕ ನಿಗದಿ ಪಡಿಸಲಾಗಿದೆ. ಇದಕ್ಕೆ ಈ ಹಿಂದೆ ಬಿಬಿಎಂಪಿ ಸದಸ್ಯರು ಪಕ್ಷಾತೀತವಾಗಿ ವಿರೋಧ ವ್ಯಕ್ತಪಡಿಸಿದ್ದರು. ಆದರೂ ಈಗ ಜಾರಿಗೆ ತರಲು ಬಿಬಿಎಂಪಿ ಅಧಿಕಾರಿಗಳು ಮುಂದಾಗಿದ್ದಾರೆ.

3.9 ಲಕ್ಷ ಮಾಲೀಕರಿಂದ ಆಸ್ತಿ ತೆರಿಗೆ ವಂಚನೆ: ಬಿಬಿಎಂಪಿಗೆ ಕೋಟ್ಯಂತರ ರು. ನಷ್ಟ

ಈ ಸೇವಾ ಶುಲ್ಕವನ್ನು ಬೆಸ್ಕಾಂ ವಿದ್ಯುತ್‌ ಬಿಲ್‌ನೊಂದಿಗೆ ಮಾಸಿಕವಾಗಿ ಸಂಗ್ರಹಿಸುವುದಕ್ಕೆ ತೀರ್ಮಾನಿಸಲಾಗಿದೆ. ಬೆಸ್ಕಾಂ ಸಾಫ್ಟ್‌ವೇರ್‌ ಅಭಿವೃದ್ಧಿ ಪಡಿಸುತ್ತಿದ್ದು, ಜನವರಿಯ ವಿದ್ಯುತ್‌ ಬಿಲ್‌ನೊಂದಿಗೆ ಘನತ್ಯಾಜ್ಯ ಸೇವಾ ಶುಲ್ಕವೂ ಜಾರಿ ಸಾಧ್ಯತೆ ಇದೆ.

ಬಡವರಿಗೆ ರಿಯಾಯಿತಿ!

ಮಾಸಿಕ 200 ರು. ಘನತ್ಯಾಜ್ಯ ಸೇವಾ ಶುಲ್ಕವನ್ನು ಬೆಸ್ಕಾಂ ಬಿಲ್‌ನೊಂದಿಗೆ ವಸೂಲಿ ಸಿದ್ಧತೆ ಮಾಡಿಕೊಳ್ಳುತ್ತಿರುವ ಬಿಬಿಎಂಪಿ, ಮಾಸಿಕ 200 ರು.ಗಿಂತ ಕಡಿಮೆ ವಿದ್ಯುತ್‌ ಬಿಲ್‌ ಪಾವತಿದಾರರಿಗೆ ಶೇ.50 ರಷ್ಟು ಶುಲ್ಕ ರಿಯಾಯಿತಿ ನೀಡಲು ತೀರ್ಮಾನಿಸಿದೆ. 500 ರು.ಗಿಂತ ಹೆಚ್ಚಿನ ವಿದ್ಯುತ್‌ ಬಿಲ್‌ ಪಾವತಿದಾರರಿಗೆ ಪೂರ್ಣ 200 ರು. ಘನತ್ಯಾಜ್ಯ ಸೇವಾ ಶುಲ್ಕ ಪಾವತಿ ಮಾಡಬೇಕಾಗಲಿದೆ. 200 ರು.ನಿಂದ 500 ರು. ವರೆಗೆ ವಿದ್ಯುತ್‌ ಬಿಲ್‌ ಪಾವತಿದಾರರಿಗೆ ಶೇ.25ರಷ್ಟು ರಿಯಾಯಿತಿ ನೀಡುವ ಬಗ್ಗೆ ಪಾಲಿಕೆ ಅಧಿಕಾರಿಗಳು ಚರ್ಚೆ ನಡೆಸುತ್ತಿದ್ದಾರೆ.

ಇನ್ನು ವಾಣಿಜ್ಯ ತ್ಯಾಜ್ಯ ಉತ್ಪಾದಕರಿಗೆ ಯಾವುದೇ ರಿಯಾಯಿತಿ ಇರುವುದರಿಲ್ಲ ಅವರು ಪ್ರತಿದಿನ ಉತ್ಪಾದನೆ ಮಾಡುವ ತ್ಯಾಜ್ಯದ ಆಧಾರದ ಮೇಲೆ 1 ಸಾವಿರ ರು.ನಿಂದ 14 ಸಾವಿರ ರು. ವರೆಗೆ ಸೇವಾ ಶುಲ್ಕ ಪಾವತಿಸಬೇಕಾಗಲಿದೆ. ಇದರಿಂದ ಬಿಬಿಎಂಪಿಗೆ ವಾರ್ಷಿಕವಾಗಿ ಸುಮಾರು 600 ಕೋಟಿ ರು. ಸಂಗ್ರಹ ನಿರೀಕ್ಷೆ ಇದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.

ನಗರದ ತ್ಯಾಜ್ಯ ನಿರ್ವಹಣಾ ವೆಚ್ಚ ಹೆಚ್ಚಾಗಿರುವುದರಿಂದ ಹಾಗೂ ಬಿಬಿಎಂಪಿ ಘನತ್ಯಾಜ್ಯ ಬೈಲಾದಲ್ಲಿ ಸೇವಾ ಶುಲ್ಕ ವಿಧಿಸುವುದಕ್ಕೆ ಅವಕಾಶ ಇರುವ ಹಿನ್ನೆಲೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಇದು ಸೆಸ್‌ ಅಲ್ಲ. ನಿರ್ವಹಣಾ ಸೇವಾ ಶುಲ್ಕ- ಡಿ.ರಂದೀಪ್‌ ಬಿಬಿಎಂಪಿ ಘನತ್ಯಾಜ್ಯವಿಭಾಗದ ವಿಶೇಷ ಆಯುಕ್ತ

ಶುಲ್ಕ ಯಾರಿಗೆ ಎಷ್ಟು?

ತ್ಯಾಜ್ಯ ಉತ್ಪಾದಕ ವರ್ಗ ಶುಲ್ಕ (ಮಾಸಿಕ ರು.)

ಗೃಹ (ಎಲ್ಲ ಮನೆಗಳು) 200

ವಾಣಿಜ್ಯ ತ್ಯಾಜ್ಯ ಉತ್ಪಾದಕರಿಗೆ? (ಮಾಸಿಕ ರು.)

ದಿನಕ್ಕೆ 5 ಕೆ.ಜಿ ಗಿಂತ ಕಡಿಮೆ ಕಸ ಉತ್ಪಾದಕರಿಗೆ 500

ದಿನಕ್ಕೆ 5 ರಿಂದ 10 ಕೆ.ಜಿ ಕಸ ಉತ್ಪಾದಕರಿಗೆ 1,400

ದಿನಕ್ಕೆ 11 ರಿಂದ 25 ಕೆ.ಜಿ ಕಸ ಉತ್ಪಾದಕರಿಗೆ 3,500

ದಿನಕ್ಕೆ 26 ರಿಂದ 50 ಕೆ.ಜಿ ಕಸ ಉತ್ಪಾದಕರಿಗೆ 7,000

ದಿನಕ್ಕೆ 100 ಕೆ.ಜಿ. ಅದಕ್ಕಿಂತ ಹೆಚ್ಚು ಕಸ ಉತ್ಪಾದಕರಿಗೆ 14,000

click me!