ಇಂದಿರಾ ಕ್ಯಾಂಟೀನ್‌ ಪುನಾರಂಭಕ್ಕೆ ಸಿದ್ಧತೆ..!

By Kannadaprabha News  |  First Published May 20, 2023, 6:01 AM IST

ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದಿರುವುದರಿಂದ ಇಂದಿರಾ ಕ್ಯಾಂಟೀನ್‌ಗಳಿಗೆ ಮರು ಜೀವ ನೀಡಲು ರೂಪರೇಷೆ ಸಿದ್ಧಪಡಿಸಲಾಗುತ್ತಿದೆ.


ವಿಶ್ವನಾಥ ಮಲೇಬೆನ್ನೂರು

ಬೆಂಗಳೂರು(ಮೇ.20): ಮುಚ್ಚುವ ಹಂತಕ್ಕೆ ತಲುಪಿದ್ದ ನಗರದ ಇಂದಿರಾ ಕ್ಯಾಂಟೀನ್‌ಗಳಿಗೆ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಗುಳಿಕ ಕಾಲ ಬಂದಂತ್ತಿದ್ದು, ಸುಣ್ಣ, ಬಣ್ಣ ಬಳಿದು ಹಸಿದು ಬಂದವರಿಗೆ ಗುಣಮಟ್ಟದ ಆಹಾರ ನೀಡುವಂತೆ ಮಾಡುವುದಕ್ಕೆ ಬಿಬಿಎಂಪಿ ಸಕಲ ಸಿದ್ಧತೆ ಆರಂಭಿಸಿದೆ.

Tap to resize

Latest Videos

ಕೂಲಿ ಕಾರ್ಮಿಕರು, ಬಡವರು, ನಿರ್ಗತಿಕರ ಹಸಿವು ನೀಗಿಸಲು ಈ ಹಿಂದೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಅವಧಿಯಲ್ಲಿ ಆರಂಭಿಸಲಾದ ಇಂದಿರಾ ಕ್ಯಾಂಟೀನ್‌ಗಳಿಗೆ ತದ ನಂತರ ಅಧಿಕಾರಕ್ಕೆ ಬಂದ ಸರ್ಕಾರಗಳು ಅನುದಾನ ನೀಡದೇ, ಸೂಕ್ತ ಸೌಲಭ್ಯಗಳನ್ನು ಒದಗಿಸದ ಹಿನ್ನೆಲೆಯಲ್ಲಿ ಮುಚ್ಚುವ ಹಂತಕ್ಕೆ ತಲುಪಿದ್ದವು. ಇದೀಗ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದಿರುವುದರಿಂದ ಇಂದಿರಾ ಕ್ಯಾಂಟೀನ್‌ಗಳಿಗೆ ಮರು ಜೀವ ನೀಡಲು ರೂಪರೇಷೆ ಸಿದ್ಧಪಡಿಸಲಾಗುತ್ತಿದೆ.

ಮೈಸೂರು: ಇಂದಿರಾ ಕ್ಯಾಂಟೀನ್‌ನಲ್ಲಿ ಸಾರ್ವಜನಿಕರಿಗೆ ಹೋಳಿಗೆ ಊಟ !

ಕಾಂಗ್ರೆಸ್‌ ಚುನಾವಣಾ ಪ್ರಣಾಳಿಕೆಯಲ್ಲಿ ಇಂದಿರಾ ಕ್ಯಾಂಟೀನ್‌ಗಳನ್ನು ಪುನರುಜ್ಜೀವನ ಹಾಗೂ ಇನ್ನಷ್ಟುಪರಿಣಾಮಕಾರಿಯಾಗಿ ಮಾರ್ಪಾಡು ಮಾಡುವುದಾಗಿ ಈಗಾಗಲೇ ಘೋಷಿಸಿದೆ. ಅದರಂತೆ ಮೊದಲ ಸಂಪುಟ ಸಭೆಯಲ್ಲಿಯೇ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಮತ್ತೆ ಗುಣಮಟ್ಟದ ಆಹಾರ:

ಸದ್ಯ ನಗರದ ಇಂದಿರಾ ಕ್ಯಾಂಟೀನ್‌ಗಳ ಪೈಕಿ ಅದಮ್ಯ ಚೇತನ 40, ಶೆಫ್‌ಟಾಕ್‌ 92 ಮತ್ತು ರಿವಾರ್ಡ್ಸ್ ಸಂಸ್ಥೆಯು 40 ಕ್ಯಾಂಟೀನ್‌ಗಳನ್ನಷ್ಟೇ ನಿರ್ವಹಿಸುತ್ತಿವೆ. ಗುಣಮಟ್ಟದ ಹಾಗೂ ರುಚಿಕರ ಆಹಾರ ದೊರಕದ ಕಾರಣ ಬಹುತೇಕರು ಇಂದಿರಾ ಕ್ಯಾಂಟೀನ್‌ಗಳತ್ತ ಮುಖ ಮಾಡುತ್ತಿಲ್ಲ. ಹೀಗಾಗಿ, ಕ್ಯಾಂಟೀನ್‌ಗಳಲ್ಲಿ ಮತ್ತೆ ಗುಣಮಟ್ಟದ ತಿಂಡಿ, ಊಟ ನೀಡುವ ಮೂಲಕ ಜನರನ್ನು ಇಂದಿರಾ ಕ್ಯಾಂಟೀನ್‌ ಗಳ ಕಡೆ ಬರುವಂತೆ ಮಾಡುವುದಕ್ಕೆ ತಯಾರಿ ಮಾಡಿಕೊಳ್ಳಲಾಗುತ್ತಿದೆ.

ಬೇಡಿಕೆ ಇರುವೆಡೆ ಹೆಚ್ಚಿನ ಆಹಾರ:

ಹೆಚ್ಚಿನ ಜನ ಬರುವ ಕಡೆ ಇಂದಿರಾ ಕ್ಯಾಂಟೀನ್‌ ಸಂಖ್ಯೆ ಹಾಗೂ ಆಹಾರ ಪೂರೈಕೆ ಪ್ರಮಾಣ ಹೆಚ್ಚಿಸಿ, ಕಡಿಮೆ ಇರುವ ಕಡೆ ಆಹಾರ ಸರಬರಾಜು ಪ್ರಮಾಣ ಕಡಿತ ಗೊಳಿಸುವ ಕುರಿತು ಬಿಬಿಎಂಪಿ ಅಧಿಕಾರಿಗಳ ಮಟ್ಟದಲ್ಲಿ ಚರ್ಚೆ ನಡೆಸಲಾಗಿದೆ.

ವಲಯ ಮಟ್ಟದಲ್ಲಿ ಟೆಂಡರ್‌:

ಇಂದಿರಾ ಕ್ಯಾಂಟೀನ್‌ಗಳಿಗೆ ಸದ್ಯ ಅದಮ್ಯ ಚೇತನ, ಶೆಫ್‌ಟಾಕ್‌ ಮತ್ತು ರಿವಾರ್ಡ್ಸ್ ಸಂಸ್ಥೆಗಳು ಆಹಾರ ಪೂರೈಕೆ ಮಾಡುವ ಗುತ್ತಿಗೆ ಪಡೆದಿವೆ. ಆಗಸ್ಟ್‌ ವೇಳೆಗೆ ಟೆಂಡರ್‌ ಅವಧಿ ಪೂರ್ಣಗೊಳ್ಳುತ್ತಿದೆ. ಈವರೆಗೆ ಕೇಂದ್ರೀಕೃತವಾಗಿ ಆಹ್ವಾನಿಸುತ್ತಿದ್ದ ಟೆಂಡರ್‌ ಅನ್ನು ಆಗಸ್ಟ್‌ ನಿಂದ ವಲಯ ಮಟ್ಟದಲ್ಲಿ ಆಹ್ವಾನಿಸುವುದಕ್ಕೆ ತೀರ್ಮಾನಿಸಲಾಗಿದೆ.

ಅನುದಾನಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ

ರಾಜ್ಯ ಸರ್ಕಾರ ಮತ್ತು ಬಿಬಿಎಂಪಿ ಸಹಯೋಗದಲ್ಲಿ ಇಂದಿರಾ ಕ್ಯಾಂಟೀನ್‌ ನಡೆಸುವುದಕ್ಕೆ ಆರಂಭದಲ್ಲಿ ನಿರ್ಧರಿಸಲಾಗಿತ್ತು. ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಅನುದಾನ ನೀಡಲಾಯಿತು. ನಂತರ ಅಧಿಕಾರಕ್ಕೆ ಬಂದ ಸರ್ಕಾರಗಳು ಅನುದಾನ ನೀಡಲಿಲ್ಲ. ಪ್ರತಿ ವರ್ಷ ಬಿಬಿಎಂಪಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುತ್ತಿದೆ. ಆದರೆ, ಸರ್ಕಾರ ಮಾತ್ರ ಅನುದಾನ ನೀಡುತ್ತಿರಲಿಲ್ಲ. ಇದರಿಂದ ಕ್ಯಾಂಟೀನ್‌ಗೆ ಆಹಾರ ಪೂರೈಕೆ ಮಾಡಿದ ಗುತ್ತಿಗೆ ದಾರರಿಗೆ ಬಿಲ್‌ ಪಾವತಿಗೆ ಅಡಚಣೆ ಉಂಟಾಗಿ ಇಂದಿರಾ ಕ್ಯಾಂಟೀನ್‌ಗಳು ನಿರ್ಲಕ್ಷ್ಯಕ್ಕೆ ಒಳಗಾಗಿದ್ದವು. ಇದೀಗ ಮತ್ತೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ಹಿನ್ನೆಲೆಯಲ್ಲಿ ಅನುದಾನ ನೀಡುವಂತೆ ಪ್ರಸ್ತಾವನೆ ಸಲ್ಲಿಸುವುದಕ್ಕೆ ಬಿಬಿಎಂಪಿ ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ.

ಮುಚ್ಚಿದ ಇಂದಿರಾ ಕ್ಯಾಂಟೀನ್‌ ಮುಂದೆ ಉಪ್ಪಿಟ್ಟು ಹಂಚಿದ ಕಾಂಗ್ರೆಸ್‌

ಮೊಬೈಲ್‌ ಇಂದಿರಾ ಕ್ಯಾಂಟೀನ್‌ ಮಾತ್ರ ನಗರದಲ್ಲಿ ಸ್ಥಗಿತಗೊಳಿಸಲಾಗಿದೆ. ಕೆಲವು ಕ್ಯಾಂಟೀನ್‌ಗಳಲ್ಲಿ ರಾತ್ರಿ ವೇಳೆ ಜನರು ಬರುತ್ತಿಲ್ಲ. ಉಳಿದಂತೆ ಇಂದಿಗೂ ಕ್ಯಾಂಟೀನ್‌ಗಳು ಕಾರ್ಯನಿರ್ವಹಿಸುತ್ತಿವೆ ಅಂತ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಹೇಳಿದ್ದಾರೆ. 

ಇಂದಿರಾ ಕ್ಯಾಂಟೀನ್‌ಗಳಿಗೆ ಅನುದಾನ ನೀಡದೇ, ನೀರು ಸೇರಿದಂತೆ ಮೂಲಸೌಕರ್ಯ ಒದಗಿಸದೇ ವ್ಯವಸ್ಥಿತವಾಗಿ ಮುಚ್ಚುವ ಹುನ್ನಾರವನ್ನು ಈ ಹಿಂದಿನ ಬಿಜೆಪಿ ಸರ್ಕಾರ ಮಾಡಿತ್ತು. ಇದೀಗ ಕಾಂಗ್ರೆಸ್‌ ಸರ್ಕಾರ ಬಂದಿದೆ, ಮತ್ತೆ ಗತಕ್ಕೆ ಮರಳಲಿದೆ ಅಂತ ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಅಬ್ದುಲ್‌ ವಾಜೀದ್‌ ತಿಳಿಸಿದ್ದಾರೆ. 

click me!