Bengaluru: ಅಮಾನತು ಮಾಡದಂತೆ ಕೋರ್ಟ್‌ ಕೈಮುಗಿದ ಬಿಬಿಎಂಪಿ ಅಧಿಕಾರಿ..!

By Kannadaprabha News  |  First Published Feb 8, 2022, 4:31 AM IST

*  ರಸ್ತೆ ಗುಂಡಿ ವಿಚಾರಕ್ಕೆ ಹೈಕೋರ್ಟ್‌ ತೀವ್ರ ತರಾಟೆ
*  ಅಮಾನತು ಮಾಡಿ, ಜೈಲಿಗೆ ಕಳುಹಿಸುತ್ತೇವೆ ಎಂದು ಗುಡುಗಿದ ನ್ಯಾಯಪೀಠ
*  ಪಾಲಿಕೆ ವಿರುದ್ಧ ಕಾಂಗ್ರೆಸ್‌ ಬೃಹತ್‌ ಪ್ರತಿಭಟನೆ
 


ಬೆಂಗಳೂರು(ಫೆ.08): ‘ಪಾಲಿಕೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಜನ ರಸ್ತೆ ಗುಂಡಿಗಳಲ್ಲಿ ಬಿದ್ದು ಸಾಯುವಂತಾಗಿದ್ದು, ಸಂಬಂಧಪಟ್ಟ ಅಧಿಕಾರಿಯನ್ನು ತಕ್ಷಣ ಸೇವೆಯಿಂದ ಅಮಾನತ್ತು ಮಾಡಿ ಜೈಲಿಗೆ ಕಳುಹಿಸಲಾಗುವುದು’ ಎಂದು ಬಿಬಿಎಂಪಿ ಎಂಜಿನಿಯರ್‌ಗೆ ಹೈಕೋರ್ಟ್‌(High Court) ತರಾಟೆಗೆ ತೆಗೆದುಕೊಂಡಿದೆ.

ರಸ್ತೆ ಗುಂಡಿಗಳನ್ನು ಮುಚ್ಚಲು ಬಿಬಿಎಂಪಿ(BBMP) ಹಾಗೂ ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ 2015ರಲ್ಲಿ ಬೆಂಗಳೂರಿನ(Bengaluru) ವಿಜಯನ್‌ ಮೆನನ್‌ ಎಂಬುವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಅವರಿದ್ದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

Tap to resize

Latest Videos

ಹೈಕೋರ್ಟ್‌ ಛೀಮಾರಿ ಹಾಕಿದರೂ ಬುದ್ಧಿ ಕಲಿಯದ BBMP: ಬೆಂಗಳೂರಲ್ಲಿ ರಸ್ತೆಗುಂಡಿಗೆ ಮತ್ತೊಂದು ಬಲಿ!

ವಿಚಾರಣೆ ವೇಳೆ ನ್ಯಾಯಾಲಯದ(Court) ನಿರ್ದೇಶನದಂತೆ ಖುದ್ದು ಹಾಜರಾಗಿದ್ದ ಬಿಬಿಎಂಪಿ ಮುಖ್ಯ ಎಂಜಿನಿಯರ್‌ ವಿ.ಎಸ್‌.ಪ್ರಹ್ಲಾದ್‌, ರಸ್ತೆ ಗುಂಡಿಗಳನ್ನು ಮುಚ್ಚುವ ವಿಚಾರ ಕುರಿತು ವಿವರಣೆ ನೀಡಲು ಮುಂದಾದರು. ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಪೀಠ, ಹವಾನಿಯಂತ್ರಿತ ಕಚೇರಿಯಲ್ಲಿ ಕೂರುವ ನಿಮಗೆ ಜನರ ಕಷ್ಟ ಅರಿವಾಗುವುದಿಲ್ಲ. ಅನಗತ್ಯ ಕಾರಣಗಳನ್ನು ನೀಡುತ್ತೀರಿ. ಇತ್ತೀಚೆಗೆ ಮಹಿಳೆಯೊಬ್ಬರು ರಸ್ತೆ ಗುಂಡಿ ತಪ್ಪಿಸಲು ಹೋಗಿ ಕೆಳಗೆ ಬಿದ್ದು ಸಾವನ್ನಪ್ಪಿದ್ದಾರೆ. ಇದಕ್ಕಿಂತ ಹೀನಾಯ ಸ್ಥಿತಿ ಮತ್ತೇನಿದೆ ಪ್ರಶ್ನಿಸಿತು.

ಅಲ್ಲದೇ, ನಿಮ್ಮನ್ನು ನ್ಯಾಯಾಂಗ ಆದೇಶದ ಮೂಲಕ ಇಂದೇ ಸೇವೆಯಿಂದ ಅಮಾನತು ಮಾಡಿ ಜೈಲಿಗೆ ಕಳುಹಿಸುತ್ತೇವೆ. ಇಲ್ಲವೇ ಸರ್ಕಾರಕ್ಕೆ ನಿಮ್ಮನ್ನು ಅಮಾನತು ಮಾಡಲು ಹಾಗೂ ನಿಮ್ಮ ವಿರುದ್ಧ ಎಫ್‌ಐಆರ್‌(FIR) ದಾಖಲಿಸಲು ನಿರ್ದೇಶಿಸುತ್ತೇವೆ. ನ್ಯಾಯಾಲಯದ ಆದೇಶಗಳನ್ನು ಪಾಲಿಸದ ನೀವು ನೆಪಗಳನ್ನೇ ಹೇಳಿಕೊಂಡು ನಿಮ್ಮ ಕೆಲಸ ಮುಂದೂಡುತ್ತಿದ್ದೀರಿ. ನಿಮ್ಮ ನಿರ್ಲಕ್ಷ್ಯಕ್ಕೆ ಜನರು ಬೀದಿಯಲ್ಲಿ ಬಿದ್ದು ಸಾಯಬೇಕೆ? ನಗರದ ರಸ್ತೆಗಳೆಲ್ಲ ಗುಂಡಿಮಯವಾಗಿವೆ ಎಂದು ಪೀಠ ತೀವ್ರ ಆಕ್ರೋಶ ವ್ಯಕ್ತಪಡಿಸಿತು.

ಈ ವೇಳೆ ಪಾಲಿಕೆ ಮುಖ್ಯ ಎಂಜನಿಯರ್‌ ವಿ.ಎಸ್‌.ಪ್ರಹ್ಲಾದ್‌ ಪೀಠಕ್ಕೆ ಕೈಮುಗಿದು ಕ್ರಮ ಜರುಗಿಸದಂತೆ ಕೋರಿದರು. ಸರ್ಕಾರದ ಪರ ವಕೀಲ ವಿ.ಶ್ರೀನಿಧಿ ಕೂಡ ಕಠಿಣ ಕ್ರಮ ಜರುಗಿಸದಂತೆ ಪೀಠಕ್ಕೆ ಮನವಿ ಮಾಡಿದರು. ಅಲ್ಲದೇ, ಈ ಕುರಿತು ಹಿರಿಯ ಅಧಿಕಾರಿಗಳು ತಾವೇ ಖುದ್ದಾಗಿ ಚರ್ಚಿಸಿ ಸಮಸ್ಯೆ ಸರಿಪಡಿಸಲು ಯತ್ನಿಸುತ್ತೇವೆ ಎಂದು ಭರವಸೆ ನೀಡಿದರು.

ರಸ್ತೆ ಗುಂಡಿ ಪರಿಹಾರಕ್ಕೆ 1 ವಾರ ಕಾಲಾವಕಾಶ

ಅಂತಿಮವಾಗಿ ವಕೀಲರ ಮನವಿ ಪರಿಗಣಿಸಿದ ಪೀಠ, ನಿಮ್ಮ ಮಾತಿನ ಮೇಲೆ ಭರವಸೆ ಇಟ್ಟು ಒಂದು ವಾರ ಕಾಲಾವಕಾಶ ನೀಡಲಾಗುವುದು. ಆದರೆ, ಮುಂದಿನ ವಿಚಾರಣೆ ವೇಳೆ ಕಾರಣಗಳನ್ನು ನೀಡಬಾರದು. ರಸ್ತೆ ಗುಂಡಿಗಳನ್ನು ಯಾರು, ಹೇಗೆ ಮುಚ್ಚುತ್ತಾರೆ ಎಂಬುದು ನಮಗೆ ಮುಖ್ಯವಲ್ಲ. ರಸ್ತೆಗಳು ಗುಣಮಟ್ಟದಿಂದ ಕೂಡಿರಬೇಕು. ಈ ನಿಟ್ಟಿನಲ್ಲಿ ಯಾವೆಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ. ರಸ್ತೆ ಗುಂಡಿ ಮುಚ್ಚಲು ಯಾವ ತಂತ್ರಜ್ಞಾನ ಅನುಸರಿಸಲಾಗುತ್ತಿದೆ ಎಂಬ ಕುರಿತು ಮಾಹಿತಿ ನೀಡಬೇಕು ಎಂದು ಸೂಚನೆ ನೀಡಿತು. ಅಲ್ಲದೆ, ಮುಂದಿನ ವಿಚಾರಣೆ ವೇಳೆ ಪಾಲಿಕೆ ಮುಖ್ಯ ಎಂಜಿನಿಯರ್‌ ಹಾಜರಿರಬೇಕು ಎಂದು ನಿರ್ದೇಶಿಸಿ, ವಿಚಾರಣೆಯನ್ನು ಫೆ.15ಕ್ಕೆ ಮುಂದೂಡಿತು.

Bengaluru Roads: ರಸ್ತೆಗಳು ದೀರ್ಘಾವಧಿಗೆ ಏಕೆ ಬಾಳಲ್ಲ ಎಂದು ಪ್ರಶ್ನಿಸಿದ ಹೈಕೋರ್ಟ್‌

ಪಾಲಿಕೆ ವಿರುದ್ಧ ಕಾಂಗ್ರೆಸ್‌ ಬೃಹತ್‌ ಪ್ರತಿಭಟನೆ

ಕಾಂಗ್ರೆಸ್‌(Congress) ವತಿಯಿಂದ ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿ ಆಡಳಿತದ ವಿರುದ್ಧ ಬಿಬಿಎಂಪಿ ಕಚೇರಿ ಎದುರು ಶನಿವಾರ ಬೃಹತ್‌ ಪ್ರತಿಭಟನೆ ನಡೆಸಲಾಗಿತ್ತು.. ಈ ವೇಳೆ ರಸ್ತೆ ಗುಂಡಿ ಮುಚ್ಚದಿರುವುದು, ಬಿಬಿಎಂಪಿ ವಾರ್ಡ್‌ಗಳ ಅವೈಜ್ಞಾನಿಕ ಪುನರ್‌ ವಿಂಗಡಣೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ.

ಶನಿವಾರ ಬೆಳಗ್ಗೆ ಬಿಬಿಎಂಪಿ ಕಚೇರಿ ಎದುರು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ ಹಾಗೂ ವಿಧಾನ ಪರಿಷತ್‌ ಪ್ರತಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್‌ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ್ದ ಕಾಂಗ್ರೆಸ್ಸಿಗರು, ವಾರ್ಡ್‌ ಪುನರ್‌ ವಿಂಗಡಣೆಯಲ್ಲಿ ಬಿಜೆಪಿ ಹಾಗೂ ಆರ್‌ಎಸ್‌ಎಸ್‌ ಹಸ್ತಕ್ಷೇಪ ಮಾಡುತ್ತಿದೆ. ಅಧಿಕಾರ ದುರುಪಯೋಗ ಮಾಡಿಕೊಂಡು ಮುಂದಿನ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಅವೈಜ್ಞಾನಿಕವಾಗಿ ವಾರ್ಡ್‌ ವಿಂಗಡಣೆ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು. ಇದೇ ವೇಳೆ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ ಗುಪ್ತಾ ಅವರಿಗೆ ಮನವಿ ಪತ್ರ ಸಲ್ಲಿಸಿದ್ದರು. 
 

click me!