BBMP: ಬೆಂಗ್ಳೂರಲ್ಲಿ 3 ವರ್ಷವಾದ್ರೂ ಒಂಟಿ ಮನೆಗಿಲ್ಲ ಅನುದಾನ..!

By Kannadaprabha News  |  First Published Dec 20, 2021, 6:28 AM IST

*  ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗ ವಸತಿ ಕಲ್ಪಿಸಿಕೊಡುವ ಯೋಜನೆ ನೆನೆಗುದಿಗೆ
*  ಕೊರೋನಾ ನೆಪ ಹೇಳಿ ಅನುದಾನ ಬಿಡುಗಡೆಗೆ ಬಿಬಿಎಂಪಿ ಮೀನಮೇಷ
*  2017-2020ರ 4848 ಮನೆಗಳು ಮಂಜೂರು
 


ಸಂಪತ್‌ ತರೀಕೆರೆ

ಬೆಂಗಳೂರು(ಡಿ.20):  ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಒಂಟಿ ಮನೆಗಳನ್ನು ನಿರ್ಮಿಸಿ ಕೊಡುವ ಯೋಜನೆ ಕಳೆದ ಮೂರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದು, ನಿರ್ಮಾಣ ಹಂತದಲ್ಲಿರುವ 2483 ಮನೆಗಳನ್ನು ಪೂರ್ಣಗೊಳಿಸಲು ಅಗತ್ಯವಾದ ಅನುದಾನದ ಬಿಡುಗಡೆಗೆ ಬಿಬಿಎಂಪಿ(BBMP) ಮೀನಮೇಷ ಎಣಿಸುತ್ತಿದೆ.

Tap to resize

Latest Videos

ಪ್ರಗತಿಯಲ್ಲಿರುವ ಮನೆಗಳ ನಿರ್ಮಾಣ ಕಾರ್ಯಕ್ಕೆ ಹಣ ಬಿಡುಗಡೆ ಮಾಡುವಂತೆ ಮನವಿ ಮಾಡಿದರೂ ಬಿಬಿಎಂಪಿ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಹೀಗಾಗಿ ಒಂಟಿ ಮನೆ ನಿರ್ಮಾಣ ಕಾಮಗಾರಿ ಆರಂಭಿಸಿದ್ದ ಗುತ್ತಿಗೆದಾರರು ನಿರ್ಮಾಣ ಕಾರ್ಯ ಕೈಬಿಟ್ಟಿದ್ದಾರೆ. ಕಳೆದೆರಡು ವರ್ಷಗಳಿಂದ ಕೋವಿಡ್‌-19(Covid-19) ಸೋಂಕನ್ನೇ ಬಂಡವಾಳ ಮಾಡಿಕೊಂಡಿರುವ ಅಧಿಕಾರಿಗಳು ಒಂಟಿ ಮನೆ ನಿರ್ಮಾಣಕ್ಕೆ ನಯಾಪೈಸೆ ಕೂಡ ಕೊಟ್ಟಿಲ್ಲ. ಗುತ್ತಿಗೆದಾರರು ಮತ್ತು ಈ ಹಿಂದಿನ ಪಾಲಿಕೆ ಸದಸ್ಯರು ಅನುದಾನ ಬಿಡುಗಡೆ ಮಾಡುವಂತೆ ಒತ್ತಾಯಿಸುತ್ತಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.

Bengaluru: ಬಿಬಿಎಂಪಿಯೇ ಬೀದಿದೀಪಗಳ ನಿರ್ವಹಣೆ ಮಾಡ್ಬೇಕು: ಸಿಎಂ ಬೊಮ್ಮಾಯಿ

289.94 ಕೋಟಿ ರು. ಅನುದಾನ:

ಆರ್ಥಿಕವಾಗಿ ಹಿಂದುಳಿದ ಪರಿಶಿಷ್ಟಜಾತಿ, ಪರಿಶಿಷ್ಟಪಂಗಡ, ಅಲ್ಪಸಂಖ್ಯಾತರು ಮತ್ತು ಹಿಂದುಳಿದ ವರ್ಗದ ಕುಟುಂಬಗಳಿಗೆಂದು 2017-2020ರ ವರೆಗೆ 4848 ಮನೆಗಳನ್ನು ಬಿಬಿಎಂಪಿ ಮಂಜೂರು ಮಾಡಿತ್ತು. ಅದಕ್ಕಾಗಿ 289.94 ಕೋಟಿ ರು.ಗಳ ಅನುದಾನವನ್ನು(Grants) ಆಯವ್ಯಯದಲ್ಲಿ ನಿಗದಿಪಡಿಸಲಾಗಿತ್ತು. ಆದರೆ, ಇದುವರೆಗೂ ಕೇವಲ 1523 ಮನೆಗಳಷ್ಟೇ ಪೂರ್ಣಗೊಂಡಿದ್ದು 3325 ಮನೆಗಳು(Homes) ನಿರ್ಮಾಣಕ್ಕೆ ಬಾಕಿ ಇವೆ. ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಪ್ರಕಾರ 2483 ಮನೆಗಳು ಪ್ರಗತಿಯಲ್ಲಿದ್ದು, 103.50 ಕೋಟಿ ರು.ಗಳನ್ನು ಖರ್ಚು ಮಾಡಲಾಗಿದೆ. ಎಂಟು ವಲಯಗಳಲ್ಲಿ ಒಟ್ಟಾರೆಯಾಗಿ 3229 ಮನೆಗಳ ನಿರ್ಮಾಣ ಬಾಕಿ ಇದ್ದು 150 ಕೋಟಿ ರು.ಗಳಿಗೂ ಅಧಿಕ ಹಣ ಬಿಡುಗಡೆ ಯಾಗಬೇಕಿದೆ.

2017ರಿಂದ 2020ರ ವರೆಗೆ ಪೂರ್ವ ವಲಯಕ್ಕೆ 2490 ಮನೆಗಳು ಮಂಜೂರಾಗಿದ್ದು, 1015 ಪೂರ್ಣಗೊಂಡಿವೆ. 1288 ಪ್ರಗತಿಯಲ್ಲಿದ್ದು ಒಟ್ಟು 187 ಮನೆಗಳು ಬಾಕಿ ಇವೆ. ಪಶ್ಚಿಮ ವಲಯಕ್ಕೆ 257 ಒಂಟಿ ಮನೆಗಳು ಮಂಜೂರಾಗಿದ್ದು 78 ಮನೆಗಳು ಪೂರ್ಣಗೊಂಡಿವೆ. 152 ಪ್ರಗತಿಯಲ್ಲಿದ್ದು ಹಿಂದಿನದೆಲ್ಲ ಸೇರಿ ಒಟಟು 2623 ಮನೆಗಳು ಬಾಕಿ ಉಳಿದಿವೆ. ಅದಕ್ಕಾಗಿ 118.98 ಕೋಟಿ ರು.ಗಳ ಅನುದಾನ ಬಿಡುಗಡೆಯಾಗಬೇಕಿದೆ.

ದಕ್ಷಿಣ ವಲಯದಲ್ಲಿ 84 ಮನೆ ಮಂಜೂರಾಗಿದ್ದು 38 ಪೂರ್ಣಗೊಂಡು 46 ಪ್ರಗತಿಯಲ್ಲಿವೆ. ರಾಜರಾಜೇಶ್ವರಿ ನಗರ ವಲಯದಲ್ಲಿ 871 ಮನೆಗಳು ಮಂಜೂರಾಗಿದ್ದು 27 ಪೂರ್ಣಗೊಂಡಿವೆ. 509 ಪ್ರಗತಿಯಲ್ಲಿದ್ದು 166 ಮನೆಗಳು ಬಾಕಿ ಉಳಿದಿವೆ. ಮಹದೇವಪುರ ವಲಯದಲ್ಲಿ 113 ಒಂಟಿ ಮನೆಗಳು ಮಂಜೂರಾಗಿದ್ದು ಈವರೆಗೂ ಯಾವುದೇ ಮನೆಗಳು ಪೂರ್ಣಗೊಂಡಿಲ್ಲ. 38 ಮನೆಗಳು ಪ್ರಗತಿಯಲ್ಲಿದ್ದು 75 ಬಾಕಿ ಇವೆ. ಯಲಹಂಕ ವಲಯದಲ್ಲಿ 325 ಮನೆಗಳು ಮಂಜೂರಾಗಿದ್ದು 206 ಪ್ರಗತಿಯಲ್ಲಿವೆ. 65 ಪೂರ್ಣಗೊಂಡಿದ್ದು 14 ಬಾಕಿ ಇವೆ. ದಾಸರಹಳ್ಳಿಯಲ್ಲಿ 341 ಮನೆಗಳಿಗೆ ಮಂಜೂರಾತಿ ನೀಡಲಾಗಿದ್ದು 44 ಮನೆಗಳು ಮಾತ್ರ ಪೂರ್ಣಗೊಂಡಿವೆ. 149 ಮನೆಗಳು ಬಾಕಿ ಇದ್ದು 73 ಪ್ರಗತಿಯಲ್ಲಿವೆ. ಬೊಮ್ಮನಹಳ್ಳಿ ವಲಯದಲ್ಲಿ 367 ಮನೆಗಳು ಮಂಜೂರಾಗಿದ್ದು 181 ಪೂರ್ಣಗೊಂಡಿವೆ. 171 ಪ್ರಗತಿಯಲ್ಲಿದ್ದು 15 ಬಾಕಿ ಉಳಿದಿವೆ.

ಬಿಬಿಎಂಪಿಯಲ್ಲಿ 2017ರಿಂದ 20ರವರೆಗೆ ಮಂಜೂರಾದ ಮನೆಗಳ ನಿರ್ಮಾಣಕ್ಕೆಂದು ಬಜೆಟ್‌ನಲ್ಲಿ(Budget) 289.94 ಕೋಟಿ ರು.ಗಳ ಅನುದಾನ ನಿಗದಿಪಡಿಸಲಾಗಿದ್ದು 65.92 ಕೋಟಿ ರು.ಗಳನ್ನು ಖರ್ಚು ಮಾಡಿ 1523 ಮನೆಗಳನ್ನು ಪೂರ್ಣಗೊಳಿಸಲಾಗಿದೆ. ಇನ್ನು ಪ್ರಗತಿಯಲ್ಲಿರುವ 2483 ಮನೆಗಳಿಗೆ 103.50 ಕೋಟಿ ರು.ಗಳನ್ನು ವೆಚ್ಚ ಮಾಡಲಾಗಿದೆ. ಪ್ರಗತಿಯಲ್ಲಿರುವ ಮನೆಗಳು ಮತ್ತು ಬಾಕಿ ಇರುವ ಮನೆಗಳ ನಿರ್ಮಾಣಕ್ಕಾಗಿ ಬಿಬಿಎಂಪಿ 150 ಕೋಟಿ ರು.ಗಳಿಗೂ ಅಧಿಕ ಅನುದಾನ ನೀಡಬೇಕಿದೆ ಎಂದು ಬಿಬಿಎಂಪಿ ಮೂಲಗಳು ಮಾಹಿತಿ ನೀಡಿವೆ.

Bengaluru: BBMP ಅಧಿಕಾರಿಗಳಿಗೆ ದಿನವಿಡೀ ಮೀಟಿಂಗ್‌: ಕೆಲಸ ನಾಸ್ತಿ..!

ಅನುದಾನ ನೀಡದಿದ್ದರೆ ಹೇಗೆ?

2019-20ರ ಯೋಜನೆಗೆ ಹಣ ಬಿಡುಗಡೆ ಮಾಡುವುದಿಲ್ಲ ಎಂದಿದ್ದಾರೆ. ಆದರೆ, ಅದಕ್ಕಿಂತ ಹಿಂದಿನ ವರ್ಷಗಳಲ್ಲಿ ಮಂಜೂರಾದ ಮನೆಗಳಿಗೆ ಹಣ ಬಿಡುಗಡೆ ಮಾಡಬೇಕಿತ್ತು. ಕಳೆದ ವರ್ಷದ ಬಜೆಟ್‌ನಲ್ಲಿ ಯಾವುದೇ ಹಣವನ್ನು ನೀಡಿಲ್ಲ. ಪ್ರಗತಿಯಲ್ಲಿರುವ ಮನೆಗಳಿಗಾದರೂ ಹಣ ಕೊಟ್ಟರೆ ಪೂರ್ಣಗೊಳಿಸಲು ಸಾಧ್ಯ. ಮಂಜೂರಾದ ಮನೆಗಳಿಗೆ ಬಜೆಟ್‌ನಲ್ಲಿ ಅನುದಾನ ನಿಗದಿಪಡಿಸಿದ ನಂತರವೂ ಹಣ ಕೊಡಲಿಲ್ಲವೆಂದರೆ ಯೋಜನೆ ಪೂರ್ಣಗೊಳ್ಳುವುದಾದರೂ ಹೇಗೆ ಎಂದು ಬಿಬಿಎಂಪಿ ವಿರೋಧ ಪಕ್ಷದ ಮಾಜಿ ನಾಯಕ ಅಬ್ದುಲ್‌ ವಾಜೀದ್‌(Abdul Vajid) ಪ್ರಶ್ನಿಸಿದ್ದಾರೆ.

ಈ ಕುರಿತು ‘ಕನ್ನಡಪ್ರಭ’ದೊಂದಿಗೆ(Kannada Prabha) ಮಾತನಾಡಿದ ಅವರು, ವಲಯವಾರು ಪ್ರಸ್ತಾವನೆ ಕೊಟ್ಟರೂ ಕೂಡ ಬಿಬಿಎಂಪಿ ವಿಶೇಷ ಆಯುಕ್ತೆ(ಹಣಕಾಸು) ತುಳಸಿ ಮದಿನೇನಿ ಅವರು ಸರಿಯಾಗಿ ಸ್ಪಂದಿಸುತ್ತಿಲ್ಲ. ಬಡವರ ಬಗ್ಗೆ ಪಾಲಿಕೆಯಲ್ಲಿರುವ ಐಎಎಸ್‌ ಆಧಿಕಾರಿಗಳಿಗೆ ಕಾಳಜಿ ಇಲ್ಲ ಎಂದು ಆರೋಪಿಸಿದರು.
 

click me!